×
Ad

FIFA ವಿಶ್ವಕಪ್ ನಿರ್ಗಮನದ ಬೆನ್ನಲ್ಲೇ ಅಂತರರಾಷ್ಟ್ರೀಯ ಫುಟ್‌ಬಾಲ್‌ ಗೆ ವಿದಾಯ ಘೋಷಿಸಿದ ನೇಮರ್

'ನಾನು ಪ್ರಯತ್ನಿಸಿದೆ; ಈಗ ಎಲ್ಲವೂ ಮುಗಿದಿದೆ' ಎಂದ ಬ್ರೆಝಿಲ್‌ನ ಸಾರ್ವಕಾಲಿಕ ಅಗ್ರ ಗೋಲುಗಾರ

Update: 2026-07-06 07:36 IST

Photo: x.com/JacobsBen

ನ್ಯೂಜೆರ್ಸಿ: 2026ರ ಫಿಫಾ ವಿಶ್ವಕಪ್‌ನ ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ನಾರ್ವೆ ವಿರುದ್ಧ ಬ್ರೆಝಿಲ್ ತಂಡ ಅನುಭವಿಸಿದ ಆಘಾತಕಾರಿ ಸೋಲಿನ ಬೆನ್ನಲ್ಲೇ, ಬ್ರೆಝಿಲ್‌ನ ದಿಗ್ಗಜ ಆಟಗಾರ ನೇಮರ್ ಜೂನಿಯರ್ ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಬ್ರೆಝಿಲ್ ಪರ ಆಡಿದ ಅತ್ಯಂತ ಪ್ರತಿಷ್ಠಿತ ಆಟಗಾರರಲ್ಲಿ ಒಬ್ಬರಾಗಿರುವ ನೇಮರ್, 16 ವರ್ಷಗಳ ಅಂತರರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ. ಬ್ರೆಝಿಲ್ ಪರ 129 ಪಂದ್ಯಗಳಲ್ಲಿ 80 ಗೋಲುಗಳನ್ನು ಗಳಿಸಿರುವ ಅವರು, ದೇಶದ ಸಾರ್ವಕಾಲಿಕ ಅಗ್ರ ಗೋಲುಗಾರ ಎಂಬ ದಾಖಲೆಯೊಂದಿಗೆ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಮುಕ್ತಾಯಗೊಳಿಸಿದ್ದಾರೆ.

ನ್ಯೂಜೆರ್ಸಿಯ ಮೆಟ್‌ಲೈಫ್ ಕ್ರೀಡಾಂಗಣದಲ್ಲಿ ನಡೆದ ನಾರ್ವೆ ವಿರುದ್ಧದ ಪಂದ್ಯವೇ ಬ್ರೆಝಿಲ್ ಪರ ನೇಮರ್ ಅವರ ಕೊನೆಯ ಪಂದ್ಯವಾಯಿತು. ಇದೇ ಕ್ರೀಡಾಂಗಣದಲ್ಲಿ ಅವರು 2010ರಲ್ಲಿ ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಪದಾರ್ಪಣೆ ಮಾಡಿದ್ದರು. ಮಾಜಿ ಬಾರ್ಸಿಲೋನಾ ಮತ್ತು ಪ್ಯಾರಿಸ್ ಸೇಂಟ್-ಜರ್ಮೈನ್ ಆಟಗಾರರಾದ ನೇಮರ್, ಪಂದ್ಯದಲ್ಲಿ ಪೆನಾಲ್ಟಿ ಮೂಲಕ ಗೋಲು ಗಳಿಸಿದರೂ, ಬ್ರೆಝಿಲ್ ತಂಡದ ಸೋಲನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.

ಪಂದ್ಯ ಮುಗಿದ ಬಳಿಕ ನೇಮರ್ ಭಾವನಾತ್ಮಕವಾಗಿ ಕುಸಿದುಬಿದ್ದರು. ಅಂತಿಮ ಶಿಳ್ಳೆ ಮೊಳಗಿದ ತಕ್ಷಣ ಅವರು ಕಣ್ಣೀರಿಟ್ಟರು. ಬ್ರೆಝಿಲ್ ತಂಡದ ಸಹ ಆಟಗಾರರು ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ, ಅವರು ತೀವ್ರ ನಿರಾಸೆಯಲ್ಲಿರುವುದು ಕಂಡುಬಂತು.

"ನಾನು ಪ್ರಯತ್ನಿಸಿದೆ, ಮತ್ತೆ ಮತ್ತೆ ಪ್ರಯತ್ನಿಸಿದೆ. ಆದರೆ ಈಗ ಎಲ್ಲವೂ ಮುಗಿದಿದೆ. ನಾನು ಇಲ್ಲಿಯೇ ಆರಂಭಿಸಿದ್ದೆ; ಇಲ್ಲಿಯೇ ನನ್ನ ಪಯಣ ಮುಗಿಯುತ್ತಿದೆ" ಎಂದು ನೇಮರ್ ಪಂದ್ಯದ ಬಳಿಕ ಗ್ಲೋಬೊಗೆ ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ವಿದಾಯ ಹೇಳಿದ್ದರೂ, ಸ್ಯಾಂಟೋಸ್ ಎಫ್‌ಸಿ ಪರ ತಮ್ಮ ಕ್ಲಬ್ ವೃತ್ತಿಜೀವನವನ್ನು ಮುಂದುವರಿಸಲಿದ್ದಾರೆ. ಮುಂದಿನ ಋತುಗಳಲ್ಲಿ ಆಡುವ ಕುರಿತು ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.

ಇದೇ ವೇಳೆ, ನಾರ್ವೆ ವಿರುದ್ಧದ ಸೋಲಿನೊಂದಿಗೆ ವಿಶ್ವಕಪ್ ನಾಕೌಟ್ ಹಂತದಲ್ಲಿ ಯುರೋಪಿಯನ್ ತಂಡಗಳ ವಿರುದ್ಧ ಬ್ರೆಝಿಲ್‌ನ ವೈಫಲ್ಯದ ಸರಣಿ ಮುಂದುವರಿದಿದೆ. ಬ್ರೆಝಿಲ್ ತಂಡವು 2002ರ ವಿಶ್ವಕಪ್ ಫೈನಲ್‌ನಲ್ಲಿ ಜರ್ಮನಿಯನ್ನು ಸೋಲಿಸಿ ಪ್ರಶಸ್ತಿ ಗೆದ್ದ ಬಳಿಕ, ವಿಶ್ವಕಪ್ ನಾಕೌಟ್ ಹಂತದಲ್ಲಿ ಯಾವುದೇ ಯುರೋಪಿಯನ್ ತಂಡವನ್ನು ಮಣಿಸಲು ಸಾಧ್ಯವಾಗಿಲ್ಲ.

ಬ್ರೆಝಿಲ್ ತಂಡದ ಮುಖ್ಯ ಕೋಚ್ ಕಾರ್ಲೊ ಅನ್ಸೆಲೋಟಿ, ಈ ಸೋಲನ್ನು ಭವಿಷ್ಯದ ಯಶಸ್ಸಿಗೆ ಪ್ರೇರಣೆಯಾಗಿ ಬಳಸಿಕೊಳ್ಳಬೇಕೆಂದು ಹೇಳಿದ್ದಾರೆ. "ಇದು ಅಂತ್ಯವಲ್ಲ; ಹೊಸ ಚಕ್ರದ ಆರಂಭ" ಎಂದು ಅವರು ಪ್ರತಿಪಾದಿಸಿದ್ದಾರೆ.

"ಏನಾಗಿದೆ ಎಂಬುದನ್ನು ಗಮನಿಸಿದರೆ ಎಲ್ಲರೂ ತೀವ್ರ ನಿರಾಶೆಯಲ್ಲಿದ್ದಾರೆ ಎಂಬುದು ಸ್ಪಷ್ಟ. ನಾವು ಅತ್ಯುತ್ತಮ ವಿಶ್ವಕಪ್ ಆಡಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಇಂದಿನ ಪಂದ್ಯದಲ್ಲಿ ಜಯ ಸಾಧಿಸಲು ನಾವು ಅರ್ಹರಾಗಿದ್ದೆವು ಎಂದು ನಾನು ಭಾವಿಸುತ್ತೇನೆ" ಎಂದು ಮೆಟ್‌ಲೈಫ್ ಕ್ರೀಡಾಂಗಣದಲ್ಲಿ ನಡೆದ 2-1ರ ಸೋಲಿನ ಬಳಿಕ ಅನ್ಸೆಲೋಟಿ ಹೇಳಿದರು.

ನಾರ್ವೆ ತಂಡವು ಪಂದ್ಯದ ಅಂತಿಮ ಹಂತದಲ್ಲಿ ಎರಡು ಗೋಲುಗಳನ್ನು ದಾಖಲಿಸಿ ಜಯ ಸಾಧಿಸಿತು. ಬ್ರೆಝಿಲ್ ಪರ ಬ್ರೂನೋ ಗುಯಿಮರೇಸ್ ಸಂಪಾದಿಸಿದ್ದ ಪೆನಾಲ್ಟಿಯನ್ನು ನೇಮರ್ ಗೋಲಾಗಿ ಪರಿವರ್ತಿಸಿದರೂ, ಅದು ಸಮಾಧಾನಕರ ಗೋಲಾಗಿ ಮಾತ್ರ ಉಳಿಯಿತು. ಬ್ರೆಝಿಲ್ ಪರ ಆಟಗಾರನಾಗಿ ಅವರು ದಾಖಲಿಸಿದ ಕೊನೆಯ ಗೋಲು ಕೂಡ ಅದಾಗಿತ್ತು.

"ಇಂತಹ ಸೋಲನ್ನು ಜೀರ್ಣಿಸಿಕೊಳ್ಳಬೇಕು. ಇದು ಹೊಸ ಪಯಣದ ಆರಂಭವಾಗಿದೆ. ನಾವು ನಮ್ಮ ಸ್ಥಾನವನ್ನು ಪುನಃ ಗಳಿಸಬೇಕು ಮತ್ತು ನಿರಂತರವಾಗಿ ಸುಧಾರಣೆಯತ್ತ ಸಾಗಬೇಕು" ಎಂದು ಒಂದು ವರ್ಷದ ಹಿಂದೆ ಬ್ರೆಝಿಲ್ ತಂಡದ ಕೋಚ್ ಆಗಿ ನೇಮಕಗೊಂಡ ಅನ್ಸೆಲೋಟಿ ಹೇಳಿದರು.

2030ರ ವಿಶ್ವಕಪ್‌ವರೆಗೆ ಬ್ರೆಝಿಲ್ ತಂಡದೊಂದಿಗೆ ಒಪ್ಪಂದ ಹೊಂದಿರುವ ಅನ್ಸೆಲೋಟಿ, ತಂಡದ ನಿರಾಶಾದಾಯಕ ನಿರ್ಗಮನದ ಬಳಿಕ ರಾಜೀನಾಮೆ ನೀಡುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.

"ಇದು ಅಂತ್ಯ ಎಂದು ನಾನು ಭಾವಿಸುವುದಿಲ್ಲ. ಇದು ಹೊಸ ಚಕ್ರದ ಆರಂಭ. ಇಂದಿನ ಫಲಿತಾಂಶದ ಹೊರತಾಗಿಯೂ, ಈ ತಂಡವು ವಿಶ್ವಕಪ್‌ನಲ್ಲಿ ಕೊನೆಯ ಹಂತದವರೆಗೂ ಸ್ಪರ್ಧಿಸುವ ಸಾಮರ್ಥ್ಯ ಹೊಂದಿತ್ತು" ಎಂದು ಅವರು ಹೇಳಿದರು.

ಈ ಸೋಲಿನೊಂದಿಗೆ ಬ್ರೆಝಿಲ್‌ನ ಆರನೇ ವಿಶ್ವಕಪ್ ಪ್ರಶಸ್ತಿಯ ಕನಸು ಮತ್ತೊಮ್ಮೆ ಭಗ್ನಗೊಂಡಿದೆ. ಬ್ರೆಝಿಲ್ ತಂಡವು ಕೊನೆಯ ಬಾರಿ 2002ರಲ್ಲಿ ಜಪಾನ್-ದಕ್ಷಿಣ ಕೊರಿಯಾ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆದ್ದಿತ್ತು. ಇದರಿಂದ ವಿಶ್ವಕಪ್ ಪ್ರಶಸ್ತಿಗಾಗಿ ಅದರ ನಿರೀಕ್ಷೆ 24 ವರ್ಷಗಳನ್ನು ದಾಟಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News