ಆಸ್ಟ್ರೇಲಿಯ-ಬಾಂಗ್ಲಾದೇಶ ದ್ವಿತೀಯ ಟೆಸ್ಟ್: ಒಂದೇ ದಿನ 18 ವಿಕೆಟ್‌ಗಳ ಪತನ

Update: 2026-08-22 20:34 IST

 ಮಿಚೆಲ್ ಸ್ಟಾರ್ಕ್ | Photo Credit : PTI

ಮಕಾಯ್: ಬಾಂಗ್ಲಾದೇಶ ತಂಡದ ವಿರುದ್ಧ ಶನಿವಾರ ಆರಂಭವಾದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಮೊದಲ ಎಸೆತದಲ್ಲೇ ವಿಕೆಟ್ ಉರುಳಿಸಿದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಆಸ್ಟ್ರೇಲಿಯ ತಂಡಕ್ಕೆ ಅತ್ಯುತ್ತಮ ಆರಂಭ ಒದಗಿಸಿದರು. ಅಂತಿಮವಾಗಿ ಆರು ವಿಕೆಟ್‌ಗಳನ್ನು ಪಡೆದ ಸ್ಟಾರ್ಕ್ ಬಾಂಗ್ಲಾದೇಶವನ್ನು ಮೊದಲ ಇನಿಂಗ್ಸ್‌ನಲ್ಲಿ ಕೇವಲ 64 ರನ್‌ಗೆ ಆಲೌಟ್ ಮಾಡಿದರು.

ಬಾಂಗ್ಲಾದೇಶದ ಶರೀಫುಲ್ ಇಸ್ಲಾಮ್(6-35) ಕೂಡ ಆರು ವಿಕೆಟ್‌ಗಳನ್ನು ಪಡೆದು ಸ್ಟಾರ್ಕ್ ಸಾಧನೆಯನ್ನು ಸರಿಗಟ್ಟಿದ್ದು, ಮೊದಲ ದಿನವಾದ ಶನಿವಾರ ಒಂದೇ ದಿನ ಒಟ್ಟು 18 ವಿಕೆಟ್‌ಗಳು ಪತನಗೊಂಡಿವೆ.

ದಿನದಾಟದಂತ್ಯಕ್ಕೆ ಆಸ್ಟ್ರೇಲಿಯ ತಂಡವು 8 ವಿಕೆಟ್‌ಗಳ ನಷ್ಟಕ್ಕೆ 165 ರನ್ ಗಳಿಸಿದ್ದು, 101 ರನ್ ಮುನ್ನಡೆಯಲ್ಲಿದೆ. ಕ್ಯಾಮರೂನ್ ಗ್ರೀನ್ ಔಟಾಗದೆ 51 ಹಾಗೂ ನಾಥನ್ ಲಿಯೊನ್ ಔಟಾಗದೆ 10 ರನ್ ಗಳಿಸಿದ್ದಾರೆ.

ಟಾಸ್ ಜಯಿಸಿದ ಅಸ್ಟ್ರೇಲಿಯ ತಂಡವು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ನಾಯಕ ಪ್ಯಾಟ್ ಕಮಿನ್ಸ್ ನಿರ್ಧಾರವನ್ನು ಸಮರ್ಥಿಸಿದ ಸ್ಟಾರ್ಕ್ ತಾನೆಸೆದ ಮೊದಲ ಎಸೆತದಲ್ಲೇ ಶಾದ್‌ಮನ್ ಇಸ್ಲಾಮ್ ವಿಕೆಟನ್ನು ಪಡೆದರು.

ಸ್ಟಾರ್ಕ್ ಆ ನಂತರ ತಂಝೀದ್ ಹಸನ್, ಬಾಂಗ್ಲಾದೇಶದ ನಾಯಕ ನಜ್ಮುಲ್ ಹುಸೇನ್ ವಿಕೆಟ್‌ಗಳನ್ನು ಉರುಳಿಸಿದರು. ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಜಯಿಸಿ ಅಚ್ಚರಿಗೊಳಿಸಿದ್ದ ಬಾಂಗ್ಲಾದೇಶ ಏಕಾಏಕಿ ಸಮಸ್ಯೆಗೆ ಸಿಲುಕಿತು.

ಮೂಮಿನುಲ್ ಹಕ್(9 ರನ್)ರನ್ನು ಪೆವಿಲಿಯನ್‌ಗೆ ಕಳುಹಿಸಿದ ಸ್ಟಾರ್ಕ್ ತನ್ನ ನಾಲ್ಕನೇ ವಿಕೆಟನ್ನು ಪಡೆದರು. ಲಿಟನ್ ದಾಸ್‌ರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿದ ಸ್ಟಾರ್ಕ್ ಐದು ವಿಕೆಟ್ ಗೊಂಚಲು ಪೂರೈಸಿದರು. ಭೋಜನ ವಿರಾಮದ ನಂತರ ತನ್ನ ಆರನೇ ವಿಕೆಟನ್ನು ಪಡೆದರು. ಸ್ಟಾರ್ಕ್ 10 ಓವರ್‌ಗಳಲ್ಲಿ 12 ರನ್‌ಗೆ ಆರು ವಿಕೆಟ್‌ಗಳನ್ನು ಪಡೆದರು. ನಾಯಕ ಕಮಿನ್ಸ್ 25 ರನ್ ನೀಡಿ ಮೂರು ವಿಕೆಟ್‌ಗಳನ್ನು ಪಡೆದರು.

ಭೋಜನ ವಿರಾಮದ ನಂತರ ಬಾಂಗ್ಲಾದೇಶ ತಂಡವು ಕೇವಲ 64 ರನ್‌ಗೆ ಆಲೌಟಾಯಿತು. ಆಸ್ಟ್ರೇಲಿಯದಲ್ಲಿ ಮೊದಲ ಬ್ಯಾಟಿಂಗ್‌ನ ವೇಳೆ ಬಾಂಗ್ಲಾ ಗಳಿಸಿದ ಕನಿಷ್ಠ ಮೊತ್ತ ಇದಾಗಿದೆ. ದಕ್ಷಿಣ ಆಫ್ರಿಕಾ ತಂಡವು 1932ರಲ್ಲಿ ಕೇವಲ 36 ರನ್ ಗಳಿಸಿ ಸರ್ವಪತನಗೊಂಡಿತ್ತು.

11ನೇ ಕ್ರಮಾಂಕದ ಆಟಗಾರ ಶರೀಫುಲ್ ಇಸ್ಲಾಮ್ ಬಾಂಗ್ಲಾದೇಶದ ಪರ ಗರಿಷ್ಠ ಸ್ಕೋರ್(14 ರನ್)ಗಳಿಸಿದರು.

ಬೆಳಗ್ಗಿನ ಅವಧಿಯ ನಂತರವೂ ಪಿಚ್ ಬ್ಯಾಟಿಂಗ್‌ಗೆ ಕಷ್ಟಕರವಾಗಿದ್ದು, ಆಸ್ಟ್ರೇಲಿಯ ತಂಡದ ಬ್ಯಾಟರ್‌ಗಳು ಮುಕ್ತವಾಗಿ ಬ್ಯಾಟ್ ಬೀಸುವಲ್ಲಿ ವಿಫಲರಾದರು.

ಬಾಂಗ್ಲಾದೇಶ ಅಲ್ಪ ಮೊತ್ತಕ್ಕೆ ಔಟಾದ ನಂತರ ಆಸ್ಟ್ರೇಲಿಯವು ಟೆಸ್ಟ್‌ಪಂದ್ಯದ ಮೇಲೆ ಹಿಡಿತ ಸಾಧಿಸುವತ್ತ ಚಿತ್ತ ಹರಿಸಿತ್ತು. ಆದರೆ ಶರೀಫುಲ್ ಇಸ್ಲಾಮ್ ಬೇರೆಯೇ ಯೋಜನೆ ಹಾಕಿಕೊಂಡಿದ್ದರು. ಎಡಗೈ ವೇಗದ ಬೌಲರ್ ಶರೀಫುಲ್ 35 ರನ್‌ಗೆ ಆರು ವಿಕೆಟ್‌ಗಳನ್ನು ಪಡೆದು ಬಾಂಗ್ಲಾದೇಶ ತಂಡ ಮರು ಹೋರಾಡುವಲ್ಲಿ ನೆರವಾದರು.

ಮೊದಲ ದಿನದಾಟದಂತ್ಯಕ್ಕೆ ಆಸ್ಟ್ರೇಲಿಯ ತಂಡವು 165 ರನ್‌ಗೆ ಎಂಟು ವಿಕೆಟ್‌ಗಳನ್ನು ಕಳೆದುಕೊಂಡಿದೆ. ಗ್ರೀನ್ ಅರ್ಧಶತಕ ಗಳಿಸಿ ಕ್ರೀಸ್‌ನಲ್ಲಿದ್ದು, ಆಸ್ಟ್ರೇಲಿಯವು 101 ರನ್ ಮುನ್ನಡೆಯಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News