Shivamogga | ಮಾಜಿ ಶಾಸಕ ಹೆಚ್.ಎಂ.ಚಂದ್ರಶೇಖರಪ್ಪ ನಿಧನ

Update: 2026-07-26 21:56 IST

ಶಿವಮೊಗ್ಗ : ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಹೆಚ್.ಎಂ.ಚಂದ್ರಶೇಖರಪ್ಪ (78) ಅವರು ಅನಾರೋಗ್ಯದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ರವಿವಾರ(ಜು.26) ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕಳೆದ ಎರಡು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಶಿವಮೊಗ್ಗದಲ್ಲಿ ಹೆಚ್.ಎಂ.ಚಂದ್ರಶೇಖರಪ್ಪ ಅವರ ಪಾರ್ಥೀವ ಶರೀರದ ಸಾರ್ವಜನಿಕ ದರ್ಶನಕ್ಕೆ ಸಿದ್ಧತೆ ಮಾಡಲಾಗುತ್ತಿದೆ. ಜುಲೈ 27ರಂದು ಬೆಳಗ್ಗೆ 9:30ಕ್ಕೆ ಬಸವನಗುಡಿ ಮುಖ್ಯರಸ್ತೆಯಲ್ಲಿರುವ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ರಾಜಕೀಯ ಹಿನ್ನಲೆ:

1999ರಲ್ಲಿ ಶಿವಮೊಗ್ಗ ಕ್ಷೇತ್ರದಿಂದ ವಿಧಾನಸಭೆಗೆ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದರು.

ಚಂದ್ರಶೇಖರಪ್ಪ ಅವರ ತಂದೆ ಎಚ್.ಎಂ.ಮಲ್ಲಿಕಾರ್ಜುನಪ್ಪ ಕೂಡ ಶಾಸಕರಾಗಿದ್ದರು. ಶಿವಮೊಗ್ಗ ನಗರಸಭೆ ಸದಸ್ಯರಾಗಿ ರಾಜಕೀಯ ಬದುಕು ಆರಂಭಿಸಿದ್ದ ಎಚ್.ಎಂ.ಚಂದ್ರಶೇಖರಪ್ಪ, 1982ರಿಂದ 84ರವರೆಗೆ ಶಿವಮೊಗ್ಗ ನಗರಸಭೆ ಅಧ್ಯಕ್ಷರಾಗಿದ್ದರು. 10 ವರ್ಷಗಳ ಕಾಲ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಮಾಜಿ ಶಾಸಕರ ವೇದಿಕೆ ಅಧ್ಯಕ್ಷರಾಗಿ ಕ್ರಿಯಾಶೀಲರಾಗಿದ್ದ ಅವರು, ಶಿವಮೊಗ್ಗದಲ್ಲಿ ವೀರಶೈವ ಲಿಂಗಾಯತ ಸಮಾಜದ ಸಂಘಟನೆಯಲ್ಲಿ ತೊಡಗಿದ್ದರು.

ಚಂದ್ರಶೇಖರಪ್ಪ ಅವರಿಗೆ ಇಬ್ಬರು ಪುತ್ರರು ಇದ್ದಾರೆ. ಹಿರಿಯ ಪುತ್ರ ಎಚ್.ಸಿ.ಯೋಗೀಶ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ನಗರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಸೋಲನ್ನಪ್ಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News