ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ | ಉನ್ನತಿ ಹೂಡಾ ಗೆಲುವಿನಾರಂಭ

Update: 2026-08-18 20:34 IST

 ಉನ್ನತಿ ಹೂಡಾ  | Photo Credit : PTI 

ಹೊಸದಿಲ್ಲಿ, ಆ.18;ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಮೈನ್ಮಾರ್‌ನ ಥೆಟ್ ಥುಝರ್‌ರನ್ನು ನೇರ ಗೇಮ್‌ಗಳ ಅಂತರದಿಂದ ಮಣಿಸಿರುವ ಭಾರತದ ಉದಯೋನ್ಮುಖ ಆಟಗಾರ್ತಿ ಉನ್ನತಿ ಹೂಡಾ ತನ್ನ ಅಭಿಯಾನ ಆರಂಭಿಸಿದರು.

ಮಂಗಳವಾರ ನಡೆದ ಪಂದ್ಯದಲ್ಲಿ ಉನ್ನತಿ ಅವರು ಮೈನ್ಮಾರ್ ಆಟಗಾರ್ತಿಯನ್ನು 22-20, 21-16 ಗೇಮ್‌ಗಳ ಅಂತರದಿಂದ ಮಣಿಸಿದರು.

ಉನ್ನತಿ ಮುಂದಿನ ಸುತ್ತಿನಲ್ಲಿ ಕೆನಡಾದ 13ನೇ ಶ್ರೇಯಾಂಕದ ಮಿಚೆಲ್ ಲೀ ಅವರನ್ನು ಎದುರಿಸಲಿದ್ದಾರೆ. ಲೀ ಅವರು ಚೈನೀಸ್ ತೈಪೆಯ ಪಿ. ಚಿಯು ವಿರುದ್ದ 22-20, 21-12 ಗೇಮ್‌ಗಳ ಅಂತರದಿಂದ ಜಯಶಾಲಿಯಾದರು.

ಉನ್ನತಿ-ಮೈನ್ಮಾರ್ ಆಟಗಾರ್ತಿಯ ನಡುವಿನ ಮೊದಲ ಗೇಮ್ ತೀವ್ರ ಪೈಪೋಟಿಯಿಂದ ಕೂಡಿತ್ತು. 21 ನಿಮಿಷಗಳ ನಂತರ ಉನ್ನತಿ 22-20ರಿಂದ ಜಯ ಸಾಧಿಸಿದರು. ಭಾರತೀಯ ಆಟಗಾರ್ತಿ 11-1ರಿಂದ ಮುನ್ನಡೆ ಪಡೆದು ಆಕ್ರಮಣಕಾರಿ ಆಟವಾಡಿದರು.

ತಿರುಗೇಟು ನೀಡಿದ ಮೈನ್ಮಾರ್ ಶಟ್ಲರ್ ಹಿನ್ನಡೆಯನ್ನು 20-16ಕ್ಕೆ ಕಡಿತಗೊಳಿಸಿದರು. ನಿರ್ಣಾಯಕ ಹಂತದಲ್ಲಿ ಪುಟಿದೆದ್ದ ಉನ್ನತಿ 2ನೇ ಗೇಮ್ ಅನ್ನು 21-16ರಿಂದ ಗೆದ್ದುಕೊಂಡರು.

ಇದೇ ವೇಳೆ ರೋಹನ್ ಕಪೂರ್ ಹಾಗೂ ಋತ್ವಿಕಾ ಅಂತಿಮ-64ರ ಸುತ್ತಿನಲ್ಲಿ ನಿರ್ಗಮಿಸಿದರು. ಈ ಜೋಡಿಯು ಕೆನಡಾದ ಜೋನಾಥನ್ ಲಾಯಿ ಹಾಗೂ ಕ್ರಿಸ್ಟಲ್ ಲಾಯ್ ವಿರುದ್ದ ಒಂದು ಗಂಟೆ, 8 ನಿಮಿಷಗಳ ನಡೆದ ಹೋರಾಟದಲ್ಲಿ 22-20, 19-21, 17-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

ಮೊದಲ ಸುತ್ತಿನ ಸೋಲಿನಿಂದ ಪಾರಾದ ಲಕ್ಷ್ಯ ಸೇನ್

ನಿಧಾನಗತಿಯ ಆರಂಭದಿಂದ ಹೊರಬಂದ ಲಕ್ಷ್ಯ ಸೇನ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಆಸ್ಟ್ರೀಯದ ಕಾಲಿನ್ಸ್ ಫಿಲಿಮೊನ್‌ರನ್ನು ಮಣಿಸಿ ಎರಡನೇ ಸುತ್ತಿಗೆ ತಲುಪಿದ್ದಾರೆ.

ಇಂದಿರಾ ಗಾಂಧಿ ಒಳಾಂಗಣ ಸ್ಟೇಡಿಯಂನಲ್ಲಿ ಮಂಗಳವಾರ 44 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಐದು ವರ್ಷಗಳ ಹಿಂದೆ ಕಂಚಿನ ಪದಕ ಜಯಿಸಿದ್ದ ಲಕ್ಷ್ಯ ಸೇನ್ ಅವರು ವಿಶ್ವದ ನಂ.128ನೇ ಆಟಗಾರ ಫಿಲಿಮೊನ್‌ರನ್ನು 16-21, 21-8, 21-4 ಗೇಮ್‌ಗಳ ಅಂತರದಿಂದ ಮಣಿಸಿದರು. ಸತತ ಎರಡನೇ ಆವೃತ್ತಿಯ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಸುತ್ತಿನಲ್ಲೇ ನಿರ್ಗಮಿಸುವ ಅಪಾಯದಿಂದ ಪಾರಾದರು.

14ನೇ ಶ್ರೇಯಾಂಕದ ಸೆನ್ ಅವರು ಅಂತಿಮ-16ರ ಸುತ್ತಿನಲ್ಲಿ ಸ್ಥಾನ ಪಡೆಯಲು ಗರೆಟ್ ಟಾನ್‌ರನ್ನು ಎದುರಿಸಲಿದ್ದಾರೆ. ಅಮೆರಿಕದ ಯುವ ಆಟಗಾರ ಟಾನ್ ಅವರು ಸ್ವಿಟ್ಸರ್‌ಲ್ಯಾಂಡ್‌ನ ಟೊಬಿಯಸ್ ಕುಂಝಿ ಅವರನ್ನು 21-4, 21-15 ಗೇಮ್‌ಗಳ ಅಂತರದಿಂದ ಮಣಿಸಿದರು.

ಟ್ರೀಸಾ-ಗಾಯತ್ರಿ ಪ್ರಿ-ಕ್ವಾರ್ಟರ್ ಫೈನಲ್‌ಗೆ

ಇದೇ ವೇಳೆ, ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಟ್ರೀಸಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್ ಅವರು ಅಮೆರಿಕದ ಜೊಡಿ ಲಾರೆನ್ ಲ್ಯಾಮ್ ಹಾಗೂ ಅಲಿಸಸ್ ಕ್ಯೂನ್ಹ್‌ರನ್ನು 21-15, 21-12 ನೇರ ಗೇಮ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ ಪ್ರಿ-ಕ್ವಾರ್ಟರ್ ಫೈನಲ್‌ಗೆ ತಲುಪಿದರು.

ಟ್ರೀಸಾ ಹಾಗೂ ಗಾಯತ್ರಿ ಅಂತಿಮ-16ರ ಸುತ್ತಿನಲ್ಲಿ ಜಪಾನಿನ ಜೋಡಿ ರಿನ್ ಇವಾಂಗಾ ಹಾಗೂ ಕೀ ನಕನಿಶಿ ಅಥವಾ ಥಾಯ್ಲೆಂಡ್‌ನ ಹಥೈಥಿಪ್ ಮಿಜಾದ್ ಹಾಗೂ ನಪಪಕಾರ್ನ್‌ರನ್ನು ಎದುರಿಸಲಿದ್ದಾರೆ.

ಕವಿಪ್ರಿಯ ಸೆಲ್ವಂ ಹಾಗೂ ಸಿಮ್ರಾನ್ ಸಿಂಘಿ ಬಲ್ಗೇರಿಯದ ಸಹೋದರಿಯರಾದ ಗ್ಯಾಬ್ರಿಯೆಲಾ ಹಾಗೂ ಸ್ಟೆಫಾನಿ ಸ್ಟೋವಾ ವಿರುದ್ದ 7-21, 14-21 ಅಂತರದಿಂದ ಸೋತು ನಿರ್ಗಮಿಸಿದರು.

ಮಿಶ್ರ ಡಬಲ್ಸ್‌ನಲ್ಲಿ ಆಶಿತ್ ಸೂರ್ಯ ಹಾಗೂ ಅಮೃತಾ ಪ್ರಮುತೇಶ್ ಮೊದಲ ಸುತ್ತಿನಲ್ಲೆ ಮುಗ್ಗರಿಸಿದರು. ಭಾರತೀಯ ಜೋಡಿಯು ತುರ್ಕಿಯಾದ ಎಮ್ರೆ ಸೊನ್ಮೆಝ್ ಹಾಗೂ ಯಾಸ್ಮಿನ್ ಬೆಕ್ಟಾಸ್ ವಿರುದ್ಧ 21-16, 29-30, 22-24 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News