Photo Credit : x 

ಹೊಸದಿಲ್ಲಿ: ಕೋಲ್ಕತಾದಲ್ಲಿ ಉಭಯ ದೇಶಗಳ ರಾಷ್ಟ್ರೀಯ ತಂಡಗಳು ಮುಖಾಮುಖಿಯಾಗುವ ಸುಮಾರು ಒಂದು ವಾರದ ಮೊದಲು ಕೊಚ್ಚಿಯ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಬ್ರೆಝಿಲ್ ಹಾಗೂ ಭಾರತದ ಲೆಜೆಂಡ್ ಆಟಗಾರರ ನಡುವೆ ಪ್ರದರ್ಶನ ಫುಟ್ಬಾಲ್ ಪಂದ್ಯ ಆಯೋಜಿಸಲು ನಿರ್ಧರಿಸಲಾಗಿದೆ.

ಬ್ರೆಝಿಲ್‌ನ ಲೆಜೆಂಡ್‌ಗಳ ತಂಡದಲ್ಲಿ ಬ್ಯಾಲನ್‌ಡಿ’ಒರ್ ಪ್ರಶಸ್ತಿ ವಿಜೇತ ರೊನಾಲ್ಡಿನೊ(2005)ಹಾಗೂ ರಿವಾಲ್ಡೊ(1999) ಅವರಿದ್ದಾರೆ. ಈ ಇಬ್ಬರು ಫಾರ್ವರ್ಡ್ ಆಟಗಾರರು 2002ರಲ್ಲಿ ವಿಶ್ವಕಪ್ ವಿಜೇತ ಬ್ರೆಝಿಲ್ ತಂಡದಲ್ಲಿದ್ದರು. ದಕ್ಷಿಣ ಅಮೆರಿಕ ದೇಶವು 2002ರಲ್ಲಿ ಕೊನೆಯ ಬಾರಿ ವಿಶ್ವಕಪ್ ಎತ್ತಿ ಹಿಡಿದಿತ್ತು.

ಪ್ರದರ್ಶನ ಪಂದ್ಯವನ್ನು ಚೆನ್ನೈ ಮೂಲದ ಗಾಮ್ಮೆನ್ ಸ್ಪೋರ್ಟ್ಸ್ ಸೆ.23ರಂದು ಆಯೋಜಿಸಲಿದೆ. ಕಳೆದ ವರ್ಷ ಚೆನ್ನೈನಲ್ಲಿ ಪ್ರದರ್ಶನ ಪಂದ್ಯ ನಡೆದಿತ್ತು. ಆಗ ಬ್ರೆಝಿಲ್ ಲೆಜೆಂಡ್ ತಂಡವು 2-1 ಅಂತರದಿಂದ ಪಂದ್ಯ ಗೆದ್ದುಕೊಂಡಿತ್ತು. ಆಗ ರಿಕಾರ್ಡೊ ಒಲಿವೆರಾ ಹಾಗೂ ಅಲ್ವಿಟೊ ಬ್ರೆಝಿಲ್ ಪರ ತಲಾ ಒಂದು ಗೋಲು ಗಳಿಸಿದ್ದರು. ಭಾರತದ ಪರ ಬಿಬಿಯಾನೊ ಫೆರ್ನಾಂಡಿಸ್ ಒಂದು ಗೋಲು ಗಳಿಸಿದ್ದರು. ಚೆನ್ನೈನಲ್ಲಿ ನಡೆದಿದ್ದ ಪಂದ್ಯದಲ್ಲಿ ರಿವಾಲ್ಡೊ ಹಾಗೂ ರೊನಾಲ್ಡಿನೊ ಕೂಡ ಮಿಂಚಿದ್ದರು.

ಕೊಚ್ಚಿಯಲ್ಲಿ ನಡೆಯಲಿರುವ ಪಂದ್ಯದ ಮೂಲಕ ರೊನಾಲ್ಡಿನೊ 10 ವರ್ಷಗಳ ನಂತರ ಕೇರಳಕ್ಕೆ ಮರಳಲಿದ್ದಾರೆ. 2016ರಲ್ಲಿ ಬಾರ್ಸಿಲೋನ ಹಾಗೂ ಎಸಿ ಮಿಲನ್‌ನ ಮಾಜಿ ಸ್ಟ್ರೈಕರ್ ಫುಟ್ಬಾಲ್ ಟೂರ್ನಮೆಂಟ್‌ನ ಬ್ರ್ಯಾಂಡ್ ರಾಯಭಾರಿಯಾಗಿ ಕೋಝಿಕ್ಕೋಡ್‌ಗೆ ಆಗಮಿಸಿದ್ದರು.

ಭಾರತೀಯ ಫುಟ್ಬಾಲ್ ಲೆಜೆಂಡ್‌ಗಳ ಪೈಕಿ ಐ.ಎಂ. ವಿಜಯನ್ ಅವರು ಕೇರಳದ ಹುಡುಗರಾದ ಕೆ.ಟಿ. ಚಾಕೊ, ಜೋ ಪೌಲ್, ಸಿ.ಕೆ. ವಿನೀತ್ ಹಾಗೂ ಎನ್.ಪಿ. ಪ್ರದೀಪ್ ಅವರೊಂದಿಗೆ ತವರು ಪ್ರೇಕ್ಷಕರ ಸಮ್ಮುಖದಲ್ಲಿ ಆಡುವ ಅವಕಾಶ ಪಡೆದಿದ್ದಾರೆ.

ಈ ಹಿಂದಿನ ಪಂದ್ಯದಲ್ಲಿ ಭಾರತದ ಪರ ಗೋಲು ಗಳಿಸಿದ್ದ ಬಿಬಿಯಾನೊ ಕೂಡ ಪಟ್ಟಿಯಲ್ಲಿದ್ದಾರೆ. ಭಾರತದ ಮಾಜಿ ನಾಯಕ ಭೈಚುಂಗ್ ಭುಟಿಯಾ ಲಭ್ಯವಿಲ್ಲ. ಕೇರಳ ಕ್ಲಬ್‌ನ ಹಿರಿಯ ಆಟಗಾರರು, ಈಸ್ಟ್ ಬಂಗಾಲದ ಮಾಜಿ ಸ್ಟಾರ್‌ಗಳಾದ ಮೆಹ್ತಾಬ್ ಹುಸೇನ್ ಹಾಗೂ ಮುತ್ತತ್ ಸುರೇಶ್ ಅವರು ಎರಡು ಬಾರಿ ಇಂಡಿಯನ್ ಸೂಪರ್ ಲೀಗ್ ವಿನ್ನರ್ ಅರ್ನಾಬ್ ಮಂಡಲ್ ಅವರು ಕೂಡ ಭಾರತದ ಲೆಜೆಂಡ್ ತಂಡದಲ್ಲಿದ್ದಾರೆ.

ಅಕ್ಟೋಬರ್ 3ರಂದು ಭಾರತ ಹಾಗೂ ಬ್ರೆಝಿಲ್‌ನ ಸೀನಿಯರ್ ಪುರುಷರ ರಾಷ್ಟ್ರೀಯ ತಂಡಗಳ ನಡುವಿನ ಮೊತ್ತ ಮೊದಲ ಹಣಾಹಣಿಗೆ ಈ ಪ್ರದರ್ಶನ ಪಂದ್ಯವು ಭಾರತದ ಪಾಲಿಗೆ ವೇದಿಕೆಯಾಗುವ ನಿರೀಕ್ಷೆ ಇದೆ.

ಬ್ರೆಝಿಲ್‌ನ ಲೆಜೆಂಡ್ ಕಾಫು ಕಳೆದ ಕೆಲವು ವಾರಗಳಿಂದ ಭಾರತದ ಹಲವು ನಗರಗಳಿಗೆ ಭೇಟಿ ನೀಡಿದ್ದು, ಕೋಲ್ಕತಾದ ಸಾಲ್ಟ್‌ಲೇಕ್ ಸ್ಟೇಡಿಯಂನಲ್ಲಿ ನಡೆಯಲಿರುವ ಅಂತರ್‌ರಾಷ್ಟ್ರೀಯ ಪಂದ್ಯಕ್ಕೆ ಸಜ್ಜಾಗುತ್ತಿದ್ದಾರೆ.

ಭಾರತ-ಬ್ರೆಝಿಲ್ ಲೆಜೆಂಡ್‌ಗಳ ನಡುವಿನ ಪಂದ್ಯದ ಟಿಕೆಟ್‌ಗಳು ಈಗಾಗಲೇ ಡಿಸ್ಟ್ರಿಕ್ಟ್ ಆ್ಯಪ್‌ನಲ್ಲಿ ಲಭ್ಯವಿದೆ. ಅರ್ಲಿ ಬರ್ಡ್ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ. ಆದರೆ ಬಹುತೇಕ ಸ್ಟ್ಯಾಂಡ್‌ಗಳ ಆಸನಗಳು ಲಭ್ಯವಿದೆ. ಟಿಕೆಟ್‌ಗಳು 1,125ರಿಂದ 9,375 ರೂ. ತನಕ ಲಭ್ಯವಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor