ಕಾಂಗ್ರೆಸ್ ಪಿತ್ರಾರ್ಜಿತ ಗೋಮಾಳವೆ?

Update: 2024-03-23 04:54 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕಾಂಗ್ರೆಸ್ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡುವುದರೊಂದಿಗೆ ರಾಜ್ಯದ 24 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದಂತಾಗಿದೆ. ಕೋಲಾರ, ಚಿಕ್ಕ ಬಳ್ಳಾಪುರ, ಚಾಮರಾಜನಗರ, ಬಳ್ಳಾರಿ ಹೊರತು ಪಡಿಸಿದ ಉಳಿದೆಲ್ಲ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸುವುದರೊಂದಿಗೆ ರಾಜ್ಯದಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ಒಂದು ಹೆಜ್ಜೆ ಮುಂದೆಯೇ ಇದೆ. ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ, ಈ ಬಾರಿ ಕಾಂಗ್ರೆಸ್ ಆತ್ಮವಿಶ್ವಾಸದೊಂದಿಗೆ ಚುನಾವಣಾ ಕಣಕ್ಕಿಳಿದಿದೆ. ಕಳೆದ ಬಾರಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿದ ಬಳಿಕವೂ ಕಾಂಗ್ರೆಸ್ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಜಾತ್ಯತೀತ ಮತಗಳು ಒಡೆದು ಹೋಗಬಾರದು ಎನ್ನುವ ಕಾರಣಕ್ಕಾಗಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿತಾದರೂ, ಮತಗಳು ಒಡೆಯುವುದನ್ನು ತಪ್ಪಿಸುವುದಕ್ಕೆ ಸಾಧ್ಯವಾಗಲಿಲ್ಲ. ಮುಖ್ಯವಾಗಿ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಇರುವವರೆಗೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಯಶಸ್ವಿಯಾಗುವುದು ಕಷ್ಟ. ಕಳೆದ ಬಾರಿಯೂ ಅದೇ ಆಯಿತು. ನಾಯಕರ ಮಟ್ಟದಲ್ಲಿ ಮೈತ್ರಿ ನಡೆಯಿತಾದರೂ, ಕಾರ್ಯಕರ್ತರ ನಡುವೆ ಮೈತ್ರಿ ಯಶಸ್ವಿಯಾಗಲಿಲ್ಲ. ಜೆಡಿಎಸ್ ಅಭ್ಯರ್ಥಿ ನಿಂತಲ್ಲಿ ಕಾಂಗ್ರೆಸ್ ಅಸಹಕಾರ ಮಾಡಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ನಿಂತಲ್ಲಿ ಜೆಡಿಎಸ್ ಕಾರ್ಯಕರ್ತರು ತಿರುಗಿ ಬಿದ್ದಿದ್ದರು. ಮುಖ್ಯವಾಗಿ ಕಾಂಗ್ರೆಸ್ ಅಭ್ಯರ್ಥಿ ನಿಂತಲ್ಲೆಲ್ಲ ಜೆಡಿಎಸ್ ಕಾರ್ಯಕರ್ತರು ಬಿಜೆಪಿಯೊಂದಿಗೆ ಕೈ ಜೋಡಿಸಿದ್ದರು ಎನ್ನುವ ಆರೋಪವನ್ನು ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್ ನಾಯಕರು ಮಾಡಿದ್ದರು. ಮೈತ್ರಿ ಮಾಡಿದ್ದೇವೆ ಎಂದು ಘೋಷಿಸಿಕೊಳ್ಳುತ್ತಲೇ ಪರಸ್ಪರ ಬೆನ್ನಿಗೆ ಚೂರಿ ಹಾಕಿಕೊಂಡಿದ್ದರು.

ಈ ಬಾರಿ ಜೆಡಿಎಸ್ ಬಿಜೆಪಿಯ ಜೊತೆಗೆ ಮೈತ್ರಿ ಮಾಡಿಕೊಂಡಿರುವುದು ಕಾಂಗ್ರೆಸ್‌ಗೆ ಲಾಭವಾಗಲಿದೆ. ಬಿಜೆಪಿಯ ಜೊತೆಗೆ ಸೇರಿಕೊಂಡು ಜೆಡಿಎಸ್ ಎಷ್ಟರಮಟ್ಟಿಗೆ ಹೆಸರು ಕೆಡಿಸಿಕೊಂಡಿದೆಯೆಂದರೆ, ಅದು ಬಿಜೆಪಿಯ ಇನ್ನೊಂದು ರಾಜಕೀಯ ಘಟಕವಾಗಿ ಗುರುತಿಸಲ್ಪಡುತ್ತಿದೆ. ಜೆಡಿಎಸ್‌ನೊಂದಿಗಿದ್ದ ಜಾತ್ಯತೀತ ಮತಗಳು ಆ ಪಕ್ಷದೊಂದಿಗೆ ಸಂಪೂರ್ಣ ಸಂಬಂಧವನ್ನು ಕಳಚಿಕೊಂಡಿದೆ. ಇದು ಕಾಂಗ್ರೆಸ್‌ಗೆ ಈ ಬಾರಿ ಲಾಭ ಮಾಡಿಕೊಡಲಿದೆ. ಇದೇ ಸಂದರ್ಭದಲ್ಲಿ ಟಿಕೆಟ್ ಹಂಚಿಕೆಯ ಬಳಿಕ ಬಿಜೆಪಿಯೊಳಗೆ ಭಿನ್ನಮತ ತಾರಕಕ್ಕೇರಿದೆ. ಹಲವು ಹಿರಿಯರು ಟಿಕೆಟ್ ಹಂಚಿಕೆಯ ಬಗ್ಗೆ ಭಿನ್ನಾಭಿಪ್ರಾಯವನ್ನು ಹೊಂದಿದ್ದಾರೆ. ಯಡಿಯೂರಪ್ಪ ಮತ್ತು ಅವರ ಪುತ್ರರ ವಿರುದ್ಧ ಬಿಜೆಪಿಯ ಒಂದು ಬಣ ಸ್ಪಷ್ಟವಾಗಿ ಬಂಡೆದಿದ್ದು, ಚುನಾವಣೆಯ ಸಂದರ್ಭದಲ್ಲಿ ಇದು ಪರೋಕ್ಷವಾಗಿ ಕಾಂಗ್ರೆಸ್‌ಗೆ ನೆರವಾಗಲಿದೆ. ಅಲ್ಲಲ್ಲಿ ಬಿಜೆಪಿ ನಾಯಕರು ಬಂಡಾಯ ಸ್ಪರ್ಧಿಸುವ ಮಾತನ್ನಾಡುತ್ತಿದ್ದಾರೆ. ಬಂಡಾಯ ಸ್ಪರ್ಧಿಸದೇ ಇದ್ದರೂ, ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಒಳಗಿಂದೊಳಗೆ ಶ್ರಮಿಸುವ ಸಾಧ್ಯತೆಗಳು ಕಾಣುತ್ತಿವೆ. ಇವೆಲ್ಲದರ ಜೊತೆಗೆ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿರುವುದು ಈ ಬಾರಿಯ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಕಾಂಗ್ರೆಸ್ ಪಕ್ಷ ಗ್ಯಾರಂಟಿಯನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದರೆ, ಬಿಜೆಪಿಯ ಬಳಿ ಚುನಾವಣೆ ಎದುರಿಸಲು ವಿಷಯಗಳೇ ಇಲ್ಲ. ಅದು ಈ ಬಾರಿಯೂ ಮೋದಿ ಜಪ ಮಾಡುತ್ತಾ ಚುನಾವಣೆ ಗೆಲ್ಲಲು ಹೊರಟಿದೆ. ಆದುದರಿಂದಲೇ ಈ ಬಾರಿ ಕನಿಷ್ಠ ಎಂಟು ಸ್ಥಾನಗಳನ್ನು ಕಾಂಗ್ರೆಸ್ ಕೈವಶ ಮಾಡಿಕೊಳ್ಳುವ ಬಗ್ಗೆ ರಾಜಕೀಯ ವಲಯದಲ್ಲಿ ಭರವಸೆಯ ಮಾತುಗಳು ಕೇಳಿ ಬರುತ್ತಿವೆ.

ಈ ಕಾರಣದಿಂದಲೇ ಇರಬೇಕು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮಕ್ಕಳು, ಬಂಧುಗಳಿಗೆ ಟಿಕೆಟ್ ನೀಡಲು ಕಾಂಗ್ರೆಸ್‌ನ ರಾಜ್ಯ ನಾಯಕರು ಸ್ಪರ್ಧೆಗೆ ಬಿದ್ದಿದ್ದಾರೆ. ಕುಟುಂಬ ರಾಜಕಾರಣಕ್ಕಾಗಿ ವ್ಯಾಪಕ ಟೀಕೆಗಳಿಗೆ ಬಲಿಯಾಗುತ್ತಾ ಬಂದಿರುವ ಕಾಂಗ್ರೆಸ್, ಆ ಹೆಸರಿನಲ್ಲಿ ಮುಜುಗರವನ್ನು ಅನುಭವಿಸುತ್ತಲೇ ಬಂದಿದೆ. ಕುಟುಂಬ ರಾಜಕಾರಣ ಎನ್ನುವಾಗ ನೆಹರೂ, ಇಂದಿರಾಗಾಂಧಿ, ರಾಜೀವ್‌ಗಾಂಧಿಯವರನ್ನು ಬೊಟ್ಟು ಮಾಡಲಾಗುತ್ತದೆಯಾದರೂ ಇವರಿಂದ ಕಾಂಗ್ರೆಸ್‌ಗೂ, ದೇಶಕ್ಕೂ ಬಹಳಷ್ಟು ಲಾಭಗಳಾಗಿವೆ. ಆದರೆ ಈ ಗಾಂಧಿ ಕುಟುಂಬವನ್ನು ಬಳಸಿಕೊಂಡು, ಕಾಂಗ್ರೆಸನ್ನು ಪಿತ್ರಾರ್ಜಿತ ಗೋಮಾಳವೆಂದು ಭಾವಿಸಿ ಮೇಯುತ್ತಾ ಬಂದ ಕೆಲವು ಹಿರಿಯ ರಾಜಕಾರಣಿಗಳು ಕಾಂಗ್ರೆಸ್‌ಗೂ ದೇಶಕ್ಕೂ ಬಹಳಷ್ಟು ಹಾನಿಯನ್ನುಂಟು ಮಾಡಿದ್ದಾರೆ. ಹಿರಿಯರಲ್ಲಿ ಹಲವರು ಗೋಮಾಳವನ್ನು ಮೇಯ್ದು ಬರಿದಾಗಿಸಿ ಬಳಿಕ, ಬೇರೆ ಪಕ್ಷಗಳ ಗೋಮಾಳಗಳಿಗೆ ಇಣುಕಿದರು. ತಮ್ಮ ಮಕ್ಕಳಿಗೆ ಸೂಕ್ತ ಸ್ಥಾನಮಾನ ಸಿಗಲಿಲ್ಲ ಎಂದು ಕಾಂಗ್ರೆಸ್‌ನಿಂದ ಪಡೆದ ಎಲ್ಲ ಪ್ರಯೋಜನಗಳನ್ನು ಮರೆತು ವೃದ್ಧಾಪ್ಯ ಕಾಲದಲ್ಲಿ ಕಾಂಗ್ರೆಸ್‌ಗೆ ತಿರುಗಿ ಬಿದ್ದರು. ಇವರಾರು ತಳಮಟ್ಟದಲ್ಲಿ ಕಾಂಗ್ರೆಸ್‌ಗಾಗಿ ದುಡಿದ ಕಾರ್ಯಕರ್ತರನ್ನು ಬೆಳೆಸಿ ಅವರಿಗೆ ನಾಯಕತ್ವವನ್ನು ಹಸ್ತಾಂತರಿಸುವ ದೊಡ್ಡ ಮನಸ್ಸನ್ನು ಮಾಡಲಿಲ್ಲ. ಆದುದರಿಂದಲೇ, ಕಾಂಗ್ರೆಸ್‌ನೊಳಗೆ ಹೊಸ ನಾಯಕರ ಕೊರತೆ ಎದ್ದು ಕಾಣುತ್ತಿದೆ. ಇದೀಗ ರಾಹುಲ್‌ಗಾಂಧಿಯನ್ನು ಮುಂದಿಟ್ಟುಕೊಂಡು ಹಲವು ಹಿರಿಯರು ತಮ್ಮ ಮಕ್ಕಳನ್ನು, ಮೊಮ್ಮಕ್ಕಳನ್ನು ಬೆಳೆಸುವ ಪ್ರಯತ್ನ ಮುಂದುವರಿಸಿದ್ದಾರೆ.

ಬೀದರ್ ನಲ್ಲಿ ಸಚಿವ ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆ, ಬಾಗಲಕೋಟೆಯಿಂದ ಸಚಿವ ಶಿವಾನಂದ್ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್, ದಾವಣಗೆರೆಯಲ್ಲಿ ಸಚಿವ ಮಲ್ಲಿಕಾರ್ಜುನ ಪತ್ನಿ ಪ್ರಭಾ ಮಲ್ಲಿಕಾರ್ಜುನ, ಬೆಂಗಳೂರು ದಕ್ಷಿಣದಿಂದ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ, ಬೆಂಗಳೂರು ಕೇಂದ್ರದಿಂದ ಮಾಜಿ ಕೇಂದ್ರ ಸಚಿವ ರಹ್ಮಾನ್ ಖಾನ್ ಪುತ್ರ ಮನ್ಸೂರ್ ಖಾನ್, ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್, ಚಿಕ್ಕೋಡಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, ಕಲಬುರಗಿಯಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಮನಿ ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದಾರೆ. ಹೀಗೆ ಒಟ್ಟು 17 ಅಭ್ಯರ್ಥಿಗಳಲ್ಲಿ ಐದು ಅಭ್ಯರ್ಥಿಗಳು ಹಾಲಿ ಸಚಿವರ ಮಕ್ಕಳು, ಒಬ್ಬರು ಹಾಲಿ ಸಚಿವರ ಪತ್ನಿ, ಒಬ್ಬರು ಎಐಸಿಸಿ ಅಧ್ಯಕ್ಷರ ಅಳಿಯ ಹಾಗೂ ಹಾಲಿ ಸಚಿವರ ಬಾವ, ಇನ್ನೊಬ್ಬರು ಮಾಜಿ ಕೇಂದ್ರ ಸಚಿವರ ಪುತ್ರ. ನೇತಾರರ ಕುಟುಂಬದಲ್ಲಿ ಹುಟ್ಟುವುದೇ ಟಿಕೆಟ್ ಪಡೆಯಲು ಅರ್ಹತೆ ಎಂದಾದರೆ, ಕಾಂಗ್ರೆಸ್‌ಗಾಗಿ ಹಗಲು ರಾತ್ರಿ ದುಡಿದ ಕಾರ್ಯಕರ್ತರು ಕಾರ್ಯಕರ್ತರಾಗಿಯೇ ಸಾಯಬೇಕೆ? ಎನ್ನುವ ಪ್ರಶ್ನೆ ಕಾಂಗ್ರೆಸ್‌ನೊಳಗೆ ಎದುರಾಗಿದೆ. ಕುಟುಂಬದಾಚೆಗೆ ಯಾಕೆ ನಾಯಕರನ್ನು ಬೆಳೆಸಲು ಕಾಂಗ್ರೆಸ್ ನಾಯಕರಿಗೆ ಸಾಧ್ಯವಾಗುತ್ತಿಲ್ಲ. ತಮ್ಮ ಮಕ್ಕಳಿಗೆ, ಕುಟುಂಬಸ್ಥರಿಗೆ ಟಿಕೆಟ್ ಸಿಕ್ಕಿಲ್ಲ ಎಂದಾದರೆ ಇವರೆಲ್ಲ ಒಮ್ಮೆಲೆ ಜಾತ್ಯತೀತತೆ, ಸಂವಿಧಾನ ಜೊತೆಗೆ ಕಾಂಗ್ರೆಸ್ ಮೇಲೆ ನಂಬಿಕೆ ಕಳೆದುಕೊಳ್ಳುತ್ತಾರೆ. ಅಧಿಕಾರವೇ ಇವರ ರಾಜಕೀಯ ಮೌಲ್ಯ. ಈಗಾಗಲೇ ರಾಜಕೀಯವಾಗಿ ಗಟ್ಟಿಯಾಗಿ ಬೇರೂರಿರುವ ಕುಟುಂಬವನ್ನೇ ಕಾಂಗ್ರೆಸ್ ನೆಚ್ಚಿಕೊಂಡು, ಅವರನ್ನೇ ಬೆಳೆಸಿದರೆ ಕಾಂಗ್ರೆಸ್ ಭವಿಷ್ಯದಲ್ಲಿ ಪಕ್ಷದ ನೇತೃತ್ವವನ್ನು ಅವರ ಮರಿಮಕ್ಕಳ ಕೈಗೇ ನೀಡಬೇಕಾಗುತ್ತದೆ. ಅಷ್ಟೇ ಅಲ್ಲ, ನಿಧಾನಕ್ಕೆ ಕಾರ್ಯಕರ್ತರೆಲ್ಲ ಅವಕಾಶ ವಂಚಿತರಾಗಿ ಬೇರೆ ಬೇರೆ ಪಕ್ಷಗಳಿಗೆ ವಲಸೆ ಹೋದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ.

ಹಳೆ ಬೇರು, ಹೊಸ ಚಿಗುರು ಮರ ಸೊಬಗು ಎನ್ನುವ ಮಾತಿದೆ. ಬೇರನ್ನು ನಿರ್ಲಕ್ಷಿಸಬಾರದು ನಿಜ. ಹಾಗೆಂದು ಮರದ ಚಿಗುರನ್ನು ಚಿವುಟಿದರೆ ಮರ ಕಾಯಿ ಬಿಡುವುದಾದರೂ ಹೇಗೆ? ಹೂವು, ಹಣ್ಣು ಕಾಯಿ ಬಿಡದ ಮರ, ಬೆಳವಣಿಗೆಯಾಗುವುದಾದರೂ ಹೇಗೆ? ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ಶೋಷಿತ ಸಮುದಾಯದಿಂದ ಬಂದಿರುವ ಹೊಸ ತರುಣರನ್ನು ಗುರುತಿಸಿ ಅವರನ್ನು ಬೆಳೆಸಿದರೆ ಮಾತ್ರ ದುರ್ಬಲವಾಗಿರುವ ಕಾಂಗ್ರೆಸನ್ನು ಕಟ್ಟಿ ನಿಲ್ಲಿಸಬಹುದು. ಇದನ್ನು ಎಷ್ಟು ಬೇಗ ಕಾಂಗ್ರೆಸ್ ವರಿಷ್ಠರು ಅರ್ಥ ಮಾಡಿಕೊಳ್ಳುತ್ತಾರೆಯೋ ಅಷ್ಟರಮಟ್ಟಿಗೆ ಕಾಂಗ್ರೆಸ್ ಪಕ್ಷಕ್ಕೆ ಒಳಿತಿದೆ. ಇಲ್ಲವಾದರೆ ಅಳಿದುಳಿದ ಕಾಂಗ್ರೆಸ್ ಕೂಡ ಈ ಹಿರಿಯ ಸ್ವಾರ್ಥಕ್ಕೆ ಬಲಿಯಾಗಿ ಬಿಡಲಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News