ಲೌಸಾನ್ ಡೈಮಂಡ್ ಲೀಗ್ | ನೀರಜ್ ಚೋಪ್ರಾಗೆ ಎರಡನೇ ಸ್ಥಾನ
ನೀರಜ್ ಚೋಪ್ರಾ | Photo Credit : PTI
ಲೌಸಾನ್: ಭಾರತೀಯ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಲೌಸಾನ್ ಡೈಮಂಡ್ ಲೀಗ್‌ನಲ್ಲಿ ಶುಕ್ರವಾರ ವರ್ಷದ ಶ್ರೇಷ್ಠ ಪ್ರದರ್ಶನ(88.05 ಮೀ.) ನೀಡಿದರೂ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು. ಶ್ರೀಲಂಕಾದ ರಮೇಶ್ ಪಥಿರಗೆ ಮೊದಲ ಸ್ಥಾನ ಪಡೆದು ಚಿನ್ನದ ಪದಕಕ್ಕೆ ಮುತ್ತಿಟ್ಟರು.
ರಮೇಶ್ ಪಥಿರಗೆ 88.14 ಮೀ.ದೂರಕ್ಕೆ ಜಾವೆಲಿನ್ ಎಸೆದು ಮೊದಲ ಸ್ಥಾನ ಪಡೆದರು. ನೀರಜ್(88.05 ಮೀ.) ಹಾಗೂ ಗ್ರೆನಡಾದ ಆ್ಯಂಡರ್ಸನ್ ಪೀಟರ್ಸ್(86.69 ಮೀ.)ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಪಡೆದರು.
ಇತ್ತೀಚೆಗೆ 2026ರ ಆವೃತ್ತಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿರುವ ನೀರಜ್ ತನ್ನ ಮೊದಲ ಪ್ರಯತ್ನದಲ್ಲಿ 83.54ಮೀ.ದೂರಕ್ಕೆ ಜಾವೆಲಿನ್ ಎಸೆದರು. ತನ್ನ ಎರಡನೇ ಪ್ರಯತ್ನದಲ್ಲಿ 88.05 ಮೀ.ದೂರ ಜಾವೆಲಿನ್ ಈ ಋತುವಿನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದರು.
ನೀರಜ್ ಕಳೆದ ವರ್ಷದ ಪ್ಯಾರಿಸ್ ಡೈಮಂಡ್ ಲೀಗ್ ನಂತರ ಮೊದಲ ಬಾರಿ 88 ಮೀ.ಗೂ ಅಧಿಕ ದೂರ ಜಾವೆಲಿನ್ ಎಸೆದರು.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಪಥಿರಗೆ ತನ್ನ ಮೂರನೇ ಪ್ರಯತ್ನದಲ್ಲಿ(88.14 ಮೀ.)ಅಗ್ರ ಸ್ಥಾನಕ್ಕೇರಿದರು. ನೀರಜ್ ಹಾಗೂ ಪಥಿರಗೆ ನಡುವಿನ ವ್ಯತ್ಯಾಸ ಕೇವಲ 9 ಸೆಂಟಿಮೀಟರ್. ಈ ಸಾಧನೆಯ ಮೂಲಕ ಶ್ರೀಲಂಕಾದ ಪಥಿರಗೆ ಈ ವರ್ಷ ತನ್ನ ಮೂರನೇ ಡೈಮಂಡ್ ಲೀಗ್ ಪ್ರಶಸ್ತಿ ಜಯಿಸಿದರು. ಈ ಹಿಂದೆ ರೋಮ್ ಹಾಗೂ ದೋಹಾ ಡೈಮಂಡ್ ಲೀಗ್‌ನಲ್ಲೂ ಮೊದಲ ಸ್ಥಾನ ಪಡೆದಿದ್ದರು.
ಈ ವರ್ಷ ಶ್ರೀಲಂಕಾದ ಪಥಿರಗೆ ವಿರುದ್ಧ ನೀರಜ್ ಅವರು ಹೆಡ್-ಟು-ಹೆಡ್ ದಾಖಲೆಯಲ್ಲಿ 0-3 ಹಿನ್ನಡೆಯಲ್ಲಿದ್ದಾರೆ. ನೀರಜ್ ಮುಂಬರುವ ಏಶ್ಯನ್ ಗೇಮ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ವರ್ಷದ ಮೊದಲ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.