Thirthahalli | ಸುರಳಿ ಬಾಳೇಬೈಲಿನಲ್ಲಿ 81 ಮತದಾರರ ಹೆಸರು ತೆಗೆಯಲು ಬಿಜೆಪಿ ಕಾರ್ಯಕರ್ತನಿಂದ ಮನವಿ
ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ಪಟ್ಟಣ ಸಮೀಪದ ಸುರಳಿ ಬಾಳೇಬೈಲು ಗ್ರಾಮದ 186 ಭಾಗದ ಮತದಾರರ ಕರಡು ಪಟ್ಟಿಯಲ್ಲಿ ಅನಿವಾಸಿಗಳನ್ನು ಸೇರಿಸಲಾಗಿದೆ. ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಬೇಕು ಎಂದು ಇಂದಿರಾ ನಗರದ ಬಿಜೆಪಿ ಕಾರ್ಯಕರ್ತ ಸತೀಶ್ ಎಂಬಾತ ತೀರ್ಥಹಳ್ಳಿಯ ಚುನಾವಣಾಧಿಕಾರಿಗೆ ಮನವಿ ಸಲ್ಲಿಸಿದ ಘಟನೆ ವರದಿಯಾಗಿದೆ.
ಸತೀಶ್ ಸಲ್ಲಿಸಿರುವ ಒಟ್ಟು 81 ಮತದಾರರ ಪಟ್ಟಿಯಲ್ಲಿ ಕೇವಲ 3 ಹಿಂದೂಗಳನ್ನು ಹೊರತುಪಡಿಸಿ ಉಳಿದವರೆಲ್ಲರೂ ಮುಸ್ಲಿಮ್ ಸಮುದಾಯಕ್ಕೆ ಸೇರಿರುವುದು ಇದರ ಹಿಂದೆ ದುರುದ್ದೇಶ ಇದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಲ್ಲಿರುವ ಹೆಸರಿನ ಸೇರ್ಪಡೆ ಅಥವಾ ಅಳಿಸುವಿಕೆಗೆ ಆಕ್ಷೇಪ ಸಲ್ಲಿಸಲು ಫಾರಂ-7 ಬಳಸಲಾಗುತ್ತದೆ. ಆದರೆ, ಸುರಳಿ ಬಾಳೇಬೈಲು ಘಟನೆ ಭಿನ್ನವಾಗಿದೆ.
ತೀರ್ಥಹಳ್ಳಿ ನಿವಾಸಿ ಫಾರೂಕ್ ಎಂಬವರು ನೀಡಿರುವ ಮಾಹಿತಿಯ ಪ್ರಕಾರ, ಪಟ್ಟಿಯಲ್ಲಿ ಹೆಸರುಗಳನ್ನು ಉಲ್ಲೇಖಿಸಿರುವ ಎಲ್ಲರೂ ಜೀವಂತವಾಗಿದ್ದಾರೆ ಮತ್ತು ಅದೇ ಪ್ರದೇಶದಲ್ಲೇ ವಾಸಿಸುತ್ತಿದ್ದಾರೆ. ಕೆಲವರು ಸಮೀಪದ ಗ್ರಾಮಗಳಿಗೆ ಸ್ಥಳಾಂತರಗೊಂಡು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದರೂ, ಅವರು ಪ್ರದೇಶದಿಂದ ಸಂಪೂರ್ಣವಾಗಿ ಹೊರ ಹೋಗಿಲ್ಲ ಎಂದು ತಿಳಿಸಿದ್ದಾರೆ.
ತಮ್ಮ ಹೆಸರುಗಳನ್ನು ಅಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂಬ ವಿಚಾರವೂ ಪಟ್ಟಿಯಲ್ಲಿರುವ ನಿವಾಸಿಗಳಿಗೆ ಆರಂಭದಲ್ಲಿ ತಿಳಿದಿರಲಿಲ್ಲ ಎನ್ನಲಾಗಿದೆ. ಗ್ರಾಪಂ ಸದಸ್ಯರೊಬ್ಬರಿಗೆ ಈ ವಿಚಾರ ತಿಳಿದು, ವಿಚಾರಣೆ ನಡೆಯುತ್ತಿರುವ ಬಗ್ಗೆ ನಿವಾಸಿಗಳಿಗೆ ಮಾಹಿತಿ ದೊರೆತ ಬಳಿಕವೇ ಅವರು ಈ ವಿಷಯವನ್ನು ಅರಿತುಕೊಂಡಿದ್ದಾರೆ ಎಂದು ಫಾರೂಕ್ ಮಾಹಿತಿ ನೀಡಿದ್ದಾರೆ.
ಪ್ರಕರಣ ಬೆಳಕಿಗೆ ಬಂದ ಬಳಿಕ ಸ್ಥಳೀಯ ಚುನಾವಣಾ ನೋಂದಣಿ ಅಧಿಕಾರಿ, ಪಟ್ಟಿಯಲ್ಲಿನ ಮತದಾರರಿಗೆ ಅನ್ಯಾಯವಾಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಪಟ್ಟಿಯಿಂದ ಯಾರ ಹೆಸರನ್ನೂ ಈವರೆಗೆ ಕೈಬಿಟ್ಟಿಲ್ಲ. ಅವರ ವಾಸದ ವರದಿ ಪಡೆಯಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಲಭಿಸಿದೆ.
ವಾಸ್ತವ ಪರಿಶೀಲಿಸಿ ಎಫ್‌ಐಆರ್ ದಾಖಲಿಸಿ :
ಅರ್ಹ ಮತದಾರರರನ್ನು ಉಲ್ಲೇಖಿಸಿ ‘ಮತದಾರರು ವಾಸವಿಲ್ಲ’ ಎಂದು ಪಟ್ಟಿ ನೀಡಿದ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿ ಎಂದು ಹೇಳಲಾಗಿರುವ ಈತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ತಪ್ಪು ಮಾಹಿತಿ ನೀಡಲು ಕಾರಣವೇನು. ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎನ್ನುವುದು ಆತನ ಮೇಲೆ ಎಫ್‌ಐಆರ್ ದಾಖಲಿಸಿ ತನಿಖೆ ಮೂಲಕ ತಿಳಿದುಕೊಳ್ಳಬೇಕೆಂದು ಸುರಳಿ ಬಾಳೇಬೈಲು ನಿವಾಸಿಗಳು ಆಗ್ರಹಿಸಿದ್ದಾರೆ.
ಸೂಕ್ತ ತನಿಖೆಗೆ ಡಿಸಿಗೆ ದೂರು: ಯೋಗೇಶ್
ಶಿವಮೊಗ್ಗ : ತೀರ್ಥಹಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರು 73 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡುವಂತೆ ಚುನಾವಣಾಧಿಕಾರಿ(ತಹಶೀಲ್ದಾರ್)ಗೆ ದೂರು ನೀಡಿದ್ದಾರೆ. ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಸಿ.ಯೋಗೇಶ್ ಹೇಳಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಎನ್ಯುಮರೇಷನ್ ಫಾರಂ ಪಡೆದಿರುವ 73 ಮತದಾರರ ಹೆಸರುಗಳನ್ನು ಫಾರಂ-7ರ ಮೂಲಕ ಕೈಬಿಡಲು ಮುಂದಾಗಿರುವ ಕುರಿತು ದೂರು ನೀಡಲಾಗಿದೆ. ಮತದಾರರ ಪಟ್ಟಿಯಿಂದ ಯಾರ ಹೆಸರನ್ನೂ ಅನ್ಯಾಯವಾಗಿ ಕೈಬಿಡಬಾರದು. ಈ ಪ್ರಕರಣದಲ್ಲಿ ಹೆಸರುಗಳನ್ನು ಕೈಬಿಡಲು ಕಾರಣವೇನು ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬೇಕು. ಅಧಿಕಾರಿಗಳಿಂದಾಗಲಿ ಅಥವಾ ಯಾವುದೇ ರಾಜಕೀಯ ಪಕ್ಷದವರಿಂದಾಗಲಿ ತಪ್ಪಾಗಿದ್ದರೆ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಅರ್ಹ ಮತದಾರರ ಮತದಾನದ ಹಕ್ಕು ಕಸಿಯುವ ಪ್ರಯತ್ನಕ್ಕೆ ಅವಕಾಶ ನೀಡಬಾರದು ಎಂದರು.