×
Ad

ಇನ್ನೊಂದು ಲಾಕ್‌ಡೌನ್‌ಗೆ ಸಿದ್ಧತೆ?

Update: 2026-05-13 07:49 IST

Photo: PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕೊರೋನ ದಿನಗಳಲ್ಲಿ ಹೇಗೆ ಕೇಂದ್ರ ಸರಕಾರ ನಯವಾದ ಮಾತುಗಳ ಮೂಲಕವೇ ಜನರ ಮೇಲೆ ಲಾಕ್‌ಡೌನ್‌ನ್ನು ಹೇರಿತು, ಅದರಿಂದಾಗಿ ಜನರು ದೈನಂದಿನ ಬದುಕಿನಲ್ಲಿ ಅದೆಷ್ಟು ಕಷ್ಟ ನಷ್ಟಗಳನ್ನು ಅನುಭವಿಸಬೇಕಾಯಿತು ಎನ್ನುವುದನ್ನು ದೇಶ ಇನ್ನೂ ಮರೆತಿಲ್ಲ. ಲಾಕ್‌ಡೌನ್‌ನ ಆ ಕರಾಳ ದಿನಗಳ ಗಾಯಗಳು ಒಣಗುವ ಮುನ್ನವೇ ಮತ್ತೆ ಈ ದೇಶದ ಮೇಲೆ ಇನ್ನೊಂದು ಲಾಕ್ ಡೌನ್ ಹೇರುವ ಹುನ್ನಾರ ನಡೆಯುತ್ತಿದೆ. ದೇಶ ಎದುರಿಸುತ್ತಿರುವ ತೈಲ ಸಮಸ್ಯೆ, ಬೆಲೆಯೇರಿಕೆಗಳ ಹಿಂದಿರುವ ತನ್ನ ಆಡಳಿತದ ವೈಫಲ್ಯಗಳನ್ನು ಮುಚ್ಚಿ ಹಾಕಿ, ಇದೀಗ ತೈಲ ಬಳಕೆಯನ್ನು ತಗ್ಗಿಸಿ, ಚಿನ್ನ ಖರೀದಿ ಮಾಡಬೇಡಿ ಎಂದು ಹೇಳಿಕೆ ನೀಡುತ್ತಿದ್ದಾರೆ. ಅಷ್ಟೇ ಅಲ್ಲ, ದಿನದಿಂದ ದಿನಕ್ಕೆ ಅವರ ಹೇಳಿಕೆಗಳು ಬದಲಾಗುತ್ತಿವೆ. ಮನೆಯಿಂದಲೇ ಕೆಲಸ ನಿರ್ವಹಿಸಿ, ಶಾಲೆಗೆ ಹೋಗಬೇಡಿ, ಆನ್‌ಲೈನ್ ತರಗತಿಗಳ ಮೂಲಕ ಶಿಕ್ಷಣಕ್ಕೆ ಆದ್ಯತೆ ನೀಡಿ ಎಂದು ಕರೆ ನೀಡುವ ಮೂಲಕ ಮತ್ತೆ ದೇಶದ ಜನರನ್ನು ಭಯ, ಆತಂಕಗಳಿಗೆ ತಳ್ಳುತ್ತಿದ್ದಾರೆ. ಪಶ್ಚಿಮ ಏಶ್ಯ ಯುದ್ಧ ಹಾಗೂ ಆರ್ಥಿಕ ಬಿಕ್ಕಟ್ಟಿನಿಂದಾಗಿ ದೇಶದಲ್ಲಿ ತೈಲ, ಎಲ್‌ಪಿಜಿ ಕೊರತೆ ಎದುರಾಗಿದೆ. ಅಷ್ಟೇ ಅಲ್ಲ, ಬೆಲೆಯೇರಿಕೆ ತೀವ್ರವಾಗುತ್ತಿದೆ. ಇದರ ಬೆನ್ನಿಗೇ ಪ್ರಧಾನಿ ಮೋದಿಯವರು ಕಡಿಮೆ ಓಡಾಡಿ, ಕಡಿಮೆ ಖರೀದಿ ಮಾಡಿ ಎಂಬ ಹೇಳಿಕೆಗಳು ದೇಶದ ಆರ್ಥಿಕತೆಗೆ ಇನ್ನಷ್ಟು ಹಿನ್ನಡೆ ಉಂಟು ಮಾಡುತ್ತಿದೆ. ಪ್ರಧಾನಿಯ ಹೇಳಿಕೆ ಹೊರ ಬಿದ್ದ ಬೆನ್ನಿಗೇ ಶೇರುಮಾರುಕಟ್ಟೆಯು ಭಾರೀ ಕುಸಿತವನ್ನು ಕಂಡಿದೆ.

ಪ್ರಧಾನಿ ಮೋದಿಯ ಪ್ರಕಾರ ಯುದ್ಧ ಕಾಲದಲ್ಲಿ ಇವೆೆಲ್ಲವೂ ಅನಿವಾರ್ಯವಂತೆ. ಕೊರೋನ ಸಾಂಕ್ರಾಮಿಕ ರೋಗ ಅಥವಾ ಯಾವುದೇ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಎದುರಾಗುವ ಆರ್ಥಿಕ ಬಿಕ್ಕಟ್ಟಿಗೆ ಜನರು ತಲೆ ಬಾಗಲೇ ಬೇಕು. ಆಗ ಸರಕಾರ ಕೈಗೆತ್ತಿಕೊಳ್ಳುವ ಕಠಿಣ ಕ್ರಮಗಳಿಗೆ ಅನಿವಾರ್ಯವಾಗಿ ತಲೆಕೊಡಬೇಕಾಗುತ್ತದೆ. ಆದರೆ ಸದ್ಯದ ಬಿಕ್ಕಟ್ಟಿಗೆ ಯಾವುದೇ ಸಾಂಕ್ರಾಮಿಕ ರೋಗವಾಗಲಿ, ಪ್ರಕೃತಿ ವಿಕೋಪವಾಗಲಿ ಕಾರಣವಲ್ಲ. ಅಮೆರಿಕ, ಇಸ್ರೇಲ್‌ನಂತಹ ಎರಡು ಪುಂಡು ದೇಶಗಳು ತಮ್ಮ ಸ್ವಾರ್ಥಕ್ಕಾಗಿ ಸೃಷ್ಟಿಸಿಕೊಂಡ ಯುದ್ಧಕ್ಕೆ ನಾವು ಬೆಲೆ ತೆರಬೇಕಾಗಿದೆ. ವಿಪರ್ಯಾಸವೆಂದರೆ, ಇದರಲ್ಲಿ ಭಾರತವೂ ಪರೋಕ್ಷವಾಗಿ ಶಾಮೀಲಾಗಿರುವುದು. ಇರಾನ್ ವಿರುದ್ಧ ದಾಳಿ ಮಾಡುವ ಹಿಂದಿನ ದಿನ ಪ್ರಧಾನಿ ಮೋದಿ ಇಸ್ರೇಲ್‌ಗೆ ಭೇಟಿ ನೀಡಿ, ಅಲ್ಲಿನ ಸಂಸತ್‌ನ ಸನ್ಮಾನವನ್ನು ಸ್ವೀಕರಿಸಿದ್ದರು. ಮಧ್ಯ ಪ್ರಾಚ್ಯದ ಕಳವಳಕಾರಿ ಸ್ಥಿತಿಯ ಅರಿವಿದ್ದೂ ಇಸ್ರೇಲ್‌ಗೆ ಭೇಟಿ ನೀಡಿ, ಅವರ ಸನ್ಮಾನವನ್ನು ಸ್ವೀಕರಿಸುವ ಮೂಲಕ ಇರಾನ್ ವಿರುದ್ಧದ ದಾಳಿಗೆ ಭಾರತ ಪರೋಕ್ಷ ಸಮ್ಮತಿಯನ್ನು ನೀಡಿದಂತಾಯಿತು. ಒಂದು ರೀತಿಯಲ್ಲಿ ಇಸ್ರೇಲ್ ಭಾರತದ ಪ್ರಧಾನಿಯನ್ನು ಹರಕೆಯ ಕುರಿ ಮಾಡಿತ್ತು. ಮಧ್ಯಪ್ರಾಚ್ಯದಲ್ಲಿ ಯುದ್ಧ ಸ್ಫೋಟಿಸುವ ಮುನ್ನವೇ ಭಾರತವು ಅಮೆರಿಕದ ಸ್ನೇಹದ ಆತುರಕ್ಕೆ ಬಿದ್ದು ರಶ್ಯ, ಇರಾನ್ ಜೊತೆಗಿನ ವ್ಯಾಪಾರ ಸಂಬಂಧವನ್ನು ಕೆಡಿಸಿಕೊಂಡಿತ್ತು. ಅವೆಲ್ಲದರ ಪರಿಣಾಮವನ್ನು ನಾವಿಂದು ಒಟ್ಟಾಗಿ ಉಣ್ಣುತ್ತಿದ್ದೇವೆ.

ದೇಶವು ಇಂದು ಎದುರಿಸುತ್ತಿರುವ ಬಿಕ್ಕಟ್ಟು ಪ್ರಧಾನಿ ಮೋದಿ ನೇತೃತ್ವದ ಸರಕಾರದ ವಿದೇಶಾಂಗ ನೀತಿಯ ವೈಫಲ್ಯದ ಫಲವಾಗಿದೆ. ಅದನ್ನೀಗ ‘ನೀವು ಉಣ್ಣಬೇಕು’ ಎಂದು ದೇಶದ ಜನರನ್ನು ಕೇಳಿಕೊಳ್ಳುತ್ತಿದ್ದಾರೆ. ರಫ್ತುಗಳನ್ನು ಹೆಚ್ಚಿಸಿ, ಆಮದುಗಳನ್ನು ಕಡಿಮೆ ಮಾಡುವುದು ವಿದೇಶ ವಿನಿಮಯವನ್ನು ಹೆಚ್ಚಿಸುವ ವಿಧಾನವಾಗಿದೆ. ದೇಶವು ಆತ್ಮನಿರ್ಭರವಾಗಿದ್ದಾಗ ಇದು ಸಾಧ್ಯವಾಗುತ್ತದೆ. ಹಾಗಾದರೆ ಪ್ರಧಾನಿ ಮೋದಿ ನೇತೃತ್ವದ ಸರಕಾರ ಕಳೆದ ಹತ್ತು ವರ್ಷಗಳಲ್ಲಿ ಮಾಡಿದ್ದೇನು? ಮೇಕ್ ಇನ್ ಇಂಡಿಯಾ ಸೇರಿದಂತೆ ಸರಕಾರ ಸ್ವದೇಶಿ ಉತ್ಪಾದನೆಗಳಿಗೆ ಪ್ರೋತ್ಸಾಹ ನೀಡಲು ರೂಪಿಸಿದ ಯೋಜನೆಗಳ ಗತಿ ಏನಾಯಿತು? ಎನ್ನುವುದನ್ನು ಮೊದಲು ಪ್ರಧಾನಿಯವರು ದೇಶಕ್ಕೆ ವಿವರಿಸಬೇಕಾಗಿದೆ.

ಕೊರೋನ ಕಾಲದಲ್ಲಿ ಜನಸಾಮಾನ್ಯರ ಮೇಲೆ ಲಾಕ್‌ಡೌನ್‌ಗಳನ್ನು ಹೇರಿದ ಸರಕಾರವೇ ಇನ್ನೊಂದೆಡೆ, ಬೃಹತ್ ರಾಜಕೀಯ ಸಮಾವೇಶಗಳನ್ನು ಹಮ್ಮಿಕೊಂಡಿತು. ದಿನಸಿ ವಸ್ತುಗಳಿಗಾಗಿ ಬೀದಿಗಿಳಿದ ನಾಗರಿಕರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡುತ್ತಿದ್ದರೆ ಅತ್ತ ಪಶ್ಚಿಮಬಂಗಾಳದಲ್ಲಿ ಪ್ರಧಾನಿ ನೇತೃತ್ವದಲ್ಲಿ ಬೃಹತ್ ರ್ಯಾಲಿ ನಡೆಯುತ್ತಿತ್ತು. ಲಾಕ್‌ಡೌನ್ ಕಾಲದಲ್ಲೇ ಕುಂಭಮೇಳಕ್ಕೆ ಅವಕಾಶ ನೀಡಿ, ಸಾವಿರಾರು ಹೆಣಗಳು ಗಂಗಾ ನದಿಯಲ್ಲಿ ತೇಲಲು ಸರಕಾರವೇ ಕಾರಣವಾಯಿತು. ಇದೀಗ ಯುದ್ಧದ ಹೆಸರಿನಲ್ಲಿ ದೇಶದ ಮೇಲೆ ಲಾಕ್‌ಡೌನ್ ಹೇರುವುದಕ್ಕೆ ಹೊರಟಿರುವ ಪ್ರಧಾನಿ ಮೋದಿಯವರ ನಡೆಯಲ್ಲಿ ಅಂದಿನ ವಿರೋಧಾಭಾಸಗಳು ಮರುಕಳಿಸಿವೆ. ಪೆಟ್ರೋಲ್ ಬಳಕೆ ಕಡಿಮೆ ಮಾಡಿ ಎಂದು ಕರೆ ನೀಡಿರುವ ಪ್ರಧಾನಿ ಮೋದಿಯವರು, ಕಳೆದ ವಿಧಾನಸಭಾಚುನಾವಣಾ ಬಿಜೆಪಿಯು ತನ್ನ ಪ್ರಚಾರಗಳಿಗಾಗಿ ವ್ಯಯ ಮಾಡಿರುವ ಪೆಟ್ರೋಲ್ ಎಷ್ಟು ಎನ್ನುವ ಪ್ರಶ್ನೆಯನ್ನು ದೇಶದ ಜನತೆ ಕೇಳುತ್ತಿದ್ದಾರೆ. ಮೊನ್ನೆಯಷ್ಟೇ ಬೆಂಗಳೂರಿಗೆ ಆಗಮಿಸುವುದಕ್ಕಾಗಿ ಪ್ರಧಾನಿ ಮೋದಿಯವರು ಮಾಡಿರುವ ವೆಚ್ಚವೆಷ್ಟು? ನಿಜಕ್ಕೂ ಪ್ರಧಾನಿ ಮೋದಿಯವರು ಸ್ವಯಂ ಅಲ್ಲಿ ಪ್ರತ್ಯಕ್ಷವಾಗದೇ ಇದ್ದರೆ ದೇಶಕ್ಕೆ ಆಗಬಹುದಾಗಿದ್ದ ನಷ್ಟವೇನು? ಎನ್ನುವ ಪ್ರಶ್ನೆಗಳನ್ನು ಜನರು ಪ್ರತಿಯಾಗಿ ಕೇಳುತ್ತಿದ್ದಾರೆ.

ಆನ್‌ಲೈನ್‌ನಲ್ಲಿ ಶಿಕ್ಷಣ ಪಡೆಯಿರಿ ಎಂದು ಕರೆ ನೀಡಿದ ಪ್ರಧಾನಿ ಮೋದಿಯವರು, ವರ್ಚುವಲ್ ಮೂಲಕ ಚುನಾವಣಾ ಪ್ರಚಾರ ನಡೆಸಿ, ವಿವಿಧ ಕಾರ್ಯಕ್ರಮಗಳ ಉದ್ಘಾಟನೆ ನಡೆಸಿ ಪೆಟ್ರೋಲ್ ವೆಚ್ಚವನ್ನು ಉಳಿಸಿ ದೇಶಕ್ಕೆ ಮಾದರಿಯಾಗಬೇಕಾಗಿತ್ತು. ಇತ್ತೀಚೆಗಷ್ಟೇ ಒಂದು ಪುರಾತನ ದೇಗುಲದ ಪುನರ್ ನಿರ್ಮಾಣದ ಅಮೃತೋತ್ಸವ ಪ್ರಧಾನಿ ನೇತೃತ್ವದಲ್ಲಿ ನಡೆಯಿತು. ರೋಡ್‌ಶೋ, ಸಾರ್ವಜನಿಕ ರ್ಯಾಲಿಗಳೂ ನಡೆದವು. ದೇಶವು ಯುದ್ಧ ಭೀತಿ, ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಇವೆಲ್ಲವನ್ನೂ ಮಾಡಬಹುದಾದರೆ, ಜನಸಾಮಾನ್ಯರ ಮೂಲಭೂತ ಅಗತ್ಯಗಳಿಗೆ ಲಾಕ್‌ಡೌನ್ ಹೇರಿಕೆ ಯಾಕೆ? ವಿಪರ್ಯಾಸವೆಂದರೆ, ಕಡಿಮೆ ತೈಲ ಬಳಸಿ ಎಂದು ಪ್ರಧಾನಿ ಕರೆ ನೀಡಿರುವ ಹೊತ್ತಿನಲ್ಲೇ, ಮಧ್ಯಪ್ರದೇಶದಲ್ಲಿ ಬಿಜೆಪಿ ನಾಯಕನೊಬ್ಬ ಪಠ್ಯ ಪುಸ್ತಕ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡ ಬೆನ್ನಿಗೇ 50 ಬೆಂಗಾವಲು ವಾಹನಗಳೊಂದಿಗೆ ತೆರಳಿರುವ ಘಟನೆ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಪ್ರಧಾನಿ ಮೋದಿಯ ಮಿತ ವ್ಯಯದ ಅತಿ ದೊಡ್ಡ ಅಣಕ ಇದಾಗಿದೆ. ಒಟ್ಟಿನಲ್ಲಿ ಈ ದೇಶದ ರಾಜಕಾರಣಿಗಳು ‘ತಪ್ಪು ಮಾಡುವುದು ನಮ್ಮ ಹಕ್ಕು. ನಾವು ತಪ್ಪು ಮಾಡುತ್ತೇವೆ, ನೀವು ದಂಡ ಕಟ್ಟಿ ನಿಮ್ಮ ದೇಶಪ್ರೇಮ ಸಾಬೀತು ಪಡಿಸಿ’ ಎಂದು ಜನರನ್ನು ಒತ್ತಾಯಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News