ಏಶ್ಯನ್ ಗೇಮ್ಸ್‌ನಲ್ಲಿ ಇತಿಹಾಸ ನಿರ್ಮಿಸಿದ ಭಾರತದ ಮಹಿಳಾ ಕ್ರಿಕೆಟ್ ತಂಡ : ಟಿ-20 ಕ್ರಿಕೆಟ್‌ನಲ್ಲಿ ಗೆಲುವು
Photo Credit: PTI
ಟೋಕಿಯೊ: ಏಶ್ಯನ್ ಗೇಮ್ಸ್‌ನಲ್ಲಿ ಆತಿಥೇಯ ಜಪಾನ್ ತಂಡದ ವಿರುದ್ಧ ಎಂಟು ವಿಕೆಟ್‌ಗಳಿಂದ ಜಯ ಗಳಿಸಿರುವ ಭಾರತದ ಮಹಿಳಾ ಕ್ರಿಕೆಟ್ ತಂಡವು ಟಿ-20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ ನಿರ್ಮಿಸಿತು.
ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 58 ರನ್ ಗುರಿಯನ್ನು ಕೇವಲ ಐದು ಓವರ್‌ಗಳಲ್ಲಿ ತಲುಪಿದ ಹಾಲಿ ಚಾಂಪಿಯನ್ ಭಾರತ ತಂಡವು ಇನ್ನೂ 90 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ನಗೆ ಬೀರಿತು. ಭಾರತ ತಂಡವು 2022ರಲ್ಲಿ ಥಾಯ್ಲೆಂಡ್ ವಿರುದ್ಧ ನಿರ್ಮಿಸಿದ್ದ ತನ್ನದೇ ದಾಖಲೆ(84 ಎಸೆತಗಳು)ಯನ್ನು ಮುರಿದು ಮುನ್ನುಗ್ಗಿದೆ.
ನಿಶಿನ್‌ನ ಕೊರೊಗಿ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ದಾಖಲೆಯ ಅಂತರದ ಗೆಲುವು ದಾಖಲಿಸಿರುವ ಭಾರತವು ಏಶ್ಯನ್ ಗೇಮ್ಸ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದು, ರವಿವಾರ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.
ಭಾರತದ ಬೌಲಿಂಗ್‌ಗೆ ಶ್ರೀ ಚರಣಿ ಸಾರಥ್ಯ: ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿರುವ ಭಾರತ ತಂಡದ ಬೌಲರ್‌ಗಳು ಜಪಾನ್ ತಂಡವನ್ನು 19.5 ಓವರ್‌ಗಳಲ್ಲಿ ಕೇವಲ 57 ರನ್‌ಗೆ ನಿಯಂತ್ರಿಸಿದರು. ಶ್ರೀ ಚರಣಿ ನಾಲ್ಕು ವಿಕೆಟ್‌ಗಳನ್ನು ಉರುಳಿಸಿ ಬೌಲಿಂಗ್ ದಾಳಿಯ ನೇತೃತ್ವವಹಿಸಿದರು. ಶೆಫಾಲಿ ವರ್ಮಾ ಎರಡು ವಿಕೆಟ್ ಪಡೆದರೆ, ಶ್ರೇಯಾಂಕಾ ಪಾಟೀಲ್ ಹಾಗೂ ದೀಪ್ತಿ ಶರ್ಮಾ ತಲಾ ಒಂದು ವಿಕೆಟನ್ನು ಪಡೆದರು.
ಜಪಾನ್ ತಂಡದ ಪರವಾಗಿ ಅಯಾಕಾ ಕಾಟೊ-ಸ್ಟಾಫೋರ್ಡ್(25 ರನ್, 47 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ಆದರೆ ಇತರ ಆಟಗಾರ್ತಿಯರು ಭಾರತದ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ಉತ್ತರಿಸಲಾಗದೆ ನಿರಂತರವಾಗಿ ವಿಕೆಟ್ ಕೈಚೆಲ್ಲುತ್ತಾ ಸಾಗಿದರು. ಪರಿಣಾಮವಾಗಿ ಸವಾಲಿನ ಮೊತ್ತ ಗಳಿಸುವಲ್ಲಿ ಎಡವಿತು.
ಐದು ಓವರ್‌ಗಳಲ್ಲಿ ಗೆಲುವು ತಂದಿತ್ತ ಶೆಫಾಲಿ: ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳ ಸಹಿತ ಕೇವಲ 15 ಎಸೆತಗಳಲ್ಲಿ ಔಟಾಗದೆ 40 ರನ್ ಗಳಿಸಿದ ಶೆಫಾಲಿ ವರ್ಮಾ ಭಾರತ ತಂಡಕ್ಕೆ ಐದೇ ಓವರ್‌ಗಳಲ್ಲಿ ಗೆಲುವು ತಂದುಕೊಟ್ಟರು. ಭಾರತ ತಂಡವು ಗುಣಲನ್ ಕಮಲಿನಿ ಅವರನ್ನು ಶೂನ್ಯಕ್ಕೆ ಕಳೆದುಕೊಂಡಿತು. ಭಾರತಿ ಫುಲ್ಮಾಲಿ 6 ರನ್‌ಗೆ ವಿಕೆಟ್ ಒಪ್ಪಿಸಿದರು. ಆದರೆ, ಜಪಾನ್ ಇದರ ಲಾಭ ಪಡೆಯವಲ್ಲಿ ವಿಫಲವಾಯಿತು. ಶೆಫಾಲಿಯೊಂದಿಗೆ ಕೈಜೋಡಿಸಿದ ರಿಚಾ ಘೋಷ್(ಔಟಾಗದೆ 12, 6 ಎಸೆತ) ಸುಲಭ ಗೆಲುವು ತಂದುಕೊಟ್ಟರು.
ಗೆಲುವಿಗೆ ಒಂದು ರನ್ ಅಗತ್ಯವಿದ್ದಾಗ ಸಿಮಾಕೊ ಕಾಟೊ ಬೌಲಿಂಗ್‌ನಲ್ಲಿ ಸಿಕ್ಸರ್ ಸಿಡಿಸಿದ ಶೆಫಾಲಿ ತನ್ನದೇ ಶೈಲಿಯಲ್ಲಿ ಪಂದ್ಯಕ್ಕೆ ಅಂತ್ಯ ಹಾಡಿದರು. ಭಾರತ ತಂಡವು 5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 59 ರನ್ ಗಳಿಸಿದ್ದು, 90 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು.
ದಾಖಲೆಯ ಅಂತರದ ಗೆಲುವಿನೊಂದಿಗೆ ಸೆಮಿ ಫೈನಲ್‌ಗೆ ತಲುಪಿರುವ ಭಾರತಕ್ಕೆ ಬಾಂಗ್ಲಾದೇಶ ಎದುರಾಳಿಯಾಗಿದ್ದರೆ, ಪಾಕಿಸ್ತಾನ ತಂಡವು ರವಿವಾರದ ಮತ್ತೊಂದು ಸೆಮಿ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ. 2026ರ ಮಹಿಳೆಯರ ಏಶ್ಯ ಕಪ್ ಸೆಮಿ ಫೈನಲ್‌ನಲ್ಲೂ ಇದೇ ನಾಲ್ಕು ತಂಡಗಳು ತಲುಪಿದ್ದು ವಿಶೇಷವಾಗಿದೆ.