ಶಿವಮೊಗ್ಗ: ಯುವಕನ ಭೀಕರ ಹತ್ಯೆ
ಶಿವಮೊಗ್ಗ: ಯುವಕನೊಬ್ಬನನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗ ತಾಲೂಕಿನ ಸುತ್ತುಕೋಟೆ ಗ್ರಾಮದಲ್ಲಿ ನಡೆದಿದೆ.
ಪ್ರವೀಣ್ (29) ಕೊಲೆಯಾದ ಯುವಕ.ಈತ ಟ್ರಾಕ್ಟರ್ ಬಾಡಿಗೆ ಹಾಗೂ ಇತರ ಕೆಲಸಗಳನ್ನು ಮಾಡಿಕೊಂಡಿದ್ದ ಎನ್ನಲಾಗಿದೆ. ಎಂದಿನಂತೆ ಶುಕ್ರವಾರ ಬೆಳಿಗ್ಗೆ ಯುವಕರಿಗೆ ಕೆಲಸಕ್ಕೆ ಬರುವಂತೆ ತಿಳಿಸಿದ್ದ. ಆದರೆ, ಬೆಳಿಗ್ಗೆ ಕೆಲಸಕ್ಕೆ ಬಂದ ಯುವಕರು ಎಷ್ಟೇ ಬಾರಿ ಫೋನ್ ಮಾಡಿದರೂ ಪ್ರವೀಣ್ ಕರೆ ಸ್ವೀಕರಿಸಿರಲಿಲ್ಲ.ಇದರಿಂದ ಅನುಮಾನಗೊಂಡ ಯುವಕರು ನೇರವಾಗಿ ಸ್ಥಳಕ್ಕೆ ಬಂದು ನೋಡಿದಾಗ ಪ್ರವೀಣ್ ಅವರ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಮಚ್ಚಿನಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕಿಡಿಗೇಡಿಗಳು ಪ್ರವೀಣ್ ಅವರನ್ನು ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗದ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.