ಫಿಫಾ ವಿಶ್ವಕಪ್: ತವರು ನೆಲದಲ್ಲಿ ಇತಿಹಾಸ ಸೃಷ್ಟಿಸಿದ ಕೆನಡಾ
Photo: x.com/CanadianPM
ಟೊರಂಟೊ: ತವರು ಪ್ರೇಕ್ಷಕರ ಬೆಂಬಲದೊಂದಿಗೆ ತಾಯ್ನಾಡಿನಲ್ಲಿ ನಡೆದ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಮೊದಲ ಪಂದ್ಯವನ್ನು ಕೆನಡಾ ಸ್ಮರಣೀಯವಾಗಿಸಿಕೊಂಡಿತು. ಬೋಸ್ನಿಯಾ-ಹರ್ಝಗೋವಿಯಾ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ ಸಹ ಅತಿಥೇಯ ಕೆನಡಾ ತಂಡ 1-1 ಗೋಲುಗಳ ಡ್ರಾ ಸಾಧಿಸಿ ವಿಶ್ವಕಪ್ ಇತಿಹಾಸದಲ್ಲೇ ಮೊದಲ ಅಂಕವನ್ನು ಸಂಪಾದಿಸಿತು.
ಟೊರಂಟೊದಲ್ಲಿ ನಡೆದ ಪಂದ್ಯದ ದ್ವಿತೀಯಾರ್ಧದಲ್ಲಿ ಕೆನಡಾ ತಂಡದ ಸೈಲ್ ಲಾರಿನ್ ಗೋಲು ಗಳಿಸಿ ಈ ಐತಿಹಾಸಿಕ ಸಾಧನೆಗೆ ನೆರವಾದರು. ಇದಕ್ಕೂ ಮುನ್ನ ಬೋಸ್ನಿಯಾ ತಂಡದ ಜೊವೊ ಲ್ಯೂಕಿಕ್ 21ನೇ ನಿಮಿಷದಲ್ಲಿ ಹೆಡ್ಡರ್ ಮೂಲಕ ತಮ್ಮ ತಂಡಕ್ಕೆ ಮುನ್ನಡೆ ಒದಗಿಸಿದ್ದರು. ಇದಕ್ಕೂ ಮೊದಲು 1986 ಹಾಗೂ 2022ರಲ್ಲಿ ಆಡಿದ ಎರಡು ಟೂರ್ನಿಗಳಲ್ಲಿ ಕೆನಡಾ ಆರು ಸೋಲುಗಳೊಂದಿಗೆ ಶೂನ್ಯ ಸಂಪಾದನೆ ಮಾಡಿತ್ತು.
ಕಾರ್ನರ್ ನಿಂದ ಲ್ಯೂಕಿಕ್ ಹೊಡೆದ ಗೋಲು ಪುಟ್ಟ ದೇಶ ಬೋಸ್ನಿಯಾ ತಂಡದ ಉತ್ಸಾಹಕ್ಕೆ ತಣ್ಣೀರೆರಚಿತು. ಮೊದಲಾರ್ಧದಲ್ಲಿ ಕೆನಡಾ ಹಲವು ಅವಕಾಶಗಳನ್ನು ಪಡೆದರೂ ಅದನ್ನು ಗೋಲಾಗಿ ಪರಿವರ್ತಿಸಿಕೊಳ್ಳುವಲ್ಲಿ ವಿಫಲವಾಯಿತು. 17ನೇ ನಿಮಿಷದಲ್ಲಿ ಮುನ್ನಡೆ ಆಟಗಾರ ಜೊನಾಥನ್ ಡೇವಿಡ್ ಅವರ ಗೋಲು ಗಳಿಸುವ ಪ್ರಯತ್ನವನ್ನು ಬೋಸ್ನಿಯಾ ಗೋಲ್ ಕೀಪರ್ ನಿಕೋಲಾ ವಾಸಿಜ್ ಯಶಸ್ವಿಯಾಗಿ ತಡೆದರು.
ಕೆನಡಾದ ಇಸ್ಮಾಯಿಲ್ ಕೋನ್ ಕೂಡ 30ನೇ ನಿಮಿಷದಲ್ಲಿ ಗೋಲು ಗಳಿಸುವ ಸುವರ್ಣಾವಕಾಶ ಪಡೆದರು. ಆದರೆ ಅವರು ಹೊಡೆದ ಚೆಂಡು ನೆಟ್ ನ ಮೇಲೆ ಚಿಮ್ಮಿ, ಸೇರಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತು. ದ್ವಿತೀಯಾರ್ಧದಲ್ಲೂ ಕೆನಡಾ ಆಟಗಾರರು ನಿರಂತರ ದಾಳಿಯ ಮೂಲಕ ಒತ್ತಡ ಹೇರುವಲ್ಲಿ ಯಶಸ್ವಿಯಾದರೂ, ಚೆಂಡನ್ನು ನೆಟ್ ಒಳಗೆ ಹೊಡೆಯುವಲ್ಲಿ ವಿಫಲರಾದರು.