×
Ad

FIFA 2026 | ಟ್ರಂಪ್ ನೃತ್ಯವನ್ನು ಅನುಕರಿಸಿ ಅಣಕಿಸಿದ ಬೆಲ್ಜಿಯಮ್ ಆಟಗಾರರು!

Update: 2026-07-07 21:51 IST

Screengrab : X\ @zaintariqq0

ಸಿಯಾಟಲ್ (ಅಮೆರಿಕ), ಜು. 7: ಡೊನಾಲ್ಡ್ ಟ್ರಂಪ್‌ರ ನೃತ್ಯವನ್ನು ವ್ಯಂಗ್ಯವಾಗಿ ಅನುಕರಿಸುವ ಮೂಲಕ ಬೆಲ್ಜಿಯಮ್ ಆಟಗಾರರು ಅಮೆರಿಕ ಅಧ್ಯಕ್ಷರ ವಿರುದ್ಧ ಮಂಗಳವಾರ ಮುಯ್ಯಿ ತೀರಿಸಿಕೊಂಡಿದ್ದಾರೆ.

ಅಮೆರಿಕದ ಆಟಗಾರ ಫೊಲಾರಿನ್ ಬಾಲೋಗನ್‌ರ ಅಮಾನತನ್ನು ವಾಪಸ್ ಪಡೆದಿರುವ ಫಿಫಾ ನಿರ್ಧಾರಕ್ಕೆ ಅವರು ಈ ರೀತಿಯಲ್ಲಿ ಪ್ರತಿಭಟನೆ ಸೂಚಿಸಿದ್ದಾರೆ. ಫಿಫಾ ಈ ವಿವಾದಾತ್ಮಕ ನಿರ್ಧಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಒತ್ತಡಕ್ಕೊಳಗಾಗಿ ತೆಗೆದುಕೊಂಡಿದೆ ಎನ್ನಲಾಗಿದೆ.

ಈ ಘಟನೆಯ ಬಗ್ಗೆ ಟ್ರಂಪ್ ಫಿಫಾ ಅಧ್ಯಕ್ಷ ಜಾನೀ ಇನ್‌ಫ್ಯಾಂಟಿನೊ ಜೊತೆ ಮಾತನಾಡಿದ್ದಾರೆ ಎಂಬುದಾಗಿ ವರದಿಗಳು ಹೇಳಿಕೊಂಡಿವೆ. ಅದೇ ವೇಳೆ, ಈ ವಿಷಯದಲ್ಲಿ ಮಧ್ಯಪ್ರವೇಶಿಸಿರುವುದನ್ನು ಟ್ರಂಪ್ ಒಪ್ಪಿಕೊಂಡಿದ್ದಾರೆ, ಆದರೆ ನಿರ್ಧಾರವನ್ನು ಬದಲಿಸುವಂತೆ ಫಿಫಾದ ಮೇಲೆ ಒತ್ತಡ ಹಾಕಿಲ್ಲ ಎಂದಿದ್ದಾರೆ.

ಮಂಗಳವಾರ ಮುಂಜಾನೆ ಬೆಲ್ಜಿಯಮ್ ಮತ್ತು ಅಮೆರಿಕ ನಡುವೆ ನಡೆದ ಪ್ರಿಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಬಾಲೋಗನ್ ಆಡುವಂತಿರಲಿಲ್ಲ. ಆದರೆ ಅವರ ಅಮಾನತನ್ನು ಫಿಫಾ ಹಿಂದಕ್ಕೆ ಪಡೆದ ಹಿನ್ನೆಲೆಯಲ್ಲಿ ಅವರು ಆಡಿದರು. ಇದರ ವಿರುದ್ಧ ಬೆಲ್ಜಿಯಮ್ ಫಿಫಾಕ್ಕೆ ಆಕ್ಷೇಪ ಸಲ್ಲಿಸಿದರೂ ಅದನ್ನು ತಳ್ಳಿಹಾಕಲಾಯಿತು.

ಇದು ಬೆಲ್ಜಿಯಮ್ ತಂಡವನ್ನು ಕೆರಳಿಸಿತ್ತು. ಅಂತಿಮವಾಗಿ ಪ್ರಿಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಬೆಲ್ಜಿಯಮ್ ಅಮೆರಿಕವನ್ನು 4-1 ಗೋಲುಗಳ ಭರ್ಜರಿ ಅಂತರದಿಂದ ಸೋಲಿಸಿತು. ಅದರ ಬೆನ್ನಿಗೇ ಬೆಲ್ಜಿಯಮ್ ಆಟಗಾರರು ಟ್ರಂಪ್‌ರ ಪ್ರಸಿದ್ಧ ನತ್ಯವನ್ನು ವ್ಯಂಗ್ಯವಾಗಿ ಅನುಕರಿಸಿ ತಮ್ಮ ಆಕ್ರೋಶವನ್ನು ಹೊರಹಾಕಿದರು.

ಗಾಯ ಅವಧಿಯ ಕೊನೆಯಲ್ಲಿ ರೊಮೆಲು ಲುಕಾಕು ಬೆಲ್ಜಿಯಮ್‌ನ ನಾಲ್ಕನೇ ಗೋಲನ್ನು ಬಾರಿಸಿದ ಬಳಿಕ ಬೆಲ್ಜಿಯಮ್ ಆಟಗಾರರು ಟ್ರಂಪ್ ನೃತ್ಯಗೈದರು. ಲುಕಾಕು ಸುತ್ತ ಜಮಾಯಿಸಿದ ಆಟಗಾರರು ಟ್ರಂಪ್‌ರ ನಡೆಗಳನ್ನು ಅನುಕರಿಸಿದರು.

ವಿಜಯದ ಬಳಿಕ, ಬೆಲ್ಜಿಯಮ್ ತಂಡವು ತನ್ನ ಎಕ್ಸ್ ಖಾತೆಯಲ್ಲಿ ತನ್ನ ಆಟಗಾರರು ಸಂಭ್ರಮಿಸುತ್ತಿರುವ ಚಿತ್ರವನ್ನು ಹಾಕಿತು ಹಾಗೂ ಅದಕ್ಕೆ ‘‘ಇದನ್ನು ರದ್ದುಪಡಿಸಿ’’ ಎಂಬ ಅಡಿಬರಹ ಹಾಕಿತು.

ಬಾಲೋಗನ್‌ರ ಅಮಾನತು ರದ್ದುಪಡಿಸಿರುವುದನ್ನು ಗುರಿಯಾಗಿಸಿ ಹೀಗೆ ಬರೆಯಲಾಗಿದೆ ಎಂಬುದಾಗಿ ವ್ಯಾಖ್ಯಾನಿಸಲಾಗಿದೆ.

ಬೋಸ್ನಿಯಾ ವಿರುದ್ಧದ ಅಂತಿಮ 32ರ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಬಾಲೋಗನ್‌ಗೆ ಕೆಂಪು ಕಾರ್ಡ್ ತೋರಿಸಲಾಗಿತ್ತು. ಬಳಿಕ ಅವರನ್ನು ಆ ಪಂದ್ಯದಿಂದ ಹೊರಗೆ ಕಳುಹಿಸಲಾಗಿತ್ತು. ನಿಯಮದಂತೆ ತಂಡದ ಮುಂದಿನ ಪಂದ್ಯದಲ್ಲೂ ಅವರು ಆಡುವಂತಿರಲಿಲ್ಲ. ಅಂದರೆ, ಬೆಲ್ಜಿಯಮ್ ವಿರುದ್ಧದ ಪ್ರಿಕ್ವಾರ್ಟರ್‌ಫೈನಲ್ ಪಂದ್ಯದಿಂದಲೂ ಹೊರಗಿರಬೇಕಾಗಿತ್ತು. ಆದರೆ, ಅವರ ಅಮಾನತನ್ನು ಫಿಫಾ ಹಿಂದಕ್ಕೆ ಪಡೆದ ಬಳಿಕ ಅವರು ಆಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News