ಕಪಿಲ್, ಬೋಥಮ್ ಅವರಿದ್ದ ವಿಶೇಷ ಪಟ್ಟಿಗೆ ಸೇರ್ಪಡೆ : 4,000 ರನ್, 350 ವಿಕೆಟ್ ಪಡೆದ ನಾಲ್ಕನೇ ಆಲ್‌ರೌಂಡರ್ ಜಡೇಜ
Photo Source: PTI
ಹೊಸದಿಲ್ಲಿ, ಆ.17: ಶ್ರೀಲಂಕಾ ವಿರುದ್ಧ ಸೋಮವಾರ ನಡೆದ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಮೂರು ವಿಕೆಟ್‌ಗಳನ್ನು ಉರುಳಿಸಿದ ರವೀಂದ್ರ ಜಡೇಜ ಟೆಸ್ಟ್ ಕ್ರಿಕೆಟ್‌ನಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪಿದರು.
ಜಡೇಜ ಅವರು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 4,000ಕ್ಕೂ ಅಧಿಕ ರನ್ ಹಾಗೂ ಕನಿಷ್ಠ 350 ವಿಕೆಟ್‌ಗಳನ್ನು ಪಡೆದ ವಿಶ್ವದ ನಾಲ್ಕನೇ ಕ್ರಿಕೆಟಿಗನೆಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಶ್ರೀಲಂಕಾದ ಮೊದಲ ಇನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಿದ ಜಡೇಜ ಅವರು ಲಂಕಾದ ನಾಯಕ ಧನಂಜಯ ಡಿಸಿಲ್ವ ಹಾಗೂ ಕೇಶಾರ ನುವಾಂಥ ಅವರ ವಿಕೆಟ್‌ಗಳನ್ನು ಪಡೆದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 350 ವಿಕೆಟ್‌ಗಳನ್ನು ಪೂರೈಸಿದರು.
ಜಡೇಜ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 350 ವಿಕೆಟ್‌ಗಳನ್ನು ಉರುಳಿಸಿದ ಭಾರತದ ಐದನೇ ಬೌಲರ್ ಎನಿಸಿಕೊಂಡರು. ಇದರೊಂದಿಗೆ ಅನಿಲ್ ಕುಂಬ್ಳೆ(619), ರವಿಚಂದ್ರನ್ ಅಶ್ವಿನ್(537), ಕಪಿಲ್ ದೇವ್(434)ಹಾಗೂ ಹರ್ಭಜನ್ ಸಿಂಗ್(417)ಅವರನ್ನು ಸೇರಿಕೊಂಡರು.
ಜಡೇಜ ಹೊಸ ಸಾಧನೆಯ ಮೂಲಕ 4,000 ರನ್ ಹಾಗೂ 350 ವಿಕೆಟ್ಗಳನ್ನು ಪಡೆದ ಮೂವರು ಲೆಜೆಂಡರಿ ಆಲ್ರೌಂಡರ್ಗಳಾದ-ಕಪಿಲ್ ದೇವ್, ಇಯಾನ್ ಬೋಥಮ್ ಹಾಗೂ ಡೇನಿಯಲ್ ವೆಟೋರಿ ಅವರಿದ್ದ ವಿಶೇಷ ಕ್ಲಬ್‌ಗೆ ಸೇರ್ಪಡೆಯಾದರು. ನಾಲ್ವರು ಆಲ್ರೌಂಡರ್ಗಳ ಪೈಕಿ ಜಡೇಜ ಮಾತ್ರ 100ಕ್ಕಿಂತ ಕಡಿಮೆ ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.
ಕಪಿಲ್‌ದೇವ್ ಭಾರತದ ಪರ 131 ಟೆಸ್ಟ್ ಪಂದ್ಯಗಳಲ್ಲಿ 5,248 ರನ್ ಹಾಗೂ 434 ವಿಕೆಟ್‌ಗಳನ್ನು ಉರುಳಿಸಿ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನ ಬೋಥಮ್ 102 ಟೆಸ್ಟ್ ಪಂದ್ಯಗಳಲ್ಲಿ 5,200 ರನ್ ಹಾಗೂ 383 ವಿಕೆಟ್. ನ್ಯೂಝಿಲ್ಯಾಂಡ್ ತಂಡದ ಮಾಜಿ ನಾಯಕ ವೆಟೋರಿ 113 ಟೆಸ್ಟ್ ಪಂದ್ಯಗಳಲ್ಲಿ 4,531 ರನ್ ಹಾಗೂ 352 ವಿಕೆಟ್‌ಗಳನ್ನು ಪಡೆದು ಕ್ರಮವಾಗಿ ಎರಡನೇ ಹಾಗೂ ಮೂರನೆೇ ಸ್ಥಾನದಲ್ಲಿದ್ದಾರೆ.
ಜಡೇಜ 90 ಟೆಸ್ಟ್ ಪಂದ್ಯಗಳಲ್ಲಿ 4,108 ರನ್ ಹಾಗೂ 350 ವಿಕೆಟ್‌ಗಳನ್ನು ಪಡೆದಿದ್ದಾರೆ. 100 ಟೆಸ್ಟ್ ಪಂದ್ಯಗಳನ್ನು ಆಡುವ ಮೊದಲೇ ಡಬಲ್ ಸಾಧನೆಗೈದ ಏಕೈಕ ಆಟಗಾರನಾಗಿದ್ದಾರೆ. ಇದು ಅವರ ಅಮೋಘ ಆಲ್ರೌಂಡ್ ಕೊಡುಗೆಯನ್ನು ಪ್ರತಿಬಿಂಬಿಸುತ್ತದೆ.
ಶ್ರೀಲಂಕಾದ ರಂಗನ ಹೆರಾತ್(433) ಹಾಗೂ ಕಿವೀಸ್‌ನ ವೆಟೋರಿ(362)ಬಳಿಕ ಜಡೇಜ ಅವರು ಟೆಸ್ಟ್ ಇತಿಹಾಸದಲ್ಲಿ ಮೂರನೇ ಯಶಸ್ವಿ ಎಡಗೈ ಸ್ಪಿನ್ನರ್ ಆಗಿದ್ದಾರೆ. ಇಂಗ್ಲೆಂಡ್‌ನ ಡರೆಕ್ ಅಂಡರ್ವುಡ್(297)ಹಾಗೂ ಬಾಂಗ್ಲಾದೇಶದ ತೈಜುಲ್ ಇಸ್ಲಾಮ್(271)ಜಡೇಜರ ನಂತರದ ಸ್ಥಾನದಲ್ಲಿದ್ದಾರೆ.