Photo Credit : x@gurnoorsbrar

ಉದಯೋನ್ಮುಖ ವೇಗದ ಬೌಲರ್ ಗುರ್ನೂರ್ ಬ್ರಾರ್ ಭಾರತದ ಪರವಾಗಿ ಆರು ಏಕದಿನ ಪಂದ್ಯಗಳನ್ನು ಆಡಿ 11 ವಿಕೆಟ್ ಗಳನ್ನು ಗಳಿಸಿದ್ದಾರೆ. ಆದರೆ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ ತಂಡದಲ್ಲಿದ್ದರೂ ಆಡುವ ಅವಕಾಶ ಪಡೆಯಲಿಲ್ಲ.

ಭಾರತದ ಮಾಜಿ ಬ್ಯಾಟರ್ ಆಕಾಶ್ ಚೋಪ್ರಾ ಅವರು ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ಗೆ ವೇಗದ ಬೌಲರ್ ಗುರ್ನೂರ್ ಬ್ರಾರ್ ಅವರನ್ನು ಸಿದ್ಧಪಡಿಸುವಂತೆ ಸಲಹೆ ನೀಡಿದ್ದಾರೆ. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಮಹತ್ವದ ಏಕದಿನ ವಿಶ್ವಕಪ್ 2027ರ ಅಕ್ಟೋಬರ್-ನವೆಂಬರ್ ನಲ್ಲಿ ನಡೆಯಲಿದೆ. ಕೆಲ ತಿಂಗಳ ಹಿಂದೆ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿರುವ ಗುರ್ನೂರ್ ಪಂಜಾಬ್ನ ಅತ್ಯಂತ ಭರವಸೆಯ ಬೌಲರ್ ಗಳಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದಾರೆ.

ಗುರ್ನೂರ್ 6 ಅಡಿ 5 ಇಂಚು ಎತ್ತರವಿದ್ದು, ಗಂಟೆಗೆ ಸುಮಾರು 145 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಬಲ್ಲರು. ಪಿಚ್ ನಿಂದ ಉತ್ತಮ ಬೌನ್ಸ್ ಕೂಡ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ.

ಗುರ್ನೂರ್ 2022ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರೂ, 2024-25ರ ಋತುವಿನಲ್ಲಿ ಅವರು ತಮ್ಮ ಸಂಪೂರ್ಣ ಸಾಮರ್ಥ್ಯ ಪ್ರದರ್ಶಿಸಿದ್ದರು. ಏಳು ಪಂದ್ಯಗಳಲ್ಲಿ 26 ವಿಕೆಟ್ಗಳನ್ನು ಕಬಳಿಸುವ ಮೂಲಕ ಗಮನಾರ್ಹ ಪ್ರದರ್ಶನ ನೀಡಿದರು. ಬಿಹಾರ ವಿರುದ್ಧದ ಪಂದ್ಯದಲ್ಲಿ 14 ರನ್ ಗಳನ್ನಷ್ಟೇ ನೀಡಿ 5 ವಿಕೆಟ್ ಗಳನ್ನು ಪಡೆದಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ.

ಭಾರತಕ್ಕಾಗಿ ಅವರು ಆರು ಏಕದಿನ ಪಂದ್ಯಗಳನ್ನು ಆಡಿ 11 ವಿಕೆಟ್ ಪಡೆದಿದ್ದಾರೆ. ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ವಿರುದ್ಧದ ಟೆಸ್ಟ್ ತಂಡಗಳ ಭಾಗವಾಗಿದ್ದರೂ, ಆಡುವ ಅವಕಾಶ ಪಡೆದಿರಲಿಲ್ಲ.

ಇತ್ತೀಚೆಗೆ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಅಭಿಮಾನಿಯೊಬ್ಬರಿಗೆ ಪ್ರತಿಕ್ರಿಯಿಸಿರುವ ಆಕಾಶ್ ಚೋಪ್ರಾ, “ಗುರ್ನೂರ್ ಅವರನ್ನು ಟೆಸ್ಟ್ ಕ್ರಿಕೆಟ್ ಗೆ ಸೀಮಿತಗೊಳಿಸಬೇಕೇ ಅಥವಾ ಎಲ್ಲ ಸ್ವರೂಪಗಳಲ್ಲೂ ತ್ವರಿತವಾಗಿ ಪರಿಗಣಿಸಬೇಕೇ” ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

“ಇದು ಒಳ್ಳೆಯ ಆಲೋಚನೆ. ಆದರೆ ಸರಿಯಾದ ಆಲೋಚನೆಯೇ ಎನ್ನುವ ಪ್ರಶ್ನೆ ಖಚಿತವಾಗಿ ಉದ್ಭವಿಸುತ್ತದೆ. ಏಕೆಂದರೆ ಟೆಸ್ಟ್ ಕ್ರಿಕೆಟ್ ಬಹಳ ವಿರಳವಾಗಿ ನಡೆಯುತ್ತದೆ. ಆಗಸ್ಟ್ ನಲ್ಲಿ ಒಂದು ಸರಣಿ ಮುಗಿದಿದೆ. ನಂತರ ನವೆಂಬರ್ನಲ್ಲಿ ಟೆಸ್ಟ್ ಸರಣಿಯನ್ನೂ ಕಾಣಬಹುದು. ಅದರ ನಂತರ ಜನವರಿ ಅಂತ್ಯದಲ್ಲಿ ಮುಂದಿನ ಸರಣಿಯನ್ನೂ ನೋಡಬಹುದು. ಹೀಗಾಗಿ ವಿರಳವಾಗಿ ನಡೆಯುವ ಒಂದು ಸ್ವರೂಪದಲ್ಲಿ ಮಾತ್ರ ಅವರನ್ನು ಆಡಿಸುತ್ತೀರಾ ಎನ್ನುವ ಪ್ರಶ್ನೆ ಬರುತ್ತದೆ.

ಏಕದಿನ ವಿಶ್ವಕಪ್ ಸಮೀಪದಲ್ಲಿದೆ. ಅದನ್ನೂ ಗಮನದಲ್ಲಿಡಬೇಕು. ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ನಲ್ಲಿ ನಮಗೆ ವೇಗ ಮತ್ತು ಬೌನ್ಸ್ ಅಗತ್ಯವಿರಬಹುದು. ಗುರ್ನೂರ್ ಬ್ರಾರ್ ತಮ್ಮ ವೃತ್ತಿಜೀವನ ಈಗಷ್ಟೇ ಆರಂಭಿಸಿದ್ದಾರೆ. ಹೀಗಾಗಿ ಸಾಕಷ್ಟು ಅವಕಾಶಗಳನ್ನು ನೀಡಬೇಕಾಗುತ್ತದೆ. ವಿಶ್ವಕಪ್ ಸಮೀಪಿಸುವಷ್ಟರಲ್ಲಿ ಆಟಗಾರ ಸಂಪೂರ್ಣ ಸಿದ್ಧರಾಗುತ್ತಾರೆಯೇ ಎಂದು ಖಚಿತಪಡಿಸಲು ಸಣ್ಣ-ಪುಟ್ಟ ಪರೀಕ್ಷೆಗಳನ್ನು ನಿರಂತರವಾಗಿ ನಡೆಸಬೇಕಾಗುತ್ತದೆ.

ಹೀಗಾಗಿ ಅವರು ವಿವಿಧ ಪರಿಸ್ಥಿತಿ ಮತ್ತು ಸನ್ನಿವೇಶಗಳಲ್ಲಿ ಏಕದಿನ ಮತ್ತು ಟಿ20 ಆಡಬೇಕು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor