ಶಿವಮೊಗ್ಗ: ನಗರಕ್ಕೆ ಇಂದು ಆಗಮಿಸಿದ ಕೇಂದ್ರ ಸಚಿವ ಸೋಮಣ್ಣ ಅವರಿಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ನಗರದ ಬಸ್ ನಿಲ್ದಾಣದ ಸಮೀಪದ ಅಶೋಕ್ ಸರ್ಕಲ್‌ನಲ್ಲಿ ಸಚಿವರ ಕಾರಿಗೆ ದಿಢೀರ್ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು, ವಾಹನವನ್ನು ತಡೆದು ಘೋಷಣೆಗಳನ್ನು ಕೂಗಿದರು. ಈ ವೇಳೆ ಸಚಿವರ ವಾಹನಗಳನ್ನು ಮುಂದಕ್ಕೆ ಕಳುಹಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಕೇಂದ್ರ ಸಚಿವ ಸೋಮಣ್ಣ ಅವರ ವಾಹನ ಅಶೋಕ್ ಸರ್ಕಲ್ ಸಮೀಪಿಸುತ್ತಿದ್ದಂತೆ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದರು. ಸಚಿವರ ಕಾರಿನತ್ತ ಧಾವಿಸಿದ ಕಾರ್ಯಕರ್ತರು ವಾಹನಕ್ಕೆ ಮುತ್ತಿಗೆ ಹಾಕಿ, ಕಪ್ಪು ಬಾವುಟ ಹಾಗೂ ಕಪ್ಪು ಪಟ್ಟಿ ಪ್ರದರ್ಶಿಸುವ ಮೂಲಕ ಎಸ್‌ಐಆರ್‌ ವಿರುದ್ಧ ತಮ್ಮ ವಿರೋಧ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರನ್ನು ಸ್ಥಳದಿಂದ ತೆರವುಗೊಳಿಸಿದ ಪೊಲೀಸರು :

ಕೇಂದ್ರ ಸಚಿವರ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರನ್ನು ಸ್ಥಳದಿಂದ ತೆರವುಗೊಳಿಸಲು ಪೊಲೀಸರು ಮುಂದಾದರು. ಸಚಿವರ ವಾಹನಗಳನ್ನು ಮುಂದಕ್ಕೆ ಸಾಗಿಸಲು ಪೊಲೀಸರು ಪ್ರಯತ್ನಿಸಿದರೂ, ಪ್ರತಿಭಟನಾಕಾರರು ರಸ್ತೆಯಲ್ಲೇ ಜಮಾಯಿಸಿದ್ದರಿಂದ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು. ಬಳಿಕ ಪೊಲೀಸರು ಪ್ರತಿಭಟನಾಕಾರರನ್ನು ಸ್ಥಳದಿಂದ ತೆರವುಗೊಳಿಸಿದರು.

ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅರ್ಶಿತ್, ನಗರಾಧ್ಯಕ್ಷ ಚರಣ್, ತಾಲೂಕು ಅಧ್ಯಕ್ಷ ಪ್ರವೀಣ್, ಆಕಾಶ್, ನಿಖಿಲ್ ವಿಷ್ಣು ಸೇರಿದಂತೆ ಹಲವು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor