"ನನಗೆ ಮಾಹಿತಿ ನೀಡದೆ ಜರ್ಸಿ ಬದಲಾವಣೆ ನಿರ್ಧಾರ ತೆಗೆದುಕೊಳ್ಳಲಾಗಿದೆ’’: ಹಾಕಿ ಇಂಡಿಯಾದ ಅಧ್ಯಕ್ಷ ದಿಲಿಪ್ ತಿರ್ಕಿ ಅಸಮಾಧಾನ

Update: 2026-07-31 22:05 IST

ದಿಲಿಪ್ ತಿರ್ಕಿ  | Photo Credit ; PTI 

ಹೊಸದಿಲ್ಲಿ, ಜು.31:ವಿಶ್ವಕಪ್‌ಗೆ ಮೊದಲು ಭಾರತೀಯ ಹಾಕಿ ತಂಡಗಳ ಜರ್ಸಿ ಬಣ್ಣ ಬದಲಾವಣೆಯ ಸುತ್ತಲಿನ ವಿವಾದವು ಶುಕ್ರವಾರ ಹೊಸ ತಿರುವು ಪಡೆದುಕೊಂಡಿದೆ. ‘‘ಈ ನಿರ್ಧಾರವನ್ನು ನನಗೆ ಮಾಹಿತಿ ನೀಡದೇ ತೆಗೆದುಕೊಳ್ಳಲಾಗಿದೆ’’ಎಂದು ಭಾರತ ಹಾಕಿ ತಂಡಕ್ಕಾಗಿ 412 ಅಂತರ್‌ರಾಷ್ಟ್ರೀಯಪಂದ್ಯಗಳನ್ನಾಡಿದ ಅನುಭವಿ ಆಟಗಾರ ಹಾಗೂ ಹಾಕಿ ಇಂಡಿಯಾದ ಅಧ್ಯಕ್ಷ ದಿಲಿಪ್ ತಿರ್ಕಿ ಅವರು ಫೆಡರೇಶನ್‌ನ ಕಾರ್ಯನಿರ್ವಾಹಕ ಮಂಡಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಯಾವ ಆಧಾರದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ, ಅದಕ್ಕೆ ಅನುಸರಿಸಿದ ಪ್ರಕ್ರಿಯೆ ಏನು ಹಾಗೂ ಬದಲಾವಣೆಯನ್ನು ಅನುಮೋದಿಸಿ ಜಾರಿಗೆ ತಂದ ಸಂದರ್ಭದ ಕುರಿತು ಲಿಖಿತ ಸ್ಪಷ್ಟೀಕರಣ ನೀಡುವಂತೆ ಶುಕ್ರವಾರ ಬೆಳಗ್ಗೆ ಕಾರ್ಯನಿರ್ವಾಹಕ ಮಂಡಳಿಯ ಸದಸ್ಯರಿಗೆ ಕಳುಹಿಸಿದ ಇ-ಮೇಲ್‌ನಲ್ಲಿ ತಿರ್ಕಿ ತಿಳಿಸಿದ್ದಾರೆ.

‘‘ಭಾರತೀಯ ರಾಷ್ಟ್ರೀಯ ತಂಡದ ಜರ್ಸಿಯ ಬಣ್ಣದಲ್ಲಿನ ಇತ್ತೀಚೆಗಿನ ಬದಲಾವಣೆಯನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಈ ನಿರ್ಧಾರವನ್ನು ಕಾರ್ಯನಿರ್ವಾಹಕ ಮಂಡಳಿಯ ಮುಂದೆ ಚರ್ಚೆಗೆ ಇಡದೆ ಹಾಗೂ ಮೊದಲಿಗೆ ನನ್ನ ಗಮನಕ್ಕೆ ತರದೆ ಈ ನಿರ್ಧಾರವನ್ನು ತೆಗೆದುಕೊಂಡು, ಜಾರಿಗೆ ತಂದಂತೆ ಕಾಣುತ್ತಿದೆ’’ ಎಂದು ತಿರ್ಕಿ ಬರೆದಿದ್ದಾರೆ.

ಕಾರ್ಯನಿರ್ವಾಹಕ ನಿರ್ದೇಶಕ ಕಮಾಂಡರ್ ಆರ್.ಕೆ, ಶ್ರೀವಾಸ್ತವ ಅವರಿಗೆ ಪ್ರತ್ಯೇಕ ಇಮೇಲ್ ಬರೆದಿರುವ ತಿರ್ಕಿ, ಜುಲೈ 31ರಂದು ಸಂಜೆ 5 ಗಂಟೆಯೊಳಗೆ ಎಲ್ಲ ಕಾರ್ಯನಿರ್ವಾಹಕ ಮಂಡಳಿಯ ಸದಸ್ಯರಿಗೆ ವಿವರವಾದ ಟಿಪ್ಪಣಿಯನ್ನು ರವಾನಿಸುವಂತೆ ನಿರ್ದೇಶಿಸಿದ್ದಾರೆ.

ಜರ್ಸಿ ಬದಲಾವಣೆಗೆ ಯಾರು ಅಧಿಕಾರ ನೀಡಿದ್ದಾರೆ, ಈ ನಿರ್ಧಾರದಲ್ಲಿ ಯಾರು ಭಾಗಿಯಾಗಿದ್ದಾರೆ, ಅದನ್ನು ಘೋಷಿಸುವ ಮೊದಲು ಅಧ್ಯಕ್ಷರು ಅಥವಾ ಕಾರ್ಯನಿರ್ವಾಹಕ ಮಂಡಳಿಯನ್ನು ಏಕೆ ಸಂಪರ್ಕಿಸಲಾಗಿಲ್ಲ ಎಂದು ಇ-ಮೇಲ್‌ನಲ್ಲಿ ತಿರ್ಕಿ ಪ್ರಶ್ನಿಸಿದ್ದಾರೆ.

ಮುಂಬರುವ ವಿಶ್ವಕಪ್‌ಗಾಗಿ ಭಾರತೀಯ ಹಾಕಿ ತಂಡದ ಸಾಂಪ್ರದಾಯಿಕ ನೀಲಿ ಜರ್ಸಿಯನ್ನು ಕೇಸರಿ ಬಣ್ಣಕ್ಕೆ ಬದಲಿಸಲಾಗಿದೆ. ಇದು ಸಾಮಾಜಿಕ ಮಾಧ್ಯಮ ಹಾಗೂ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.ಬದಲಾವಣೆಯ ಸಮಯವನ್ನು ಟೀಕಾಕಾರರು ಪ್ರಶ್ನಿಸಿದ್ದಾರೆ.

ಈ ಕ್ರಮವು ಕ್ರೀಡಾ ಹಾಗೂ ವಿನ್ಯಾಸ ಸಂಬಂಧಿತ ನಿರ್ಧಾರವಾಗಿದೆ ಎಂದು ಹಾಕಿ ಇಂಡಿಯಾವು ಸಮರ್ಥಿಸಿಕೊಂಡಿದೆ.

ನನ್ನ ಆಕ್ಷೇಪಣೆಯು ನಿರ್ಧಾರವನ್ನು ತೆಗೆದುಕೊಂಡ ವಿಧಾನದ ಬಗ್ಗೆಯೇ ಹೊರತು ಬಣ್ಣದ ಆಯ್ಕೆಯ ಬಗ್ಗೆ ಅಲ್ಲ ಎಂದು ಸ್ಪಷ್ಟಪಡಿಸಿರುವ ದಿಲಿಪ್, ‘‘ನಮ್ಮ ರಾಷ್ಟ್ರೀಯ ತಂಡದ ಗುರುತು ಹಾಗೂ ಪ್ರಾತಿನಿಧ್ಯವನ್ನು ಒಳಗೊಂಡ ಈ ಮಹತ್ವದ ನಿರ್ಧಾರವನ್ನು ಅನುಷ್ಠಾನಗೊಳಿಸುವ ಮೊದಲು ಚುನಾಯಿತ ನಾಯಕತ್ವ ಹಗೂ ಕಾರ್ಯನಿರ್ವಾಹಕಮಂಡಳಿಯೊಂದಿಗೆ ಚರ್ಚಿಸಬೇಕಾಗಿತ್ತು’’ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News