Sagara | ಬೈಕಿಗೆ ಮರಳು ಸಾಗಾಟದ ಟಿಪ್ಪರ್ ಲಾರಿ ಢಿಕ್ಕಿ: ಯುವತಿ ಮೃತ್ಯು
ಸಾಗರ: ಟಿಪ್ಪರ್ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಯುವತಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟ ಘಟನೆ ಸಾಗರ ತಾಲೂಕಿನ ನೆಲ್ಲಿಬೀಡು ವೃತ್ತದ ಬಳಿ ಮಂಗಳವಾರ ಬೆಳಗ್ಗೆ ನಡೆದಿದೆ.
ಕರೂರು ಹೋಬಳಿಯ ಮಳೂರು ಗ್ರಾಮದ ನಿವಾಸಿ ನೀಲಕುಮಾರ್ ಜೈನ್ ಅವರ ಪುತ್ರಿ ಅರ್ಚನಾ ಮೃತಪಟ್ಟವರು.
ತಂದೆ-ಮಗಳು ಎಂದಿನಂತೆ ತಮ್ಮ ದ್ವಿಚಕ್ರ ವಾಹನದಲ್ಲಿ ನೆಲ್ಲಿಬೀಡು ವೃತ್ತದ ರಸ್ತೆಯಾಗಿ ಸಾಗುತ್ತಿದ್ದರು. ಈ ವೇಳೆ ಅದೇ ಮಾರ್ಗದಲ್ಲಿ ಅತಿ ವೇಗವಾಗಿ ಎದುರಿನಿಂದ ಬಂದ ಮರಳು ತುಂಬಿದ ಟಿಪ್ಪರ್ ಲಾರಿಯೊಂದು ಬೈಕಿಗೆ ಢಿಕ್ಕಿ ಹೊಡೆದಿದೆ.
ಢಿಕ್ಕಿಯ ರಭಸಕ್ಕೆ ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಅರ್ಚನಾ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಅರ್ಚನಾರ ತಲೆಯ ಮೇಲೆಯೇ ಟಿಪ್ಪರ್ ಚಕ್ರ ಹರಿದ ಪರಿಣಾಮ ಅವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.