ರಾಮಮಂದಿರದಲ್ಲಿ ಲೂಟಿ
ರಾಮ ಮಂದಿರ Photo : PTI
ದೇಶದಲ್ಲಿ ಅಯೋಧ್ಯೆಯ ರಾಮಮಂದಿರ ಮತ್ತೆ ಸುದ್ದಿಯಲ್ಲಿದೆ. ಉದ್ಘಾಟನೆಗೊಂಡ ಬರೇ ಎರಡು ವರ್ಷಗಳಲ್ಲಿ ನೂರಾರು ಕೋಟಿ ರೂಪಾಯಿಗಳು ರಾಮಮಂದಿರದ ಹೆಸರಿನಲ್ಲಿ ಲೂಟಿಯಾಗಿರುವುದು ಮತ್ತು ಆಗುತ್ತಿರುವುದು ಬಹಿರಂಗವಾಗುತ್ತಿದೆ. ಮತ್ತು ಈ ಲೂಟಿ ನಡೆಯುತ್ತಿರುವುದು ಯಾವುದೋ ಪರಕೀಯ ಘಜನಿ, ಘೋರಿ, ಬಾಬರ್‌ಗಳಿಂದಲ್ಲ. ಈ ಆಧುನಿಕ ಘಜನಿ, ಗೋರಿಗಳು ದೇವಸ್ಥಾನದೊಳಗೇ ಶುಕ್ಲಾ, ಶರ್ಮಾ, ಪಾಂಡೆ ಮೊದಲಾದ ಹೆಸರಿನಲ್ಲಿ ಬಚ್ಚಿಟ್ಟುಕೊಂಡಿರುವುದು ತನಿಖೆಯಿಂದ ಬೆಳಕಿಗೆ ಬರುತ್ತಿದೆ. ಅಯೋಧ್ಯೆಯ ರಾಮಮಂದಿರದ ಕೋಟ್ಯಂತರ ದೇಣಿಗೆ ಹಣವನ್ನು ದೋಚಿದ ಆರೋಪದಲ್ಲಿ ಎಂಟು ಜನರ ಮೇಲೆ ಎಫ್‌ಐಆರ್ ದಾಖಲಾಗಿ, ಅವರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಆಪ್ತ ಸಹಾಯಕ ರಾಮಶಂಕರ ಯಾದವ್, ಲವಕುಶ ಮಿಶ್ರಾ, ಅನುಕಲ್ಪ್ ಮಿಶ್ರಾ, ಅವಿನಾಶ್ ಶುಕ್ಲಾ, ಮನೀಶ್ ಯಾದವ್, ರಾಮಶಂಕರ್ ಮಿಶ್ರಾ, ಸುಭಾಷ್ ಚಂದ್ರ ಶ್ರೀವಾಸ್ತವ ಹಾಗೂ ಕರುಣೇಶ್ ಪಾಂಡೆ ಎಂದು ಗುರುತಿಸಲಾಗಿದೆ. ಮೂವರು ಸದಸ್ಯರ ವಿಶೇಷ ತನಿಖಾ ತಂಡ ತನ್ನ ಪ್ರಾಥಮಿಕ ವರದಿಯನ್ನು ಉತ್ತರ ಪ್ರದೇಶ ಸರಕಾರಕ್ಕೆ ಸಲ್ಲಿಸಿದ ಬೆನ್ನಿಗೇ ಈ ಬಂಧನ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಇನ್ನಷ್ಟು ಬಂಧನಗಳು ನಡೆಯುವ ಸಾಧ್ಯತೆಗಳು ಇಲ್ಲದಿಲ್ಲ. ಈಗಾಗಲೇ ಶ್ರೀರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ಅವರು ತಮ್ಮ ಹುದ್ದೆಗಳಿಗೆ ರಾಜೀನಾಮೆಯನ್ನು ನೀಡಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾದ ದಿನದಿಂದ ಅದು ಒಂದಲ್ಲ ಒಂದು ಕಾರಣಕ್ಕೆ ಟೀಕೆಗೊಳಗಾಗುತ್ತಾ ಬಂದಿದೆ. ಅಪೂರ್ಣಗೊಂಡ ದೇವಾಲಯದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡುವುದನ್ನು ವಿರೋಧಿಸಿ ನಾಲ್ವರು ಪ್ರಮುಖ ಶಂಕರಾಚಾರ್ಯರು ಸಮಾರಂಭದಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದರು. ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಸರಕಾರ ರಾಮಮಂದಿರವನ್ನು ಆತುರಾತುರವಾಗಿ ಉದ್ಘಾಟಿಸಲು ಮುಂದಾಯಿತು ಎನ್ನುವ ಆರೋಪ ಆಗಲೇ ಕೇಳಿ ಬಂದಿತ್ತು. ಪ್ರಾಣಪ್ರತಿಷ್ಠೆಯ ನೇತೃತ್ವವನ್ನು ಪ್ರಧಾನಿ ಮೋದಿಯವರು ವಹಿಸಿರುವುದರ ಬಗ್ಗೆಯೂ ಧಾರ್ಮಿಕ ವಲಯದಿಂದ ಆಕ್ರೋಶ ವ್ಯಕ್ತವಾಗಿದ್ದವು. ಆರಂಭದಲ್ಲಿ ರಾಮಮಂದಿರ ಕಾಮಗಾರಿಗಳಲ್ಲಿ ವ್ಯಾಪಕ ಅಕ್ರಮಗಳು ನಡೆದಿರುವುದರ ಬಗ್ಗೆ ಸ್ಥಳೀಯರು ಗಮನ ಸೆಳೆದಿದ್ದರು. ಆದರೆ ಸರಕಾರ ಈ ಆರೋಪಗಳನ್ನು ಚಿಗುರಲ್ಲೇ ಚಿವುಟಿ ಹಾಕಿತು. ಆದರೆ ಇದೀಗ ರಾಮಮಂದಿರದ ಒಳಗೇ ನಡೆದಿರುವ ಕೋಟಿ ಕೋಟಿ ಹಣ ಲೂಟಿ, ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ರಾಮನ ಹೆಸರು ಹೇಳಿಕೊಂಡು ಮಂದಿರದ ನೇತೃತ್ವವನ್ನು ವಹಿಸಿದವರೇ ನಡೆಸಿದ ಹಗರಣಗಳ ಕಾಂಡ ದೇಶಾದ್ಯಂತ ರಾಮಭಕ್ತರನ್ನು ತೀವ್ರ ಮುಜುಗರಕ್ಕೆ ಸಿಲುಕಿಸಿದೆ. ಇದರ ವಿರುದ್ಧ ಧ್ವನಿಯೆತ್ತಬೇಕಾದ ಆರೆಸ್ಸೆಸ್‌ನಂತಹ ಸಂಘಟನೆಗಳು ಜಾಣ ಕಿವುಡು, ಜಾಣ ಕುರುಡುತನವನ್ನು ಪ್ರದರ್ಶಿಸುತ್ತಿವೆ. ಆರೋಪಿಗಳ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾದ ಉತ್ತರ ಪ್ರದೇಶ ಸರಕಾರ, ‘‘ನೀವು ಬಾಬರೀ ಮಸೀದಿಗಾಗಿ ಸಂಗ್ರಹಿಸಿದ ದೇಣಿಗೆಯ ಅಕ್ರಮಗಳನ್ನು ಯಾಕೆ ಪ್ರಶ್ನಿಸುವುದಿಲ್ಲ?’’ ಎಂದು ಪ್ರಶ್ನಿಸಿ ಆರೋಪ ಮಾಡಿದವರನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಪ್ರಯತ್ನಿಸುತ್ತಿದೆ.
ರಾಮಮಂದಿರದಲ್ಲಿ ರಾಮನಿಗೆ ತನ್ನ ಭಕ್ತರಿಂದಲೇ ಆಗುತ್ತಿರುವ ಈ ಅನ್ಯಾಯವನ್ನು ಮೊದಲು ಸಮಾಜವಾದಿ ಪಕ್ಷದ ಶಾಸಕರೊಬ್ಬರು ಪ್ರಶ್ನಿಸಿದ್ದರು. ಸಮಾಜವಾದಿ ಪಕ್ಷದ ಶಾಸಕ ಪವನ್ ಪಾಂಡೆ ಅವರು ಸುಮಾರು ಎಂಟು ಕೋಟಿ ರೂಪಾಯಿ ದೇಣಿಗೆ ಕಳ್ಳತನವಾಗಿರುವುದನ್ನು ಸಾರ್ವಜನಿಕರ ಗಮನಕ್ಕೆ ತಂದರು. ಆರೋಪ ಕೇಳಿ ಬಂದಾಕ್ಷಣ ಸರಕಾರ ಅದರ ಬಗ್ಗೆ ತನಿಖೆಗೆ ಮುಂದಾಗಬೇಕಾಗಿತ್ತು. ಆದರೆ, ಟೀಕೆ ಮಾಡಿದವರನ್ನೇ ಕಟಕಟೆಯಲ್ಲಿ ನಿಲ್ಲಿಸಿದ ಮುಖ್ಯಮಂತ್ರಿ ಆದಿತ್ಯನಾಥ್ ‘‘ಶ್ರೀರಾಮ ಮಂದಿರದ ಬಗ್ಗೆ ವದಂತಿಗಳನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ. ಅವರಿಗೆ ರಾಮಮಂದಿರದ ಅಸ್ತಿತ್ವವನ್ನು ಸಹಿಸುವುದಕ್ಕಾಗುವುದಿಲ್ಲ’’ ಎಂದು ಪ್ರತಿ ಆರೋಪ ಮಾಡಿದರು. ಸಮಾಜವಾದಿ ಪಕ್ಷದ ಶಾಸಕರ ಆರೋಪಕ್ಕೆ ಬಳಿಕ ವಿರೋಧ ಪಕ್ಷದ ಇತರ ನಾಯಕರು ಧ್ವನಿಗೂಡಿಸಿದರು. ಅಖಿಲೇಶ್ ಯಾದವ್ ಪತ್ರಿಕಾಗೋಷ್ಠಿಯಲ್ಲಿ , ರಾಮಮಂದಿರದ ಹೆಸರಿನಲ್ಲಿ ನಡೆದ ಇನ್ನಿತರ ಹಗರಣಗಳ ಬಗ್ಗೆ ಗಂಭೀರ ಆರೋಪ ಮಾಡಿದರು. ಎಲ್ಲಕ್ಕಿಂತ ಮುಖ್ಯವಾಗಿ ದೇಣಿಗೆ ನೀಡಿದ ಹಲವು ಸಂಸ್ಥೆಗಳು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸತೊಡಗಿದವು. ಮಂದಿರಕ್ಕೆ ದೇಣಿಗೆಯಾಗಿ ನೀಡಲಾದ 200 ಬೆಳ್ಳಿ ಇಟ್ಟಿಗೆಗಳ ಲೆಕ್ಕ ಸಿಗುತ್ತಿಲ್ಲ ಎಂದು ಸಿಂಧಿ ಸಮುದಾಯ ಇತ್ತೀಚೆಗೆ ಆರೋಪಿಸಿತ್ತು. ಸಿಂಧಿ ಸಮುದಾಯದ ಪರವಾಗಿ ಕ್ಯಾಸಲ್ಸ್ ಗ್ರೂಪ್ ಆಫ್ ಕಂಪೆನೀಸ್ ತಲಾ ಒಂದು ಕೆಜಿ ತೂಕದ 200 ಬೆಳ್ಳಿ ಇಟ್ಟಿಗೆಗಳನ್ನು ದೇಣಿಗೆಯಾಗಿ 2021ರಲ್ಲಿ ಅಂದಿನ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ಹಸ್ತಾಂತರಿಸಿತ್ತು. ದೇಣಿಗೆ ಸ್ವೀಕರಿಸಿದ ಸಂದರ್ಭದಲ್ಲಿ ಯಾವುದೇ ರಶೀದಿಯನ್ನು ನೀಡಿರಲಿಲ್ಲ. ಆ ಇಟ್ಟಿಗೆಗಳು ಏನಾಯಿತು ಎನ್ನುವ ಬಗ್ಗೆ ಈವರೆಗೆ ಯಾವುದೇ ಸ್ಪಷ್ಟೀಕರಣವನ್ನು ನೀಡಿಲ್ಲ. ಇದೇ ಸಂದರ್ಭದಲ್ಲಿ ಶಿವಸೇನೆ ದಾನ ಮಾಡಿದ ನಾಲ್ಕು ಕೆಜಿ ಇಟ್ಟಿಗೆ ಎಲ್ಲಿ? ಎಂದು ಶಿವಸೇನೆ ರಾಜ್ಯ ಸಭಾ ಸದಸ್ಯ ಸಂಜಯ್ ರಾವತ್ ಪ್ರಶ್ನಿಸಿದ್ದಾರೆ. ದೇಣಿಗೆ ನೀಡಿದ ಹಲವು ಸಂಸ್ಥೆಗಳು ಅದು ಏನಾಯಿತು ಎಂದು ಲೆಕ್ಕ ಕೇಳುವುದಕ್ಕೆ ಹೆದರುತ್ತಿದ್ದಾರೆ. ಇವೆಲ್ಲದರ ನಡುವೆ, ಪ್ರಕರಣ ನ್ಯಾಯಾಲಯದ ಮೆಟ್ಟಿಲೇರುತ್ತಿದ್ದಂತೆಯೇ ರಾಜ್ಯ ಸರಕಾರ ಎಚ್ಚೆತ್ತು ತನಿಖಾ ತಂಡವನ್ನು ನೇಮಿಸಿತು. ಇದೀಗ ಆತುರಾತುರದಲ್ಲಿ ತನಿಖೆ ನಡೆಸಿ ಬರೇ ಎಂಟು ಜನರ ಮೇಲೆ ಎಫ್‌ಐಆರ್ ದಾಖಲಿಸಿ ಪ್ರಕರಣವನ್ನು ಮುಗಿಸಿ ಬಿಡುವ ಪ್ರಯತ್ನ ಮಾಡುತ್ತಿದೆ.
ಸದ್ಯಕ್ಕೆ ಕೇಳಿ ಬರುತ್ತಿರುವ ಆರೋಪ ತೀರಾ ಸಣ್ಣದು. 200 ಕೋಟಿ ರೂಪಾಯಿಗೂ ಅಧಿಕ ಹಣ ಮಾತ್ರವಲ್ಲ, ಚಿನ್ನ, ಬೆಳ್ಳಿ, ವಜ್ರದಂತಹ ಆಭರಣಗಳೂ ಕಳವಾಗಿರುವ ಬಗ್ಗೆ ಆರೋಪಗಳು ಕೇಳಿ ಬಂದಿವೆ. ಇಷ್ಟೇ ಅಲ್ಲ, ರಾಮಮಂದಿರದ ಪರಿಸರದಲ್ಲಿ ಭಾರೀ ಪ್ರಮಾಣದ ಅಕ್ರಮ ಭೂವ್ಯವಹಾರಗಳು ನಡೆದಿದ್ದು ಇದರಲ್ಲೂ ಕೋಟ್ಯಂತರ ರೂಪಾಯಿ ಹಗರಣಗಳು ನಡೆದಿವೆ ಎಂಬ ಆರೋಪ ಕೇಳಿ ಬರುತ್ತಿದೆ. ಇಷ್ಟು ದೊಡ್ಡ ಪ್ರಮಾಣದ ಹಗರಣ ದೇವಸ್ಥ್ಧಾನದೊಳಗಿರುವ ಅಥವಾ ಟ್ರಸ್ಟ್‌ನ ಕೇವಲ ನಾಲ್ಕೈದು ಮಂದಿಯಿಂದ ಸಾಧ್ಯವಿಲ್ಲ. ರಾಮಮಂದಿರಕ್ಕೆ ರಾಜಕೀಯ ಪಕ್ಷದೊಂದಿಗೆ ನೇರ ನಂಟಿದೆ. ಈ ಹಗರಣದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಹಲವು ಗಣ್ಯ ರಾಜಕಾರಣಿಗಳು ಶಾಮೀಲಾಗಿರುವ ಬಗ್ಗೆ ಶಂಕೆಗಳಿವೆ. ಆದುದರಿಂದ ಈ ಹಗರಣವನ್ನು, ಸ್ವತಂತ್ರ ತನಿಖಾ ಸಂಸ್ಥೆಯೊಂದು ತನಿಖೆಗೆ ಕೈಗೆತ್ತಿಕೊಳ್ಳುವುದು ಅತ್ಯಗತ್ಯವಾಗಿದೆ. ರಾಮಮಂದಿರ ಉದ್ಘಾಟನೆಯಾದ ದಿನದಿಂದ ಇಲ್ಲಿಯವರೆಗೆ ನಡೆದ ಹಗರಣಗಳ ತನಿಖೆ ಮೊದಲು ನಡೆಯಬೇಕು. ಇದೇ ಸಂದರ್ಭದಲ್ಲಿ ರಾಮಮಂದಿರ ಚಳವಳಿಯ ಹೆಸರಿನಲ್ಲಿ ಕಳೆದ ಐದು ದಶಕಗಳಿಂದ ಆರೆಸ್ಸೆಸ್ ಮತ್ತು ವಿಎಚ್‌ಪಿ ಸಂಗ್ರಹಿಸಿದ ದೇಣಿಗೆಯ ಗತಿಯೇನಾಯಿತು? ಅಲ್ಲಿ ನಡೆದ ಲೂಟಿಯೆಷ್ಟು? ಅಯೋಧ್ಯೆಯ ಶ್ರೀರಾಮನೇ ಈ ಪ್ರಶ್ನೆಗೆ ಉತ್ತರಿಸಬೇಕಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅಯೋಧ್ಯೆಯ ರಾಮನಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಅನ್ಯಾಯವಾಗುತ್ತಿದ್ದರೂ ದೇಶದಲ್ಲಿರುವ ಹಿಂದುತ್ವವಾದಿ ಸಂಘಟನೆಗಳು ಅದರ ವಿರುದ್ಧ ಧ್ವನಿಯೆತ್ತದೇ ಇರುವುದು ವಿಪರ್ಯಾಸವಾಗಿದೆ. ನೂರಾರು ರೂಪಾಯಿ ಹಣ ಲೂಟಿ ಹೊಡೆಯುವುದಕ್ಕಾಗಿಯೇ ಅಯೋಧ್ಯೆಯಲ್ಲಿ ರಾಮನನ್ನು ಪ್ರತಿಷ್ಠಾಪಿಸಲಾಯಿತೆ ಎಂದು ಸಜ್ಜನ ರಾಮಭಕ್ತರು ಪ್ರಶ್ನಿಸುವಂತಾಗಿದೆ.