×
Ad

FIFA 2026 | ನಾಕೌಟ್ ಹಂತಕ್ಕಿಂತ ಮೊದಲು ಸಾರ್ವಕಾಲಿಕ ಗೋಲು ದಾಖಲೆ ಪತನ

Update: 2026-06-26 21:49 IST

Photo Credit : @FIFA

ನ್ಯೂಜೆರ್ಸಿ, ಜೂ.26: ಪಂದ್ಯಾವಳಿಯ ಇತಿಹಾಸದಲ್ಲಿ ಗರಿಷ್ಠ ಗೋಲುಗಳಿಗೆ ಸಾಕ್ಷಿಯಾದ 2026ರ ಆವೃತ್ತಿಯ ಫಿಫಾ ವಿಶ್ವಕಪ್ ಟೂರ್ನಿಯು ದಾಖಲೆ ಪುಸ್ತಕಕ್ಕೆ ಸೇರಿದೆ. ಗ್ರೂಪ್ ಹಂತ ಮುಗಿಯುವ ಮೊದಲೇ ಈ ದಾಖಲೆ ಮೂಡಿಬಂದಿದೆ.

ಅಮೆರಿಕ ಹಾಗೂ ತುರ್ಕಿಯ ನಡುವಿನ ‘ಡಿ’ ಗುಂಪಿನ ಪಂದ್ಯದ ವೇಳೆ ಈ ಸ್ಮರಣೀಯ ಕ್ಷಣ ಎದುರಾಯಿತು. ಅಮೆರಿಕದ ಡಿಫೆಂಡರ್ ಆಸ್ಟನ್ ಟ್ರಸ್ಟಿ ಗಳಿಸಿದ ಗೋಲು ಪ್ರಸಕ್ತ ಪಂದ್ಯಾವಳಿಯಲ್ಲಿ ದಾಖಲಾದ 173ನೇ ಗೋಲಾಗಿದೆ. ಈ ಮೂಲಕ 2022ರ ಖತರ್ ವಿಶ್ವಕಪ್ ಪಂದ್ಯಾವಳಿಯ ದಾಖಲೆ(172 ಗೋಲುಗಳು)ಪತನವಾಗಿದೆ.

ತುರ್ಕಿಯ ತಂಡವು 3-2 ಅಂತರದಿಂದ ಪಂದ್ಯ ಗೆದ್ದ ನಂತರ ಟೂರ್ನಮೆಂಟ್‌ನ ಒಟ್ಟು ಗೋಲುಗಳ ಸಂಖ್ಯೆಯು 177ಕ್ಕೆ ತಲುಪಿದೆ.

ಕೆಲವೇ ಪಂದ್ಯಗಳಲ್ಲಿ ದಾಖಲೆ ಪತನ: 2022ರ ವಿಶ್ವಕಪ್‌ನಲ್ಲಿ ಎಲ್ಲ 64 ಪಂದ್ಯಗಳಲ್ಲಿ ಒಟ್ಟು 172 ಗೋಲುಗಳು ದಾಖಲಾಗಿದ್ದವು. ಇದಕ್ಕೆ ತದ್ವಿರುದ್ಧವಾಗಿ 2026ರ ಆವೃತ್ತಿಯ ಟೂರ್ನಿಯಲ್ಲಿ 59ನೇ ಪಂದ್ಯದಲ್ಲಿ ಈ ದಾಖಲೆ ಪತನವಾಗಿದೆ. ನಾಕೌಟ್ ಸುತ್ತುಗಳು ಆರಂಭವಾಗುವ ಮೊದಲು ಇನ್ನಷ್ಟು ಗ್ರೂಪ್ ಹಂತದ ಪಂದ್ಯಗಳು ಬಾಕಿ ಇವೆ.

ಪಂದ್ಯಾವಳಿಯನ್ನು ಹಿಗ್ಗಿಸಿರುವುದು ಈ ದಾಖಲೆಯಲ್ಲಿ ಪ್ರಮುಖ ಪಾತ್ರವಹಿಸಿದೆ. ಫಿಫಾವು ಪಂದ್ಯಾವಳಿಯಲ್ಲಿನ ತಂಡಗಳನ್ನು 32ರಿಂದ 48ಕ್ಕೆ ಏರಿಸಿದೆ. ಒಟ್ಟು ಪಂದ್ಯಗಳ ಸಂಖ್ಯೆಯು 64ರಿಂದ 104ಕ್ಕೆ ಏರಿಕೆಯಾಗಿದೆ. ಹೆಚ್ಚುವರಿ ಪಂದ್ಯಗಳು ಸಹಜವಾಗಿ ಹೆಚ್ಚಿನ ಸ್ಕೋರಿಂಗ್ ಅವಕಾಶವನ್ನು ಸೃಷ್ಟಿಸುತ್ತವೆ. ಸರಾಸರಿ ಗೋಲುಗಳ ಸಂಖ್ಯೆಯು ಹೆಚ್ಚಾಗುತ್ತದೆ.

ಪ್ರೇಕ್ಷಕರ ಹಾಜರಾತಿಯ ದಾಖಲೆಯೂ ಪತನ

ಪ್ರಸಕ್ತ ವಿಶ್ವಕಪ್ ಟೂರ್ನಿಯು ಕೇವಲ ಗರಿಷ್ಠ ಗೋಲುಗಳಿಗೆ ಸಾಕ್ಷಿಯಾಗಿರದೆ, ಅಮೆರಿಕ, ಕೆನಡಾ ಹಾಗೂ ಮೆಕ್ಸಿಕೊದಾದ್ಯಂತ ದಾಖಲೆಯ ಸಂಖ್ಯೆಯಲ್ಲಿ ಫುಟ್ಬಾಲ್ ಪ್ರೇಕ್ಷಕರನ್ನು ಆಕರ್ಷಿಸಿದೆ.

3.6 ಮಿಲಿಯನ್‌ಗೂ ಅಧಿಕ ಪ್ರೇಕ್ಷಕರು ಈಗಾಗಲೇ ಪಂದ್ಯಗಳನ್ನು ವೀಕ್ಷಿಸಿದ್ದಾರೆ. ಫಿಫಾ ವಿಶ್ವಕಪ್ ಇತಿಹಾಸದಲ್ಲಿ 2026ರ ಆವೃತ್ತಿಯಲ್ಲಿ ಹೆಚ್ಚು ಜನರು ವೀಕ್ಷಿಸಿದ್ದಾರೆ.

1994ರಲ್ಲಿ ಅಮೆರಿಕದಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯನ್ನು ದಾಖಲೆಯ 3.5 ಮಿಲಿಯನ್ ಜನರು ವೀಕ್ಷಿಸಿದ್ದರು. ಆ ದಾಖಲೆಯೀಗ ಪತನವಾಗಿದೆ.

ನಾಕೌಟ್ ಹಂತ ಇನ್ನಷ್ಟೇ ಆರಂಭವಾಗಬೇಕಾಗಿದೆ. ಇನ್ನೂ 45 ಪಂದ್ಯಗಳು ಬಾಕಿ ಉಳಿದಿವೆ. ಟೂರ್ನಿಯು ಕೊನೆಗೊಳ್ಳುವ ಮೊದಲು ಗೋಲುಗಳ ಸಂಖ್ಯೆ ಹಾಗೂ ಪ್ರೇಕ್ಷಕರ ಹಾಜರಾತಿಯ ಸಂಖ್ಯೆಯಲ್ಲಿ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

ರಾಷ್ಟ್ರೀಯ ರಜಾದಿನ ಘೋಷಿಸಿದ ಈಕ್ವೆಡಾರ್ ಅಧ್ಯಕ್ಷ

ದೇಶದ ಫುಟ್ಬಾಲ್ ತಂಡವು ಜರ್ಮನಿ ತಂಡದ ವಿರುದ್ಧ 2-1 ಅಂತರದ ಗೆಲುವಿನೊಂದಿಗೆ ವಿಶ್ವಕಪ್‌ನ ನಾಕೌಟ್ ಹಂತವನ್ನು ತಲುಪಿದ ನಂತರ ಈಕ್ವೆಡಾರ್ ಅಧ್ಯಕ್ಷ ಡೇನಿಯಲ್ ನೊಬೊವಾ ಶುಕ್ರವಾರ ರಾಷ್ಟ್ರೀಯ ರಜಾದಿನವಾಗಿದೆ ಘೋಷಿಸಿದರು.

‘‘ಟೀಕೆಗಳು, ಅವಮಾನಗಳು ಹಾಗೂ ಅನುಭವಿಸಿದ ಕಠಿಣ ಕ್ಷಣಗಳ ಹೊರತಾಗಿಯೂ ಚೇತರಿಸಿಕೊಳ್ಳುವಲ್ಲಿ ಯಶಸ್ವಿಯಾದ ಆಟಗಾರರು ಹಾಗೂ ತರಬೇತುದಾರರಿಗೆ ಧನ್ಯವಾದಗಳು ಹಾಗೂ ಇಡೀ ದೇಶಕ್ಕೆ ಇದು ಅಪಾರ ಸಂತೋಷವನ್ನು ನೀಡಿದೆ. ನಾಳೆ, ರಜಾದಿನ’’ ಎಂದು ನೊಬೊವಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಐವರಿ ಕೋಸ್ಟ್ ವಿರುದ್ಧ ಸೋಲು, ಕ್ಯುರಾಕೊ ವಿರುದ್ಧ ಡ್ರಾ ಸಾಧಿಸಿದ ನಂತರ ತನ್ನ ಕೊನೆಯ ‘ಇ ’ಗುಂಪಿನ ಪಂದ್ಯವನ್ನು ಗೆಲ್ಲುವುದು ಈಕ್ವೆಡಾರ್‌ಗೆ ಅಗತ್ಯವಾಗಿತ್ತು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News