FIFA WORLD CUP 2026 | ಕೊನೆಯ ನಿಮಿಷಗಳಲ್ಲಿ ಕ್ಯಾಲೆಬ್ ಯಿರೆಂಕಿಯ ಸುಲಭ ಗೋಲು : ಪನಾಮ ವಿರುದ್ಧ ಘಾನಾ ತಂಡಕ್ಕೆ 1-0 ಅಂತರದ ಗೆಲುವು
Photo : x.com/cloudninesports
ಟೊರೊಂಟೊ : ಎಲ್ ಗುಂಪಿನ ಪಂದ್ಯದಲ್ಲಿ 20 ವರ್ಷದ ಕ್ಯಾಲೆಬ್ ಯಿರೆಂಕಿ ಅವರ ಕೊನೆಯ ನಿಮಿಷಗಳ ಗೋಲು ನೆರವಿನಿಂದ ಘಾನಾ ತಂಡವು ಪನಾಮ ತಂಡವನ್ನು 1-0 ಅಂತರದಿಂದ ಸೋಲಿಸಿತು.
ನೀರಸವಾಗಿ ಸಾಗಿದ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ ಯಾವುದೇ ಗೋಲುಗಳನ್ನು ಗಳಿಸಲು ಉಭಯ
ತಂಡಗಳಿಗೂ ಸಾಧ್ಯವಾಗಲಿಲ್ಲ . ಆರಂಭದಲ್ಲಿ ಪನಾಮಾ ತಂಡವು ಗೋಲು ಗಳಿಸಲು ಆಕ್ರಮಣಕಾರಿಯಾಗಿ ಮುನ್ನುಗ್ಗುತ್ತಿದ್ದರೂ , ಘಾನಾ ತಂಡವು ಹೆಚ್ಚು ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿತು.
ಪನಾಮಾ ತಂಡದ ಹಲವು ಗೋಲು ಗಳಿಸುವ ಪ್ರಯತ್ನವನ್ನು ಘಾನಾ ತಂಡದ ಗೋಲ್ ಕೀಪರ್ ಲಾರೆನ್ಸ್ ಅಟಿಝಿಗಿ ತಡೆದರು .
ಪಂದ್ಯ ಸಾಗುತ್ತಿದ್ದಂತೆ ಘಾನಾ ತಂಡವು ಗೋಲು ಗಳಿಸಲು ಹೆಚ್ಚಿನ ಒತ್ತು ನೀಡಿತು. ಕ್ಯಾಲೆಬ್ ಯಿರೆಂಕಿ ಘಾನಾ ತಂಡದ ಪರವಾಗಿ ಗೋಲು ಗಳಿಸಲು ಪ್ರಯತ್ನಿಸುತ್ತಲೇ , ಪಂದ್ಯದ ಹೆಚ್ಚುವರಿ ಸಮಯ 95 ನೇ ನಿಮಿಷದಲ್ಲಿ ಗೋಲ್ ಪೋಸ್ಟ್ ಬಳಿ ಸಿಕ್ಕಿದ ಚೆಂಡನ್ನು ಸುಲಭವಾಗಿ ಗೋಲಾಗಿ ಪರಿವರ್ತಿಸಿದರು. ಆ ಮೂಲಕ ನೀರಸವಾಗಿ ಡ್ರಾ ಆಗಬೇಕಾದ ಪಂದ್ಯವನ್ನು ಗೆಲುವಾಗಿ ಬದಲಾಯಿಸಿದರು.
ಘಾನಾ 2 ನೇರ ಗುರಿಯೊಂದಿಗೆ 8 ಬಾರಿ ಗೋಲು ಪ್ರಯತ್ನ ನಡೆಸಿದರೆ , ಪನಾಮಾ ತಂಡವು 4 ನೇರ ಗುರಿಯೊಂದಿಗೆ 11 ಬಾರಿ ಗೋಲು ಪ್ರಯತ್ನ ನಡೆಸಿತು.