×
Ad

Italian Open | ಜನ್ನಿಕ್ ಸಿನ್ನರ್ ಕ್ವಾರ್ಟರ್ ಫೈನಲ್ ಗೆ

ಜೊಕೊವಿಕ್ ದಾಖಲೆ ಸರಿಗಟ್ಟಿದ ಸಿನ್ನರ್

Update: 2026-05-13 21:52 IST

ಜನ್ನಿಕ್ ಸಿನ್ನರ್ | Photo Credit : PTI 

ರೋಮ್, ಮೇ 13: ಇಟಾಲಿಯನ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಮಂಗಳವಾರ ಪುರುಷರ ಸಿಂಗಲ್ಸ್‌ ನಲ್ಲಿ ಇಟಲಿ ಆಟಗಾರ ಜನ್ನಿಕ್ ಸಿನ್ನರ್ ತಮ್ಮದೇ ದೇಶದ ಆ್ಯಂಡ್ರೀ ಪೆಲೆಗ್ರಿನೊರನ್ನು 6-2, 6-3 ಸೆಟ್‌ ಗಳಿಂದ ಸೋಲಿಸಿ ಕ್ವಾರ್ಟರ್‌ ಫೈನಲ್ ತಲುಪಿದ್ದಾರೆ. ಇದರೊಂದಿಗೆ, ಮಾಸ್ಟರ್ಸ್ ಸರಣಿಯಲ್ಲಿ ನಿರಂತರ 31 ಪಂದ್ಯಗಳನ್ನು ಗೆದ್ದು ನೊವಾಕ್ ಜೊಕೊವಿಕ್ ಅವರ ಸಾಧನೆಯನ್ನು ಸರಿಗಟ್ಟಿದ್ದಾರೆ.

ಗ್ರ್ಯಾನ್ ಸ್ಲಾಮ್ ಗಳ ಬಳಿಕ ಮಾಸ್ಟರ್ಸ್ ಸರಣಿಯು ಅತಿ ದೊಡ್ಡ ಪಂದ್ಯಾವಳಿಗಳಾಗಿವೆ. ಕಳೆದ ವರ್ಷದ ಅಕ್ಟೋಬರ್ ನಲ್ಲಿ ಶಾಂಘೈನಲ್ಲಿ ಅತಿಯಾದ ಶಾಖದಿಂದಾಗಿ ಮೀನಖಂಡದ ಸೆಳೆತಕ್ಕೊಳಗಾಗಿ ಟಲೋನ್ ಗ್ರೀಕ್ ಸ್ಪೂರ್ ವಿರುದ್ಧದ ಪಂದ್ಯದಿಂದ ಸಿನ್ನರ್ ನಿವೃತ್ತಿಗೊಂಡಿದ್ದರು. ಆ ಬಳಿಕ ಅವರು ಯಾವುದೇ ಮಾಸ್ಟರ್ಸ್ ಸರಣಿಯ ಪಂದ್ಯದಲ್ಲಿ ಸೋತಿಲ್ಲ.

ಜೊಕೊವಿಕ್ 2011ರಲ್ಲಿ ಮಾಸ್ಟರ್ಸ್ ಸರಣಿಯಲ್ಲಿ ಸತತ 31ನೇ ಪಂದ್ಯವನ್ನು ಗೆದ್ದಿದ್ದರು. ರೋಮ್ನಲ್ಲಿ ಸಿನ್ನರ್ ಟ್ರೋಫಿ ಗೆದ್ದರೆ, ಎಲ್ಲಾ ಒಂಭತ್ತು ಮಾಸ್ಟರ್ಸ್ 1000 ಪಂದ್ಯಾವಳಿಗಳನ್ನು ಗೆದ್ದ ಎರಡನೇ ಆಟಗಾರ ಆಗಲಿದ್ದಾರೆ. ಇದಕ್ಕೂ ಮೊದಲು ಈ ಸಾಧನೆಯನ್ನು ಜೊಕೊವಿಕ್ ಮಾಡಿದ್ದಾರೆ. ಅವರು ಪ್ರತಿಯೊಂದು ಮಾಸ್ಟರ್ಸ್ ಪಂದ್ಯಾವಳಿಯನ್ನು ಕನಿಷ್ಠ ಎರಡು ಬಾರಿ ಗೆದ್ದಿದ್ದಾರೆ.

ಸ್ಪೇನ್ನ ಕಾರ್ಲೋಸ್ ಅಲ್ಕರಾಝ್ ಮಣಿಗಂಟಿನ ಗಾಯದಿಂದಾಗಿ ಪಂದ್ಯಾವಳಿಯಿಂದ ಹೊರಗಿರುವುದರಿಂದ, ಈ ಬಾರಿಯ ಇಟಾಲಿಯನ್ ಓಪನ್ ಪಂದ್ಯಾವಳಿಯನ್ನು ಸಿನ್ನರ್ ಗೆಲ್ಲುವ ಸಾಧ್ಯತೆಗಳು ದಟ್ಟವಾಗಿವೆ.

► ಸೊರಾನಾ ಸರ್ಸ್ಟೀ ಸೆಮಿಫೈನಲ್‌ ಗೆ

ಇಟಾಲಿಯನ್ ಓಪನ್ ಮಹಿಳಾ ಸಿಂಗಲ್ಸ್‌ ನಲ್ಲಿ, ರೊಮೇನಿಯದ ಸೊರಾನಾ ಸರ್ಸ್ಟೀ ಸೆಮಿಫೈನಲ್ ತಲುಪಿದ್ದಾರೆ. ಮಂಗಳವಾರ ನಡೆದ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಅವರು ಮಾಜಿ ಫ್ರೆಂಚ್ ಓಪನ್ ಚಾಂಪಿಯನ್ ಜೆಲೀನಾ ಒಸ್ಟಪೆಂಕೊರನ್ನು 6-1, 7-6(0) ಸೆಟ್‌ ಗಳಿಂದ ಹಿಮ್ಮೆಟ್ಟಿಸಿದರು.

ಸೊರಾನಾ ಸೆಮಿಫೈನಲ್‌ ನಲ್ಲಿ ಅಮೆರಿಕದ ಕೋಕೊ ಗೌಫ್ ಅವರನ್ನು ಎದುರಿಸಲಿದ್ದಾರೆ.

ಇನ್ನೊಂದು ಕ್ವಾರ್ಟರ್‌ ಫೈನಲ್‌ ನಲ್ಲಿ ಗೌಫ್, ರಷ್ಯದ ಹದಿಹರಯದ ಮಿರಾ ಆ್ಯಂಡ್ರೀವರನ್ನು 4-6, 6-2, 6-4 ಸೆಟ್‌ ಗಳಿಂದ ಸೋಲಿಸಿದರು.

36 ವರ್ಷದ ಸೊರಾನಾ ಈ ವರ್ಷದ ಕೊನೆಯಲ್ಲಿ ನಿವೃತ್ತಿಗೊಳ್ಳಲು ಉದ್ದೇಶಿಸಿದ್ದಾರೆ. ಅವರು ಶನಿವಾರ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂಬರ್ ವನ್ ಬೆಲಾರುಸ್ ನ ಅರೈನಾ ಸಬಲೆಂಕಾ ಅವರನ್ನು ಸೋಲಿಸಿ ಈಗಾಗಲೇ ಈ ಪಂದ್ಯಾವಳಿಯ ಅಚ್ಚರಿಯ ಫಲಿತಾಂಶವನ್ನು ನೀಡಿದ್ದಾರೆ. ಅವರು ಸೆಮಿಫೈನಲ್ ನಲ್ಲಿ ಗೆದ್ದರೆ ತಮ್ಮ ಕ್ರೀಡಾ ಜೀವನದಲ್ಲೇ ಮೊದಲ ಬಾರಿಗೆ ರ್ಯಾಂ ಕಿಂಗ್‌ ನಲ್ಲಿ ಅಗ್ರ 20ರ ಗುಂಪಿಗೆ ಸೇರಲಿದ್ದಾರೆ. ಅವರ ಈವರೆಗಿನ ಗರಿಷ್ಠ ರ್ಯಾಂ ಕಿಂಗ್ 21 ಆಗಿದೆ. ಇದನ್ನು ಅವರು 2013ರ ಆಗಸ್ಟ್‌ ನಲ್ಲಿ ಸಾಧಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News