ಆಗುಂಬೆ ಘಾಟಿಯಲ್ಲಿ ಜೂ.15ರಿಂದ ಭಾರೀ ವಾಹನಗಳ ಸಂಚಾರ ನಿಷೇಧ
ಶಿವಮೊಗ್ಗ: ರಾಷ್ಟ್ರೀಯ ಹೆದ್ದಾರಿ169ಎ ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ (ಜಲ್ಲಿ ಮತ್ತು ಸರಕು ಸಾಗಾಣೆ ತುಂಬಿದ ವಾಹನಗಳ) ಸಂಚಾರವನ್ನು ಮಳೆಗಾಲ ಮುಗಿಯುವವರೆಗೂ ನಿಷೇಧಿಸಿ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ.
ಶಿವಮೊಗ್ಗದಿಂದ ಹೊಸನಗರ-ಮಾಸ್ತಿಕಟ್ಟೆ ಮಾರ್ಗವಾಗಿ ಕುಂದಾಪುರ ಮತ್ತು ಉಡುಪಿಗೆ ಸಂಪರ್ಕ ಕಲ್ಪಿಸುವ ಹುಲಿಕಲ್ ಘಾಟಿಯಲ್ಲಿ ಭೂಕುಸಿತ ಸಂಭವಿಸಿದ ನಂತರ ತಾತ್ಕಾಲಿಕ ರಕ್ಷಣಾತ್ಮಕ ಕಾಮಗಾರಿ ಪೂರ್ಣಗೊಳ್ಳದಿರುವುದರಿಂದ ರಾಷ್ಟ್ರೀಯ ಹೆದ್ದಾರಿ 169ಎ ತೀರ್ಥಹಳ್ಳಿ-ಮಲ್ಪೆ-ಉಡುಪಿ ರಸ್ತೆಯ ಆಗುಂಬೆ ಘಾಟಿಯಲ್ಲಿ ಭಾರೀ ವಾಹನಗಳ ಹೆಚ್ಚಿನ ಓಡಾಟವಿದ್ದು, ಮುಂದಿನ ದಿನಗಳಲ್ಲಿಯೂ ಇದು ಮುಂದುವರಿದಲ್ಲಿ ಅಲ್ಲಲ್ಲಿ ರಸ್ತೆಯ ಬದಿಯಲ್ಲಿ ಭೂಕುಸಿತ ಆಗುವ, ಅಪಘಾತವಾಗುವ ಮತ್ತು ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುವ ಸಂಭವ ಇರುತ್ತದೆ. ಹೀಗಾಗಿ ಜೂ.15ರಿಂದ ಮಳೆಗಾಲ ಮುಗಿಯುವವರೆಗೂ ನಿಷೇಧಿಸಿ ಆದೇಶಿಸಿದ್ದಾರೆ.
ಪರ್ಯಾಯ ಸಂಚಾರ ಮಾರ್ಗಗಳಾದ ತೀರ್ಥಹಳ್ಳಿ -ಉಡುಪಿ ಕಡೆಗೆ ಹೋಗುವ ವಾಹನಗಳು ತೀರ್ಥಹಳ್ಳಿ-ನಗರ-ನಾಗೋಡಿ-ಕೊಲ್ಲೂರು-ಕುಂದಾಪುರ-ಉಡುಪಿ ಮತ್ತು ತೀರ್ಥಹಳ್ಳಿ-ಶೃಂಗೇರಿ-ಕೆರೆಕಟ್ಟೆ-ಬಜಗೋಳಿ-ಕಾರ್ಕಳ-ಉಡುಪಿ ಮಾರ್ಗವಾಗಿ ಸಂಚರಿಸುವುದು.
ಉಡುಪಿ- ತೀರ್ಥಹಳ್ಳಿ ಕಡೆಗೆ ಹೋಗುವ ವಾಹನಗಳು ಉಡುಪಿ-ಕುಂದಾಪುರ-ಕೊಲ್ಲೂರು-ನಾಗೋಡಿ-ನಗರ-ತೀರ್ಥಹಳ್ಳಿ ಮತ್ತು ಕಾರ್ಕಳ-ಬಜಗೋಳಿ-ಕೆರೆಕಟ್ಟೆ-ಶೃಂಗೇರಿ- ತೀರ್ಥಹಳ್ಳಿ ಮಾರ್ಗವಾಗಿ ಸಂಚರಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.