ಶಿವಮೊಗ್ಗ : ಹಿರಿಯ ರಾಜಕಾರಣಿ, ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರು 2026ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ಕರ್ನಾಟಕ ರಾಜ್ಯ ಸರ್ಕಾರ ಕೊಡಮಾಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಸಮಾಜ ಸೇವಾ ಕ್ಷೇತ್ರದಿಂದ ಕಾಗೋಡು ತಿಮ್ಮಪ್ಪನವರನ್ನು ಆಯ್ಕೆ ಮಾಡಲಾಗಿದೆ. ಕಾಗೋಡು ತಿಮ್ಮಪ್ಪನವರು ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದವರು. ಹಲವು ಬಾರಿ ಶಾಸಕರಾಗಿ, ಸಚಿವರಾಗಿ ಮತ್ತು ವಿಧಾನಸಭಾಧ್ಯಕ್ಷರೂ ಆಗಿ ಕಾರ್ಯ ನಿರ್ವಹಿಸಿದ್ದಾರೆ.

ರೈತ ಹೋರಾಟದ ಭೂಮಿಯಾದ ಕಾಗೋಡಿನಲ್ಲಿ ತಿಮ್ಮಪ್ಪನವರು ಸವಾಜಿ ಬೀರಾನಾಯ್ಕ ಮತ್ತು ಬೈರಮ್ಮ ದಂಪತಿಗಳಿಗೆ 3 ನೇ ಮಗನಾಗಿ 1932 ಸೆಪ್ಟಂಬರ್ 10 ರಂದು, (ದಿ.10-9-1932) ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣ ಪ್ರೌಢ ಶಾಲಾ ಶಿಕ್ಷಣಗಳನ್ನು ಹಿರೇನೆಲ್ಲೂರು ಮತ್ತು ಸಾಗರದಲ್ಲಿ ಮುಗಿಸಿದರು. ಬೆಂಗಳೂರಿನಲ್ಲಿ ಬಿ.ಕಾಂ. ಬಿ.ಎಲ್ ಪದವಿ ಮುಗಿಸಿ. ಸಾಗರದಲ್ಲಿ ನ್ಯಾಯವಾದಿಗಳಾಗಿ ವೃತ್ತಿಯನ್ನು ಪ್ರಾರಂಭಿಸಿದರು. ವಿದ್ಯಾರ್ಥಿಯಾಗಿದ್ದಾಗಲೇ ಸಮಾಜವಾದಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು.

ಸಮಾಜವಾದಿ ಪಕ್ಷವು 1962 ರಲ್ಲಿ ತಿಮ್ಮಪ್ಪನವರನ್ನು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಿಲ್ಲಿಸಿತು ; ಅದರಲ್ಲಿ,ಕಾಂಗ್ರೆಸ್ಸಿನ ಲಕ್ಷ್ಮಿಕಾಂತಪ್ಪನವ ರಿಂದ ಕೇವಲ 4848 ಮತಗಳಿಂದ ಸೋಲನ್ನು ಅನುಭವಿಸಿದರು. 1967 ರಲ್ಲಿ ಪುನಃ ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನು ಅನುಭವಿಸಬೇಕಾಯಿತು.

1972 ರ ವಿಧಾನಸಭೆಯ ಚುನಾವಣೆಯಲ್ಲಿ ಪುನಃ ಸ್ಪರ್ಧಿಸಿ ಕಾಂಗ್ರೆಸ್ಸಿನ ಎದುರು ಜಯಗಳಿಸಿದರು. 

1980 ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು. 1980ಮೇ 5 ರಂದು ವಿಧಾನಸಭಾ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಗುಂಡೂರಾವ್ ಬೆಂಬಲದಿಂದ ಆಯ್ಕೆಯಾಗಿ ಹಿಂದುಳಿದವರ ಸಮಿತಿಯ ಅಧ್ಯಕ್ಷರಾದರು. ನಂತರ ಗುಂಡೂರಾವ್ ರವರು ಇವರನ್ನು 1980 ಅಕ್ಟೋಬರ್ 3ರಂದು ಅರಣ್ಯ ಇಲಾಖೆಯ ಸಚಿವರನ್ನಾಗಿ ನಿಯುಕ್ತಿಗೊಳಿಸಿ ವಿಧಾನ ಪರಿಷತ್ತಿನ ಸಭಾನಾಯಕರಾಗಿ ನೇಮಿಸಿದರು.

ಕೆಲವು ಕಾಲದ ನಂತರ ಗುಂಡೂರಾವ್ ಸಂಪುಟದ ಲೋಕೋಪಯೋಗಿ ಸಚಿವರಾಗಿ ನಿಯುಕ್ತಗೊಂಡರು. ಪುನಃ 1989 ರಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ದಿಂದ ಸ್ಪರ್ಧಿಸಿ ಬಹುಮತದಿಂದ ಗೆದ್ದರು. ಆಗ ಇವರನ್ನು ವೀರೆಂದ್ರ ಪಾಟೀಲರು ರಾಜ್ಯ ಗೃಹಮಂಡಳಿ ಅದ್ಯಕ್ಷರಾಗಿ ನೇಮಕ ಮಾಡಿದರು. ನಂತರ ವೀರಪ್ಪ ಮೊಯ್ಲಿ ಮಂತ್ರಿ ಮಂಡಲದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ನಿಯುಕ್ತಗೊಂಡರು. 1994 ನವೆಂಬರ್ 20ರಂದು ಮತ್ತು 1999 ರಲ್ಲಿ ನಡೆದ ವಿಧಾನ ಸಭಾ ಚುನಾವನೆಯಲ್ಲಿ ಪುನಃ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯ ಗಳಿಸಿದರು.

ಎಸ್ ಎಂ ಕೃಷ್ಣ ಮಂತ್ರಿ ಮಂಡಲದಲ್ಲಿ ಹಾಗೂ ಸಿದ್ದರಾಮಯ್ಯ ಸಂಪುಟದಲ್ಲಿ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor