×
Ad

ಬೇಸೂರು ಅಣು ವಿದ್ಯುತ್ ಸ್ಥಾವರ ಯೋಜನೆ ಸಂಪೂರ್ಣ ಸ್ಥಗಿತ : ಶಾಸಕ ಬೇಳೂರು ಗೋಪಾಲಕೃಷ್ಣ

"ರಾಜ್ಯ ಸರಕಾರ ಯೋಜನೆಗೆ ಅನುಮತಿ ನಿರಾಕರಿಸಿ ಕೇಂದ್ರಕ್ಕೆ ಪತ್ರ ಬರೆದಿದೆ"

Update: 2026-07-09 18:13 IST

ಶಿವಮೊಗ್ಗ : ಸಾಗರ ತಾಲೂಕಿನ ಬೇಸೂರು ಗ್ರಾಮದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದ್ದ ಅಣು ವಿದ್ಯುತ್ ಸ್ಥಾವರ ಯೋಜನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ರಾಜ್ಯ ಸರಕಾರ ಅಣುಸ್ಥಾವರ ಯೋಜನೆಗೆ ಅನುಮತಿ ನಿರಾಕರಿಸಿ ಕೇಂದ್ರಕ್ಕೆ ಪತ್ರ ಬರೆದಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಬೇಸೂರು ಗ್ರಾಮದಲ್ಲಿ ಅಣು ಸ್ಥಾವರ ಸ್ಥಾಪನೆ ಸಂಬಂಧ ಸಮೀಕ್ಷೆ ನಡೆಸಿತ್ತು. ಈ ಹಿನ್ನಲೆಯಲ್ಲಿ ಯೋಜನೆ ವಿರುದ್ದ ಜನಾಕ್ರೋಶ ವ್ಯಕ್ತವಾಗಿತ್ತು. ರೈತರು ನೆಲೆ ಕಳೆದುಕೊಳ್ಳುವ ಭೀತಿಯಿಂದ ತೀವ್ರ ಹೋರಾಟ ನಡೆಸಿದ್ದರು. ಹೋರಾಟದಲ್ಲಿ ತಾವು ಭಾಗವಹಿಸಿ ಜನರ ಪರವಾಗಿ ನಿಂತಿದ್ದೆ. ಯಾವುದೇ ಕಾರಣಕ್ಕೂ ಈ ಯೋಜನೆಗೆ ಸಹಮತವಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದೆ ಎಂದರು.

ಯಾವುದೇ ಕಾರಣಕ್ಕೂ ಮಲೆನಾಡಿಗೆ ಅಣು ಸ್ಥಾವರ ಯೋಜನೆ ಬೇಡ ಎಂದು ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ನಾನು ಸೇರಿದಂತೆ ಜನಪ್ರತಿನಿಧಿಗಳ ನಿಯೋಗ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಒತ್ತಡ ಹಾಕಿದ್ದೆವು. ಅಲ್ಲದೇ, ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಮನವಿ ಪತ್ರ ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದಿಸಿರುವ ಸರಕಾರ, ಕರ್ನಾಟಕದ ಯಾವುದೇ ಭಾಗದಲ್ಲೂ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಅವಕಾಶ ಇಲ್ಲ ಎಂದು ನಿರ್ಧರಿಸಿ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಹೀಗಾಗಿ ಬೇಸೂರು ಗ್ರಾಮದ ಜನರು ಯಾವುದೇ ಭಯ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕುರಿತ ಪ್ರಶ್ನೆಗೆ, ಈಗ ಹೊಸದಾಗಿ ಜಲಾಶಯ ಕಟ್ಟಲು ಆಗುವುದಿಲ್ಲ. ಆದರೆ ಪ್ರಸ್ತುತ ಲಭ್ಯವಿರುವ ನೀರಿನಲ್ಲೇ 2,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಅವಕಾಶ ಇರುವುದರಿಂದ ಈ ಯೋಜನೆ ಮುಂದುವರೆಯಲಿದೆ. ಪರಿಸರ ಹಾನಿ ತಪ್ಪಿಸಲು ಸಂರಕ್ಷಣೆಗೆ ಪರ್ಯಾಯ ಜಾಗ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಶ್ರೀಕಾಂತ್, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ರಮೇಶ್ ಶಂಕರಘಟ್ಟ, ಪ್ರಮುಖರಾದ ಶಿ.ಜು.ಪಾಶಾ, ಹುಲ್ತಿಕೊಪ್ಪ ಶ್ರೀಧರ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News