ಶಿವಮೊಗ್ಗ: ಗದ್ದೆಯ ಬೇಲಿಗೆ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿಯ ಸ್ಪರ್ಶಕ್ಕೆ ಒಳಗಾಗಿ ಕಾಡಾನೆಯೊಂದು ಸಾವನಪ್ಪಿದ ಘಟನೆ ತಾಲೂಕಿನ ಬಸವಾಪುರ ಗ್ರಾಮ ಸಮೀಪದ ಇಚವಾಡಿಯಲ್ಲಿ ಶನಿವಾರ ನಡೆದಿದೆ.

ಶಿವಮೊಗ್ಗ ವಿಭಾಗದ ಶಂಕರ ವಲಯ ವ್ಯಾಪ್ತಿಯ ಇಚವಾಡಿ ಗ್ರಾಮದಲ್ಲಿ ಶನಿವಾರ ಮುಂಜಾನೆ ಮೂರು ಗಂಟೆ ವೇಳೆ ಸುಮಾರು 10-12 ವರ್ಷದ ಕಾಡಾನೆ ವಿದ್ಯುತ್ ಸ್ಪರ್ಶಿಸಿ ಸಾವನಪ್ಪಿದೆ.

ಭತ್ತದ ಬೆಳೆಯನ್ನು ಕಾಡುಹಂದಿಗಳಿಂದ ರಕ್ಷಿಸಲು ಗೇಣಿ ಜಮೀನು ಮಾಡುತ್ತಿದ್ದ ರೈತ ಅಕ್ರಮವಾಗಿ ವಿದ್ಯುತ್ ತಂತಿಯನ್ನು ಗದ್ದೆ ಸುತ್ತಲೂ ಎಳೆದಿದ್ದ. ಮುಂಜಾನೆ ವೇಳೆ ಕಾಡಾನೆ ಗದ್ದೆಯಲ್ಲಿ ಸಂಚರಿಸುತ್ತಿರುವಾಗ ವಿದ್ಯುತ್ ಸ್ಪರ್ಶಕ್ಕೊಳಗಾಗಿ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.

ಪ್ರಕರಣ ಸಂಬಂಧ ಆರೋಪಿ ಅಲಿಮಿಯಾ ಬಿನ್ ಪೀರ್ ಸಮೀಯಾರ ಎಂಬಾತನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ, ಸ್ಥಳ ಮಹಜರು ನಡೆಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಭತ್ತದ ಬೆಳೆಯು ತೆನೆ ಬಿಡುವ ಹಂತದಲ್ಲಿ ಇರುವುದರಿಂದ ಇತ್ತೀಚಿಗೆ ಹಂದಿಗಳು ಬರಲಾರಂಭಿಸಿದ್ದು ಶುಕ್ರವಾರ ದಿನ ಗದ್ದೆಯ ಬದುವಿನ ಮೇಲೆ ತಂತಿಯನ್ನು ಅಳವಡಿಸಿ ವಿದ್ಯುತ್ ಸಂಪರ್ಕ ನೀಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಈ ಬಗ್ಗೆ ಆರೋಪಿ ವಿರುದ್ದ ಅರಣ್ಯ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಶಿವಮೊಗ್ಗ ವಲಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ.ಹನುಮಂತಪ್ಪ ತಿಳಿಸಿದರು.

ಅಕ್ರಮ ವಿದ್ಯುತ್ ಬಳಕೆಗೆ ಸಂಬಂಧಿಸಿದಂತೆ Electricity Act ಅಡಿಯಲ್ಲಿ ಪ್ರಕರಣ ದಾಖಲಿಸಿ ಕೊಳ್ಳಲು ವಿದ್ಯುತ್ ಇಲಾಖೆಗೆ ದೂರು ನೀಡಲಾಗಿದೆ. ನಿಯಮಿತ ಕಾರ್ಯ ವಿಧಾನದ ಪ್ರಕಾರ ಆನೆಯ ಮರಣೋತ್ತರ ಶವ ಪರೀಕ್ಷೆಯನ್ನು ಕೈಗೊಳಲಾಗುವುದು ಎಂದು ಡಿಸಿಎಫ್ ಅಜ್ಜಯ್ಯ ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor