ಶಮಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳಿ ಆಯ್ಕೆ ಮಾಡದಿರಲು ಅವರ ವಯಸ್ಸೊಂದೇ ಕಾರಣವಲ್ಲ...: ಆಕಾಶ್ ಚೋಪ್ರಾ ಹೇಳಿದ್ದೇನು?
Photo : BCCI/X
ಹೊಸದಿಲ್ಲಿ: ವೇಗದ ಬೌಲರ್ ಮುಹಮ್ಮದ್ ಶಮಿ ದುಲೀಪ್ ಟ್ರೋಫಿ 2026ರ ಫೈನಲ್ ಪಂದ್ಯ ಆಡುವುದರೊಂದಿಗೆ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 100 ಪಂದ್ಯಗಳನ್ನು ಪೂರೈಸಿದರು. ಇದರ ಬೆನ್ನಿಗೇ, ಅವರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡದಿರುವ ಕುರಿತು ಚರ್ಚೆಗಳು ಮತ್ತೊಮ್ಮೆ ಮುನ್ನೆಲೆಗೆ ಬಂದಿವೆ.
ದೇಶೀಯ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಮುಹಮ್ಮದ್ ಶಮಿ, ವಿಕೆಟ್ ಗಳನ್ನೂ ಕೀಳುತ್ತಿದ್ದಾರೆ. ಹೀಗಿದ್ದೂ ಅವರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡದಿರಲು ಅವರ ವಯಸ್ಸು ಕಾರಣವಾಗಿರಬಹುದು ಎಂಬ ಚರ್ಚೆಗಳೂ ಭುಗಿಲೆದ್ದಿವೆ. ಆಸ್ಟ್ರೇಲಿಯಾ ತಂಡದ ಮಿಚಲ್ ಸ್ಟಾರ್ಕ್ ಗೂ ಸಾಕಷ್ಟು ವಯಸ್ಸಾಗಿದ್ದರೂ, ಅವರಿನ್ನೂ ಆಸ್ಟ್ರೇಲಿಯಾ ತಂಡದ ಪರವಾಗಿ ಆಡುತ್ತಿರುವಾಗ, ಮುಹಮ್ಮದ್ ಶಮಿಯನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡದಿರುವುದು ಸರಿಯಲ್ಲ ಎಂಬ ಮಾತುಗಳೂ ಕ್ರಿಕೆಟ್ ವಲಯದಲ್ಲಿ ಹರಿದಾಡುತ್ತಿವೆ.
ಆದರೆ, ಈ ಕುರಿತು ಪ್ರತಿಕ್ರಿಯಿಸಿರುವ ಭಾರತ ತಂಡದ ಮಾಜಿ ಬ್ಯಾಟರ್ ಆಕಾಶ್ ಚೋಪ್ರಾ, “ಮುಹಮ್ಮದ್ ಶಮಿಯನ್ನು ಭಾರತ ತಂಡದಿಂದ ಕೈಬಿಡಲು ಅವರ ವಯಸ್ಸೊಂದೇ ಕಾರಣವಲ್ಲ. ಬದಲಿಗೆ, ಅವರು ಪದೇ ಪದೇ ಗಾಯಗೊಳ್ಳುತ್ತಿರುವುದೂ ಕಾರಣ. ಹೀಗಾಗಿ ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ ಯುವ ಬೌಲರ್ ಗಳತ್ತ ಚಿತ್ತ ಹರಿಸಿರಬಹುದು” ಎಂದು CREX ಪೋಸ್ಟ್ ಮಾಡಿರುವ ವಿಡಿಯೊದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.
“ಆಸ್ಟ್ರೇಲಿಯಾ ತಂಡದ ಮಿಚೆಲ್ ಸ್ಟಾರ್ಕ್ ಗೆ ವಯಸ್ಸಾಗಿರಬಹುದು, ಆದರೆ, ಅವರು ತಂಡಕ್ಕೆ ಮರಳಿದಾಗಲೆಲ್ಲ ದಾಳಿಯ ನೇತೃತ್ವ ವಹಿಸುತ್ತಾರೆ ಹಾಗೂ ಅವರು ಈಗಲೂ ಉತ್ತಮ ಲಯದಲ್ಲಿದ್ದಾರೆ. ಆದರೆ, ಮುಹಮ್ಮದ್ ಶಮಿ ಪದೇ ಪದೇ ಗಾಯಾಳುವಾಗುತ್ತಿದ್ದಾರೆ. ಅವರು ದೇಶೀಯ ಕ್ರಿಕೆಟ್ ನಲ್ಲಿ ವಿಕೆಟ್ ಗಳನ್ನು ಪಡೆಯುತ್ತಿದ್ದರೂ, ಮೊದಲಿನ ಮೊನಚು ಕಳೆದುಕೊಂಡಿದ್ದಾರೆ” ಎಂದೂ ಆಕಾಶ್ ಚೋಪ್ರಾ ಹೇಳಿದ್ದಾರೆ.
“ಮುಹಮ್ಮದ್ ಶಮಿಯನ್ನು ವಯಸ್ಸಿನ ಕಾರಣಕ್ಕೆ ತಂಡದಿಂದ ಹೊರಗಿಡಲಾಗಿದೆ ಎಂಬ ವಾದ ಪೂರ್ವಗ್ರಹಪೀಡಿತವಾಗಿದೆ. ಇದರಲ್ಲಿ ಯಾವುದೇ ತರ್ಕವಿದೆ ಎಂದು ನನಗನ್ನಿಸುತ್ತಿಲ್ಲ. ಯಾಕೆಂದರೆ, ಅವರಿಗಿಂತ ಹೆಚ್ಚು ವಯಸ್ಸಾಗಿರುವ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ಈಗಲೂ ರಾಷ್ಟ್ರೀಯ ತಂಡದಲ್ಲಿ ಆಡುತ್ತಿದ್ದಾರೆ” ಎಂಬುದರತ್ತ ಅವರು ಬೊಟ್ಟು ಮಾಡಿದ್ದಾರೆ.
“ಮುಹಮ್ಮದ್ ಶಮಿಯನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡದಿರಲು ಅವರ ವಯಸ್ಸು ಕಾರಣ ಎಂದು ನನಗನ್ನಿಸುತ್ತಿಲ್ಲ. ಒಂದು ಹಂತದಲ್ಲಿ ಅದರ ಕಾರಣವನ್ನು ಆಯ್ಕೆದಾರರು ಬಹಿರಂಗಪಡಿಸಲಿದ್ದಾರೆ. ಆದರೆ, ಅದಕ್ಕೆ ಕಾರಣ ವಯಸ್ಸು ಎಂದು ನನಗನ್ನಿಸುತ್ತಿಲ್ಲ” ಎಂದು ಅವರು ತಮ್ಮ ಮಾತು ಮುಕ್ತಾಯಗೊಳಿಸಿದ್ದಾರೆ.