ರಾಜಕೀಯ ಮೈದಾನದಲ್ಲಿ ವೆಂಕಿ ಎಸೆದ ನೋ ಬಾಲ್!

Update: 2024-04-25 04:33 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕ್ರಿಕೆಟ್ ಬರೀ ಆಟವಲ್ಲ, ಅದೊಂದು ಬೃಹತ್ ಉದ್ಯಮ ಎನ್ನುವ ಟೀಕೆ ಇಂದು ನಿನ್ನೆಯದಲ್ಲ. ಭಾರತದಲ್ಲಿ ಕಾರ್ಪೊರೇಟ್ ಶಕ್ತಿಗಳು ರಾಜಕೀಯವನ್ನು ನಿಯಂತ್ರಿಸ ತೊಡಗಿದ ದಿನದಿಂದ ಕ್ರಿಕೆಟ್ ಬರೇ ಉದ್ಯಮವಾಗಿಯಷ್ಟೇ ಉಳಿದಿಲ್ಲ. ಕ್ರಿಕೆಟ್ ಎಂದರೆ ರಾಜಕೀಯವೂ ಹೌದು. ಬಿಸಿಸಿಐ ಎಂದರೆ ನೂರಾರು ಕೋಟಿ ರೂಪಾಯಿಗಳ ವ್ಯವಹಾರವಾಗಿದ್ದು ಅದನ್ನು ರಾಜಕಾರಣಿಗಳೇ ನಿಯಂತ್ರಿಸುತ್ತಾ ಬರುತ್ತಿದ್ದಾರೆ. ಕ್ರಿಕೆಟ್‌ನ ಗಂಧಗಾಳಿಯಿಲ್ಲದ ಉದ್ಯಮಿಗಳು, ರಾಜಕಾರಣಿಗಳು ಬಿಸಿಸಿಐಯ ಅತ್ಯುನ್ನತ ಸ್ಥಾನಗಳನ್ನು ನಿಭಾಯಿಸುತ್ತಾ ಬರುತ್ತಿರುವುದು ಇದೇ ಕಾರಣಕ್ಕೆ. ಕ್ರಿಕೆಟ್ ಆಟಕ್ಕೆ ಧರ್ಮವಿಲ್ಲ. ಅದು ಎಲ್ಲ ಗಡಿಗಳನ್ನು ಮೀರಿ ಜನರ ಮನಸ್ಸುಗಳನ್ನು ಬೆಸೆಯುತ್ತದೆ, ಒಂದಾಗಿಸುತ್ತದೆ ಎಂದು ಹೇಳಲಾಗುತ್ತದೆಯಾದರೂ, ಕ್ರಿಕೆಟ್ ತಾರೆಯರು ಮಾತ್ರ ‘ನಮಗೆ ಧರ್ಮ, ಜಾತಿಗಳಿವೆ’ ಎನ್ನುವುದನ್ನು ಆಗಾಗ ಸಾಬೀತು ಪಡಿಸುತ್ತಾ ಬಂದಿದ್ದಾರೆ. ಯಾವಾಗ ಕ್ರಿಕೆಟ್ ತಾರೆಯರು ತಮ್ಮ ನಿವೃತ್ತಿಯ ಬಳಿಕ ರಾಜಕೀಯದ ಕಡೆಗೆ ವಾಲತೊಡಗಿದರೋ ಅಲ್ಲಿಂದ ಕ್ರಿಕೆಟ್ ಕೂಡ ತನ್ನ ಅಳಿದುಳಿದ ಘನತೆಯನ್ನು ಕಳೆದುಕೊಳ್ಳ ತೊಡಗಿತು. ಗೌತಮ್ ಗಂಭೀರ್‌ರಂತಹ ಆಟಗಾರರು ಬಿಜೆಪಿ ಸೇರಿದ ಬಳಿಕ ನೀಡತೊಡಗಿದ ರಾಜಕೀಯ ಹೇಳಿಕೆಗಳು ಕ್ರೀಡೆಯ ಮೌಲ್ಯಗಳನ್ನು ಗಾಳಿಗೆ ತೂರಿದವು.

ಸೋಲುವ ಭಯದಿಂದ ಪ್ರಧಾನಿ ಮೋದಿಯವರು ರಾಜಸ್ಥಾನದಲ್ಲಿ ಆಡುತ್ತಿರುವ ಹತಾಶೆಯ ದ್ವೇಷ ಭಾಷಣಗಳಿಗೆ ದೇಶಾದ್ಯಂತ ಟೀಕೆಗಳು ವ್ಯಕ್ತವಾಗುತ್ತಿವೆ. ಒಬ್ಬ ಪ್ರಧಾನಿ ಆಡುವ ಮಾತುಗಳೇ ಇವು? ಎಂದು ಸ್ವತಃ ಬಿಜೆಪಿಯೊಳಗಿರುವ ನಾಯಕರೇ ಮುಜುಗರ ಪಡುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ, ಪ್ರಧಾನಿಯ ದ್ವೇಷ ಮಾತುಗಳನ್ನು ಸಮರ್ಥಿಸಲು ಹೋಗಿ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್, ‘ಹಿಟ್ ವಿಕೆಟ್’ ಆಗಿದ್ದಾರೆ. ಪ್ರಧಾನಿಯ ಮಾತುಗಳನ್ನು ಸಮರ್ಥಿಸುವ ಯಾವ ಅನಿವಾರ್ಯವೂ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್‌ಗೆ ಇರಲಿಲ್ಲವಾದರೂ, ತಾವಾಗಿಯೇ ಪ್ರಧಾನಿ ಉಗುಳಿದ ತಟ್ಟೆಗೆ ಹೋಗಿ ಬಾಯಿ ಹಾಕಿದ್ದಾರೆ. ಪ್ರಧಾನಿ ಮೋದಿಯವರು ಕೇವಲ ದ್ವೇಷದ ಮಾತುಗಳನ್ನಷ್ಟೇ ಆಡಿರುವುದಲ್ಲ. ತಮ್ಮ ದ್ವೇಷ ಹಂಚಿಕೆಗಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಮಾತುಗಳನ್ನು ತಿರುಚಿದ್ದರು. ‘‘ಭಾರತದ ಸಂಪತ್ತಿನಲ್ಲಿ ಈ ದೇಶದ ಮುಸ್ಲಿಮರಿಗೆ ಮೊದಲ ಪಾಲು ಎಂದು ಮನಮೋಹನ್ ಸಿಂಗ್ ಹೇಳಿದ್ದರು. ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದರೆ ನುಸುಳುಕೋರರಿಗೆ ಈ ದೇಶದ ಸಂಪತ್ತನ್ನು ಹಂಚಲಿದೆ’’ ಎಂದು ಮೋದಿ ಏಕಕಾಲದಲ್ಲಿ ಸುಳ್ಳಿನ ಪಾತ್ರೆಯಲ್ಲಿ ದ್ವೇಷದ ಮಾತುಗಳನ್ನು ಜನರಿಗೆ ಹಂಚಿದ್ದರು. ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಹೇಳಿರುವ ಶ್ರೀಮಂತರ ಸಂಪತ್ತನ್ನು ಬಡವರಿಗೆ ಹಂಚುವ ಪ್ರಸ್ತಾವವನ್ನು ಟೀಕಿಸುತ್ತಾ ಅವರು ಮೇಲಿನ ಮಾತುಗಳನ್ನು ಆಡಿದ್ದರು. ಮುಖ್ಯವಾಗಿ ‘ಶ್ರೀಮಂತರ ಸಂಪತ್ತನ್ನು ಬಡವರಿಗೆ ಹಂಚುವುದು’ ಪ್ರಧಾನಿ ಮೋದಿಯವರಿಗೆ ಅಪಥ್ಯವಾಗಿತ್ತು. ಇದರ ವಿರುದ್ಧ ಹೇಳಿಕೆಯನ್ನು ನೀಡಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕಾಗಿ, ‘ದೇಶದ ಸಂಪತ್ತನ್ನು ನುಸುಳುಕೋರರಿಗೆ ಹಂಚಲು ಕಾಂಗ್ರೆಸ್ ಹೊರಟಿದೆ’ ಎಂದು ವ್ಯಾಖ್ಯಾನಿಸಿದರು. ಈ ದೇಶದ ಎಲ್ಲ ಮುಸ್ಲಿಮರನ್ನು ಅವರು ನುಸುಳುಕೋರರ ಸಾಲಿಗೆ ಸೇರಿಸಿದ್ದರು. ಹಿಂದೂ-ಮುಸ್ಲಿಮ್ ಎಂದು ಜನರನ್ನು ಅವರು ವಿಭಜಿಸಿದರು.

ಅನ್ನ ತಿನ್ನುವ ಯಾವನೂ ಪ್ರಧಾನಿಯ ಮಾತುಗಳನ್ನು ಸಮರ್ಥಿಸಲು ಸಾಧ್ಯವಿಲ್ಲ. ಆದರೆ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಮಾತ್ರ ಪ್ರಧಾನಿ ಮೋದಿಯವರ ಮಾತುಗಳನ್ನು ಪ್ರಸಾದದಂತೆ ಸ್ವೀಕರಿಸಿದ್ದಾರೆ. ಈ ಹಿಂದೆ ಸನಾತನ ಧರ್ಮದ ಪರವಾಗಿ ಬ್ಯಾಟಿಂಗ್ ಮಾಡಿದ್ದ ವೆಂಕಟೇಶ್ ಪ್ರಸಾದ್, ಇದೀಗ ದೇಶದ ಸಂಪತ್ತನ್ನು ಶ್ರೀಮಂತರಿಂದ ಬಡವರಿಗೆ ಹಂಚುವುದು ಎಷ್ಟು ಸರಿ ಎಂದು ಕೇಳಿದ್ದಾರೆ. ಅದಕ್ಕೆ ತನ್ನ ಕ್ರಿಕೆಟ್ ಅರ್ಥಶಾಸ್ತ್ರವನ್ನು ಸಮರ್ಥನೆಯಾಗಿ ನೀಡಿದ್ದಾರೆ. ‘ಶ್ರೀಮಂತರ ಸಂಪತ್ತನ್ನು ಬಡವರಿಗೆ ಮರು ಹಂಚಿಕೆ ಮಾಡುವ ಬಗ್ಗೆ ಪಕ್ಷವೊಂದು ಮಾತನಾಡುತ್ತಿರುವುದು ಚಿಂತಾಜನಕವಾಗಿದೆ. ನಾವು ರಾಜಸ್ಥಾನ ರಾಯಲ್ಸ್, ಕೋಲ್ಕತಾ ನೈಟ್ ರೈಡರ್ಸ್, ಸನ್ ರೈಸರ್ಸ್ ಹೈದರಾಬಾದ್‌ನಿಂದ ನಾಲ್ಕು ಅಂಕಗಳನ್ನು ತೆಗೆದು ಅದನ್ನು ಕೆಳಗಿನ ಹಂತದಲ್ಲಿರುವ ಮೂರು ತಂಡಗಳಿಗೆ ಮರುಹಂಚಿಕೆ ಮಾಡಿ ಅವರು ಪ್ಲೇ ಆಫ್‌ಗೆ ಬರುವಂತೆ ಮಾಡಬೇಕು ಎಂದು ಹೇಳಿದಂತಾಗುತ್ತದೆ’’ ಎಂದು ಹೇಳಿದ್ದಾರೆ. ಈ ದೇಶದ ಬಡತನ, ಹಸಿವು ಇವೆಲ್ಲದರ ಬಗ್ಗೆ ಪ್ರಾಥಮಿಕ ಅರಿವೂ ಇಲ್ಲದ, ಸಾಮಾಜಿಕ ನ್ಯಾಯಗಳ ಬಗ್ಗೆ ಅಸಹನೆಯಿರುವ ಹಿಂದುತ್ವವಾದಿ ಮಾಜಿ ಕ್ರಿಕೆಟ್ ತಾರೆಯಿಂದ ಇದರಾಚೆಗಿನ ಮಾತುಗಳನ್ನು ನಿರೀಕ್ಷಿಸುವುದು ಕೂಡ ತಪ್ಪಾಗುತ್ತದೆ.

ಭಾರತದ ಶೇ. 1ರಷ್ಟು ಜನರ ಬಳಿ ಈ ದೇಶದ ಶೇ. 40ರಷ್ಟು ಸಂಪತ್ತುಗಳು ಶೇಖರಣೆಯಾಗಿವೆೆ ಮತ್ತು ಈ ಅಸಮಾನತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಎಂದು ಆಕ್ಸ್‌ಫಾಮ್ ವರದಿ ಹೇಳುತ್ತದೆ. ಈ ದೇಶದ ಜನಸಂಖ್ಯೆಯಲ್ಲಿ ಕೊನೆಯ ಸ್ಥಾನದಲ್ಲಿರುವ ಶೇ. 50 ಜನರು ಕೇವಲ ಶೇ. 3ರಷ್ಟು ಸಂಪತ್ತನ್ನು ಮಾತ್ರ ಹೊಂದಿದ್ದಾರೆ. ವಿಪರ್ಯಾಸವೆಂದರೆ, ಈ ದೇಶದ ಶೇ. 10ರಷ್ಟಿರುವ ಶ್ರೆಮಂತರು ಕಟ್ಟುವ ತೆರಿಗೆಗಿಂತ ಆರು ಪಟ್ಟು ಹೆಚ್ಚು ಪರೋಕ್ಷ ತೆರಿಗೆಯನ್ನು ಈ ದೇಶದ ಶೇ. 50ರಷ್ಟಿರುವ ಜನರು ಕಟ್ಟುತ್ತಿದ್ದಾರೆ. ಈ ದೇಶದ ಬಿಲಿಯಾಧಿಪತಿಗಳು ಇನ್ನಷ್ಟು ಶ್ರೀಮಂತರಾಗುತ್ತಿದ್ದಂತೆಯೇ ಇತ್ತ ಈ ದೇಶದ ಬಡವರು ಇನ್ನಷ್ಟು ಬಡವರಾಗುತ್ತಿದ್ದಾರೆ. ಆಕ್ಸ್‌ಫಾಮ್ ವರದಿಯ ಪ್ರಕಾರ, ಅತಿ ಶ್ರೀಮಂತರ ಮೇಲೆ ಹೆಚ್ಚುವರಿ ತೆರಿಗೆಗಳನ್ನು ವಿಧಿಸುವ ಮೂಲಕ ಸಮಾನತೆಯನ್ನು ಸಾಧಿಸಬಹುದಾಗಿದೆ. ಇದನ್ನೇ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿಯ ಲಾಭಗಳ ಮೇಲೆ ಒಂದು ಬಾರಿ ತೆರಿಗೆ ಹಾಕಿದರೆ 1.79 ಲಕ್ಷ ಕೋಟಿ ರೂಪಾಯಿಗಳನ್ನು ಸರಕಾರ ತನ್ನದಾಗಿಸಿಕೊಳ್ಳಬಹುದು. ಇಷ್ಟು ಹಣದಿಂದ ಒಂದು ವರ್ಷಕ್ಕೆ 50 ಲಕ್ಷಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕವನ್ನು ಮಾಡಬಹುದು ಎಂದು ವರದಿ ಅಭಿಪ್ರಾಯ ಪಡುತ್ತದೆ. ಶ್ರೀಮಂತರ ಮೇಲೆ ವಿಧಿಸುವ ತೆರಿಗೆಯಿಂದ ಈ ದೇಶದ ಅಪೌಷ್ಟಿಕತೆ, ಅನಾರೋಗ್ಯಗಳನ್ನು ಹೇಗೆ ನಿವಾರಿಸಬಹುದು ಎನ್ನುವುದನ್ನೂ ಆಕ್ಸ್‌ಫಾಮ್ ತನ್ನ ವರದಿಯಲ್ಲಿ ಹೇಳಿದೆ.

ವೆಂಕಟೇಶ್ ಪ್ರಸಾದ್ ಅವರು ವಿವಿಧ ಐಪಿಎಲ್ ಕ್ರಿಕೆಟ್ ತಂಡಗಳ ಅಂಕಗಳನ್ನು ಸಮಾನವಾಗಿ ಹಂಚುವ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಮಾತನಾಡಬೇಕಾದುದು ಅಂಕಗಳನ್ನು ಹಂಚುವುದರ ಬಗ್ಗೆಯಲ್ಲ, ಕ್ರಿಕೆಟ್ ತಂಡದಲ್ಲಿ ಪ್ರತಿಭಾವಂತರಿಗೆ ಸಮಾನಪಾಲು ದೊರಕುವಂತೆ ಮಾಡುವುದರ ಬಗ್ಗೆ. ಕ್ರಿಕೆಟ್ ಆಟದಲ್ಲಿ ಮೇಲ್‌ಜಾತಿಗಳು ತನ್ನ ಪ್ರಾಬಲ್ಯವನ್ನು ಮೆರೆಯುತ್ತಿವೆ. ಶೋಷಿತ ಸಮುದಾಯದಿಂದ ಬಂದ ಪ್ರತಿಭಾವಂತ ಆಟಗಾರರನ್ನು ಬದಿಗೆ ತಳ್ಳಲಾಗುತ್ತಿದೆ. ಈ ಬಗ್ಗೆ ಹಲವು ದಶಕಗಳಿಂದ ಟೀಕೆಗಳು ಕೇಳಿ ಬರುತ್ತಿವೆ. ಆದುದರಿಂದ, ಕ್ರಿಕೆಟ್‌ನಲ್ಲಿ ಮೇಲ್‌ಜಾತಿಯ ಪ್ರಾಬಲ್ಯವನ್ನು ಕಿತ್ತುಹಾಕಿ, ಅಲ್ಲಿ ಎಲ್ಲ ಸಮುದಾಯಗಳ ಪ್ರತಿಭಾವಂತ ಆಟಗಾರರಿಗೆ ಸಮಾನ ಅವಕಾಶವನ್ನು ನೀಡುವ ಬಗ್ಗೆ ವೆಂಕಟೇಶ್ ಪ್ರಸಾದ್ ಮಾತನಾಡಬೇಕು. ಇದೇ ಸಂದರ್ಭದಲ್ಲಿ ಈ ದೇಶದ ಇತರೆಲ್ಲ ಕ್ರೀಡೆಗಳನ್ನು ನಿರ್ಲಕ್ಷಿಸಿ ಕ್ರಿಕೆಟನ್ನು ಪ್ರೋತ್ಸಾಹಿಸಲಾಗುತ್ತಿದೆ. ಕ್ರಿಕೆಟ್ ಇತರ ಕ್ರೀಡೆಗಳನ್ನು ಆಪೋಷನ ತೆಗೆದುಕೊಳ್ಳುತ್ತಿದೆ ಎನ್ನುವ ಆರೋಪ ಇಂದು ನಿನ್ನೆಯದಲ್ಲ. ಆದುದರಿಂದ ಕ್ರಿಕೆಟ್‌ಗೆ ನೀಡುವ ಎಲ್ಲ ರೀತಿಯ ಆರ್ಥಿಕ ನೆರವನ್ನು ಸಮಾನವಾಗಿ ಇತರ ಕ್ರೀಡೆಗಳಿಗೂ ಹಂಚಬೇಕಾಗಿದೆ. ಕ್ರಿಕೆಟ್ ತಾರೆಯರಿಗೆ ನೀಡುವ ಸಂಭಾವನೆ, ಇತರ ಅತ್ಲೀಟ್‌ಗಳಿಗೂ ಸಿಗಬೇಕಾಗಿದೆ. ವೆಂಕಟೇಶ್ ಪ್ರಸಾದ್ ಈ ಬಗ್ಗೆ ಬಾಯಿ ತೆರೆಯಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಕೇಂದ್ರ ಸರಕಾರ ಇತ್ತೀಚೆಗೆ ಮೇಲ್‌ಜಾತಿ ಬಡವರಿಗೂ ಶೇ.10 ಮೀಸಲಾತಿಯನ್ನು ಜಾರಿಗೆ ತಂದಿದೆ. ತಮ್ಮ ಕ್ರಿಕೆಟ್ ಅರ್ಥಶಾಸ್ತ್ರವನ್ನು ಈ ಶೇ.10 ಮೀಸಲಾತಿಗೂ ಅನ್ವಯಿಸಿ, ಆ ಮೀಸಲಾತಿಯನ್ನು ರದ್ದುಗೊಳಿಸಲು ಕೇಂದ್ರ ಸರಕಾರವನ್ನು ಒತ್ತಾಯಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News