ದೇಶದ ಪ್ರಜೆಗಳೇ ಪ್ರಭುಗಳಾಗುವ ದಿನ...

Update: 2024-04-26 07:03 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

‘ಯಥಾ ರಾಜಾ ತಥಾ ಪ್ರಜಾ’ ಎನ್ನುವ ಮಾತಿದೆ. ರಾಜನಂತೆಯೇ ಪ್ರಜೆಗಳು ಎನ್ನುವುದು ಇದರ ತಾತ್ಪರ‌್ಯ. ಆದರೆ ರಾಜರ ಕಾಲ ಅಳಿದಿದೆ. ಇಂದು ಪ್ರಜೆಗಳೇ ಪ್ರಭುಗಳು. ಪ್ರಜೆಗಳೇ ಇಲ್ಲಿ ರಾಜನನ್ನು ಆರಿಸುವುದರಿಂದ, ಪ್ರಜೆಗಳ ಇಂಗಿತಗಳನ್ನು ರಾಜ ಪ್ರತಿನಿಧಿಸುತ್ತಾನೆ. ‘ನೂಲಿನಂತೆ ಸೀರೆ’ ಎನ್ನುವ ಗಾದೆಯಂತೆಯೇ ಇದು. ನೂಲಿನ ಗುಣಮಟ್ಟಕ್ಕೆ ತಕ್ಕಂತೆಯೇ ಸೀರೆಯ ಗುಣಮಟ್ಟವಿರುತ್ತದೆ. ಆದುದರಿಂದ ರಾಜ ಮಾಡಿದ ತಪ್ಪಿಗೆ ಪ್ರಜೆ ತನ್ನನ್ನು ತಾನೇ ಮೊದಲು ದೂಷಿಸಿಕೊಳ್ಳಬೇಕಾಗುತ್ತದೆ. ಈ ದೇಶದಲ್ಲಿ ಪ್ರಜೆಗಳನ್ನು ‘ಒಂದು ದಿನದ ಸುಲ್ತಾನ’ ಎಂದು ವ್ಯಂಗ್ಯವಾಡುವುದಿದೆ. ಚುನಾವಣೆಯ ಸಂದರ್ಭದಲ್ಲಿ ರಾಜಕಾರಣಿಗಳು ಮತದಾರರನ್ನು ಆದರಿಸುತ್ತಾರೆ. ಗೌರವಿಸುತ್ತಾರೆ. ತಮ್ಮ ಮಾತುಗಳಿಂದ ಮರುಳುಗೊಳಿಸುತ್ತಾರೆ. ಮತದಾನ ಮುಗಿದ ಮರುದಿನವೇ ಆತ ಬೀದಿ ಪಾಲಾಗುತ್ತಾನೆ. ಪ್ರಜೆಗಳ ಮೇಲೆ ಪ್ರಭುಗಳ ಸವಾರಿ ಶುರುವಾಗುತ್ತದೆ. ಮತದಾರ ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡದೆ, ಭಾವನಾತ್ಮಕ ರಾಜಕೀಯಗಳಿಗೆ, ಹಣ, ಹೆಂಡಗಳಿಗೆ ತನ್ನ ಮತಗಳನ್ನು ಮಾರಿ ಕೊಂಡಾಗಷ್ಟೇ ಇದು ಸಂಭವಿಸುತ್ತದೆ. ದೇಶದ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟು ಕೊಂಡು ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ, ಮತದಾರ ಒಂದು ದಿನಕ್ಕಷ್ಟೇ ಸೀಮಿತವಾಗದೆ ಐದು ವರ್ಷಗಳ ಕಾಲವೂ ಸುಲ್ತಾನನಾಗಿಯೇ ಆತ್ಮಗೌರವದಿಂದ ಬದುಕಬಹುದಾಗಿದೆ.

ದೇಶಾದ್ಯಂತ ಎರಡನೇ ಹಂತದ, ಕರ್ನಾಟಕದಲ್ಲಿ ಮೊದಲನೇ ಹಂತದ ಮತದಾನ ಶುಕ್ರವಾರ ನಡೆಯುತ್ತಿದೆ. ಕರ್ನಾಟಕದ ಪಾಲಿಗೆ ಹಲವು ಕಾರಣಗಳಿಗಾಗಿ ಈ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ‘ರಾಷ್ಟವಾದದ’ ಮರೆಯಲ್ಲಿ ರಾಜ್ಯಗಳ ಮೇಲೆ ದಿಲ್ಲಿ ಸವಾರಿ ನಡೆಸುತ್ತಿರುವ ದಿನಗಳು ಇವು. ಆದುದರಿಂದ, ಲೋಕಸಭಾ ಚುನಾವಣೆಯಲ್ಲಿ ದೇಶದ ಹಿತಾಸಕ್ತಿ ಮಾತ್ರವಲ್ಲ, ರಾಜ್ಯದ ಹಿತಾಸಕ್ತಿಗಳೂ ಮಹತ್ವವನ್ನು ಪಡೆಯುತ್ತಿವೆ. ರಾಜ್ಯಗಳಿಂದ ಕೋಟಿಗಟ್ಟಲೆ ತೆರಿಗೆಗಳನ್ನು ಸಂಗ್ರಹಿಸುತ್ತಿರುವ ದಿಲ್ಲಿವಾಲಾಗಳು, ಅದನ್ನು ಮರಳಿಸುವ ಸಂದರ್ಭದಲ್ಲಿ ರಾಜ್ಯಗಳನ್ನು ‘ಭಿಕ್ಷುಕ’ರಂತೆ ಕಾಣುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ರಾಜ್ಯದಿಂದ ಜನಪ್ರತಿನಿಧಿಗಳನ್ನು ದಿಲ್ಲಿಗೆ ಕಳುಹಿಸುವ ಸಂದರ್ಭದಲ್ಲಿ ಅವರು ರಾಜ್ಯದ ಹಿತಾಸಕ್ತಿಯನ್ನು ಎತ್ತಿ ಹಿಡಿಯುವವರಾಗಿರಬೇಕೇ ಹೊರತು, ದಿಲ್ಲಿಗೆ ಹೋಗಿ ಅಲ್ಲಿನ ‘ದೊರೆ’ಗಳ ಜೀತ ಮಾಡಿ ತಮ್ಮ ಬದುಕನ್ನು ಸಾರ್ಥಕಗೊಳಿಸುವವರು ಆಗಿರಬಾರದು. ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾದಾಗ, ರಾಜ್ಯಕ್ಕೆ ಸಲ್ಲಬೇಕಾದ ಅನುದಾನಗಳು ಸಿಗದೇ ಹೋದಾಗ, ತಮ್ಮದೇ ವರಿಷ್ಠರ ಮುಂದೆ ದೊಡ್ಡ ಸ್ವರದಲ್ಲಿ ಮಾತನಾಡುವ ಸ್ವಂತಿಕೆಯಿರುವ ನಾಯಕನನ್ನು ಆಯ್ಕೆ ಮಾಡುವುದು ಇಂದಿನ ಅಗತ್ಯವಾಗಿದೆ.

ಈ ಸಾರ್ವತ್ರಿಕ ಚುನಾವಣೆಯನ್ನು ಪ್ರಜಾಪ್ರಭುತ್ವದ ಹಬ್ಬವೆಂದು ಬಣ್ಣಿಸಲಾಗುತ್ತದೆ. ಹಬ್ಬ ಅರ್ಥಪೂರ್ಣವಾಗುವುದು ಈ ದೇಶದ ಪ್ರತಿಯೊಬ್ಬ ಪ್ರಜೆಯೂ ಆ ಸಂಭ್ರಮದಲ್ಲಿ ಪಾಲುಗೊಂಡಾಗ ಮಾತ್ರ. ಈ ದೇಶದ ಸ್ಥಿತಿಗತಿಯ ಬಗ್ಗೆ ಟೀಕೆ, ವಿಮರ್ಶೆ ಮಾಡುವ, ರಾಜಕಾರಣಿಗಳ ಬೇಜವಾಬ್ದಾರಿತನದ ಬಗ್ಗೆ ಆಕ್ರೋಶ ವ್ಯಕ್ತಪಡಿಸುವ ನೈತಿಕತೆಯನ್ನು ನಮ್ಮದಾಗಿಸಿಕೊಳ್ಳಬೇಕಾದರೆ ಮತದಾನದಲ್ಲಿ ನಾವು ಸಕ್ರಿಯವಾಗಿ ಪಾಲುಗೊಳ್ಳಬೇಕು. ಒಬ್ಬ ಯೋಗ್ಯ ನಾಯಕನ ಆಯ್ಕೆಯ ಪ್ರಕ್ರಿಯೆಯ ಮೊದಲ ಮತ್ತು ಅತ್ಯಂತ ಮಹತ್ವದ ಭಾಗವೇ ನಾವೆಲ್ಲರೂ ನಮ್ಮ ನಮ್ಮ ಮತದಾನದ ಹಕ್ಕನ್ನು ಮರೆಯದೇ ಚಲಾಯಿಸುವುದಾಗಿದೆ. ಇದಾದ ಬಳಿಕ ನಮ್ಮ ಮುಂದಿರುವ ಪ್ರಶ್ನೆ ನಾವು ಎಂತಹ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು? ಎನ್ನುವುದು. ಜನಪ್ರತಿನಿಧಿಯ ಆಯ್ಕೆಯ ಸಂದರ್ಭದಲ್ಲಿ ಮತದಾರರಿಗೆ ಬಹಳಷ್ಟು ಗೊಂದಲಗಳು ಎದುರಾಗುತ್ತವೆ. ನಾವು ಪಕ್ಷವನ್ನು ನೋಡಿ ಮತಗಳನ್ನು ಚಲಾಯಿಸಬೇಕೋ ಅಥವಾ ಅಭ್ಯರ್ಥಿಯನ್ನು ನೋಡಿ ಮತಗಳನ್ನು ಚಲಾಯಿಸಬೇಕೋ ಎನ್ನುವುದು ಅದರಲ್ಲಿ ಮೊದಲನೆಯದು. ಒಬ್ಬ ಅಭ್ಯರ್ಥಿ ಅತ್ಯಂತ ಜನಪರ, ಸಜ್ಜನ ವ್ಯಕ್ತಿಯೇ ಆಗಿರಬಹುದು. ಆತ ಪ್ರತಿನಿಧಿಸುವ ಪಕ್ಷ ಅತ್ಯಂತ ಭ್ರಷ್ಟ, ಜನವಿರೋಧಿ, ಶ್ರೀಮಂತರ ಪರ, ಹಿಂಸಾಚಾರಗಳ ಪರವಾಗಿದ್ದರೆ ಆ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ಒಂದು ಭ್ರಷ್ಟ, ದುಷ್ಟ ಸರಕಾರ ರಚನೆಗೆ ನಾವೇ ಕಾರಣರಾಗುವ ಅಪಾಯವಿದೆ. ಒಬ್ಬ ಸಜ್ಜನ ಅಭ್ಯರ್ಥಿ ಪಕ್ಷೇತರನಾಗಿ ನಿಂತರೆ ಆತನನ್ನು ಬೆಂಬಲಿಸುವಲ್ಲಿ ಹಿಂದೆ ಮುಂದೆ ನೋಡಬೇಕಾಗಿಲ್ಲ. ಆದರೆ ದುಷ್ಟ ಪಕ್ಷವೊಂದರ ಅಭ್ಯರ್ಥಿಯಾಗಿ ನಿಂತಾಗ, ಗೆದ್ದ ಬಳಿಕ ಅದರ ಪಾಪದ ಜೊತೆ ನಿಲ್ಲಲೇ ಬೇಕಾಗುತ್ತದೆ. ನಾಳೆ ಆತ ಆಯ್ಕೆಯಾದರೂ, ಪಕ್ಷ ಹೇಳಿದಂತೆಯೇ ಆತ ಕುಣಿಯಬೇಕಾಗುತ್ತದೆ. ಆದುದರಿಂದ ಅಭ್ಯರ್ಥಿಯ ಜೊತೆ ಜೊತೆಗೇ ಆತ ಪ್ರತಿನಿಧಿಸುವ ಪಕ್ಷದ ಅಜೆಂಡಾಗಳೇನು ಎನ್ನುವುದರ ಬಗ್ಗೆ ನಾವು ಸ್ಪಷ್ಟ ಅರಿವನ್ನು ಇಟ್ಟುಕೊಂಡೇ ಮತಗಳನ್ನು ಚಲಾಯಿಸ ಬೇಕಾಗುತ್ತದೆ.

ಆಡಳಿತಾ ರೂಢ ಪಕ್ಷವಾಗಿದ್ದರೆ ಆ ಪಕ್ಷ ಸಿಕ್ಕಿದ ಅವಕಾಶಗಳನ್ನು ಎಷ್ಟರಮಟ್ಟಿಗೆ ಸದ್‌ಬಳಕೆ ಮಾಡಿದೆ ಎನ್ನುವುದರ ಬಗ್ಗೆ ಆಲೋಚಿಸಿ ಆ ಪಕ್ಷವನ್ನು ಪ್ರತಿನಿಧಿಸುವ ಅಭ್ಯರ್ಥಿಗೆ ಮತನೀಡಬೇಕು. ದೇಶವನ್ನು ಅದು ಅಭಿವೃದ್ಧಿಯ ಕಡೆಗೆ ಮುನ್ನಡೆಸಿರುವುದು ನಿಜವೇ ಆಗಿದ್ದರೆ, ದೇಶದಲ್ಲಿ ಬಡತನ ಇಳಿಮುಖವಾಗಬೇಕು. ಪೌಷ್ಟಿಕತೆ ಹೆಚ್ಚಬೇಕು. ನಿರುದ್ಯೋಗಗಳು ಕಡಿಮೆಯಾಗಿ ಜನಸಾಮಾನ್ಯರ ಆರ್ಥಿಕ, ಆರೋಗ್ಯ ಸ್ಥಿತಿ ಸುಧಾರಿಸಿರಬೇಕು. ಬಡವರ ಮೇಲೆ ತೆರಿಗೆಯ ಭಾರವನ್ನು ಅದು ವಿಧಿಸಿರಬಾರದು. ಬಡವರ ಪರವಾಗಿ ಅದರ ಆರ್ಥಿಕ ನೀತಿಯಿರಬೇಕು. ಸರಕಾರಿ ಸಂಸ್ಥೆಗಳನ್ನು ಅದು ಬೆಳೆಸಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಎಲ್ಲ ಜಾತಿ, ಧರ್ಮಗಳ ಜನರನ್ನು ತೆಕ್ಕೆಯಲ್ಲಿ ತೆಗೆದುಕೊಂಡು ಅಭಿವೃದ್ಧಿ ಪಥದತ್ತ ಕೊಂಡೊಯ್ದಿರಬೇಕು. ಇವೆಲ್ಲವನ್ನು ಆ ಸರಕಾರ ಸಾಧಿಸಿದೆ ಎಂದು ನಮಗೆ ಅನ್ನಿಸಿದರೆ ಅದನ್ನು ಬೆಂಬಲಿಸುವುದರಲ್ಲಿ ಹಿಂದೇಟು ಆಗುವ ಅಗತ್ಯವೇ ಇಲ್ಲ. ಇದೇ ಸಂದರ್ಭದಲ್ಲಿ ಪಕ್ಷಗಳ ಪ್ರಣಾಳಿಕೆಯನ್ನೂ ನಾವು ಗಂಭೀರವಾಗಿ ಅಧ್ಯಯನ ಮಾಡಬೇಕು. ಪ್ರಣಾಳಿಕೆಯಲ್ಲಿ ಜನ ಸಾಮಾನ್ಯರ ಅಭಿವೃದ್ಧಿಗಾಗಿ ಏನೇನು ಕಾರ್ಯಕ್ರಮ ಹಾಕಿದೆ ಎನ್ನುವುದನ್ನು ಪರಿಶೀಲಿಸಬೇಕು. ಕನಿಷ್ಠ ಜನಪರವಾದ ಪ್ರಣಾಳಿಕೆಯನ್ನು ನೀಡುವುದಕ್ಕೂ ಹಿಂಜರಿಯುವ ಪಕ್ಷ, ಅಧಿಕಾರಕ್ಕೆ ಬಂದ ಬಳಿಕ ಜನರ ಯೋಗಕ್ಷೇಮದ ಬಗ್ಗೆ ತಲೆಕೆಡಿಸಿಕೊಳ್ಳುವುದು ಸಾಧ್ಯವೆ? ಚುನಾವಣೆಯಲ್ಲಿ ಜನಪರವಾಗಿರುವ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬದಲಾಗಿ, ಜನರಲ್ಲಿ ದ್ವೇ ಷಗಳನ್ನು ಬಿತ್ತಿ, ಧರ್ಮ, ಜಾತಿ ಆಧಾರಿತವಾಗಿ ಜನರನ್ನು ಒಡೆದು ಮತಗಳನ್ನು ಯಾಚಿಸುವ ಪಕ್ಷಗಳನ್ನು ಸಾರಾಸಗಟಾಗಿ ತಿರಸ್ಕರಿಸಬೇಕು. ಯಾಕೆಂದರೆ ಹಿಂಸೆ ಮತ್ತು ಅಭಿವೃದ್ಧಿ ಜೊತೆಯಾಗಿ ಸಾಗಲು ಸಾಧ್ಯವೇ ಇಲ್ಲ. ಕೋಮುಗಲಭೆ, ಮಂದಿರ-ಮಸೀದಿ ಇತ್ಯಾದಿಗಳ ಮೂಲಕವೇ ಮತಗಳನ್ನು ಪಡೆಯಬಹುದು ಎಂಬ ಆತ್ಮವಿಶ್ವಾಸವಿರುವ ಯಾವುದೇ ಪಕ್ಷ ಜನರ ಅಭಿವೃದ್ಧಿಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಪಕ್ಷಗಳ ಪ್ರಣಾಳಿಕೆಗಳು ಬಡವರ ಪರವಾಗಿದೆ ಎಂದು ಕಂಡುಕೊಂಡ ಬಳಿಕ, ಸಾರ್ವಜನಿಕ ವೇದಿಕೆಗಳಲ್ಲಿ ರಾಜಕಾರಣಿಗಳು ಮಾಡುವ ಭಾಷಣಗಳು ಎಷ್ಟು ಸಭ್ಯವಾಗಿವೆ, ದೇಶದ ಅಭಿವೃದ್ಧಿಗೆ ಪೂರಕವಾಗಿದೆಯೇ ಎನ್ನುವುದನ್ನು ಗಣನೆಗೆ ತೆಗೆದುಕೊಳ್ಳಬೇಕು. ಜೊತೆ ಜೊತೆಗೆ ಅಭ್ಯರ್ಥಿ ವೈಯಕ್ತಿಕವಾಗಿ ಎಷ್ಟರಮಟ್ಟಿಗೆ ಪ್ರಾಮಾಣಿಕ ಮತ್ತು ಮುತ್ಸದ್ದಿತನವನ್ನು ಹೊಂದಿದ್ದಾನೆ ಅರಿಯ ಬೇಕು. ಈ ಬಗ್ಗೆ ತಾನೂ ಜಾಗೃತನಾಗಿ ಇತರರಲ್ಲೂ ಜಾಗೃತಿಯನ್ನು ಮೂಡಿಸುವುದರೊಂದಿಗೆ ಪ್ರಜಾಪ್ರಭುತ್ವದ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಮುಂದಾಗಬೇಕು. ‘ನಾವು ಯಾವ ಕಾರಣಕ್ಕೂ ಒಂದು ದಿನದ ಪ್ರಭುಗಳಲ್ಲ, ಐದು ವರ್ಷಗಳ ಕಾಲವೂ ನಾವೇ ಪ್ರಭುಗಳು’ ಎನ್ನುವ ಘೋಷಣೆ ಈ ಬಾರಿಯ ಚುನಾವಣಾ ಫಲಿತಾಂಶದಲ್ಲಿ ಹೊರ ಹೊಮ್ಮಲಿ. ಎಲ್ಲರಿಗೂ ಪ್ರಜಾಪ್ರಭುತ್ವ ಹಬ್ಬದ ಶುಭಾಶಯಗಳು.

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News