ಕಾಂಗೋದಲ್ಲಿ ಶಿವಮೊಗ್ಗದ 70 ಮಂದಿ ಸೇರಿ ರಾಜ್ಯದ 95 ಜನರ ಬಂಧನ
ನಕಲಿ ದಾಖಲೆ, ಪ್ರವಾಸಿ ವೀಸಾದಲ್ಲಿ ವ್ಯಾಪಾರ ಆರೋಪ; ಸುರಕ್ಷಿತವಾಗಿ ತವರಿಗೆ ಕರೆತರಲು ಆಗ್ರಹ
ಶಿವಮೊಗ್ಗ (ನ.21): ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಹಕ್ಕಿಪಿಕ್ಕಿ ಸಮುದಾಯದ 95 ಮಂದಿ ಬಂಧನಕ್ಕೊಳಗಾಗಿರುವ ವರದಿಯಾಗಿದೆ. ಬಂಧಿತರ ಪೈಕಿ ಶಿವಮೊಗ್ಗ ಜಿಲ್ಲೆಯ ಹಕ್ಕಿಪಿಕ್ಕಿ ಕ್ಯಾಂಪ್‌ನ 70 ಮಂದಿ ಹಾಗೂ ಚನ್ನಗಿರಿ ತಾಲೂಕಿನ ಅಸ್ತಾಪನಹಳ್ಳಿ ಗ್ರಾಮದ 25 ಮಂದಿ ಸೇರಿದ್ದಾರೆ ಎನ್ನಲಾಗಿದೆ.
ಕಾಂಗೋದ ಬೆನಿ ಮತ್ತು ಕಿಸಂಗಾನಿ ನಗರಗಳಲ್ಲಿ ವಾಸಿಸುತ್ತಿದ್ದ ಹಕ್ಕಿಪಿಕ್ಕಿ ಸಮುದಾಯದವರನ್ನು ಅಲ್ಲಿನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಳಿಕ ಅವರನ್ನು ರಾಜಧಾನಿ ಕಿನ್ಶಾಸಾಗೆ ಕರೆತಂದು ವಲಸೆ ಅಧಿಕಾರಿಗಳ ವಶದಲ್ಲಿ ಇರಿಸಲಾಗಿದೆ. ಬಂಧಿತರನ್ನು ಭಾರತಕ್ಕೆ ಗಡೀಪಾರು ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಬಂಧಿತರಲ್ಲಿ ಹೆಚ್ಚಿನವರು ಶಿವಮೊಗ್ಗ ಜಿಲ್ಲೆಯವರಾಗಿರುವುದರಿಂದ ಅವರ ಕುಟುಂಬಗಳಲ್ಲಿ ಆತಂಕ ಉಂಟಾಗಿದೆ. ಕಾಂಗೋದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಹಕ್ಕಿಪಿಕ್ಕಿ ಸಮುದಾಯದವರನ್ನು ಸುರಕ್ಷಿತವಾಗಿ ತವರಿಗೆ ಕರೆತರುವ ನಿಟ್ಟಿನಲ್ಲಿ ಸರಕಾರಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಹಕ್ಕಿಪಿಕ್ಕಿ ಬುಡಕಟ್ಟು ಸಂಘಟನೆ ರಾಜ್ಯಾಧ್ಯಕ್ಷ ಪುನೀತ್ ಕುಮಾರ್ ಆರ್. ಆಗ್ರಹಿಸಿದ್ದಾರೆ.
ಹಕ್ಕಿಪಿಕ್ಕಿ ಸಮುದಾಯದವರನ್ನು ವಿದೇಶಕ್ಕೆ ಕಳುಹಿಸಿ ವ್ಯಾಪಾರ ಮಾಡಿಸುವುದಾಗಿ ನಂಬಿಸಿದ ಸ್ಥಳೀಯ ಏಜೆಂಟರು ಪ್ರತಿಯೊಬ್ಬರಿಂದ ಸುಮಾರು ರೂ.5 ಲಕ್ಷ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವಿದೇಶದಲ್ಲಿ ವ್ಯಾಪಾರ ನಡೆಸಿ ಆದಾಯ ಗಳಿಸುವ ನಿರೀಕ್ಷೆಯೊಂದಿಗೆ ಕಾಂಗೋಗೆ ತೆರಳಿದ್ದ ಸಮುದಾಯದವರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಣ ಪಡೆದು ವಿದೇಶಕ್ಕೆ ಕಳುಹಿಸಿದ್ದ ಏಜೆಂಟರು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಕಾಂಗೋದಲ್ಲಿ ಹಕ್ಕಿಪಿಕ್ಕಿ ಸಮುದಾಯದವರು ಬಂಧನಕ್ಕೊಳಗಾಗಲು ನಕಲಿ ದಾಖಲೆಗಳ ಬಳಕೆ ಹಾಗೂ ಪ್ರವಾಸಿ ವೀಸಾದಲ್ಲಿ ವ್ಯಾಪಾರ ನಡೆಸಿರುವುದು ಪ್ರಮುಖ ಕಾರಣ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ವಿದೇಶಕ್ಕೆ ತೆರಳಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಟ್ಟವರು ಯಾರು, ವೀಸಾ ಪ್ರಕ್ರಿಯೆಯಲ್ಲಿ ಏಜೆಂಟರ ಪಾತ್ರವೇನು ಹಾಗೂ ಹಣ ಪಡೆದವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದರ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಪುನೀತ್ ಕುಮಾರ್ ಆರ್. ಆಗ್ರಹಿಸಿದ್ದಾರೆ.
ಕಾಂಗೋದ ವಿವಿಧ ನಗರಗಳಲ್ಲಿ ಕರ್ನಾಟಕದ ಹಕ್ಕಿಪಿಕ್ಕಿ ಸಮುದಾಯದ 200ಕ್ಕೂ ಹೆಚ್ಚು ಮಂದಿ ವಾಸಿಸುತ್ತಿದ್ದಾರೆ. 95 ಮಂದಿ ಬಂಧನಕ್ಕೊಳಗಾಗಿರುವ ಘಟನೆಯಿಂದ ಅಲ್ಲಿರುವ ಇತರ ಹಕ್ಕಿಪಿಕ್ಕಿ ಸಮುದಾಯದವರಲ್ಲಿಯೂ ಭೀತಿ ಉಂಟಾಗಿದೆ. ಅವರ ಸುರಕ್ಷತೆಯ ಬಗ್ಗೆಯೂ ಗಮನಹರಿಸುವ ಅಗತ್ಯವಿದೆ. ಕಾಂಗೋದ ವಿವಿಧ ನಗರಗಳಲ್ಲಿ ನೆಲೆಸಿರುವ ಭಾರತೀಯ ಹಕ್ಕಿಪಿಕ್ಕಿ ಸಮುದಾಯದವರನ್ನು ಗುರುತಿಸಿ, ಅವರ ಪರಿಸ್ಥಿತಿಯನ್ನು ಪರಿಶೀಲಿಸಬೇಕು. ಅಗತ್ಯವಿರುವವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಪುನೀತ್ ಕುಮಾರ್ ಆರ್. ಒತ್ತಾಯಿಸಿದ್ದಾರೆ.