ಫುಟ್ಬಾಲ್ ಅಭಿವೃದ್ಧಿಯ ವಿಚಾರದಲ್ಲಿ ಉಜ್ಬೇಕಿಸ್ತಾನ, ಜೋರ್ಡಾನ್ ದೇಶಗಳಿಂದ ಭಾರತ ಕಲಿಯಬೇಕಾಗಿದೆ: ಮಾಜಿ ಫುಟ್ಬಾಲ್ ಆಟಗಾರ ಭುಟಿಯಾ
ಮಾಜಿ ಫುಟ್ಬಾಲ್ ಆಟಗಾರ ಭುಟಿಯಾ | Photo Credit : PTI
ಹೊಸದಿಲ್ಲಿ: ಫುಟ್ಬಾಲ್ ಅಭಿವೃದ್ಧಿಯ ವಿಚಾರದಲ್ಲಿ ಭಾರತವು ಉಜ್ಬೇಕಿಸ್ತಾನ ಹಾಗೂ ಜೋರ್ಡಾನ್‌ನಂತಹ ದೇಶಗಳಿಂದ ನಮ್ಮ ದೇಶ ಪಾಠ ಕಲಿಯಬೇಕಾಗಿದೆ ಎಂದು ಭಾರತದ ಮಾಜಿ ಫುಟ್ಬಾಲ್ ಆಟಗಾರ ಭೈಚುಂಗ್ ಭುಟಿಯಾ ಅಭಿಪ್ರಾಯಪಟ್ಟಿದ್ದಾರೆ.
ಉಜ್ಬೇಕಿಸ್ತಾನ ಹಾಗೂ ಜೋರ್ಡಾನ್ ದೇಶಗಳು 2026ರ ಆವೃತ್ತಿಯಲ್ಲಿ ಫಿಫಾ ವಿಶ್ವಕಪ್‌ಗೆ ಪಾದಾರ್ಪಣೆ ಮಾಡಲಿವೆ. ಈ ಎರಡು ತಂಡಗಳು ತನ್ನ ಫುಟ್ಬಾಲ್ ಅಭಿವೃದ್ದಿಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿವೆ.
‘‘ನನ್ನ ವೃತ್ತಿಜೀವನದಲ್ಲಿಯೂ ಉಜ್ಬೇಕಿಸ್ತಾನದೊಂದಿಗೆ ಸಾಕಷ್ಟು ಪಂದ್ಯಗಳನ್ನು ಆಡಿದ್ದೇನೆ. ಉಜ್ಬೇಕಿಸ್ತಾನ ತನ್ನ ಇಡೀ ಫುಟ್ಬಾಲ್ ರಚನೆಯನ್ನು ಬದಲಾಯಿಸಿದ ಪರಿಣಾಮ ವಿಶ್ವಕಪ್‌ನಲ್ಲಿ ಆಡುವಂತಾಗಿದೆ. ಆ ತಂಡದ ಆಟಗಾರರಲ್ಲಿ ಒಬ್ಬರು ಈಗ ಮ್ಯಾಂಚೆಸ್ಟರ್ ಸಿಟಿಯೊಂದಿಗೆ ಆಡುತ್ತಿದ್ದಾರೆ. ಉಜ್ಬೇಕಿಸ್ತಾನಕ್ಕೆ ಫ್ಯಾಬಿಯೊ ಕನ್ನ್ನಾವಾರೊ ಕೋಚ್ ಆಗಿದ್ದಾರೆ. ಫ್ಯಾಬಿಯೊ, ಇಟಲಿ ತಂಡದೊಂದಿಗೆ ವಿಶ್ವಕಪ್ ಗೆದ್ದಿರುವ ಅನುಭವ ಇದೆ. ಇಟಲಿಯನ್ನರು ಈ ಬಾರಿ ವಿಶ್ವಕಪ್‌ಗೆ ಅರ್ಹತೆ ಪಡೆದಿಲ್ಲ. ಆದರೆ ಫ್ಯಾಬಿಯೊ ಅವರು ಉಜ್ಬೇಕಿಸ್ತಾನವನ್ನು ವಿಶ್ವಕಪ್‌ಗೆ ಕರೆದೊಯ್ದಿದ್ದಾರೆ’’ ಎಂದು ಭುಟಿಯಾ ಹೇಳಿದ್ದಾರೆ.
‘‘ಭಾರತವು ಫುಟ್ಬಾಲ್ ಪ್ರಗತಿಗಾಗಿ ಇಂಗ್ಲೆಂಡ್, ಸ್ಪೇನ್, ಪೋರ್ಚುಗಲ್‌ನಂತಹ ಯುರೋಪಿಯನ್ ತಂಡಗಳನ್ನು ಮಾತ್ರ ನೋಡಬೇಕಾಗಿಲ್ಲ. ನಾವು ಉಜ್ಬೇಕಿಸ್ತಾನ ಹಾಗೂ ಜೋರ್ಡಾನ್‌ನಂತಹ ದೇಶಗಳ ಮೇಲೆ ಗಮನ ಕೇಂದ್ರೀಕರಿಸಬೇಕು. ಅವು ಹೇಗೆ ಪ್ರಗತಿ ಸಾಧಿಸಿವೆ ಹಾಗೂ ಅವುಗಳ ಲೀಗ್ ರಚನೆ ಏನೆಂದು ಪರಿಶೀಲಿಸಬೇಕು. ಜಾಗತಿಕ ಕ್ರೀಡಾಕೂಟ ವಿಶ್ವಕಪ್‌ನಲ್ಲಿ 9 ಏಶ್ಯನ್ ತಂಡಗಳು ಭಾಗವಹಿಸುತ್ತಿವೆ. ಈ ಅಂಶವು ಭಾರತಕ್ಕೆ ‘ಮಹಾ ಭರವಸೆ ’ ನೀಡಬೇಕಾಗಿದೆ. ಫಿಫಾವು ವಿಶ್ವಕಪ್ ತಂಡಗಳ ಸಂಖ್ಯೆಯನ್ನು 48ಕ್ಕೆ ಏರಿಸಿದೆ. ಏಶ್ಯದಿಂದ ನೇರವಾಗಿ ಅರ್ಹತೆ ಪಡೆಯಬಹುದಾದ ತಂಡಗಳ ಸಂಖ್ಯೆಯು ನಾಲ್ಕರಿಂದ ಎಂಟಕ್ಕೇರಿದೆ’’ ಎಂದು ಭುಟಿಯಾ ಹೇಳಿದ್ದಾರೆ.