×
Ad

FIFA 2026 | ರಾಜಕೀಯ ಬ್ಯಾನರ್ ಹಿಡಿದ ವಿವಾದ: ಅರ್ಜೆಂಟೀನಾ ತಂಡವನ್ನು ಫೈನಲ್ ನಿಂದ ನಿಷೇಧಿಸಬಹುದೆ?; ನಿಯಮ ಏನು ಹೇಳುತ್ತೆ?

ಏನಿದು ಅರ್ಜೆಂಟೀನಾ-ಇಂಗ್ಲೆಂಡ್ ನಡುವಿನ ಫಾಕ್ಲ್ಯಾಂಡ್ ವಿವಾದ?

Update: 2026-07-16 14:23 IST

Photo credit: X/@VickyVillarruel

ಮೈದಾನದಲ್ಲಿ ಬ್ಯಾನರ್ ಹಿಡಿದ ಘಟನೆಯು ಅರ್ಜೆಂಟೀನಾ ಮತ್ತು ಇಂಗ್ಲೆಂಡ್ ನಡುವಿನ ಫುಟ್ಬಾಲ್ ನ ಅತಿ ಹಳೆಯ ರಾಜಕೀಯ ಗಾಯವನ್ನು ಮತ್ತೆ ಕೆದಕಿದಂತಾಗಿದೆ.


ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ 2-1 ಗೋಲುಗಳಿಂದ ಜಯಗಳಿಸಿದ ಸಂದರ್ಭದಲ್ಲಿ ಫಾಕ್ಲ್ಯಾಂಡ್ಸ್ ಥೀಮ್ ಇರುವ ಬ್ಯಾನರ್ ಮೈದಾನದಲ್ಲಿ ಹಿಡಿದ ಅರ್ಜೆಂಟೀನಾ ಆಟಗಾರರು ಫಿಫಾ ತಂಡದ ಸಂಭಾವ್ಯ ಕ್ರಮವನ್ನು ಎದುರಿಸುವ ಸಾಧ್ಯತೆಯಿದೆ. ಸತತ ಎರಡನೇ ಬಾರಿ ಫೈನಲ್ ತಲುಪಿದ ಹಾಲಿ ಚಾಂಪಿಯನ್ ತಂಡವು ಪ್ರಶಸ್ತಿಗಾಗಿ ಸ್ಪೇನ್ ವಿರುದ್ಧ ಆಡಲಿದೆ. ಆದರೆ ಮೈದಾನದಲ್ಲಿ ಬ್ಯಾನರ್ ಹಿಡಿದ ಘಟನೆಯು ಫುಟ್ಬಾಲ್ ನ ಅತಿ ಹಳೆಯ ರಾಜಕೀಯ ಗಾಯವನ್ನು ಮತ್ತೆ ಕೆದಕಿದಂತಾಗಿದೆ.

ಅರ್ಜೆಂಟೀನಾ ಮತ್ತು ಇಂಗ್ಲೆಂಡ್ ಪಂದ್ಯವು ಈ ಹಂತದಲ್ಲಿ ಹೆಚ್ಚು ಮಸಾಲೆಭರಿತವಾಗಿರಲು ಸಾಧ್ಯವಿಲ್ಲ ಎಂದು ಫುಟ್ಬಾಲ್ ಜಗತ್ತು ಭಾವಿಸುತ್ತಿದ್ದಾಗಲೇ ಬುಧವಾರ ರಾತ್ರಿ ಅಟ್ಲಾಂಟದಲ್ಲಿ ನಡೆದ ಸೆಮಿಫೈನಲ್ ನಂತರದ ಹೊಸ ವಿವಾದ ಹುಟ್ಟಿಕೊಂಡಿದೆ. ಆಟದ ಮುಕ್ಕಾಲು ಭಾಗದಲ್ಲಿ ಅರ್ಜೆಂಟೀನಾ ಹಿಂದೆ ಬಿದ್ದಿತ್ತು. ಆಂಥೋನಿ ಗಾರ್ಡನ್ ದ್ವಿತೀಯಾರ್ಧದಲ್ಲಿ ಗೋಲು ಭಾರಿಸಿ ಇಂಗ್ಲೆಂಡ್ ಅನ್ನು ಮುನ್ನಡೆಸಿದರು. ಆದರೆ ಎಂಜೋ ಫೆರ್ನಾಂಡಿಸ್ ಪಂದ್ಯವನ್ನು ಸಮಬಲಗೊಳಿಸಿದರು. ನಂತರ ಮೆಸ್ಸಿಯ ಅಸಿಸ್ಟ್ ನ ನೆರವಿನಿಂದ ಲಾಟರೊ ಮಾರ್ಟಿನೆಜ್ ಗೋಲು ಭಾರಿಸಿದರು. ಹೀಗೆ ಇಂಗ್ಲೆಂಡ್ ವಿಶ್ವಕಪ್ ಪಂದ್ಯಾವಳಿಯಿಂದ ಹೊರಬಿತ್ತು.

ಅರ್ಜೆಂಟೀನಾ ಬ್ಯಾನರ್ ಏಕೆ ಮಹತ್ವ ಪಡೆದಿದೆ?

ಅರ್ಜೆಂಟೀನಾ ಮತ್ತು ಇಂಗ್ಲೆಂಡ್ ನಡುವಿನ ಇತಿಹಾಸ ತಿಳಿದಿರದೆ ಇರುವವರಿಗೆ “ಲಾಸ್ ಮಾಲ್ವನಿಸ್” ಎಂದು ಅರ್ಜೆಂಟೀನಾ ಕರೆಯುವ ಫಾಕ್ಲ್ಯಾಂಡ್ ದ್ವೀಪಗಳು ಬ್ರಿಟಿಷರ ವಿದೇಶಿ ಪ್ರದೇಶವಾಗಿದೆ. ಈ ಸ್ಥಳ ಅರ್ಜೆಂಟೀನಾ ಕರಾವಳಿಯಿಂದ 300 ಮೈಲುಗಳಷ್ಟು ದೂರದಲ್ಲಿದೆ. ಬ್ರಿಟನ್ನಿಂದ ಸಾವಿರ ಮೈಲುಗಳಷ್ಟು ದೂರದಲ್ಲಿದೆ. 19ನೇ ಶತಮಾನದಿಂದಲೇ ಅರ್ಜೆಂಟೀನಾ ಈ ದ್ವೀಪಗಳ ಮೇಲೆ ತಮ್ಮ ಸಾರ್ವಭೌಮತ್ವವನ್ನು ಘೋಷಿಸುತ್ತಾ ಬಂದಿದೆ. 1982ರಲ್ಲಿ ಅರ್ಜೆಂಟೀನಾದ ಸೇನೆ ಈ ದ್ವೀಪದ ಮೇಲೆ ಆಕ್ರಮಣ ಮಾಡಿ 74 ದಿನಗಳ ಯುದ್ಧಕ್ಕೆ ಕಾರಣವಾಗಿತ್ತು. ಸಂಘರ್ಷದಲ್ಲಿ 900 ಮಂದಿ ಪ್ರಾಣತೆತ್ತಿದ್ದಾರೆ. 255 ಮಂದಿ ಬ್ರಿಟಿಷ್ ಸೇನಾನಿಗಳು ಮತ್ತು 650 ಅರ್ಜೆಂಟೀನಾ ಸೇನೆಯ ಸಿಬ್ಬಂದಿ ಪ್ರಾಣತೆತ್ತ ನಂತರ ಬ್ರಿಟನ್ ಪ್ರದೇಶದ ಮೇಲೆ ನಿಯಂತ್ರಣ ಸಾಧಿಸಿದೆ.

ಈ ಹೋರಾಟದ ಗಾಯ ಎಂದಿಗೂ ಸಂಪೂರ್ಣವಾಗಿ ಮಾಯವಾಗಿರಲಿಲ್ಲ. ಎರಡೂ ರಾಷ್ಟ್ರಗಳು ಫುಟ್ಬಾಲ್ ಮೈದಾನದಲ್ಲಿ ಭೇಟಿಯಾದಾಗಲೆಲ್ಲ ಗಾಯವನ್ನು ಕೆದಕಲಾಗುತ್ತದೆ. 1989ರಲ್ಲಿ ಡಿಗೋ ಮರಡೋನಾ ಅವರ ‘ಹ್ಯಾಂಡ್ ಆಫ್ ಗಾಡ್’ (ಕೈಯಿಂದ ಬಾರಿಸಿದ ಗೋಲು) ಗೋಲಿನ ನೆನಪುಗಳು ಸಹ ಗಾಯಕ್ಕೆ ಬರೆ ಎಳೆದಿವೆ. ಪಂದ್ಯಕ್ಕೆ ಮೊದಲು ಅರ್ಜೆಂಟೀನಾದ ಉಪಾಧ್ಯಕ್ಷರು ಇಂಗ್ಲೆಂಡ್ ವಿರುದ್ಧ ಕಿಡಿಕಾರುವ ಮಾತುಗಳನ್ನು ಆಡಿ ಉದ್ವಿಗ್ನತೆ ಸೃಷ್ಟಿಸಿದ್ದರು.

ಅರ್ಜೆಂಟೀನಾ- ಫಾಕ್ಲ್ಯಾಂಡ್ ವಿವಾದದ ಕುರಿತ ನಿಯಮಗಳೇನು?

ಅರ್ಜೆಂಟೀನಾಗೆ ಶಿಕ್ಷೆಯಾಗುವ ಸಾಧ್ಯತೆ ಇರುವ ನಿಯಮಗಳು ಫಿಪಾ ನಿಯಮ ಪುಸ್ತಕದಲ್ಲಿರುವುದೇ ದೊಡ್ಡ ಸಮಸ್ಯೆಯಾಗಿದೆ. ಫಿಫಾ ಮತ್ತು ಆಟದ ನಿಯಮಗಳನ್ನು ರೂಪಿಸುವ ಅಂತರರಾಷ್ಟ್ರೀಯ ಫುಟ್ಬಾಲ್ ಅಸೋಸಿಯೇಶನ್ ಮಂಡಳಿ (IFAB) ಎರಡೂ ಈ ವಿಷಯದಲ್ಲಿ ಸಂದೇಹವೇ ಹೊಂದಿಲ್ಲ. ಅವರ ಸ್ಟೇಡಿಯಂ ನೀತಿ ಸಂಹಿತೆಯು ಬ್ಯಾನರ್ಗಳು, ಧ್ವಜಗಳು ಅಥವಾ ಸ್ಥಳಗಳ ಒಳಗೆ ರಾಜಕೀಯ, ಅವಹೇಳನಕಾರಿ ಅಥವಾ ತಾರತಮ್ಯದ ಸಂದೇಶಗಳನ್ನು ಹೊಂದಿರುವ ಯಾವುದೇ ಸಾಮಗ್ರಿಗಳನ್ನು ಸ್ಪಷ್ಟವಾಗಿ ನಿಷೇಧಿಸುತ್ತದೆ.

IFAB ನಿಯಮಗಳಲ್ಲಿ ಸ್ಪಷ್ಟವಾಗಿ ಹೇಳಿರುವ ಪ್ರಕಾರ ತಂಡದ ಉಪಕರಣಗಳಲ್ಲಿ ರಾಜಕೀಯ, ಧಾರ್ಮಿಕ ಅಥವಾ ವೈಯಕ್ತಿಕ ಹೇಳಿಕೆಗಳನ್ನು ಹೊಂದಲು ಸಾಧ್ಯವಿಲ್ಲ. ಈ ನಿಯಮಗಳ ಯಾವುದೇ ಉಲ್ಲಂಘನೆಗಾಗಿ ಆಟಗಾರ ಅಥವಾ ತಂಡದ ಮೇಲೆ ಫಿಫಾ, ಸಂಘಟಕರು, ಸಂಬಂಧಿತ ಫೂಟ್ಬಾಲ್ ಸಂಘವು ಶಿಕ್ಷೆ ವಿಧಿಸಬಹುದು. ಸ್ಪಷ್ಟವಾಗಿ ಹೇಳುವುದಾದರೆ ಪಂದ್ಯದ ಅಧಿಕಾರಿಗಳು ಅಥವಾ ಫಿಫಾದ ಶಿಸ್ತು ಮಂಡಳಿಯು ಬ್ಯಾನರ್ ಅನ್ನು ರಾಜಕೀಯ ಹೇಳಿಕೆ ಎಂದು ಪರಿಗಣಿಸಿದರೆ ಕೆಲವು ರೀತಿಯ ಶಿಕ್ಷೆಗಳನ್ನು ವಿಧಿಸಬಹುದು.


ಇದಕ್ಕೆ ಮೊದಲು ಹೀಗೆ ಸಂಭವಿಸಿದೆಯೆ?

ಈ ಬ್ಯಾನರ್ ಅರ್ಜೆಂಟೀನಾವನ್ನು ವಿವಾದದಲ್ಲಿ ಸಿಲುಕಿಸಿರುವುದು ಇದೇ ಮೊದಲಲ್ಲ. 2014ರಲ್ಲಿ ಸ್ಲೊವೇನಿಯ ವಿರುದ್ಧದ ಸ್ನೇಹಪರ ಪಂದ್ಯಕ್ಕೂ ಮೊದಲು ಆಟಗಾರರು "Las Malvinas son Argentinas" ಎನ್ನುವ ಇದೇ ರೀತಿಯ ಬ್ಯಾನರ್ ಹಿಡಿದಿದ್ದಕ್ಕಾಗಿ ಫಿಫಾ ಅರ್ಜೆಂಟೀನಾದ ಫುಟ್ಬಾಲ್ ಸಂಘಟನೆಗೆ 20,000 ಪೌಂಡ್ ದಂಡ ವಿಧಿಸಿತ್ತು. ಅಂದಿನಿಂದ ಪ್ರಮುಖ ಪಂದ್ಯಾವಳಿಗಳಲ್ಲಿ ಫಿಫಾ ಸಾಮಾನ್ಯವಾಗಿ ಇದೇ ರೀತಿಯ ರಾಜಕೀಯ ಚಿಹ್ನೆ ಉಲ್ಲಂಘನೆಗಳನ್ನು ಹೇಗೆ ನಿರ್ವಹಿಸಿದೆ ಎಂಬುದರ ಆಧಾರದ ಮೇಲೆ ಈ ಬಾರಿಯ ಶಿಕ್ಷೆಯು ಹಣಕಾಸಿನ ಶಿಕ್ಷೆಯಾಗಿರಬಹುದು. ಅರ್ಜೆಂಟೀನಾ ಪಂದ್ಯಾವಳಿಯಲ್ಲಿ ಭಾಗವಹಿಸುವ ಕುರಿತ ಶಿಕ್ಷೆಗಳನ್ನು ವಿಧಿಸುವ ಸಾಧ್ಯತೆ ಕಡಿಮೆ ಇರಬಹುದು.

ಅರ್ಜೆಂಟೀನಾವನ್ನು ಫೈನಲ್ ನಿಂದ ನಿಷೇಧಿಸಬಹುದೆ?

ಇಲ್ಲ. ಈವರೆಗೆ ಯಾವುದೇ ವರದಿ ಆ ಬಗ್ಗೆ ಬಂದಿಲ್ಲ. ಅರ್ಜೆಂಟೀನಾದ ವರ್ತನೆ ಬಗ್ಗೆ ಮುಖ್ಯವಾಗಿ ಚರ್ಚೆಯಾಗುತ್ತಿದ್ದರೂ ಫಿಫಾ ಅರ್ಜೆಂಟೀನಾವನ್ನು ಸೋಮವಾರದ ಫೈನಲ್ ನಿಂದ ಹೊರಗಿಡುವ ಬಗ್ಗೆ ಯಾವುದೇ ಸುದ್ದಿಗಳು ಬಂದಿಲ್ಲ. ಸ್ಪೇನ್ ವಿರುದ್ಧ ಅರ್ಜೆಂಟೀನಾ ಆಡುವುದು ಬಹುಶಃ ಖಚಿತವಾಗಿದೆ. ಅರ್ಜೆಂಟೀನಾಗೆ ಎಚ್ಚರಿಕೆ ನೀಡುವ ಸಾಧ್ಯತೆಯಿದೆ.

ಈ ಬಗ್ಗೆ ಫಿಫಾ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ಔಪಚಾರಿಕ ಶಿಸ್ತಿನ ನಿರ್ಧಾರ ಘೋಷಿಸುವವರೆಗೂ ವಿಷಯ ಇತ್ಯರ್ಥವಾಗದೆ ಇರಬಹುದು.


ವಾಸ್ತವದಲ್ಲಿ ನಡೆದಿದ್ದೇನು?

ಆಟಗಾರರು ಮೈದಾನದಲ್ಲಿ ಸಂಭ್ರಮಾಚರಣೆಯ ಸಂದರ್ಭದಲ್ಲಿ "Las Malvinas son Argentinas" (ಫಾಕ್ಲ್ಯಾಂಡ್ ನಿವಾಸಿಗರು ಅರ್ಜೆಂಟೀನಾದವರು) ಎನ್ನುವ ಬ್ಯಾನರ್ ಅನ್ನು ಹಿಡಿದಿದ್ದರು. ಮೂಲತಃ ಈ ಬ್ಯಾನರ್ ಸ್ಟ್ಯಾಂಡ್ನಿಂದ ಬಂದಿತ್ತು ಮತ್ತು ಆಟಗಾರರು ಹಿಡಿದಿದ್ದಾರೆ ಎಂದೂ ವರದಿಯಾಗಿದೆ.

ಇತಿಹಾಸವನ್ನು ಗಮನಿಸಿದರೆ ಫಾಕ್ಲ್ಯಾಂಡ್ ಗೆ ಸಂಬಂಧಿಸಿದ ಧ್ವಜಗಳನ್ನು ಪಂದ್ಯದ ಮೊದಲು ಕ್ರೀಡಾಂಗಣಕ್ಕೆ ತರುವುದನ್ನು ಫಿಫಾ ನಿರ್ದಿಷ್ಟವಾಗಿ ನಿರ್ಬಂಧಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News