ಏಷ್ಯನ್ ಗೇಮ್ಸ್; ಭಾರತ ಮತ್ತು ಜಪಾನ್ ತಂಡದ ನಡುವೆ ಕ್ವಾರ್ಟರ್ಫೈನಲ್ ಪಂದ್ಯ
Photo Credit : x
ಚೀನಾ ವಿರುದ್ಧ ಕ್ವಾರ್ಟರ್ ಫೈನಲ್ ಮಳೆಯಿಂದ ರದ್ದಾದ ಮೇಲೆ ಬಾಂಗ್ಲಾದೇಶ ಸೆಮಿಫೈನಲ್ನಲ್ಲಿ ವಿಜೇತ ತಂಡಕ್ಕಾಗಿ ಕಾಯುತ್ತಿದೆ.
ಮಹಿಳಾ ಏಷ್ಯಾ ಕಪ್ ಗೆದ್ದಿರುವ ಹುರುಪಿನಲ್ಲಿರುವ ಭಾರತದ ಮಹಿಳಾ ಕ್ರಿಕೆಟ್ ತಂಡವು ಇದೀಗ ಏಷ್ಯನ್ ಗೇಮ್ಸ್ ಚಿನ್ನದ ಮೇಲೆ ಕಣ್ಣಿಟ್ಟಿದೆ. ನಿಶಿನ್ನ ಕೊರೊಗಿ ಸ್ಪೋರ್ಟ್ಸ್ ಪಾರ್ಕ್ನಲ್ಲಿ ಶುಕ್ರವಾರ ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅತಿಥೇಯ ಜಪಾನ್ ವಿರುದ್ಧ ಭಾರತೀಯ ತಂಡ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಈ ಪಂದ್ಯದ ಮೂಲಕ ಹರ್ಮನ್ ಪ್ರೀತ್ ಕೌರ್ ನೇತೃತ್ವದ ತಂಡವು ಏಷ್ಯನ್ ಗೇಮ್ಸ್ ಕ್ರಿಕೆಟ್ನಲ್ಲಿ ತಮ್ಮ ಚಿನ್ನದ ಪದಕ ಉಳಿಸಿಕೊಳ್ಳುವ ಅಭಿಯಾನ ಆರಂಭಿಸಲಿದೆ.
ಬೆಳಿಗ್ಗೆ 10 ಗಂಟೆಗೆ ಪಂದ್ಯ ಆರಂಭವಾಗಿದ್ದು, ಈಗಾಗಲೇ ಜಪಾನ್ ಏಳು ವಿಕೆಟ್ಗಳನ್ನು ಕಳೆದುಕೊಂಡು 55 ರನ್ನುಗಳನ್ನು ಮಾಡಿದೆ. ಶ್ರೀ ಚರಣಿ 4 ವಿಕೆಟ್ಗಳನ್ನು ಕಬಳಿಸಿದರೆ, ಶೆಫಾಲಿ ವರ್ಮ 2 ವಿಕೆಟ್ಗಳನ್ನು ಮತ್ತು ದೀಪ್ತಿ ಶರ್ಮಾ ಒಂದು ವಿಕೆಟ್ ಪಡೆದಿದ್ದಾರೆ.
ಏಷ್ಯಾಕಪ್ ಫೈನಲ್ನಲ್ಲಿ ಶ್ರೀಲಂಕಾವನ್ನು 72 ರನ್ಗಳಿಂದ ಸೋಲಿಸಿ ದಾಖಲೆ ಎಂಟನೇ ಬಾರಿಗೆ ಏಷ್ಯಾ ಕಪ್ ಪ್ರಶಸ್ತಿ ಗೆದ್ದ ನಂತರ ಭಾರತ ತಂಡ ಜಪಾನ್ಗೆ ಆಗಮಿಸುತ್ತಿದೆ. 2023ರಲ್ಲಿ ಹ್ಯಾಂಗ್ಝೌನಲ್ಲಿ ಚಿನ್ನದ ಪದಕ ಗೆದ್ದಿದ್ದ ಭಾರತ, ಈಗ ಅದೇ ಆತ್ಮವಿಶ್ವಾಸದ ಜೊತೆಗೆ ಏಷ್ಯನ್ ಗೇಮ್ಸ್ನಲ್ಲಿ ಮುಂದುವರಿಯಲು ಸಜ್ಜಾಗಿದೆ.
ಇನ್ನೊಂದೆಡೆ ಪ್ರಬಲ ತಂಡಕ್ಕೆ ಸವಾಲು ಹಾಕಲು ಸಿದ್ಧವಾಗಿರುವ ಜಪಾನ್, ತವರಿನ ಅಂಗಣದ ಸ್ಥಿತಿ ಮತ್ತು ಅನುಭವಿ ಆಟಗಾತಿಯರ ಸಾಮರ್ಥ್ಯದ ಮೇಲೆ ಭರವಸೆ ಇರಿಸಿದೆ.
ಭಾರತದ ಬ್ಯಾಟಿಂಗ್ ವಿಭಾಗವು ಪಂದ್ಯಾವಳಿಯಲ್ಲಿ ಮತ್ತೊಮ್ಮೆ ಪ್ರಮುಖ ಪಾತ್ರವಹಿಸಲಿದೆ. ಸ್ಮೃತಿ ಮಂಧನಾ ಮತ್ತು ಶಫಾಲಿ ವರ್ಮಾ ಪ್ರಬಲ ಆರಂಭಿಕ ಜೋಡಿಯಾಗಿ ಕಣಕ್ಕಿಳಿಯಲಿದ್ದಾರೆ ಏಷ್ಯಾ ಕಪ್ನಲ್ಲಿ ಮಿಥಾಲಿ ರಾಜ್ ಅವರ 10,868 ರನ್ಗಳ ದಾಖಲೆ ಮುರಿದು ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾತಿಯಾಗಿ ಮಂಧನಾ ಈ ಪಂದ್ಯಾವಳಿಗೆ ಆಗಮಿಸುತ್ತಿದ್ದಾರೆ. ಅಲ್ಲದೆ ಅವರು ಹಾಂಗ್ಕಾಂಗ್ ವಿರುದ್ಧ 64 ಎಸೆತಗಳಲ್ಲಿ 124 ರನ್ಗಳನ್ನು ಸಿಡಿಸಿದ್ದರು.
ಶಫಾಲಿ ಏಷ್ಯಾಕಪ್ನಲ್ಲಿ 236 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದುಕೊಂಡಿದ್ದರು. ಮಹಿಳಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 3000 ರನ್ ಪೂರೈಸಿದ ಅತ್ಯಂತ ಕಿರಿಯ ಮತ್ತು ವೇಗದ ಆಟಗಾತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅವರ ಆಕ್ರಮಣಕಾರಿ ಆಟದ ಶೈಲಿಯಿಂದಾಗಿ ಆರಂಭಿಕ ಹಂತದಲ್ಲಿಯೇ ಭಾರತಕ್ಕೆ ಎದುರಾಳಿಯ ಮೇಲೆ ಸವಾರಿ ಮಾಡುವ ಅವಕಾಶ ಒದಗಿಸುತ್ತದೆ.
ದೀಪ್ತಿ ಶರ್ಮಾ ತಂಡದ ಮತ್ತೊಬ್ಬ ಪ್ರಮುಖ ಆಟಗಾತಿಯಾಗಿದ್ದು, ಆಲ್ರೌಂಡರ್ ಆಗಿ ನಿಯಂತ್ರಣ ಒದಗಿಸಲಿದ್ದಾರೆ. ನಾಯಕಿ ಹರ್ಮನ್ ಪ್ರೀತ್ ಕೌರ್ ಮಧ್ಯಮ ಕ್ರಮಾಂಕದಲ್ಲಿ ತಂಡದ ಪ್ರಮುಖ ಆಧಾರ ಸ್ತಂಭವಾಗಲಿದ್ದಾರೆ. ಕಣಕಾಲು ಗಾಯದಿಂದ ಚೇತರಿಸಿಕೊಂಡಿರುವ ಶ್ರೇಯಾಂಕ ಪಾಟೀಲ್ ಫಿಟ್ ಆಗಿರುವುದು ಭಾರತಕ್ಕೆ ದೊಡ್ಡ ಬಲ ನೀಡಿದೆ. ಅವರ ಮರಳುವಿಕೆ ಗುಣಮಟ್ಟದ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಸೇರ್ಪಡೆಯಾದಂತಾಗಿದೆ.
ಜಪಾನ್ನ ನಿರೀಕ್ಷೆಗಳು ಮುಖ್ಯವಾಗಿ ನಾಯಕಿ ಮಾಯಿ ಯನಗಿಡಾ ಅವರ ಮೇಲಿವೆ. 33 ವರ್ಷದ ಆಲ್ರೌಂಡರ್ 2014ರ ಏಷ್ಯನ್ ಗೇಮ್ಸ್ ಜಪಾನ್ ತಂಡದ ಭಾಗವಾಗಿದ್ದರು. ಬಲಗೈ ಬ್ಯಾಟಿಂಗ್ ಮತ್ತು ಲೆಗ್ಸ್ಪಿನ್ ಮೂಲಕ ತಂಡದ ಪ್ರಮುಖ ಆಟಗಾತಿಯಾಗಿದ್ದಾರೆ. ಯನಗಿಡಾ ಜಪಾನ್ ಪರವಾಗಿ 61 ಟಿ20 ಪಂದ್ಯಗಳನ್ನು ಆಡಿ 777 ರನ್ ಗಳಿಸಿದ್ದಾರೆ. 27 ವಿಕೆಟ್ ಕಬಳಿಸಿದ್ದಾರೆ. ಒಂದು ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದ ಸಾಧನೆಯನ್ನೂ ಮಾಡಿದ್ದಾರೆ.
48 ಪಂದ್ಯಗಳಲ್ಲಿ 41 ವಿಕೆಟ್ಗಳನ್ನು ತೆಗೆದಿರುವ ಎಡಗೈ ವೇಗದ ಬೌಲರ್ ಅಹಲ್ಯಾ ಚಾಂಡೆಲ್ ಮತ್ತೊಬ್ಬ ಪ್ರಮುಖ ಆಟಗಾತಿಯಾಗಿದ್ದಾರೆ. ಉಳಿದಂತೆ ಎರಿಕಾ ಒಡಾ ಜಪಾನ್ ಪರ ಅತಿಹೆಚ್ಚು ರನ್ ಗಳಿಸಿದ ಆಟಗಾತಿಯಾಗಿದ್ದು, 51 ಪಂದ್ಯಗಳಿಂದ 802 ರನ್ ಗಳಿಸಿದ್ದಾರೆ. ಕುರುಮಿ ಒಟಾ 2014ರ ಏಷ್ಯನ್ ಗೇಮ್ಸ್ ತಂಡದ ಭಾಗವಾಗಿದ್ದ ಅನುಭವಿ ಆಟಗಾತಿಯಾಗಿದ್ದಾರೆ.
ಚೀನಾ ವಿರುದ್ಧ ಕ್ವಾರ್ಟರ್ ಫೈನಲ್ ಮಳೆಯಿಂದ ರದ್ದಾದ ಮೇಲೆ ಬಾಂಗ್ಲಾದೇಶ ಸೆಮಿಫೈನಲ್ನಲ್ಲಿ ಕಾಯುತ್ತಿದೆ. ಹೀಗಾಗಿ ಭಾರತದ ತಕ್ಷಣದ ಗುರಿ ಸೆಮಿಫೈನಲ್ನಲ್ಲಿ ಸ್ಥಾನ ಪಡೆಯುವುದು ಆಗಿರುತ್ತದೆ. ಏಷ್ಯಕ್ ಕ್ರೀಡಾಕೂಟದ ನಾಕೌಟ್ನಲ್ಲಿ ಜಪಾನ್ ತನ್ನ ತವರಿನ ಅನುಕೂಲ ಬಳಸಿಕೊಳ್ಳಲು ಆಶಿಸುತ್ತಿದೆ. ಭಾರತ ಮತ್ತೊಂದು ಚಿನ್ನದ ಓಟದತ್ತ ಕಣ್ಣಿಟ್ಟಿದೆ.