ಗಿಗ್ ಕಾರ್ಮಿಕರ ಮಂಡಳಿ ಮತ್ತು ‘ಬೆಕ್ಕಿನ ಸನ್ಯಾಸ’
ಸಾಂದರ್ಭಿಕ ಚಿತ್ರ
ಭಾರತ ಸರಕಾರವು ಅಸಂಘಟಿತ ವಲಯದ ಗಿಗ್ ಕಾರ್ಮಿಕರು ಹಾಗೂ ಪ್ಲಾಟ್‌ಫಾರ್ಮ್ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ‘ಅಸಂಘಟಿತ ಕಾರ್ಮಿಕರು ಮತ್ತು ಗಿಗ್ ಹಾಗೂ ಪ್ಲಾಟ್‌ಫಾರ್ಮ್ ಕೆಲಸಗಾರರ ರಾಷ್ಟ್ರೀಯ ಭದ್ರತಾ ಮಂಡಳಿ’ಯನ್ನು ಸ್ಥಾಪಿಸಿ, ಇದೇ ಅಕ್ಟೋಬರ್ 30ರಂದು ಆ ಕುರಿತು ಪ್ರಕಟಣೆ ಹೊರಡಿಸಿದೆ. ಕಾರ್ಮಿಕ ಮತ್ತು ಉದ್ಯೋಗ ಖಾತೆಗಳ ಸಚಿವರ ಅಧ್ಯಕ್ಷತೆಯ ಈ ಮಂಡಳಿಯು ವರ್ಷಕ್ಕೆ ಕನಿಷ್ಠ ಮೂರು ಬಾರಿ ಸಭೆ ಸೇರಿ, ಭಾರತ ಸರಕಾರಕ್ಕೆ ಈ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳ ಮತ್ತು ಆಡಳಿತಾತ್ಮಕ ಸಂಗತಿಗಳ ಕುರಿತು ಸಲಹೆ ನೀಡುವುದು, ಕಲ್ಯಾಣ ಕಾರ್ಯಕ್ರಮಗಳ ಮೇಲೆ ನಿಗಾ ಇರಿಸಿಕೊಳ್ಳುವುದು, ರಾಜ್ಯ ಮಟ್ಟದ ಮಂಡಳಿಗಳ ಮೇಲೆ ನಿಗಾ ಇರಿಸುವುದು, ಈ ಕಾರ್ಮಿಕರ ನಿಧಿಯ ಲೆಕ್ಕಪತ್ರಗಳ ಪರಿಶೀಲನೆ ಹಾಗೂ ಭಾರತ ಸರಕಾರ ವಹಿಸಿದ ಇತರ ಕೆಲಸಗಳನ್ನು ನಿಭಾಯಿಸುವ ಜವಾಬ್ದಾರಿಗಳನ್ನು ಹೊಂದಿದೆ ಎಂದು ಪ್ರಕಟಣೆ ಹೇಳುತ್ತಿದೆ.
ಒಂದು ಕೋನದಿಂದ ನೋಡಿದರೆ, ಇದು ಬೆಕ್ಕು ಸನ್ಯಾಸಿಯ ಕಥೆಯಂತೆ ಕಾಣಿಸುತ್ತಿದೆ. ಅಸಂಘಟಿತ ಕಾರ್ಮಿಕರು, ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರ ನೀತಿಗಳನ್ನು ನಿರೂಪಿಸಬೇಕಾದವರೇ ಅದರ ಮೇಲ್ವಿಚಾರಣೆಯನ್ನೂ ಈ ಕಾನೂನಿನ 6 (7)B ಅಡಿ ಹೊಂದಿದ್ದಾರೆ. ಇದು ಹಿತಾಸಕ್ತಿ ಸಂಘರ್ಷಕ್ಕೆ ಕಾರಣ ಆಗಬಹುದೆಂಬ ಸಾಮಾನ್ಯ ಜ್ಞಾನದ, ನೈತಿಕತೆಯ ಹೊಳಹೂ ಇಲ್ಲಿ ಕಾಣಿಸುತ್ತಿಲ್ಲ. ಸ್ವತಃ ಇಲಾಖಾ ಸಚಿವರೇ ಅಧ್ಯಕ್ಷತೆ ವಹಿಸಿರುವ ಮತ್ತು ಕೇಂದ್ರ ಸರಕಾರವೇ ನಾಮನಿರ್ದೇಶನ ಮಾಡಿರುವ ಬಹುತೇಕ ಸದಸ್ಯರನ್ನು ಹೊಂದಿರುವ ಈ ಮಂಡಳಿಯಲ್ಲಿ ಕಾರ್ಮಿಕರ ಹಿತಾಸಕ್ತಿಗಳ ರಕ್ಷಣೆಯ ಹೊಣೆಯೂ ಕೇಂದ್ರ ಸರಕಾರದ್ದೇ.
ಮಾಧ್ಯಮ ವರದಿಗಳ ಪ್ರಕಾರ ಹಾಲಿ, ಮೂರು ವರ್ಷಗಳ ಅವಧಿಗೆಂದು ರಚನೆಗೊಂಡಿರುವ ಸಮಿತಿಯಲ್ಲಿ, ಎಟರ್ನಲ್ ಗ್ರೂಪ್, ಸ್ವಿಗ್ಗಿ, ಜೆಪ್ಟೊ, ಅರ್ಬನ್ ಕಂಪೆನಿ ಮತ್ತು ರಾಪಿಡೊ ಸಂಸ್ಥೆಗಳ (ಅಗ್ರಗೇಟರ್ ಸದಸ್ಯವರ್ಗ) ಸದಸ್ಯರಿರಲಿದ್ದಾರೆ. ಕಾರ್ಮಿಕರ ಪೈಕಿ ಇಂಡಿಯನ್ ಫೆಡರೇಷನ್ ಆಫ್ ಆ್ಯಪ್ ಬೇಸ್ಡ್ ಟ್ರಾನ್ಸ್‌ಪೋರ್ಟ್ ವರ್ಕರ್ಸ್ (IFAT), ಭಾರತೀಯ ಮಜ್ದೂರ್ ಸಂಘ (BMS), ನ್ಯಾಷನಲ್ ಫ್ರಂಟ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (NFITU) ಮತ್ತು ಟ್ರೇಡ್ ಯೂನಿಯನ್ ಕಾರ್ಡಿನೇಷನ್ ಸೆಂಟರ್ (TUCC) ಸದಸ್ಯರಿದ್ದಾರೆ. ಇಲ್ಲೂ ಬಹುಮತ ಪರಿವಾರ ಸಂಘಟನೆಗಳದು. ಸಾಂಪ್ರದಾಯಿಕ ಕಾರ್ಮಿಕ ಸಂಘಟನೆಗಳಾದ CITU, AITUC ಇತ್ಯಾದಿಗಳು ಇಲ್ಲಿ ಸ್ಥಾನ ಪಡೆದಿಲ್ಲ. ಬಿಜೆಪಿ ಆಳ್ವಿಕೆಯ ರಾಜ್ಯಗಳೇ (ಉತ್ತರ ಪ್ರದೇಶ, ಮಹಾರಾಷ್ಟ್ರ, ಆಂಧ್ರ, ಗುಜರಾತ್, ಪ. ಬಂಗಾಳ) ಈ ಮಂಡಳಿಯಲ್ಲಿ ಜಾಗ ಪಡೆದಿವೆ. ಹಾಗಾಗಿ, ಈ ಮಂಡಳಿ, ಸರಕಾರದ ನೀತಿಗಳ ವಿಸ್ತರಣೆ ಆಗಿ ಕಾರ್ಯಾಚರಿಸುವ ಸಾಧ್ಯತೆಗಳೇ ಹೆಚ್ಚು.
2025-26ರ ಆರ್ಥಿಕ ಸಮೀಕ್ಷೆಯ ಅನುಸಾರ, 2029-30ರ ಹೊತ್ತಿಗೆ ದೇಶದ ಕೃಷಿಯೇತರ ಕಾರ್ಮಿಕ ವಲಯದ ಶೇ.6.7ರಷ್ಟು ಗಮನಾರ್ಹ ಭಾಗವನ್ನು ಗಿಗ್ ಕಾರ್ಮಿಕರೇ ತುಂಬಲಿದ್ದಾರೆ. ಗಿಗ್ ಕಾರ್ಮಿಕರ ಬದುಕು ಎಷ್ಟು ಅನಿಶ್ಚಿತವಿದೆ ಎಂದರೆ, ಸರಕಾರವು ಆ ಕಾರ್ಮಿಕರನ್ನು ಗುರುತಿಸಲು ರೂಪಿಸಿರುವ ಮಾನದಂಡದ ವ್ಯಾಪ್ತಿಯೊಳಗೆ ಬರುವುದೇ ಗಿಗ್ ಕಾರ್ಮಿಕರಿಗೆ ಸವಾಲಾಗಬಹುದು. ಪ್ಲಾಟ್‌ಫಾರ್ಮ್‌ಗಳ ಅಥವಾ ಆಗ್ರಗೇಟರ್‌ಗಳ ಕಡೆಯಿಂದ ಯಾವುದೇ ಉದ್ಯೋಗ ಖಾತರಿ ಇಲ್ಲದಿರುವುದರಿಂದ ಹಾಗೂ ಆ ವಲಯದ ಬೇಡಿಕೆ-ಪೂರೈಕೆಯಲ್ಲಿ ಅಸಮತೋಲನ ಇರುವುದರಿಂದ, ಗಿಗ್ ಕಾರ್ಮಿಕರು ಪ್ಲಾಟ್‌ಫಾರ್ಮ್‌ನಿಂದ ಪ್ಲಾಟ್ ಫಾರ್ಮ್‌ಗೆ ಬದಲಾಗುವುದು ಅನಿವಾರ್ಯ ಅನ್ನಿಸುವ ಸ್ಥಿತಿ ಇದೆ. ಕೇಂದ್ರ ಸರಕಾರದ ನಿಯಮಗಳ ಪ್ರಕಾರ ಒಂದು ಹಣಕಾಸು ವರ್ಷದಲ್ಲಿ, ಕನಿಷ್ಠ 90 ದಿನಗಳ ಕಾಲ ಒಂದು ಗಿಗ್ ಪ್ಲಾಟ್‌ಫಾರ್ಮ್‌ನಲ್ಲಿ ಅಥವಾ 120 ದಿನಗಳಿಗಿಂತ ಹೆಚ್ಚು ಅವಧಿಗೆ ಒಂದಕ್ಕಿಂತ ಹೆಚ್ಚು ಪ್ಲಾಟ್‌ಫಾರ್ಮ್‌ಗಳಲ್ಲಿ ಕೆಲಸ ಮಾಡಿದ ದಾಖಲೆಗಳಿರುವವರು ಮಾತ್ರ ಗಿಗ್ ಕಾರ್ಮಿಕರೆಂದು ನೋಂದಾಯಿಸಿಕೊಳ್ಳುವುದು ಸಾಧ್ಯ ಆಗುತ್ತದೆ.
ತಾಂತ್ರಿಕವಾಗಿ ಕೂಡ, ಭಾರತ ಸರಕಾರವು ದೇಶದ ಎಲ್ಲ ಕಾರ್ಮಿಕ ಕಾನೂನುಗಳನ್ನು ಏಕತ್ರಗೊಳಿಸಿ ಜಾರಿಗೆ ತಂದಿರುವ ನಾಲ್ಕು ಲೇಬರ್ ಕೋಡ್‌ಗಳಲ್ಲಿ, ಸಾಮಾಜಿಕ ಭದ್ರತೆಯ ಕುರಿತಾದ ಕೋಡ್ ಮಾತ್ರ ಗಿಗ್ ಹಾಗೂ ಪ್ಲಾಟ್‌ಫಾರಂ ಕಾರ್ಮಿಕರನ್ನು ಗುರುತಿಸುತ್ತದೆ ಹೊರತು ಉಳಿದ ಸಂಬಳ, ಉದ್ಯೋಗ ಸ್ಥಳದ ಸುರಕ್ಷತೆ, ಕೈಗಾರಿಕಾ ಸಂಬಂಧಗಳ ಕೋಡ್‌ಗಳಲ್ಲಿ ಈ ಗಿಗ್ ಮತ್ತು ಅಸಂಘಟಿತ ವಲಯದ ಕಾರ್ಮಿಕರ ಪ್ರಸ್ತಾವವೇ ಇದ್ದಂತಿಲ್ಲ. ಈ ಕೋಡ್, ಗಿಗ್ ಕಾರ್ಮಿಕರು ಮತ್ತು ಅಗ್ರಗೇಟರ್ ಮಾಲಕರ ನಡುವೆ ಇರುವ ಸಂಬಂಧ ಕೇವಲ ಗುತ್ತಿಗೆ ಸ್ವರೂಪದ್ದು ಎಂದೇ ಪರಿಗಣಿಸುತ್ತದೆ ಹೊರತು ಅಲ್ಲಿ ಸಾಂಪ್ರದಾಯಿಕ ಕಾರ್ಮಿಕ-ಮಾಲಕ ಸಂಬಂಧಗಳಿಲ್ಲ. ಜೊತೆಗೆ ಸಂವಿಧಾನದ ವಿಧಿ 14, 16, 19 (1)ಸಿ, 21 ಇತ್ಯಾದಿಗಳ ಪಾಲನೆ ಆಗಿರದಿರುವುದು ಮತ್ತು ಕಾನೂನಿನಲ್ಲಿರುವ ಅಸ್ಪಷ್ಟತೆಯು ನ್ಯಾಯಾಂಗದಲ್ಲಿ ವ್ಯಾಜ್ಯಗಳಿಗೆ ಹಾದಿ ತೆರೆಯಬಹುದೆಂಬ ಆತಂಕ ಕೂಡ ವ್ಯಕ್ತವಾಗುತ್ತಿದೆ.
ಈ ಕಾನೂನಿನ ಅಡಿಯಲ್ಲಿ ಗಿಗ್ ಕಾರ್ಮಿಕರಿಗೆ ವಿಮಾ ರಕ್ಷಣೆ, ಆರೋಗ್ಯ ಮತ್ತು ಹೆರಿಗೆ ಸವಲತ್ತುಗಳು, ವೃದ್ಧಾಪ್ಯದ ರಕ್ಷಣೆ ಮತ್ತು ಮಕ್ಕಳ ಪೋಷಣೆಗೆ ಸಂಬಂಧಿಸಿದ ಕಲ್ಯಾಣ ಕಾರ್ಯಕ್ರಮಗಳು ರೂಪುಗೊಳ್ಳಬೇಕಿದ್ದು, ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯು ಅದನ್ನು ಒದಗಿಸಲಿದೆ ಎಂಬುದು ಭಾರತ ಸರಕಾರದ ನಿರೀಕ್ಷೆ. ಅಗ್ರಗೇಟರ್ ಪ್ಲಾಟ್‌ಫಾರ್ಮ್‌ಗಳು ತಮ್ಮ ವಾರ್ಷಿಕ ವಹಿವಾಟಿನಲ್ಲಿ ಶೇ. 2-5ರಷ್ಟನ್ನು ಈ ಮಂಡಳಿಗೆ ಆ ಉದ್ದೇಶಕ್ಕೋಸ್ಕರ ನೀಡಬೇಕಾಗುತ್ತದೆ.
ಕಾರ್ಮಿಕರು ಸಂವಿಧಾನದ ಏಳನೇ ಷೆಡ್ಯೂಲ್‌ನಲ್ಲಿ ಸಮವರ್ತಿ ಪಟ್ಟಿಯ ಭಾಗವಾಗಿದ್ದಾರೆ. ಕರ್ನಾಟಕ, ರಾಜಸ್ಥಾನ, ಬಿಹಾರ, ಜಾರ್ಖಂಡ್, ತೆಲಂಗಾಣ ರಾಜ್ಯಗಳು ಈ ಮೊದಲೇ ಗಿಗ್ ಕಾರ್ಮಿಕರ ಹಿತರಕ್ಷಣೆಯ ಕಾನೂನುಗಳನ್ನು ತಂದಿದ್ದು, ಈ ಕೇಂದ್ರ-ರಾಜ್ಯ ಕಾನೂನುಗಳ ನಡುವೆ ಇರಬಹುದಾದ ವೈರುಧ್ಯಗಳನ್ನು ಗುರುತಿಸಿ, ಸರಿಪಡಿಸುವ ಕೆಲಸ ಕೂಡ ಆಗಬೇಕಿದೆ. ಕೇಂದ್ರದಲ್ಲಿರುವ ಸರಕಾರದ ಮೂಗಿನ ನೇರಕ್ಕೇ ಇವೆಲ್ಲ ನಡೆಯಬೇಕು ಎಂದಾದರೆ, ರಾಜ್ಯಗಳ ಸ್ವಾಯತ್ತೆಯ ಪ್ರಶ್ನೆ, ಗಿಗ್ ಕಾರ್ಮಿಕರ ಹಿತರಕ್ಷಣೆಯ ಪ್ರಶ್ನೆಗಳೆಲ್ಲ ‘ಬೆಕ್ಕಿನ ಸನ್ಯಾಸ’ ಎಂಬುದು ಢಾಳಾಗಿ ಕಾಣಿಸುತ್ತಿದೆ.