ಅಕ್ಟೋಬರ್ 2ಕ್ಕೆ 2027ರ ಏಕದಿನ ವಿಶ್ವಕಪ್‌ಗೆ ಚಾಲನೆ ?

ಗಾಂಧಿ ಜಯಂತಿಯಂದೇ ವಿಶ್ವಕಪ್ ಆರಂಭ ಸಾಧ್ಯತೆ !

Update: 2026-08-17 08:25 IST

Photo Credit : X

ಕೇಪ್ಟೌನ್: ಮುಂದಿನ ವರ್ಷ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ 2027ರ ಟೂರ್ನಿಯು ಅಕ್ಟೋಬರ್ 2ರ ಗಾಂಧಿ ಜಯಂತಿಯಂದೇ ಆರಂಭವಾಗುವ ಸಾಧ್ಯತೆಯಿದೆ. ಟೂರ್ನಿಯ ಆರಂಭದ ದಿನಾಂಕದ ಕುರಿತು ಇನ್ನೂ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಆದರೆ, ಶಾಂತಿ ಮತ್ತು ಅಹಿಂಸೆಯ ಸಂದೇಶ ಸಾರಿದ ಮಹಾತ್ಮ ಗಾಂಧೀಜಿಯವರ ಜೀವನ ಮತ್ತು ಸಂದೇಶವನ್ನು ಸ್ಮರಿಸುವ ಉದ್ದೇಶದಿಂದ ಅಕ್ಟೋಬರ್ 2ರಂದು ಟೂರ್ನಿಗೆ ಚಾಲನೆ ನೀಡುವ ಸಾಧ್ಯತೆಯಿದೆ ಎಂದು Cricbuzz ವರದಿ ಮಾಡಿದೆ.

ಈ ಟೂರ್ನಿಗೆ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆತಿಥ್ಯ ವಹಿಸುತ್ತಿವೆ.

ದಕ್ಷಿಣ ಆಫ್ರಿಕಾದೊಂದಿಗೆ ಮಹಾತ್ಮ ಗಾಂಧೀಜಿಯವರಿಗೆ ಐತಿಹಾಸಿಕ ನಂಟಿರುವ ಹಿನ್ನೆಲೆಯಲ್ಲಿ, ಅವರ ಜನ್ಮದಿನವಾದ ಅಕ್ಟೋಬರ್ 2ರಂದು ವಿಶ್ವಕಪ್ ಆರಂಭಿಸುವ ಸಾಧ್ಯತೆಯ ಕುರಿತು ವರದಿಯಾಗಿದೆ. ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ಸುಮಾರು 21 ವರ್ಷಗಳ ಕಾಲ ಕಳೆದಿದ್ದರು.

ಈ ಮೊದಲು ಐಸಿಸಿಯು ಅಕ್ಟೋಬರ್ 1 ರಿಂದ 7 ರವರೆಗೆ ಅಭ್ಯಾಸ ಪಂದ್ಯಗಳನ್ನು ನಡೆಸಿ, ಅಕ್ಟೋಬರ್ 8 ರಂದು ವಿಶ್ವಕಪ್ ಆರಂಭಿಸಲು ಉದ್ದೇಶಿಸಿತ್ತು. ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಮುಖ್ಯ ಪಂದ್ಯಾವಳಿಯು ಅಕ್ಟೋಬರ್ 2 ರಂದೇ ಆರಂಭವಾಗುವ ಸಾಧ್ಯತೆಯಿದೆ . ಅದಕ್ಕೂ ಮುನ್ನವೇ ಅಭ್ಯಾಸ ಪಂದ್ಯಗಳನ್ನು ಮುಗಿಸಲಾಗುತ್ತದೆ. ಫೈನಲ್ ಪಂದ್ಯವು ನವೆಂಬರ್ 21 (ರವಿವಾರ) ರಂದೇ ನಡೆಯುವ ನಿರೀಕ್ಷೆಯಿದೆ,

ಜೋಹಾನ್ಸ್ಬರ್ಗ್ ನಲ್ಲಿ ನಡೆದ ಸಮಾರಂಭದಲ್ಲಿ ಐಸಿಸಿಯು ಇತ್ತೀಚೆಗೆ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಾದ್ಯಂತ 12 ಕ್ರೀಡಾಂಗಣಗಳನ್ನು ಆತಿಥೇಯ ನಗರಗಳನ್ನಾಗಿ ಪ್ರಕಟಿಸಿದೆ. ದಕ್ಷಿಣ ಆಫ್ರಿಕಾದ ಎಂಟು ನಗರಗಳು, ಜಿಂಬಾಬ್ವೆಯ ಮೂರು ನಗರಗಳು ಮತ್ತು ನಮೀಬಿಯಾದ ರಾಜಧಾನಿ ವಿಂಡ್ಹೋಕ್ ಅನ್ನು ಕ್ರೀಡಾಂಗಣಗಳನ್ನಾಗಿ ಘೋಷಿಸಲಾಯಿತು.

ವಿಶ್ವಕಪ್ ನ ಮಾದರಿಯಲ್ಲಿ ಬದಲಾವಣೆ ಮಾಡಲಾಗಿದ್ದು, ಅತ್ಯಂತ ಕೆಳ ಶ್ರೇಯಾಂಕದ ಮೂರು ತಂಡಗಳು 'ಸೂಪರ್ ಸೀರೀಸ್' ಎಂಬ ಮಿನಿ-ಲೀಗ್ ನಲ್ಲಿ ಸೆಣಸಾಡಲಿವೆ . ಈ ಲೀಗ್‌ ವಿಜೇತ ತಂಡವು ಈಗಾಗಲೇ ಅರ್ಹತೆ ಪಡೆದ ಉಳಿದ ತಂಡಗಳೊಂದಿಗೆ ಸೇರಲಿವೆ. ಇದನ್ನು ಎರಡು ಗುಂಪುಗಳಾಗಿ ವಿಂಗಡಿಸಲಿದ್ದು , ನಂತರ ಸೂಪರ್ ಸೆವೆನ್ ಹಂತ, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ .

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News