ಉದ್ಯೋಗ ಸೃಷ್ಟಿಗೆ ಪೂರಕ ವಾತಾವರಣ ರೂಪುಗೊಳ್ಳಲಿ
ಸಾಂದರ್ಭಿಕ ಚಿತ್ರ Photo: magnific
ಕಾರ್ಪೊರೇಟ್ ಪರ ಎಂದು ಗುರುತಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಪೊರೇಟ್ ವಲಯದ ಕುರಿತು ಇದೇ ಮೊದಲ ಬಾರಿಗೆ ತುಸು ಕಟುವಾಗಿ ಮಾತನಾಡಿದ್ದಾರೆ. ಉದ್ಯೋಗ ಸೃಷ್ಟಿ ಹಾಗೂ ನೌಕರರ ವೇತನಕ್ಕೆ ಸಂಬಂಧಿಸಿ ಕೆಲವು ಗಂಭೀರವಾದ ಪ್ರಶ್ನೆಗಳನ್ನು ಕೇಳಿದ್ದಾರೆ. ಅವರು ಎತ್ತಿರುವ ಪ್ರಶ್ನೆಗಳು ಯುಕ್ತವಾಗಿವೆ. ಆದರೆ ಈ ಜ್ಞಾನೋದಯಕ್ಕೆ ಕಾರಣ ಏನಿರಬಹುದು ಮತ್ತು ಉದ್ಯಮ ನೀತಿ ಮತ್ತು ಆಡಳಿತಾರೂಢ ಪಕ್ಷದ ಆದ್ಯತೆಗಳಿಗೆ ಸಂಬಂಧಿಸಿದಂತೆ ಈ ಮಾತಿನ ಮೂಲಕ ಹೊರಟ ಸಂದೇಶ ಏನು ಎಂಬುದರ ಕುರಿತು ರಾಜಕೀಯ ವಲಯದಲ್ಲಿ ವಿಭಿನ್ನ ವ್ಯಾಖ್ಯಾನಗಳು ಕೇಳಿಬರುತ್ತಿವೆ. ಉದ್ಯಮ ವಲಯಕ್ಕೆ ಸರಕಾರ ಹಲವು ರೀತಿಯಲ್ಲಿ ತೆರಿಗೆ ವಿನಾಯಿತಿ ನೀಡಿದ್ದರೂ ಉದ್ಯೋಗ ಸೃಷ್ಟಿಗೆ ಅದು ಪೂರಕವಾಗಿ ಒದಗಿಬಂದಿಲ್ಲ ಮತ್ತು ಉದ್ಯೋಗಿಗಳ ವೇತನ ಕೂಡ ಹೆಚ್ಚಾಗುತ್ತಿಲ್ಲ ಎಂದು ಮೋದಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿದ್ಯಾವಂತ ಯುವಸಮೂಹವನ್ನು ಗಾಢವಾಗಿ ಕಾಡುತ್ತಿರುವ ಈ ಪ್ರಶ್ನೆಯನ್ನು ಈಗ ಪ್ರಧಾನಿಯವರೇ ಕೇಳಿದ್ದಾರೆ ಎಂದರೆ ತಾವು ಅನುಸರಿಸುತ್ತಿರುವ ಉದ್ಯಮ ನೀತಿ ಎಲ್ಲೋ ಎಡವಿದೆ ಎಂದು ಆಡಳಿತಾರೂಢರೇ ಒಪ್ಪಿಕೊಂಡಂತೆ ಆಗುತ್ತದೆ. ಅಷ್ಟೇ ಅಲ್ಲ, ಉತ್ತರಿಸುವ ಹೊಣೆಗಾರಿಕೆ ಅವರ ಮೇಲೂ ಇದೆ. ಉದ್ಯಮ ವಲಯದ ಮುಂದೆ ಪ್ರಶ್ನೆ ಇಟ್ಟು, ಅಲ್ಲಿಗೆ ತಮ್ಮ ಕೆಲಸ ಮುಗಿಯಿತು ಎಂದು ಜಾರಿಕೊಂಡರೆ ಅದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ.
ಕೋವಿಡ್ ಉಲ್ಬಣಿಸಿದ ಕಾಲಘಟ್ಟದಲ್ಲಿ ದೇಶದ ಉದ್ಯಮ ವಲಯವು ಹಲವು ಬಗೆಯ ಬಿಕ್ಕಟ್ಟುಗಳನ್ನು ಎದುರಿಸಿತ್ತು. ಆ ಸಂದರ್ಭದಲ್ಲಿ ಕೇಂದ್ರ ಸರಕಾರವು ಕಾರ್ಪೊರೇಟ್ ತೆರಿಗೆಯಲ್ಲಿ ಕಡಿತ ಮಾಡಿತು. ಬಳಿಕ ಆದಾಯ ತೆರಿಗೆ ವಿನಾಯಿತಿಯನ್ನೂ ಹೆಚ್ಚಿಸಿತು. ಜೊತೆಗೆ ಹಲವು ಬಗೆಯ ಉತ್ತೇಜನ ಕ್ರಮಗಳನ್ನು ಘೋಷಿಸಿತು. ಕೋವಿಡ್ ಆಘಾತದ ತೀವ್ರತೆ ಇಳಿದ ಬಳಿಕ ಕಂಪೆನಿಗಳು ಕ್ರಮೇಣ ಚೇತರಿಸಿಕೊಂಡವು. ಲಾಭದ ಹಳಿಗೆ ಮರಳಿದವು. ಆದರೆ ಉದ್ಯೋಗದ ಅವಕಾಶಗಳು ಮಾತ್ರ ನಿರೀಕ್ಷಿತ ಮಟ್ಟದಲ್ಲಿ ವೃದ್ಧಿಯಾಗಲಿಲ್ಲ ಮತ್ತು ಉದ್ಯೋಗನಿರತರ ಸಂಬಳವೂ ಹೆಚ್ಚಾಗಿಲ್ಲ. ತಿಂಗಳುಗಳು, ವರ್ಷಗಳು ಉರುಳಿದರೂ ಈ ಸ್ಥಿತಿಯಲ್ಲಿ ಹೆಚ್ಚಿನ ಸುಧಾರಣೆ ಕಂಡುಬಂದಿಲ್ಲ. ಪರಿಣಾಮವಾಗಿ ಯುವಕ-ಯುವತಿಯರಲ್ಲಿ ತಮ್ಮ ಭವಿಷ್ಯದ ಬಗ್ಗೆ ಆತಂಕದ ಕಾರ್ಮೋಡ ಕವಿದಿದೆ. ಅದರ ಬಿಸಿ ಈಗ ಆಡಳಿತ ಪಕ್ಷಕ್ಕೂ ತಟ್ಟಿದೆ ಎಂಬುದಕ್ಕೆ ಪ್ರಧಾನಿಯವರ ಮಾತಿಗಿಂತ ಬೇರೊಂದು ಮಹತ್ವದ ಪುರಾವೆ ಬೇಕಾಗಿಲ್ಲ. ಜೆನ್ ಝಿ ತಲೆಮಾರಿನವರ ಪ್ರತಿಭಟನೆ ಮತ್ತು ಅವರು ಸೃಷ್ಟಿಸಿದ ಒತ್ತಡಕ್ಕೆ ಪ್ರತಿಕ್ರಿಯೆಯಂತಿದೆ ಮೋದಿ ಅವರ ಮಾತು. ಆ ಒತ್ತಡದಿಂದಾದರೂ ಸರಕಾರ ವಸ್ತುಸ್ಥಿತಿಗೆ ಮುಖಾಮುಖಿಯಾಗಿರುವುದು ಸಕಾರಾತ್ಮಕ ಬೆಳವಣಿಗೆ. ಆದರೆ ವಸ್ತುಸ್ಥಿತಿ ಕುರಿತ ಅರಿವು ಉದ್ಯೋಗ ಸೃಷ್ಟಿಗೆ ಇಂಬು ಕೊಡುವ ದಿಸೆಯಲ್ಲಿ ಕ್ರಿಯೆಗೆ ಇಳಿಯಬೇಕು. ಈ ಕುರಿತು ಸರಕಾರ ಗಂಭೀರವಾಗಿ ಚಿಂತನೆ ನಡೆಸುವುದು ತುರ್ತು ಅಗತ್ಯ.
ಸರಕಾರ ನೀಡಿದ ರಿಯಾಯಿತಿಗಳಿಂದ ಹೂಡಿಕೆಗೆ ಉತ್ತೇಜನ ದೊರೆತು, ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಬೇಕಿತ್ತು. ಅದರಿಂದ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಜನಬಾಹುಳ್ಯದ ಭಾರತದಂತಹ ದೇಶದಲ್ಲಿ ಉದ್ಯೋಗ ಅವಕಾಶಗಳ ಸೃಷ್ಟಿಗೆ ಹೆಚ್ಚಿನ ಮಹತ್ವ ಇದೆ. ಪದವಿ ಪಡೆದು ಉದ್ಯೋಗ ಅರಸುವ ಕೈಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. ದುಡಿಯುವ ಅಪೇಕ್ಷೆ ಮತ್ತು ಸಾಮರ್ಥ್ಯವುಳ್ಳ ಕೈಗಳಿಗೆ ಉದ್ಯೋಗ ನೀಡುವುದು ಪ್ರಜಾಸತ್ತಾತ್ಮಕ ಆಡಳಿತದಲ್ಲಿ ಆದ್ಯತೆಯಾಗಬೇಕು. ಇಲ್ಲವಾದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚುತ್ತದೆ. ಸಮಾಜದಲ್ಲಿ ಬೇರೆ ಬೇರೆ ಬಗೆಯ ಸಮಸ್ಯೆಗಳಿಗೆ ಅದು ಕಾರಣವಾಗುತ್ತದೆ. ಆದರೆ ಸರಕಾರದ ಉತ್ತೇಜಕ ಕ್ರಮಗಳ ಹೊರತಾಗಿಯೂ ನಿರೀಕ್ಷಿತ ಮಟ್ಟದಲ್ಲಿ ಉದ್ಯೋಗ ಸೃಷ್ಟಿ ಆಗಿಲ್ಲ. ಕಂಪೆನಿಗಳು ತಮ್ಮ ಆರ್ಥಿಕ ಸ್ಥಿತಿ ಉತ್ತಮಪಡಿಸಿಕೊಂಡವು. ಲಾಭ ಹೆಚ್ಚಿಸಿಕೊಂಡವು. ಆದರೆ ಅದರ ಒಂದು ಭಾಗವನ್ನು ಸಮಾಜದ ಜೊತೆ ಹಂಚಿಕೊಳ್ಳುವ ಔದಾರ್ಯ ತೋರಲಿಲ್ಲ. ರಿಯಾಯಿತಿಗಳ ರೂಪದಲ್ಲಿ ಉದ್ಯಮಗಳಿಗೆ ಸರಕಾರ ನೀಡಿದ ಬಳುವಳಿಗೆ ಬಳಕೆಯಾದದ್ದು ಜನರ ತೆರಿಗೆ ಹಣ. ಆದರೆ ಅವುಗಳು ಸಾಮಾಜಿಕ ಹೊಣೆಗಾರಿಕೆಗೆ ನೀಡಬೇಕಾದಷ್ಟು ಮಹತ್ವ ನೀಡಲಿಲ್ಲ. ರಿಯಾಯಿತಿಗಳ ವಿಚಾರದಲ್ಲಿ ಉದ್ಯಮಗಳಿಗೆ ಇರುವುದು ‘ತಣಿಯದ ಹಸಿವು’ ಎಂದು ಪ್ರಧಾನಿಯವರು ದೂಷಣೆಯ ಧಾಟಿಯಲ್ಲಿ ಹೇಳಿರುವುದು ಬಹುಶಃ ಈ ಕಾರಣಕ್ಕಾಗಿಯೇ ಇರಬಹುದು. ಟೀಕಿಸಿದರಷ್ಟೇ ಸಾಲದು; ಅದಕ್ಕೆ ಕಡಿವಾಣ ಹಾಕುವ ದಿಸೆಯಲ್ಲಿ ಉದ್ಯಮ ನೀತಿಯಲ್ಲಿ ಬದಲಾವಣೆಗಳು ತರಬೇಕಾಗಿದೆ. ಅದ್ಯತೆಯು ಉದ್ಯೋಗ ಸೃಷ್ಟಿಯತ್ತ ಹೊರಳಬೇಕಾಗಿದೆ.
ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಹಂತದ (ಎಂಎಸ್ಎಂಇ) ಉದ್ಯಮ ವಲಯವು ದುಡಿಯುವ ಕೈಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ನೀಡುತ್ತದೆ. ನೋಟು ರದ್ದತಿಯು ಈ ವಲಯಕ್ಕೆ ಆಘಾತ ನೀಡಿತ್ತು. ಆ ಆಘಾತದಿಂದ ಸಂಪೂರ್ಣವಾಗಿ ಹೊರಬರಲು ಅವುಗಳಿಗೆ ಇಲ್ಲಿಯವರೆಗೂ ಸಾಧ್ಯವಾಗಿಲ್ಲ ಎಂದು ಸಮೀಕ್ಷಾ ವರದಿಗಳು ಹೇಳುತ್ತವೆ. ಸಂಪತ್ತು ಕೆಲವೇ ಕಡೆ ಅದರಲ್ಲೂ ಬೆರಳೆಣಿಕೆಯಷ್ಟು ದೊಡ್ಡ ಉದ್ಯಮಪತಿಗಳ ಬಳಿ ಕ್ರೋಡೀಕರಣ ಆಗುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ವೇಗ ಪಡೆಯಿತು. ಇದರ ಪರಿಣಾಮಗಳ ಬಗ್ಗೆ ಹಾಗೂ ಆರ್ಥಿಕ ಅಸಮಾನತೆ ಹೆಚ್ಚುತ್ತಿರುವುದರ ಕುರಿತು ಸರಕಾರ ಅಷ್ಟಾಗಿ ಗಮನ ಹರಿಸಲಿಲ್ಲ. ಉದ್ಯೋಗ ಸೃಷ್ಟಿ ಮತ್ತು ಸಾಮಾಜಿಕ-ಆರ್ಥಿಕ ಒಳಿತು ಆದ್ಯತೆಯ ಪಟ್ಟಿಯಲ್ಲಿ ಕೆಳಗೆ ಜಾರಿದವು. ಅದರ ಪರಿಣಾಮಗಳು ಈಗ ಗೋಚರಿಸಲಾರಂಭಿಸಿವೆ. ಈ ಬೆಳವಣಿಗೆಗಳ ಮಧ್ಯೆ ಕೃತಕ ಬುದ್ಧಿಮತ್ತೆ (ಎಐ) ಗುಮ್ಮನಂತೆ ಕಾಡುತ್ತಿದೆ. ಇದರ ಪರಿಣಾಮಗಳ ಕುರಿತ ಚರ್ಚೆಗಳು ಜಗತ್ತಿನಾದ್ಯಂತ ವ್ಯಾಪಕವಾಗಿ ನಡೆಯುತ್ತಿವೆ. ಪ್ರಧಾನಿಯವರು ಈ ವಿಷಯದ ಕುರಿತೂ ಸ್ಪಂದಿಸಿದ್ದಾರೆ. ಕೌಶಲ ಹೊಂದಿದ ವ್ಯಕ್ತಿಯ ಜೀವನವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರಾದರೂ ಆತಂಕವಂತೂ ಇದ್ದೇ ಇದೆ. ಉದ್ಯೋಗ ಅವಕಾಶಗಳ ಸೃಷ್ಟಿಗೆ ಮತ್ತು ನೌಕರರ ವೇತನ ಹೆಚ್ಚಳಕ್ಕೆ ಪೂರಕವಾಗುವಂತಹ ವಾತಾವರಣ ಸೃಷ್ಟಿಗೆ ಬೇಕಾದ ನೀತಿ ಅಳವಡಿಸಿಕೊಳ್ಳಲು ಇದು ಸಕಾಲ. ಈ ನಿಟ್ಟಿನಲ್ಲಿ ಸರಕಾರ ಗಮನ ಹರಿಸಬೇಕು.