×
Ad

ಕೆಪಿಸಿಸಿ ನೂತನ ಅಧ್ಯಕ್ಷರು ಕರಾವಳಿಯನ್ನು ಗೆಲ್ಲ ಬಲ್ಲರೆ?

Update: 2026-06-05 08:48 IST

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಿಗೇ ಕೆಲವು ಮಹತ್ವದ ಯೋಜನೆಗಳನ್ನು ಘೋಷಿಸುವ ಮೂಲಕ ಡಿ. ಕೆ. ಶಿವಕುಮಾರ್ ನಾಡಿನ ಜನರಲ್ಲಿ ಭರವಸೆಯನ್ನು ಹುಟ್ಟಿಸಿದ್ದಾರೆ. ‘ರಾಜ್ಯದ ಎಲ್ಲ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್’ ಘೋಷಣೆಯ ಮೂಲಕ ಅವರು ನೇರವಾಗಿ ಯುವ ಸಮುದಾಯದ ಮನಸ್ಸುಗಳಿಗೆ ಕನ್ನ ಹಾಕಿದ್ದಾರೆ. ಶೈಕ್ಷಣಿಕ ವಲಯದ ಮೇಲೆ ಪರಿಣಾಮ ಬೀರಬಹುದಾದ ನಿರ್ಧಾರ ಇದು. ಡಿ. ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದರೆ ‘ಶಕ್ತಿ ಯೋಜನೆ’ಗೆ ಕತ್ತರಿ ಬೀಳುತ್ತದೆ ಎನ್ನುವ ವದಂತಿ ವ್ಯಾಪಕವಾಗಿ ಹರಡಿತ್ತು. ಆದರೆ ನೂತನ ಮುಖ್ಯಮಂತ್ರಿಯ ಈ ಘೋಷಣೆಯು ವದಂತಿಯನ್ನು ಹರಡ ಬಿಟ್ಟವರಿಗೆ ನೀಡಿದ ಸ್ಪಷ್ಟ ಉತ್ತರವಾಗಿದೆ. ಎಲ್ಲಿ ಶಕ್ತಿ ಯೋಜನೆ ಸ್ಥಗಿತಗೊಳ್ಳುತ್ತದೆಯೋ ಎಂದು ಆತಂಕದಲ್ಲಿದ್ದ ಮಹಿಳೆಯರು ಈ ಘೋಷಣೆಯನ್ನು ಕೇಳಿ ತಕ್ಷಣಕ್ಕೆ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಎನ್ನುವಾಗ ಮತ್ತೆ ಕೆಲವು ವರ್ಗಗಳು ಹಾಹಾಕಾರ ಎಬ್ಬಿಸುವುದಕ್ಕೆ ಆರಂಭಿಸಬಹುದು. ಆದರೆ ಈ ಯೋಜನೆ ತಮಿಳು ನಾಡಿನಲ್ಲಿ ಈಗಾಗಲೇ ಜಾರಿಯಲ್ಲಿದೆ. ಹಲವು ರಾಜ್ಯಗಳಲ್ಲಿ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆಗಳಿವೆ. ಈ ನಿಟ್ಟಿನಲ್ಲಿ ತಮಿಳುನಾಡನ್ನು ಮಾದರಿಯಾಗಿರಿಸಿ ಎಲ್ಲ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ನೀಡಿರುವುದು, ಶೈಕ್ಷಣಿಕ ಸಮಾನತೆಯ ಆಶಯಕ್ಕೆ ಪೂರಕವಾಗಿದೆ. ಹಾಗೆಯೇ ಇಲಾಖಾವಾರು ನೇಮಕಾತಿ ಅಧಿಸೂಚನೆಯನ್ನು ಶೀಘ್ರ ಪ್ರಕಟಿಸುವ ಭರವಸೆ ನೀಡಿದ್ದಾರೆ. ಖಾಸಗಿ ಉದ್ಯೋಗ ವಿನಿಮಯ ಕೇಂದ್ರ ಸ್ಥಾಪಿಸಿ ಕನ್ನಡಿಗರಿಗೆ ಆದ್ಯತೆಯ ಮೇಲೆ ಉದ್ಯೋಗ ಕಲ್ಪಿಸುವ ಭರವಸೆಯನ್ನು ನೀಡಿದ್ದಾರೆ. 10,000 ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಯ ಮಹತ್ವದ ಘೋಷಣೆಯನ್ನೂ ಈ ಸಂದರ್ಭದಲ್ಲಿ ಮಾಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ 6,000 ಪಂಚಾಯತ್‌ಗಳಲ್ಲಿ, ನಗರ ಪ್ರದೇಶಗಳಲ್ಲಿ 4,000 ವಾರ್ಡ್‌ಗಳಲ್ಲಿ ಸಂಘಗಳನ್ನು ಸ್ಥಾಪಿಸಿ ಸರಕಾರದಿಂದ 10 ಲಕ್ಷ ರೂ. ಅನುದಾನ ನೀಡಲಾಗುತ್ತದೆ. ಸಾಹಿತ್ಯ, ಸಾಂಸ್ಕೃತಿಕ, ಕ್ರೀಡೆ, ನಾಯಕತ್ವ ಚಟುವಟಿಕೆಗಳನ್ನು ಬೆಳೆಸುವುದಕ್ಕೆ ಈ ಮೂಲಕ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಭಾರತ್ ಜೋಡೋ ಯುವ ಸಂಘಗಳ ಸ್ಥಾಪನೆಯ ಹಿಂದಿರುವ ಉದ್ದೇಶ ಶ್ಲಾಘನೀಯವಾದುದು. ಆದರೆ ಒಂದನ್ನು ನೆನಪಿಟ್ಟುಕೊಳ್ಳಬೇಕಾಗುತ್ತದೆ. ಒಂದು ಕಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಯುವಕರನ್ನು ಸಂಘಟಿಸಿ ಅವರನ್ನು ಕ್ರಿಯಾಶೀಲವಾಗಿಸುತ್ತಿದ್ದ ಯುವಕ ಸಂಘಗಳ ಸ್ಥಿತಿ ಏನಾಗಿದೆ ಎನ್ನುವುದರ ಸಮೀಕ್ಷೆ ಈ ಸಂದರ್ಭದಲ್ಲಿ ಅತ್ಯಗತ್ಯವಾಗಿದೆ. ಆ ಯುವಕ ಮಂಡಲಗಳಲ್ಲಿ ಬಹುತೇಕ ಸಂಘಗಳನ್ನು ಆರೆಸ್ಸೆಸ್ ಹೈಜಾಕ್ ಮಾಡಿದೆ. ಹಲವು ಯುವಕ ಸಂಘಗಳು ಸತ್ಯನಾರಾಯಣ ಪೂಜೆ, ಶಾರದಾ ಪೂಜೆ, ಕೃಷ್ಣ ಜನ್ಮಾಷ್ಟಮಿ ಆಚರಣೆಗಳಿಗೆ ಸೀಮಿತವಾಗಿವೆ. ಕೋಟ್ಯಂತರ ರೂಪಾಯಿ ಅನುದಾನಗಳಿಂದ ನಡೆಸಲ್ಪಡುವ ಭಾರತ್ ಜೋಡೋ ಯುವಕ ಸಂಘಗಳನ್ನು ಸಂವಿಧಾನದ ಆಶಯಗಳಿಗೆ ಪೂರಕವಾಗಿ, ಜಾತ್ಯತೀಯ ಸಿದ್ದಾಂತದ ತಳಹದಿಯ ಮೇಲೆ ನಿಲ್ಲಿಸಲು ವಿಫಲವಾದರೆ ಅವುಗಳೂ ನಿಧಾನವಾಗಿ ಆರೆಸ್ಸೆಸ್‌ನಂತಹ ಸಂಘಟನೆಗಳ ಪರೋಕ್ಷ ಕಚೇರಿಗಳಾಗಿ ಬದಲಾಗಬಹುದು. ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳ ಹೆಸರಿನಲ್ಲಿ ಸಂಘಪರಿವಾರದ ತತ್ವ ಸಿದ್ಧಾಂತಗಳನ್ನು ಹರಡುವುದಕ್ಕೆ ಬಳಕೆಯಾಗಬಹುದು. ಈ ಹಿನ್ನೆಲೆಯಲ್ಲಿ ನೂತನ ಭಾರತ್ ಜೋಡೋ ಯುವಕ ಸಂಘಗಳ ಮೂಲಕ ಅಂಬೇಡ್ಕರ್, ನೆಹರೂ, ಮೌಲಾನಾ ಅಬುಲ್ ಕಲಾಂ ಆಝಾದ್‌ರಂತಹ ಹಿರಿಯರ ಮೌಲ್ಯಗಳನ್ನು ಯುವಕರಿಗೆ ತಲುಪಿಸುವ ಕೆಲಸವನ್ನು ಮಾಡಬೇಕಾಗುತ್ತದೆ. ಅವುಗಳಿಗೆ ಸೂಕ್ತ ಮಾಗದರ್ಶಕರ ಅಗತ್ಯವಿದೆ. ಅದಕ್ಕಾಗಿ ಸರಕಾರ ಏನು ಕ್ರಮ ತೆಗೆದುಕೊಳ್ಳುತ್ತದೆ ಎನ್ನುವುದೂ ಮುಖ್ಯವಾಗುತ್ತದೆ. ಇಲ್ಲವಾದರೆ ಕಾಂಗ್ರೆಸ್ ಸರಕಾರ ಕಟ್ಟಿದ ಈ ಭಾರತ್ ಜೋಡೋ ಬಿಲಗಳು ನಿಧಾನಕ್ಕೆ ಆರೆಸ್ಸೆಸ್‌ನ ಹಾವಿನ ಮರಿಗಳಿಗೆ ಆಶ್ರಯವಾಗಬಹುದು. ಜೋಡಿಸುವ ಬದಲು ಗ್ರಾಮೀಣ ಮಟ್ಟದಲ್ಲಿ ಯುವಕರನ್ನು ಒಡೆಯುವುದಕ್ಕೆ ಬಳಕೆಯಾಗಬಹುದು. ಹಾಗೆಯೇ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಜೊತೆ ಜೊತೆಗೇ ವಿಧಾನಸೌಧದ ಜಗಲಿಗೆ ಹಲವು ಸ್ವಾಮೀಜಿಗಳು, ಮಠಾಧಿಪತಿಗಳ ಪ್ರವೇಶವೂ ಆಗಿದೆ. ಅವರ ಆಶೀರ್ವಾದದ ಜೊತೆಗೇ ಡಿ.ಕೆ.ಶಿವಕುಮಾರ್ ಅಧಿಕಾರಕ್ಕೇರಿದ್ದಾರೆ. ಧಾರ್ಮಿಕರಾಗಿರುವುದು, ಸ್ವಾಮೀಜಿಗಳ ಆಶೀರ್ವಾದವನ್ನು ಪಡೆದುಕೊಳ್ಳುವುದು ತಪ್ಪಲ್ಲ. ಆದರೆ ಹಲವು ಮಠಾಧಿಪತಿಗಳನ್ನು ಆರೆಸ್ಸೆಸ್ ನಿಯಂತ್ರಿಸುತ್ತಿದೆ. ಕಾಂಗ್ರೆಸ್ ಸಿದ್ಧಾಂತಕ್ಕೆ ಬದ್ಧ ಎನ್ನುವ ಮುಖ್ಯಮಂತ್ರಿ ಡಿಕೆಶಿ ಅವರು ಈ ಕುರಿತಂತೆ ಎಚ್ಚರಿಕೆಯನ್ನು ಹೊಂದಿರುವುದು ಅತ್ಯಗತ್ಯವಾಗಿದೆ. ಇದೇ ಸ್ವಾಮೀಜಿಗಳನ್ನು ಬಳಸಿಕೊಂಡು ಆರೆಸ್ಸೆಸ್ ಸರಕಾರವನ್ನು ನಿಯಂತ್ರಿಸುವ ಸಾಧ್ಯತೆಗಳು ಇಲ್ಲದಿಲ್ಲ.

ನೂತನ ಸರಕಾರದೊಳಗೆ ಕೆಲವು ಸಮನ್ವಯಗಳು ಎದ್ದು ಕಾಣುತ್ತಿವೆ. ಮೊದಲ ಹಂತದ 12 ಮಂದಿ ಸಚಿವರ ಆಯ್ಕೆಯಲ್ಲಿ ಸಿದ್ದರಾಮಯ್ಯ ಅವರ ಪ್ರಭಾವವಿದೆ. ಹಿರಿಯ ರಾಜಕೀಯ ಮುತ್ಸದ್ದಿ, ಕಾಂಗ್ರೆಸ್‌ನ ಜಾತ್ಯತೀತ ಸಿದ್ಧಾಂತಕ್ಕೆ ಹೆಚ್ಚು ಬದ್ಧರಾಗಿ ನಿಲ್ಲಬಲ್ಲ, ಸೈದ್ಧಾಂತಿಕವಾಗಿ ಪ್ರಬುದ್ಧರೂ ಆಗಿರುವ ಬಿ. ಕೆ. ಹರಿಪ್ರಸಾದ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿರುವುದು ಕಾಂಗ್ರೆಸ್ ವರಿಷ್ಠರ ದೂರದೃಷ್ಟಿಗೆ ಸಾಕ್ಷಿಯಾಗಿದೆ. ಹರಿಪ್ರಸಾದ್ ಅವರು ಈಡಿಗ ಸಮುದಾಯಕ್ಕೆ ಸೇರಿದ್ದು, ಅಹಿಂದ ಮೌಲ್ಯಗಳಿಗೆ ಕಾಂಗ್ರೆಸ್‌ನಲ್ಲಿ ನ್ಯಾಯ ಕೊಡಬಲ್ಲವರು ಎನ್ನುವ ಅಭಿಪ್ರಾಯ ಬಹುತೇಕರಲ್ಲಿದೆ. ಕೆಪಿಸಿಸಿ ಅಧ್ಯಕ್ಷರಾದ ಬೆನ್ನಿಗೇ ‘‘ಅಧಿಕಾರ ಬೇಕಾದವರು ಡಿ.ಕೆ. ಶಿವಕುಮಾರ್ ಹಿಂದೆ ಹೋಗಿ. ಪಕ್ಷ ಕಟ್ಟುವವರು ನನ್ನ ಜೊತೆಗೆ ಬನ್ನಿ’’ ಎಂದು ಕರೆ ನೀಡಿದ್ದಾರೆ. ಆದರೆ ಇಂತಹ ‘ಆದರ್ಶವಾದಿ’ ಕರೆಯು ಎಷ್ಟರ ಮಟ್ಟಿಗೆ ಪಕ್ಷಕ್ಕೆ ಸಹಾಯವಾಗಬಹುದು ಎನ್ನುವುದನ್ನು ಕಾಲವೇ ಹೇಳಬೇಕು. ಆರೆಸ್ಸೆಸ್‌ಗೆ ಸೇರುವವರಲ್ಲಿ ಒಂದು ಸೈದ್ಧಾಂತಿಕ ಬದ್ಧತೆ ಇರುತ್ತದೆ. ಯಾವುದೇ ಅಧಿಕಾರದ ಲಾಲಸೆ ಇಲ್ಲದೆ ಕಾಂಗ್ರೆಸ್‌ನ ಸಿದ್ಧಾಂತಕ್ಕೆ ಮಾರು ಹೋಗಿ ಪಕ್ಷ ಕಟ್ಟಲು ಕೈಜೋಡಿಸುವ ಎಷ್ಟು ಕಾರ್ಯಕರ್ತರು ಹರಿಪ್ರಸಾದ್‌ರಿಗೆ ಸಿಗಬಹುದು? ಇಷ್ಟಕ್ಕೂ ತನ್ನ ಜಾತ್ಯತೀತ ಸಿದ್ಧಾಂತಕ್ಕೆ ಬದ್ಧವಾಗಿ ಕಾಂಗ್ರೆಸ್ ಎಷ್ಟರಮಟ್ಟಿಗೆ ಉಳಿದುಕೊಂಡಿದೆ? ಎನ್ನುವುದು ಇನ್ನೊಂದು ಪ್ರಶ್ನೆ. ಪಕ್ಷಕಟ್ಟುವವರು ಮತ್ತು ಅಧಿಕಾರ ಹಂಚಿಕೊಳ್ಳುವವರ ನಡುವೆ ಅಂತರಗಳು ಹೆಚ್ಚುತ್ತಾ ಹೋದರೆ ಕಾಂಗ್ರೆಸ್ ದುರ್ಬಲವಾಗುತ್ತದೆ.ಈ ಅಂತರವನ್ನು ತುಂಬುವ ಕೆಲಸ ಕೆಪಿಸಿಸಿ ಅಧ್ಯಕ್ಷರಿಂದ ನಡೆಯಬೇಕಾಗಿದೆ. ಸದ್ಯಕ್ಕೆ ಕೂಲಿಗೆ ದುಡಿಯುವ ಕಾರ್ಯಕರ್ತರಷ್ಟೇ ಕಾಂಗ್ರೆಸ್‌ನಲ್ಲಿದ್ದಾರೆ ಹೊರತು, ಸಿದ್ಧಾಂತಕ್ಕಾಗಿ ದುಡಿಯುವವರಲ್ಲ.

ತನ್ನ ಜಾತಿ, ಹಣದ ಬಲದಿಂದ ಕಾಂಗ್ರೆಸನ್ನು ಕಟ್ಟುವಲ್ಲಿ ಡಿಕೆಶಿ ಸಾಕಷ್ಟು ಕೊಡುಗೆಗಳನ್ನು ಕೊಟ್ಟಿದ್ದಾರೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಕೆಪಿಸಿಸಿ ಅಧ್ಯಕ್ಷರು ನಾಡಿನ ಅಹಿಂದ ವರ್ಗದ ಕಡೆಗೆ ಕಾಂಗ್ರೆಸನ್ನು ಹೇಗೆ ಪರಿಣಾಮಕಾರಿಯಾಗಿ ತಲುಪಿಸಲಿದ್ದಾರೆ ಎನ್ನುವುದು ಕೂಡ ಮುಂದಿನ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಮುಖ್ಯವಾಗುತ್ತದೆ. ಕೆಪಿಸಿಸಿಯ ಅಧ್ಯಕ್ಷರನ್ನಾಗಿಸುವ ಸಂದರ್ಭದಲ್ಲಿ ‘ಈಡಿಗ ಸಮುದಾಯ’ದಿಂದ ಬಂದಿರುವ ನಾಯಕ ಎನ್ನುವುದನ್ನು ಪರಿಗಣನೆಗೆ ತೆಗೆದುಕೊಂಡು ಹರಿಪ್ರಸಾದ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಕಾರಣದಿಂದಲೇ ಕನಿಷ್ಠ ರಾಜ್ಯದ ಈಡಿಗ ಸಮುದಾಯದ ಮತಗಳನ್ನಾದರೂ ಕಾಂಗ್ರೆಸ್‌ಗೆ ಮತಗಳಾಗಿ ಪರಿವರ್ತನೆಗೊಳಿಸುವುದರಲ್ಲಿ ಅವರು ಯಶಸ್ವಿಯಾಗಬೇಕಾಗುತ್ತದೆ. ಕರಾವಳಿಯಲ್ಲಿ ಬಿಲ್ಲವ ಸಮುದಾಯದ ಮತಗಳನ್ನು ಕಾಂಗ್ರೆಸ್ ಕಡೆಗೆ ಅವರು ಹೇಗೆ ತಿರುಗಿಸಬಲ್ಲರು? ಎನ್ನುವ ಪ್ರಶ್ನೆಗೆ ಹರಿಪ್ರಸಾದ್ ಉತ್ತರ ಹುಡುಕಲೇ ಬೇಕು. ಅವಿಭಜಿತ ದ.ಕ.ಜಿಲ್ಲೆಯಲ್ಲಿ ಕನಿಷ್ಠ 10 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವಂತಾದರೆ ಅವರು ಕೆಪಿಸಿಸಿ ಅಧ್ಯಕ್ಷರಾದುದಕ್ಕೆ ಸಾರ್ಥಕವಾಗುತ್ತದೆ. ಕರಾವಳಿಯನ್ನು ಅವರು ಗೆದ್ದರು ಎಂದಾದರೆ, ರಾಜ್ಯವನ್ನೇ ಗೆದ್ದರು ಎಂದು ಅರ್ಥ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News