ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ | ಇಮ್ರಾನ್ ಖಾನ್ ಪುತ್ರರ ಸಂದರ್ಶನ ಪ್ರಸಾರ ಮಾಡಿದ್ದಕ್ಕೆ ಪಾಕಿಸ್ತಾನ ಆಟಗಾರರನ್ನು ಮೈದಾನಕ್ಕಿಳಿಸಲು PCB ನಿರಾಕರಣೆ : ವರದಿ
Screengrab: Sky Sports
ಹೊಸದಿಲ್ಲಿ : ಇಂಗ್ಲೆಂಡಿನ ಲಾರ್ಡ್ಸ್‌ನಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದ ಊಟದ ವಿರಾಮದ ವೇಳೆ ಪಾಕಿಸ್ತಾನದ ಮಾಜಿ ಪ್ರಧಾನಿ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರ ಪುತ್ರರ ಜೊತೆಗಿನ ಭಾವನಾತ್ಮಕ ಸಂದರ್ಶನವನ್ನು ಪ್ರಸಾರ ಮಾಡಿದ್ದಕ್ಕೆ Sky Sports ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಸಮಾಧಾನಗೊಂಡಿದೆ.
ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನ ಮೊದಲ ದಿನದಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಇಮ್ರಾನ್ ಖಾನ್ ಅವರ ಪುತ್ರರ ಜೊತೆಗಿನ ಸಂದರ್ಶನ ಮಧ್ಯಾಹ್ನದ ಊಟದ ವಿರಾಮದ ವೇಳೆ ಪ್ರಸಾರ ಮಾಡದಂತೆ ಆತಿಥೇಯ ತಂಡದ ಪ್ರಸಾರಕ ಸಂಸ್ಥೆ ಸ್ಕೈ ಸ್ಪೋರ್ಟ್ಸ್‌ಗೆ ಸೂಚಿಸಿತ್ತು. ತಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ಪಂದ್ಯದಿಂದ ಹೊರನಡೆಯುವುದಾಗಿ ಪಾಕಿಸ್ತಾನ ಬೆದರಿಕೆ ಹಾಕಿತ್ತು. ಆದರೆ, ಸ್ಕೈ ಸ್ಪೋರ್ಟ್ಸ್ ತನ್ನ ಸಂದರ್ಶನವನ್ನು ಪ್ರಸಾರ ಮಾಡಿತ್ತು. ಇದರಿಂದ ಆಕ್ರೋಶಗೊಂಡ ಪಿಸಿಬಿ ತಮ್ಮ ಆಟಗಾರರಿಗೆ ಮೈದಾನಕ್ಕಿಳಿಯದಂತೆ ಸೂಚಿಸಿತ್ತು ಎನ್ನಲಾಗಿದೆ.
ಇಮ್ರಾನ್ ಖಾನ್ ಪುತ್ರರಾದ ಸುಲೇಮಾನ್ ಮತ್ತು ಖಾಸಿಂ ಖಾನ್ ಅವರ 18 ನಿಮಿಷಗಳ ಸಂದರ್ಶನವನ್ನು ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಮೈಕೆಲ್ ಅಥರ್ಟನ್ ನಡೆಸಿದ್ದರು. ಇಮ್ರಾನ್ ಖಾನ್ ಅವರ ಆರೋಗ್ಯದ ಬಗ್ಗೆ ಗಮನಹರಿಸುವಂತೆ ಪಾಕಿಸ್ತಾನದ ಪ್ರಧಾನಿಗೆ ಪತ್ರ ಬರೆದ 21 ಮಾಜಿ ನಾಯಕರಲ್ಲಿ ಅಥರ್ಟನ್ ಕೂಡ ಒಬ್ಬರು.
ಸಂದರ್ಶನದಲ್ಲಿ, ಇಮ್ರಾನ್ ಖಾನ್ ಅವರ ಪುತ್ರರಾದ ಸುಲೇಮಾನ್ ಮತ್ತು ಖಾಸಿಂ ಖಾನ್, ಜೈಲಿನಲ್ಲಿರುವ ತಮ್ಮ ತಂದೆಯ ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಜೈಲಿನಲ್ಲಿ ತಮ್ಮ ತಂದೆಯ ಜೀವಕ್ಕೆ ಗಂಭೀರ ಅಪಾಯವಿದೆ ಎಂದು ಆರೋಪಿಸಿದ್ದರು.
“ಅವರು ಏನು ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಅಲ್ಲಿ ಅವರನ್ನು ಬಹಿರಂಗವಾಗಿಯೇ ಹತ್ಯೆ ಮಾಡಲು ಪ್ರಯತ್ನಿಸುತ್ತಿರುವಂತೆ ಕಾಣುತ್ತಿದೆ. ಸಾಧ್ಯವಾದಷ್ಟು ದೀರ್ಘಕಾಲ ಅವರನ್ನು ಜೈಲಿನಲ್ಲೇ ಇರಿಸಿ, ಅವರ ಧ್ವನಿಯನ್ನು ಅಡಗಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಖಾಸಿಂ ಸಂದರ್ಶನದಲ್ಲಿ ಹೇಳಿದ್ದರು.
ಟೆಸ್ಟ್ ಪಂದ್ಯದ ವೇಳೆ ಇಮ್ರಾನ್ ಖಾನ್ ಅವರ ಪುತ್ರರ ಸಂದರ್ಶನ ಪ್ರಸಾರ ಮಾಡಿರುವುದಕ್ಕೆ PCB ಅಸಮಾಧಾನಗೊಂಡಿದೆ ಎಂದು Cricinfo ಮತ್ತು The Guardian ಸೇರಿದಂತೆ ಹಲವು ಮಾಧ್ಯಮಗಳು ವರದಿ ಮಾಡಿದೆ. ಸಂದರ್ಶನವನ್ನು ಪ್ರಸಾರ ಮಾಡಿದರೆ ಬಾಬರ್ ಅಝಂ ನೇತೃತ್ವದ ಪಾಕಿಸ್ತಾನ ತಂಡ ಮೈದಾನಕ್ಕಿಳಿಯುವುದಿಲ್ಲ ಎಂದು ಮಂಡಳಿ ಹೇಳಿತ್ತು. PCBಯ ಬೆದರಿಕೆಯ ನಡುವೆಯೂ ಸ್ಕೈ ಸ್ಪೋರ್ಟ್ಸ್ ಸಂದರ್ಶನದ ಪ್ರಸಾರವನ್ನು ಮುಂದುವರಿಸಿತು. ಆದರೆ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಸಮಯೋಚಿತವಾಗಿ ಮಧ್ಯಪ್ರವೇಶಿಸಿದ ಹಿನ್ನೆಲೆಯಲ್ಲಿ, ಊಟದ ವಿರಾಮದ ನಂತರದ ಪಾಕಿಸ್ತಾನ ತಂಡ ಅಂತಿಮವಾಗಿ ಮೈದಾನಕ್ಕಿಳಿಯಿತು ಎಂದು ವರದಿಯಾಗಿದೆ.