ಅದಾನಿ, ಅಂಬಾನಿಯ ಬೆಣ್ಣೆ ತಿಂದು ಕಾಂಗ್ರೆಸ್ ಮೂತಿಗೆ ಒರೆಸಿದ ಪ್ರಧಾನಿ

Update: 2024-05-09 06:05 GMT

Photo: PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಚುನಾವಣಾ ಭಾಷಣಗಳೆಂದರೆ ‘ಕೋತಿ ಕದ್ದು ಬೆಣ್ಣೆ ತಿಂದು ಮೇಕೆಯ ಮೂತಿಗೆ ಒರೆಸುವುದೇ?’. ಇದನ್ನು ಪ್ರಧಾನಿ ಮೋದಿಯವರು ಹಾಡಾಹಗಲೇ ಮಾಡುತ್ತಿದ್ದಾರೆ ಮಾತ್ರವಲ್ಲ, ‘ನೋಡಿ ಮೇಕೆಯ ಮೂತಿಯಲ್ಲಿ ಬೆಣ್ಣೆಯಿದೆ, ಅದುವೇ ಕದ್ದು ತಿಂದಿದೆ’ ಎಂದು ದೇಶವನ್ನು ನಂಬಿಸಲು ಮುಂದಾಗಿದ್ದಾರೆ. ಇತ್ತೀಚಿನ ಚುನಾವಣಾ ಪ್ರಚಾರ ಭಾಷಣಗಳಲ್ಲಿ ಮೋದಿಯವರು ಸಾರ್ವಜನಿಕವಾಗಿ ಆಡುತ್ತಿರುವ ದ್ವೇಷ ಭಾಷಣಗಳು ಮತ್ತು ಸುಳ್ಳುಗಳಿಗೆ ಸ್ವತಃ ಬಿಜೆಪಿ ನಾಯಕರೇ ದಂಗಾಗಿದ್ದಾರೆ. ಮೋದಿಯವರ ಸುಳ್ಳುಗಳ ‘ಬುಲೆಟ್ ಟ್ರೈನ್’ ವೇಗಕ್ಕೆ, ಸ್ವತಃ ಬಿಜೆಪಿಯೇ ದಿಕ್ಕೆಟ್ಟು ಕೂತಿದೆ. ಸಾವಿರಾರು ಕೋಟಿ ರೂಪಾಯಿ ಸುರಿದು ಮಾಧ್ಯಮಗಳ ಮೂಲಕ ಸಂಪಾದಿಸಿದ ಮೋದಿಯ ವರ್ಚಸ್ಸು ಅವರ ಭಾಷಣಗಳಿಂದಲೇ ಬಣ್ಣ ಕಳೆದುಕೊಳ್ಳುತ್ತಿರುವುದನ್ನು ನೋಡಿ ಬಿಜೆಪಿಯ ನಾಯಕರು ಅಸಹಾಯಕರಾಗಿದ್ದಾರೆ. ಆರೆಸ್ಸೆಸ್ ನಾಯಕರಂತೂ ಮೋದಿಯವರ ಹಳಿತಪ್ಪಿದ ಮಾತುಗಳಿಂದ ಅಂತರವನ್ನು ಕಾಯ್ದುಕೊಳ್ಳುತ್ತಿದ್ದಾರೆ. ಚುನಾವಣೆಯಲ್ಲಿ ಸೋಲುವ ಭಯ ಪ್ರಧಾನಿ ಮೋದಿಯವರನ್ನು ಹತಾಶರನ್ನಾಗಿಸಿ ಅವರಿಂದ ಇಂತಹ ಮಾತುಗಳನ್ನಾಡಿಸುತ್ತಿದೆಯೇ ಎಂದು ಜನರು ಅನುಮಾನ ಪಡುವಂತಾಗಿದೆ.

ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣಕ್ಕೆ ಸಂಬಂಧಿಸಿ ಮೌನ ಮುರಿದ ಪ್ರಧಾನಿ ಮೋದಿ, ಕಳಂಕವನ್ನು ರಾಜ್ಯ ಸರಕಾರದ ಮೂತಿಗೆ ಒರೆಸಿದ್ದಾರೆ. ‘‘ಪ್ರಜ್ವಲ್ ರೇವಣ್ಣನ್ನು ರಾಜ್ಯ ಸರಕಾರ ರಕ್ಷಿಸಿದೆ. ಪ್ರಜ್ವಲ್ ಅವರ ಮೇಲೆ ಇಂತಹ ಲೈಂಗಿಕ ಆರೋಪಗಳಿರುವಾಗ ಅವರನ್ನು ಯಾಕೆ ಮೊದಲೇ ಬಂಧಿಸಲಿಲ್ಲ?’’ ಎಂದು ಅವರು ಕೇಳಿದ್ದಾರೆ. ದೇಶದಲ್ಲೇ ಅತ್ಯಂತ ಕುಖ್ಯಾತ ಲೈಂಗಿಕ ಹಗರಣದಲ್ಲಿ ಸಿಲುಕಿಕೊಂಡ ನಾಯಕನಿಗೆ ಬಿಜೆಪಿಯು ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಲು ಯಾಕೆ ಅವಕಾಶ ಮಾಡಿಕೊಟ್ಟಿತು? ಎನ್ನುವುದರ ಬಗ್ಗೆ ಮೊತ್ತ ಮೊದಲು ಪ್ರಧಾನಿ ಮೋದಿಯವರು ದೇಶಕ್ಕೆ ಉತ್ತರಿಸಬೇಕಾಗಿತ್ತು. ಪ್ರಜ್ವಲ್ ಲೈಂಗಿಕ ಹಗರಣದ ಬಗ್ಗೆ ರಾಜ್ಯ ಸರಕಾರಕ್ಕೆ ಮೊದಲೇ ಅರಿವಿರಬೇಕಾಗಿತ್ತು ಎನ್ನುವ ಮೋದಿಯ ಮಾತು ಸ್ವತಃ ಮೋದಿಯವರಿಗೂ ಅನ್ವಯವಾಗುತ್ತದೆ. ಚುನಾವಣೆಯಲ್ಲಿ ತಾನು ಮೈತ್ರಿ ಮಾಡಿಕೊಳ್ಳುವ ರಾಜಕೀಯ ಮಿತ್ರನ ‘ಚಾರಿತ್ರ್ಯ’ದ ಬಗ್ಗೆ ಮೊದಲೇ ಮಾಹಿತಿ ತರಿಸಿಕೊಳ್ಳುವುದು ಪ್ರಧಾನಿ ಮೋದಿಯವರ ಕರ್ತವ್ಯವಾಗಿತ್ತು. ಎಲ್ಲ ತನಿಖಾ ಸಂಸ್ಥೆಗಳನ್ನು ತನ್ನ ಜೀತಕ್ಕಿಟ್ಟುಕೊಂಡಿರುವ ಪ್ರಧಾನಿಗೆ, ಪ್ರಜ್ವಲ್ ಲೈಂಗಿಕ ಹಗರಣದ ಬಗ್ಗೆ ಮಾಹಿತಿ ತರಿಸಿಕೊಳ್ಳುವುದು ಕಷ್ಟವೇನೂ ಅಲ್ಲ. ಈ ಬಗ್ಗೆ ವದಂತಿಗಳು ಈ ಹಿಂದೆಯೇ ಹರಡಿರುವುದರಿಂದ, ಲೈಂಗಿಕ ಹಗರಣದ ಅರಿವಿದ್ದು ಕೊಂಡೇ ಪ್ರಧಾನಿ ಮೋದಿಯವರು ಜೆಡಿಎಸ್‌ನ ಸ್ನೇಹವನ್ನು ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಪ್ರಜ್ವಲ್ ಪರವಾಗಿ ಚುನಾವಣಾ ಪ್ರಚಾರವನ್ನೂ ನಡೆಸಿದ್ದಾರೆ. ಇಷ್ಟೆಲ್ಲ ಮಾಡಿದ ಬಳಿಕ, ‘ಪ್ರಜ್ವಲ್‌ನನ್ನು ರಾಜ್ಯ ಸರಕಾರ ರಕ್ಷಿಸುತ್ತಿದೆ’ ಎನ್ನುವ ಆರೋಪಕ್ಕೆ ಬೆಲೆಯಾದರೂ ಏನು ಉಳಿಯಿತು. ಪ್ರಧಾನಿ ಮೋದಿಯ ಜೊತೆಗಿನ ಮೈತ್ರಿಯ ಅಭಯದಿಂದಲೇ ಪ್ರಜ್ವಲ್ ಈ ದೇಶ ತೊರೆಯುವ ಧೈರ್ಯ ಮಾಡಿದ್ದಾನೆ.

ಪ್ರಜ್ವಲ್ ಹಗರಣಕ್ಕೆ ಸಂಬಂಧಿಸಿ ರಾಜ್ಯ ಸರಕಾರದ ಮೇಲೆ ಯಾವುದೇ ಆರೋಪವನ್ನು ಮಾಡುವ ಮೊದಲು ಪ್ರಜ್ವಲ್‌ಗೂ ತಮ್ಮ ಪಕ್ಷಕ್ಕೂ ಯಾವ ಸಂಬಂಧವೂ ಇಲ್ಲ ಎನ್ನುವುದನ್ನು ಪ್ರಧಾನಿ ಮೋದಿ ಸ್ಪಷ್ಟ ಪಡಿಸಬೇಕಾಗಿತ್ತು. ಲೈಂಗಿಕ ಹಗರಣದಲ್ಲಿ ಬರೇ ಪ್ರಜ್ವಲ್ ಅಷ್ಟೇ ಗುರುತಿಸಿಕೊಂಡಿರುವುದಲ್ಲ. ಆತನ ತಂದೆ ಜೆಡಿಎಸ್ ಮುಖಂಡ ರೇವಣ್ಣ ನ ಹೆಸರೂ ಪ್ರಕರಣದಲ್ಲಿ ಕೇಳಿ ಬಂದಿದೆ. ಅವರನ್ನು ಮಾಜಿ ಪ್ರಧಾನಿ ದೇವೇಗೌಡರ ನಿವಾಸದಲ್ಲೇ ಬಂಧಿಸಲಾಗಿದೆ. ಬಂಧನದ ಬೆನ್ನಿಗೇ ಜೆಡಿಎಸ್ ಮೈತ್ರಿಯ ಬಗ್ಗೆ ಮೋದಿ ಸ್ಪಷ್ಟೀಕರಣ ನೀಡಬೇಕಾಗಿತ್ತು. ಪ್ರಜ್ವಲ್ ಪರವಾಗಿ ಮತ ಯಾಚನೆ ಮಾಡಿದ್ದಕ್ಕೆ ನಾಡಿನ ಜನತೆಯ ಮುಂದೆ ಕ್ಷಮೆಯಾಚಿಸಬೇಕಾಗಿತ್ತು. ಕನಿಷ್ಠ ವಿಷಾದವನ್ನಾದರೂ ವ್ಯಕ್ತಪಡಿಸಬೇಕಾಗಿತ್ತು.

ಇದರ ಬೆನ್ನಿಗೇ ‘ಅದಾನಿ, ಅಂಬಾನಿ ವಿರುದ್ಧದ ಟೀಕೆಯನ್ನು ನಿಲ್ಲಿಸಲು ಕಾಂಗ್ರೆಸ್ ಹಣ ಪಡೆದುಕೊಂಡಿದೆಯೆ?’ ಎನ್ನುವ ಇನ್ನೊಂದು ಪ್ರಶ್ನೆಯನ್ನು ಪ್ರಧಾನಿ ಮೋದಿ ಕೇಳಿದ್ದಾರೆ. ‘‘ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ಉದ್ಯಮಿಗಳಾದ ಮುಕೆೇಶ್ ಅಂಬಾನಿ ಹಾಗೂ ಗೌತಮ್ ಅದಾನಿ ವಿರುದ್ಧ ರಾಹುಲ್ ಗಾಂಧಿ ಯಾಕೆ ಟೀಕೆಯನ್ನು ಮಾಡುತ್ತಿಲ್ಲ? ಈ ಮೊದಲು ಟೀಕೆಯನ್ನು ಮಾಡುತ್ತಿದ್ದವರು ಈಗ ಯಾಕೆ ನಿಲ್ಲಿಸಿದ್ದಾರೆ?ನೋಟುಗಳಿಂದ ತುಂಬಿದ ಟೆಂಪೋಗಳು ಕಾಂಗ್ರೆಸನ್ನು ತಲುಪಿದೆಯೆ? ರಾತ್ರೋರಾತ್ರಿ ನೀವು ಅಂಬಾನಿ ಹಾಗೂ ಅದಾನಿಯನ್ನು ಟೀಕಿಸುವುದನ್ನು ನಿಲ್ಲಿಸಿದ ಒಪ್ಪಂದ ಯಾವುದು?’’ ಎಂದು ಪ್ರಧಾನಿ ಮೋದಿಯವರು ಕೇಳಿದ್ದಾರೆ. ಇದಂತೂ ಹಾಸ್ಯಾಸ್ಪದ ಪ್ರಶ್ನೆಯಾಗಿದೆ. ಅಂತರ್‌ರಾಷ್ಟ್ರೀಯ ಮಟ್ಟದ ರಫೇಲ್ ಹಗರಣವನ್ನು ಸಿಬಿಐ ತನಿಖೆ ಮಾಡದಂತೆ ನೋಡಿಕೊಂಡು ಅಂಬಾನಿಯನ್ನು ರಕ್ಷಿಸಿದವರು ಯಾರು? ಎನ್ನುವ ಪ್ರಶ್ನೆಗೆ ಮೊದಲು ಪ್ರಧಾನಿ ಮೋದಿಯವರು ಉತ್ತರಿಸಬೇಕು. ಚುನಾವಣಾ ಬಾಂಡ್ ಮೂಲಕ ಪ್ರಧಾನಿ ಮೋದಿಯವರಿಗೆ ಅಂಬಾನಿ ಕಂಪೆನಿಗಳಿಂದ ಸಿಕ್ಕಿರುವ ಮೊತ್ತವೆಷ್ಟು ಎನ್ನುವುದು ಈಗಾಗಲೇ ಮಾಧ್ಯಮಗಳಲ್ಲಿ ವಿವರವಾಗಿ ಪ್ರಕಟವಾಗಿವೆ. ಅಂಬಾನಿ ಕಂಪೆನಿಗಳಿಗೆ ಪ್ರಧಾನಿ ಮೋದಿಯವರು ನೀಡಿದ ಕೊಡುಗೆಗಳು ಗುಟ್ಟಿನ ವಿಷಯವಾಗಿಯೇನೂ ಉಳಿದಿಲ್ಲ

ಇದೇ ಸಂದರ್ಭದಲ್ಲಿ ಕಲ್ಲಿದ್ದಲು ಹಗರಣದಲ್ಲಿ ಅದಾನಿಯ ವಂಚನೆ ಆರೋಪಗಳ ಬಗ್ಗೆ ಈವರೆಗೆ ಪ್ರಧಾನಿ ಮೋದಿಯವರು ಸ್ಪಷ್ಟನೆ ನೀಡಿಲ್ಲ. ಕಲ್ಲಿದ್ದಲು ಹಗರಣದಲ್ಲಿ ಅದಾನಿ ಕಂಪೆನಿ ಭಾರತಕ್ಕೆ 12,000 ಕೋಟಿ ರೂಪಾಯಿ ವಂಚಿಸಿದೆ ಎಂದು ಹೇಳಲಾಗುತ್ತಿದೆ. ಅದಾನಿ ಗ್ರೂಪ್ ಎಸಗಿದ ಬೃಹತ್ ಶೇರು ಹಗರಣದ ಬಗ್ಗೆ ಮಾತನಾಡದಂತೆ ವಿರೋಧಪಕ್ಷದ ನಾಯಕರ ಬಾಯಿ ಮುಚ್ಚಿ ಸಿದವರು ಯಾರು? ಸಂಸತ್ತಿನಲ್ಲಿ ಅದಾನಿ ಗ್ರೂಪ್‌ನ ಅಕ್ರಮಗಳು ಪ್ರಸ್ತಾಪ ಮಾಡುತ್ತಾರೆ ಎನ್ನುವ ಕಾರಣಕ್ಕಾಗಿಯೇ, ರಾಹುಲ್ ಗಾಂಧಿಯನ್ನು ಸಂಸತ್‌ಗೆ ಪ್ರವೇಶಿಸದಂತೆ ನೋಡಿಕೊಳ್ಳಲಾಯಿತು. ಈ ಆರೋಪದ ಬಗ್ಗೆಯೂ ಪ್ರಧಾನಿ ಮೋದಿಯವರು ಸ್ಪಷ್ಟನೆ ನೀಡಿಲ್ಲ. ಅದಾನಿ ಬಗ್ಗೆ ಕೇಳಿ ಬಂದ ಆರೋಪಗಳನ್ನು ತನಿಖೆ ನಡೆಸುವ ಬದಲಿಗೆ, ಅದಾನಿ ಮೇಲಿನ ಆರೋಪವನ್ನು ಭಾರತದ ವಿರುದ್ಧ ಅಂತರ್‌ರಾಷ್ಟ್ರೀಯ ಮಟ್ಟದ ಸಂಚು ಎಂದು ಪ್ರಕರಣವನ್ನು ಮುಚ್ಚಿ ಹಾಕಲು ನೋಡಿದವರು ಪ್ರಧಾನಿ ಮೋದಿಯಾಗಿದ್ದಾರೆ.

ಅದಾನಿ-ಅಂಬಾನಿಯ ಬಗ್ಗೆ ರಾಹುಲ್ ಗಾಂಧಿ ಹಲವು ಚುನಾವಣಾ ಪ್ರಚಾರ ಸಭೆಗಳಲ್ಲಿ ಈಗಾಗಲೇ ಮಾತನಾಡಿದ್ದಾರೆ. ‘ರಾಹುಲ್ ಗಾಂಧಿ ಈಗ ಯಾಕೆ ಟೀಕೆ ಮಾಡುತ್ತಿಲ್ಲ?’ ಎನ್ನುವ ಪ್ರಶ್ನೆ ಯನ್ನು ಕೇಳುವ ಮೊದಲು, ‘ಅಂಬಾನಿ-ಅದಾನಿ ವಿರುದ್ಧ ತಾವು ಮಾಡಿದ ಟೀಕೆಗಳೆಷ್ಟು? ಅವರ ಅಕ್ರಮಗಳ ವಿರುದ್ಧ ತಾವು ತೆಗೆದುಕೊಂಡ ಕ್ರಮಗಳೇನು? ದೇಶದ ಸಂಪತ್ತನ್ನು ಅದಾನಿ-ಅಂಬಾನಿಗೆ ದೋಚಿ, ಬಾಚಿಕೊಟ್ಟ ನಿಮಗೆ ‘ರಾಹುಲ್ ಗಾಂಧಿ ಯಾಕೆ ಟೀಕೆ ಮಾಡುತ್ತಿಲ್ಲ?’ ಎಂದು ಕೇಳುವ ನೈತಿಕ ಹಕ್ಕು ಇದೆಯೆ?’ ಈ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಉತ್ತರಿಸಬೇಕಾಗಿದೆ. ಅದಾನಿ-ಅಂಬಾನಿಗಳಿಂದ ಕದ್ದು ತಿಂದ ಬೆಣ್ಣೆಯಿಂದ ಪ್ರಧಾನಿಯವರಿಗೆ ಅಜೀರ್ಣವಾಗಿದ್ದು, ಚುನಾವಣಾ ಪ್ರಚಾರ ಸಮಯದಲ್ಲಿ ಹೊಟ್ಟೆ ಸದ್ದು ಮಾಡುವ ಮೊದಲೇ ಕೈಯಲ್ಲಿದ್ದ ಬೆಣ್ಣೆ ಅಂಶವನ್ನು ಕಾಂಗ್ರೆಸ್ ಮೂತಿಗೆ ಒರೆಸಲು ಮುಂದಾಗಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News