×
Ad

ಟೆಲಿಗ್ರಾಂ ನಿಷೇಧ: ಎತ್ತಿಗೆ ಜ್ವರ, ಎಮ್ಮೆಗೆ ಬರೆ

Update: 2026-06-18 08:46 IST

Photo: chatgpt.com

ಇದೇ ಮೊದಲ ಬಾರಿಗೆ ನೀಟ್ ಪರೀಕ್ಷೆಯ ಸೋರಿಕೆ ಹಿನ್ನೆಲೆಯಲ್ಲಿ ಮುಂಜಾತ್ರತಾ ಕ್ರಮವಾಗಿ ಸರಕಾರ ಟೆಲಿಗ್ರಾಂ ಆ್ಯಪ್ ಬಳಕೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲು ಮುಂದಾಗಿದೆ. ನೀಟ್ ಮರು ಪರೀಕ್ಷೆಯ ಹಿನ್ನೆಲೆಯಲ್ಲಿ , ವಂಚನಾ ಜಾಲಗಳು ಮತ್ತು ಸುಳ್ಳು ಸುದ್ದಿಗಳ ಹರಡುವಿಕೆಯನ್ನು ತಡೆಯಲು ಸರಕಾರವು ಜೂನ್ 22ರವರೆಗೆ ಟೆಲಿಗ್ರಾಂ ಆ್ಯಪ್ ಬಳಕೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ತಿಳಿಸಿದೆ. ಸೋರಿಕೆಯನ್ನು ತಡೆಯಲು ಟೆಲಿಗ್ರಾಂ ಆ್ಯಪ್ ನಿಷೇಧ ಎಷ್ಟರಮಟ್ಟಿಗೆ ಪರಿಣಾಮಕಾರಿ ಎನ್ನುವುದು ಈಗ ಚರ್ಚೆಯಲ್ಲಿದೆ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿ ಗುಣ ಪಡಿಸುವುದಕ್ಕಾಗುತ್ತದೆಯೇ ಎಂದು ಕೆಲವರು ಕೇಳುತ್ತಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿ ಮೊದಲು ಕ್ರಮ ತೆಗೆದುಕೊಳ್ಳಬೇಕಾದುದು ಎನ್‌ಟಿಎ ವಿರುದ್ಧ. ಯಾಕೆಂದರೆ ಟೆಲಿಗ್ರಾಂ ಆ್ಯಪ್ ಒಂದು ಮಾಧ್ಯಮ ಮಾತ್ರ. ಅದು ಸೋರಿಕೆಗೆ ನೇರ ಹೊಣೆಯಲ್ಲ. ಪರೀಕ್ಷಾ ಸಂಸ್ಥೆಯ ವೈಫಲ್ಯ, ಅಲ್ಲಿರುವ ಸಿಬ್ಬಂದಿಯ ಬೇಜವಾಬ್ದಾರಿ, ಭ್ರಷ್ಟಾಚಾರ ಅಂತಿಮವಾಗಿ ಸೋರಿಕೆಗೆ ಕಾರಣವಾಗಿದೆ. ದುಷ್ಕರ್ಮಿಗಳು ಸುಳ್ಳು ಸುದ್ದಿಯನ್ನು ಹರಡಲು ಟೆಲಿಗ್ರಾಂನ್ನು ದುರುಪಯೋಗ ಪಡಿಸಿಕೊಳ್ಳಬಹುದು ಎಂಬುದು ಎಷ್ಟು ನಿಜವೋ, ಇತರ ಆ್ಯಪ್‌ಗಳನ್ನು, ಸಾಮಾಜಿಕ ಜಾಲತಾಣಗಳನ್ನೂ ದುರುಪಯೋಗಪಡಿಸಿಕೊಳ್ಳಬಹುದಾಗಿದೆ. ಆದುದರಿಂದ ಸರಕಾರ ತನ್ನ ವೈಫಲ್ಯವನ್ನು ಯಾವುದೋ ಆ್ಯಪ್‌ನ ತಲೆಗೆಕಟ್ಟಿ ನುಣುಚಿಕೊಳ್ಳುವಂತಿಲ್ಲ.

ಯಾವುದೇ ಗಲಭೆ, ದಂಗೆಗಳು ನಡೆದಾಗ ಸರಕಾರ ತಕ್ಷಣ ಇಂಟರ್‌ನೆಟ್‌ಗಳನ್ನು ಸ್ಥಗಿತಗೊಳಿಸುತ್ತದೆ. ಮಣಿಪುರ ಹತ್ಯಾಕಾಂಡ ಸಂದರ್ಭದಲ್ಲಿ ಎಲ್ಲ ಜಾಲತಾಣಗಳನ್ನು ಸ್ಥಗಿತಗೊಳಿಸಿದ ಪರಿಣಾಮವಾಗಿ ಅಲ್ಲಿ ನಡೆದ ಭೀಕರ ಹಿಂಸಾಚಾರ ಹೊರಜಗತ್ತಿಗೆ ತಿಳಿಯಲು ಒಂದು ತಿಂಗಳು ಬೇಕಾಯಿತು. ಗಲಭೆಗಳ ಸಂದರ್ಭದಲ್ಲಿ ಇಂಟರ್‌ನೆಟ್‌ಗಳನ್ನು ಸ್ಥಗಿತಗೊಳಿಸುವುದೇ ತನ್ನ ವೈಫಲ್ಯ ಹೊರ ಜಗತ್ತಿಗೆ ಗೊತ್ತಾಗಬಾರದು ಎನ್ನುವ ಕಾರಣಕ್ಕಾಗಿ. ಇದೀಗ ನೀಟ್ ಪರೀಕ್ಷೆಯಲ್ಲಿ ಟೆಲಿಗ್ರಾಂ ಆ್ಯಪ್‌ನ್ನು ನಿಷೇಧಿಸಲು ಮುಂದಾಗಿರುವ ಸರಕಾರ, ಮುಂದಿನ ದಿನಗಳಲ್ಲಿ ಪರೀಕ್ಷೆ ಮುಗಿಯುವವರೆಗೆ ಇಂಟರ್‌ನೆಟ್‌ಗಳನ್ನೇ ದೇಶಾದ್ಯಂತ ಸ್ಥಗಿತಗೊಳಿಸಿದರೂ ಅಚ್ಚರಿಯಿಲ್ಲ.

ಟೆಲಿಗ್ರಾಂನ್ನು ಬಳಸಿ ದುಷ್ಕರ್ಮಿಗಳು ನಕಲಿ ಪ್ರಶ್ನೆ ಪತ್ರಿಕೆಗಳನ್ನು ಹಂಚಿ ವಿದ್ಯಾರ್ಥಿಗಳಿಂದ ಹಣವನ್ನು ದೋಚಬಹುದು. ಆದರೆ ಸೋರಿಕೆ ನಡೆಯುವುದು ಪರೀಕ್ಷೆ ಕೇಂದ್ರಗಳಿಂದ, ಮುದ್ರಣಾಲಯಗಳಿಂದ ಅಥವಾ ಪ್ರಶ್ನೆ ಪತ್ರಿಕೆಯ ಸಾಗಣೆಯ ಸಂದರ್ಭದಲ್ಲಿ. ಟೆಲಿಗ್ರಾಂನಲ್ಲಿ ಅದನ್ನು ಹಂಚಿಕೊಳ್ಳುವುದು ಎರಡನೆಯ ಹಂತ. ಇಷ್ಟಕ್ಕೂ ದುಷ್ಕರ್ಮಿಗಳು ತಾಂತ್ರಿಕವಾಗಿ ಪರಿಣಿತರಾದರೆ ಖಾಸಗಿ ನೆಟ್‌ವರ್ಕ್ ಮೂಲಕ ಟೆಲಿಗ್ರಾಂನ್ನು ಪ್ರವೇಶಿಸಬಹುದಾಗಿದೆ. ಜಾಲತಾಣದಲ್ಲಿ ರಂಗೋಲಿಯಡಿಗೆ ತೂರುವವರೇ ಅಧಿಕ. ಆದುದರಿಂದ ಪ್ರಶ್ನೆ ಪತ್ರಿಕೆಗೆ ಸಂಬಂಧಿಸಿ ಆರಂಭದ ಹಂತದಲ್ಲೇ ಭದ್ರತೆಯನ್ನು ಏರ್ಪಡಿಸಬೇಕಾಗುತ್ತದೆ. ಇದೇ ಸಂದರ್ಭದಲ್ಲಿ ಟೆಲಿಗ್ರಾಂನಂತಹ ಆ್ಯಪ್‌ನ್ನು ಲಕ್ಷಾಂತರ ವಿದ್ಯಾರ್ಥಿಗಳು ಅಧ್ಯಯನಕ್ಕೆ ಪೂರಕವಾಗಿಯೂ ಬಳಸಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳ ಪರೀಕ್ಷಾ ತಯಾರಿಯಲ್ಲಿ ಈ ಮಾಧ್ಯಮದ ಕೊಡುಗೆ ದೊಡ್ಡದಿದೆ. ಇದರಿಂದ ಪ್ರಯೋಜನ ಪಡೆಯುತ್ತಿದ್ದ ವಿದ್ಯಾರ್ಥಿಗಳಿಗೆ ಈ ನಿಷೇಧದಿಂದ ಸಮಸ್ಯೆಯಾಗಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಎನ್‌ಟಿಎಯ ವೈಫಲ್ಯಕ್ಕಾಗಿ ಈ ದೇಶದ ಕೋಟ್ಯಂತರ ಗ್ರಾಹಕರು ಯಾಕೆ ನಿಷೇಧದ ಪರಿಣಾಮಗಳನ್ನು ಉಣ್ಣಬೇಕು ಎನ್ನುವ ಪ್ರಶ್ನೆಯೂ ಎದ್ದಿದೆ.

ಸೋರಿಕೆಯನ್ನು ತಡೆಯುವ ಉದ್ದೇಶ ಸರಕಾರಕ್ಕಿದ್ದರೆ ಮೊದಲು, ವೈಫಲ್ಯದ ಹಿಂದಿರುವ ಕೇಂದ್ರ ಶಿಕ್ಷಣ ಸಚಿವರಿಂದ ಮೊದಲು ರಾಜೀನಾಮೆಯನ್ನು ಪಡೆಯಬೇಕಾಗಿತ್ತು. ಹಾಗೆಯೇ ಈ ಸೋರಿಕೆಗೆ ಯಾರೋ ಒಂದಿಬ್ಬರು ವ್ಯಕ್ತಿಗಳನ್ನು ಹೊಣೆ ಮಾಡುವ ಬದಲು, ನೇರವಾಗಿ ಎನ್‌ಟಿಎಯನ್ನು ಹೊಣೆ ಮಾಡಿ ಅದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗಿತ್ತು. ಸೋರಿಕೆಯನ್ನು ಕೇಂದ್ರ ಸರಕಾರ ಎಷ್ಟು ಗಂಭೀರವಾಗಿ ತೆಗೆದುಕೊಂಡಿದೆ ಎನ್ನುವುದು ಆ ಮೂಲಕ ಇಡೀ ದೇಶಕ್ಕೆ ಮನವರಿಕೆಯಾಗುತ್ತಿತ್ತು. ರಾಜ್ಯಗಳಿಗೆ ಅಧಿಕ ಹೊಣೆಗಾರಿಕೆಯನ್ನು ನೀಡುವ ಮೂಲಕ ನೀಟ್ ಪ್ರವೇಶ ಪರೀಕ್ಷೆಯ ನಿರ್ವಹಣೆಯನ್ನು ವಿಕೇಂದ್ರೀಕರಿಸಬೇಕು ಎಂದು ಭಾರತೀಯ ಮೆಡಿಕಲ್ ಅಸೋಸಿಯೇಶನ್ ಈಗಾಗಲೇ ಸರಕಾರವನ್ನು ಆಗ್ರಹಿಸಿದೆ ಅಥವಾ ಎನ್‌ಟಿಎ ಬದಲಿಗೆ ನೂತನ ಸ್ವಾಯತ್ತ ಸಂಸ್ಥೆಯೊಂದನ್ನು ನೇಮಿಸಿ ಅದಕ್ಕೆ ಪರೀಕ್ಷೆಯ ಹೊಣೆಗಾರಿಕೆಯನ್ನು ನೀಡಬೇಕು. ಸೋರಿಕೆಯಾಗದಂತೆ ಪರೀಕ್ಷೆಯನ್ನು ನಡೆಸಲು ಸಾಧ್ಯವೇ ಇಲ್ಲ ಎಂದಾದರೆ ನೀಟ್‌ನ್ನು ರದ್ದುಗೊಳಿಸಿ, ಪ್ರವೇಶ ಪರೀಕ್ಷೆಯ ಹೊಣೆಯನ್ನು ಸಂಪೂರ್ಣವಾಗಿ ಆಯಾ ರಾಜ್ಯಗಳಿಗೆ ವಹಿಸಬೇಕು. ನೀಟ್ ಪರೀಕ್ಷೆಯನ್ನೇ ರದ್ದುಗೊಳಿಸುವುದಕ್ಕೆ ಹಲವು ರಾಜ್ಯಗಳು ಕೇಂದ್ರ ಸರಕಾರವನ್ನು ಒತ್ತಾಯಿಸುತ್ತಾ ಬಂದಿವೆ. ಕೆಲವು ರಾಜ್ಯಗಳು ನಿರ್ಣಯಗಳನ್ನೂ ತೆಗೆದುಕೊಂಡಿವೆ.

ಇದೇ ಸಂದರ್ಭದಲ್ಲಿ ನೀಟ್ ಪರೀಕ್ಷೆಯ ಅಕ್ರಮಗಳಿಂದ ನೊಂದು ಆತ್ಮಹತ್ಯೆಗೈಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ರಾಜಸ್ಥಾನದಲ್ಲಿ ನೀಟ್ ಮರು ಪರೀಕ್ಷೆಗೆ ಹಾಜರಾಗಬೇಕಾಗಿದ್ದ 22 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಜಸ್ಥಾನದ ಸಿಕರ್‌ನಲ್ಲಿ ಒಂದು ತಿಂಗಳಲ್ಲಿ ನಡೆದ ಎರಡನೇ ಆತ್ಮಹತ್ಯೆ ಇದಾಗಿದೆ. ಡೆಹ್ರಾಡೂನ್‌ನಲ್ಲಿ ನೀಟ್ ಮರು ಪರೀಕ್ಷೆ ಎದುರಿಸಬೇಕಾಗಿದ್ದ 24 ವರ್ಷದ ವಿದ್ಯಾರ್ಥಿನಿಯೊಬ್ಬಳು ‘ಐ ಲವ್ ಯೂ ಪಾಪಾ’ ಎಂದು ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆ ನಿವೃತ್ತ ಯೋಧನ ಪುತ್ರಿಯಾಗಿದ್ದಾಳೆ. ಡೆತ್ ನೋಟ್‌ನಲ್ಲಿ ‘‘ಆತ್ಮಹತ್ಯೆಗೆ ನನ್ನ ಅಸಾಮರ್ಥ್ಯವೇ ಕಾರಣ’’ ಎಂದು ಆಕೆ ಉಲ್ಲೇಖಿಸಿದ್ದಾಳೆ. ನಿಜಕ್ಕೂ ಕೇಂದ್ರ ಸರಕಾರದ ಅಸಾಮರ್ಥ್ಯಕ್ಕೆ ಆಕೆ ಬಲಿಯಾಗಿದ್ದಾಳೆ. ಈ ಎಲ್ಲ ಪ್ರಕರಣಗಳು ಆತ್ಮಹತ್ಯೆಗಳಲ್ಲ. ವ್ಯವಸ್ಥೆ ಮಾಡಿದ ಕಗ್ಗೊಲೆಗಳಾಗಿವೆ. ಈಗಾಗಲೇ ಪರೀಕ್ಷೆ ಬರೆದು ಉತ್ತಮ ಸಾಧನೆ ಮಾಡಿದ್ದೇವೆ ಎಂದು ಭಾವಿಸಿದವರೆಲ್ಲರೂ ಮತ್ತೊಮ್ಮೆ ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ. ಇವರೆಲ್ಲರೂ ತೀವ್ರ ಆತಂಕದ ಜೊತೆಯಲ್ಲೇ ಪರೀಕ್ಷೆಯನ್ನು ಎದುರಿಸಬೇಕು. ಮೊತ್ತ ಮೊದಲನೆಯದಾಗಿ, ಪರೀಕ್ಷೆಗಾಗಿ ಅವರು ಮತ್ತೆ ಹೊಸದಾಗಿ ತಯಾರಿ ಮಾಡಬೇಕಾಗಿದೆ. ಪರೀಕ್ಷೆ ಬರೆದ ಬಳಿಕವೂ ಅವರ ಸಮಸ್ಯೆ ಮುಗಿಯುವುದಿಲ್ಲ. ಯಾಕೆಂದರೆ, ಮರು ಪರೀಕ್ಷೆಯೂ ಸೋರಿಕೆಯಾಗುವುದಿಲ್ಲ ಎನ್ನುವಂತಿಲ್ಲ. ಒಂದು ವೇಳೆ ಮರು ಪರೀಕ್ಷೆಯಲ್ಲೂ ಅಕ್ರಮ ನಡೆದರೆ ತಾವು ಬರೆದ ಪರೀಕ್ಷೆಯ ಗತಿಯೇನು? ಎನ್ನುವುದರ ಬಗ್ಗೆ ಅವರಿಗೆ ಸ್ಪಷ್ಟವಿಲ್ಲ. ಕೆಲವೊಮ್ಮೆ ಅಕ್ರಮಗಳು ನಡೆದೂ ಅದು ಬೆಳಕಿಗೆ ಬರದೇ ಇರಬಹುದು. ಅಂತಹ ಸಂದರ್ಭದಲ್ಲಿ ನಿಜವಾದ ಪ್ರತಿಭಾವಂತರಿಗೆ ಅನ್ಯಾಯವಾಗುತ್ತದೆ ಮಾತ್ರವಲ್ಲ, ಅನರ್ಹರು ವೈದ್ಯಕೀಯ ವಲಯಕ್ಕೆ ಕಾಲಿಡುವಂತಾಗುತ್ತದೆ. ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳ ಮೇಲೆ ಬೀರುವ ಈ ಎಲ್ಲಾ ದುಷ್ಪರಿಣಾಮಗಳನ್ನು ‘ಟೆಲಿಗ್ರಾಂ ಆ್ಯಪ್’ ನಿಷೇಧದಿಂದ ತಡೆಯುವುದಕ್ಕೆ ಸಾಧ್ಯವಿಲ್ಲ.

ಮೀಸಲಾತಿಯಿಂದ ಪ್ರತಿಭಾವಂತರಿಗೆ ಅನ್ಯಾಯವಾಗುತ್ತದೆ ಎಂದು ಹುಯಿಲೆಬ್ಬಿಸುವ ಜನರೆಲ್ಲ, ನೀಟ್ ಅಕ್ರಮದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಬೀದಿಗಿಳಿಯಬೇಕಾದ ಸಮಯ ಬಂದಿದೆ. ಈ ದೇಶದಲ್ಲಿ ಶ್ರೀಮಂತರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಮೀಸಲಾತಿಯಿದೆ. ಹಣದ ಮೂಲಕ ಅವರು ತಮ್ಮ ಸೀಟುಗಳನ್ನು ವೈದ್ಯಕೀಯ ಶಿಕ್ಷಣದಲ್ಲಿ ಪಡೆದುಕೊಳ್ಳುತ್ತಾರೆ. ಅದರಿಂದ ಅರ್ಹ ಪ್ರತಿಭಾವಂತರಿಗೆ ಅನ್ಯಾಯವಾಗುತ್ತದೆ ಎಂದು ಯಾರೂ ಕೂಗೆಬ್ಬಿಸುವುದಿಲ್ಲ. ತಮ್ಮ ಪಾಲನ್ನು ಶ್ರೀಮಂತರು ಹಣದ ಮೂಲಕ ಕಸಿದುಕೊಳ್ಳುತ್ತಿದ್ದಾರೆ ಎಂದು ಯಾರಿಗೂ ಕಳವಳವಾಗುತ್ತಿಲ್ಲ. ಇದೀಗ ನೀಟ್ ಅಕ್ರಮಗಳಿಂದಲೂ ನೇರವಾಗಿ ಪ್ರತಿಭಾವಂತರು ಅನ್ಯಾಯಕ್ಕೊಳಗಾಗುತ್ತಿದ್ದಾರೆ. ಇದು ನೇರವಾಗಿ ಪ್ರತಿಭಾವಂತರ ಸೀಟುಗಳಿಗೆ ಹಾಕುವ ಕನ್ನವಾಗಿದೆ. ಮುಂದಿನ ದಿನಗಳಲ್ಲಿ, ಸೋರಿಕೆ ಮಾಡುವವರಿಗಾಗಿಯೇ ಒಂದಿಷ್ಟು ಸೀಟುಗಳನ್ನು ಮೀಸಲಿಟ್ಟು ಪರೀಕ್ಷೆ ನಡೆಸುವುದು ಉತ್ತಮವೇನೋ. ಸೋರಿಕೆಯನ್ನೇ ಸಕ್ರಮ ಮಾಡಿದರೆ ವಿದ್ಯಾರ್ಥಿಗಳು ಪದೇ ಪದೇ ಅನ್ಯಾಯದ ಪರೀಕ್ಷೆಯ ಉರುಳಿಗೆ ಕೊರಳೊಡ್ಡುವ ಸ್ಥಿತಿಗೆ ತಡೆ ಬೀಳಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News