ICC ಟೆಸ್ಟ್ ಬೌಲಿಂಗ್ ರ‍್ಯಾಂಕಿಂಗ್; ಬುಮ್ರಾರನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದ ಸ್ಟಾರ್ಕ್
Photo Credit: icc-cricket.com
ದುಬೈ, ಆ.26: ಮಕಾಯ್ ನಲ್ಲಿ ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಗಳ ಗೊಂಚಲು ಪಡೆದಿದ್ದ ಮಿಚೆಲ್ ಸ್ಟಾರ್ಕ್ ಐಸಿಸಿ ಪುರುಷರ ಟೆಸ್ಟ್ ಬೌಲಿಂಗ್ ರ‍್ಯಾಂಕಿಂಗ್ಸ್ ನಲ್ಲಿ ಭಾರತದ ವೇಗಿ ಜಸ್ಪ್ರಿತ್ ಬುಮ್ರಾರನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದ್ದಾರೆ.
ಆಸ್ಟ್ರೇಲಿಯದ ಹಿರಿಯ ಬೌಲರ್ ಸ್ಟಾರ್ಕ್ ತಮ್ಮ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿ ಟೆಸ್ಟ್ ಬೌಲಿಂಗ್ ರ‍್ಯಾಂಕಿಂಗ್ಸ್ನಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ.
ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 12 ರನ್ಗೆ 6 ಹಾಗೂ 39 ರನ್ಗೆ 4 ವಿಕೆಟ್ ಗಳನ್ನು ಉರುಳಿಸಿ ಆಸ್ಟ್ರೇಲಿಯ ತಂಡವು ಬಾಂಗ್ಲಾದೇಶ ವಿರುದ್ಧ ಇನಿಂಗ್ಸ್ ಹಾಗೂ 51 ರನ್ ಗಳಿಂದ ಜಯಶಾಲಿಯಾಗಿ ಸರಣಿ ಗೆಲ್ಲುವಲ್ಲಿ ನೆರವಾಗಿದ್ದ ಸ್ಟಾರ್ಕ್ ರ್ಯಾಂ ಕಿಂಗ್ ನಲ್ಲಿ ಎರಡು ಸ್ಥಾನ ಭಡ್ತಿ ಪಡೆದಿದ್ದಾರೆ.
ಬುಮ್ರಾ ಎರಡನೇ ಸ್ಥಾನಕ್ಕೆ ಕುಸಿದರೆ, ನ್ಯೂಝಿಲ್ಯಾಂಡ್ ಬೌಲರ್ ಮ್ಯಾಟ್ ಹೆನ್ರಿ ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ.
ಮಕಾಯ್ ನಲ್ಲಿ 25 ರನ್ ಗೆ 3 ಹಾಗೂ 10 ರನ್ ಗೆ 3 ವಿಕೆಟ್ ಗಳನ್ನು ಉರುಳಿಸಿದ್ದ ಪ್ಯಾಟ್ ಕಮಿನ್ಸ್ ಕೂಡ ರ‍್ಯಾಂಕಿಂಗ್ ನಲ್ಲಿ ನಾಲ್ಕನೇ ಸ್ಥಾನಕ್ಕೇರಿದರು. ಎರಡನೇ ಇನಿಂಗ್ಸ್ನಲ್ಲಿ ತನ್ನ ಮೂರು ವಿಕೆಟ್ ಗಳ ಗೊಂಚಲು ಪಡೆದು ಎರಡು ಸ್ಥಾನ ಮೇಲಕ್ಕೇರಿದ ಸ್ಪಿನ್ನರ್ ನಾಥನ್ ಲಿಯೊನ್ ಅಗ್ರ-10ರೊಳಗೆ ಪ್ರವೇಶಿಸಿದರು.
ತಮ್ಮ ಪುನರಾಗಮನದ ಟೆಸ್ಟ್ ಪಂದ್ಯದಲ್ಲಿ ಎಂಟು ವಿಕೆಟ್ ಗಳನ್ನು ಪಡೆದಿರುವ ಇಂಗ್ಲೆಂಡ್ ಬೌಲರ್ ಓಲಿ ರಾಬಿನ್ಸನ್ 15 ಸ್ಥಾನ ಮೇಲಕ್ಕೇರಿ ರ್ಯಾಂ ಕಿಂಗ್ ನಲ್ಲಿ 11ನೇ ಸ್ಥಾನಕ್ಕೇರಿದರು. ರಾಬಿನ್ಸನ್ ಸಾಹಸದಿಂದ ಹೆಡ್ಡಿಂಗ್ಲೆಯಲ್ಲಿ ಇಂಗ್ಲೆಂಡ್ ತಂಡವು ಪಾಕಿಸ್ತಾನ ತಂಡವನ್ನು ಇನಿಂಗ್ಸ್ ಹಾಗೂ 103 ರನ್ ಗಳಿಂದ ಮಣಿಸಿತ್ತು.
ಲೀಡ್ಸ್ ನಲ್ಲಿ ಎಂಟು ವಿಕೆಟ್ ಗಳನ್ನು ಪಡೆದಿದ್ದ ಜೋಶ್ ಟೊಂಗ್ 16 ಸ್ಥಾನ ಭಡ್ತಿ ಪಡೆದು 17ನೇ ಸ್ಥಾನಕ್ಕೇರಿದರು.
ಗಾಲೆಯಲ್ಲಿ ನಡೆದಿದ್ದ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಆಡಿದ್ದ ಶ್ರೀಲಂಕಾದ ಬೌಲರ್ಗಳಾದ ಅಸಿಥಾ ಫೆರ್ನಾಂಡೊ ಹಾಗೂ ಪ್ರಭಾತ್ ಜಯಸೂರ್ಯ ಐದು ಸ್ಥಾನ ಮೇಲಕ್ಕೇರಿ ಕ್ರಮವಾಗಿ 15ನೇ ಹಾಗೂ 16ನೇ ಸ್ಥಾನ ತಲುಪಿದ್ದಾರೆ. ಮೊದಲ ಪಂದ್ಯದಲ್ಲಿ ಅಸಿಥಾ ಆರು ವಿಕೆಟ್ ಗಳನ್ನು ಪಡೆದರೆ, ಜಯಸೂರ್ಯ ಏಳು ವಿಕೆಟ್ ಗಳನ್ನು ಪಡೆದಿದ್ದರು.
ಟೆಸ್ಟ್ ತಂಡದ ಬ್ಯಾಟರ್ಗಳ ಪೈಕಿ ಲೀಡ್ಸ್ನಲ್ಲಿ 91 ರನ್ ಗಳಿಸಿದ್ದ ಹ್ಯಾರಿ ಬ್ರೂಕ್ ಅಗ್ರ ಸ್ಥಾನ ಉಳಿಸಿಕೊಂಡಿದ್ದಾರೆ. ಗಾಲೆಯಲ್ಲಿ ಶ್ರೀಲಂಕಾ ತಂಡದ ವಿರುದ್ಧ 39 ಹಾಗೂ 66 ರನ್ ಗಳಿಸಿದ್ದ ರಿಷಭ್ ಪಂತ್ ಆರು ಸ್ಥಾನ ಭಡ್ತಿ ಪಡೆದು ಅಗ್ರ-10ರೊಳಗೆ ಸ್ಥಾನ ಪಡೆದರು.
ಗಾಲೆ ಟೆಸ್ಟ್ನಲ್ಲಿ ಕಡಿಮೆ ರನ್ ಗಳಿಸಿದ್ದ ಕಮಿಂದು ಮೆಂಡಿಸ್ ಹಾಗೂ ಯಶಸ್ವಿ ಜೈಸ್ವಾಲ್ ಟಾಪ್-10ರಿಂದ ಹೊರಗುಳಿದಿದ್ದಾರೆ.