Shivamogga | ಶೇಷಾದ್ರಿಪುರಂ ರೈಲ್ವೆ ಫ್ಲೈಓವರ್ ನಲ್ಲಿ ಸರಣಿ ಅಪಘಾತ: ಇಬ್ಬರಿಗೆ ಗಾಯ
ಶಿವಮೊಗ್ಗ: ಆಟೋ, ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ನಗರದ ಶೇಷಾದ್ರಿಪುರಂ ರೈಲ್ವೆ ಫ್ಲೈಓವರ್ ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಬೈಕ್ ಸವಾರ ನಈಮ್ (35) ಹಾಗೂ ಆಟೋ ಚಾಲಕ ಭಾಸ್ಕರ್ (40) ಗಾಯಗೊಂಡವರು ಎಂದು ತಿಳಿದುಬಂದಿದೆ.
ಅಪಘಾತದ ರಭಸಕ್ಕೆ ಆಟೋ ಚಾಲಕ ಭಾಸ್ಕರ್ ಫ್ಲೈಓವರ್ ಪಿಲ್ಲರ್ ಮೇಲಕ್ಕೆ ಎಸೆಯಲ್ಪಟ್ಟು ಸಿಲುಕಿಕೊಂಡಿದ್ದರೆ, ಬೈಕ್ ಸವಾರನ ಕಾಲಿಗೆ ಗಂಭೀರವಾಗಿ ಗಾಯವಾಗಿದೆ.
ಸಂಗೊಳ್ಳಿ ರಾಯಣ್ಣ ವೃತ್ತದಿಂದ ಹೊನ್ನಾಳಿ ರಸ್ತೆಯ ಮಾರ್ಗವಾಗಿ ರಾಗಿಗುಡ್ಡದ ಕಡೆಗೆ ವಾಹನಗಳು ಸಂಚರಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಫ್ಲೈಓವರ್ ಮೇಲೆ ಸಂಚರಿಸುತ್ತಿದ್ದ ಬೈಕ್ ಹಾಗೂ ಆಟೋವನ್ನು ಹಿಂದಿಕ್ಕಲು ಕಾರು ಮುಂದಾದ ಸಂದರ್ಭದಲ್ಲಿ ಸರಣಿ ಅಪಘಾತ ಸಂಭವಿಸಿದೆ ಎಂದು ತಿಳಿದಿದೆ.
ಅಪಘಾತದ ತೀವ್ರತೆಗೆ ಆಟೋ ಚಾಲಕ ಭಾಸ್ಕರ್ (40) ವಾಹನದಿಂದ ಎಸೆಯಲ್ಪಟ್ಟು ಫ್ಲೈಓವರ್ ನ ಪಿಲ್ಲರ್ ಮೇಲ್ಭಾಗದಲ್ಲಿ ಸಿಲುಕಿಕೊಂಡಿದ್ದರು.
ಬುಲೆಟ್ ಬೈಕ್ ಸವಾರ ನಹೀಮ್ (35) ಅವರ ಕಾಲಿಗೆ ಗಂಭೀರವಾಗಿ ಗಾಯವಾಗಿದೆ. ಇಬ್ಬರು ಗಾಯಾಳುಗಳನ್ನು ತಕ್ಷಣವೇ ಶಿವಮೊಗ್ಗದ ಮೆಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಇಬ್ಬರಿಗೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಪೂರ್ವ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.