SIR | ನಾವು ಕಳ್ಳರಲ್ಲ, ಈ ದೇಶದ ನಾಗರಿಕರು; ನಮ್ಮ ಹಕ್ಕಿಗಾಗಿ ಹೋರಾಡುತ್ತೇವೆ, ಗೆಲ್ಲುತ್ತೇವೆ : ನಟ ಪ್ರಕಾಶ್ ರಾಜ್
ಬೆಂಗಳೂರು : ‘ನಾವೇನೋ ಕಳ್ಳರು, ಎಲ್ಲಿಂದಲೋ ಬಂದುಬಿಟ್ಟಿದ್ದೇವೆ, ಮೋಸ ಮಾಡಿಕೊಂಡು ಗುರುತಿನ ಚೀಟಿ ತೆಗೆದುಕೊಂಡಿದ್ದೇವೆ ಎಂಬಂತೆ ನಮ್ಮನ್ನು ಅನುಮಾನದಿಂದ ನೋಡಲಾಗುತ್ತಿದೆ. ಇದು ನಮ್ಮ ಸ್ವಾಭಿಮಾನಕ್ಕೆ, ಗೌರವಕ್ಕೆ ಧಕ್ಕೆ ತರುವಂತದ್ದಾಗಿದೆ. ನಾವು ಕಳ್ಳರಲ್ಲ, ಈ ದೇಶದ ನಾಗರಿಕರು, ನಮ್ಮ ಹಕ್ಕಿಗಾಗಿ ಹೋರಾಡುತ್ತಿದ್ದೇವೆ’ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಹೇಳಿದ್ದಾರೆ.
ಮಂಗಳವಾರ ನಗರದ ಫ್ರೀಡಂಪಾರ್ಕ್‍ನಲ್ಲಿ ‘ಎಸ್‍ಐಆರ್ ವಿರೋಧಿ ಕರ್ನಾಟಕ’ ವೇದಿಕೆ ವತಿಯಿಂದ ಆಯೋಜಿಸಿದ್ದ 'ಚುನಾವಣಾ ಆಯೋಗ ಚಲೋ' ಹೋರಾಟದ ಭಾಗವಾಗಿ ವಿಜಯನಗರ ಕ್ಷೇತ್ರದ ನರಸಿಂಹಯ್ಯ ಕಾಲನಿ ಬೂತ್‍ನಲ್ಲಿ ಎಸ್‍ಐಆರ್ ಸಂತ್ರಸ್ತರೊಂದಿಗೆ ಸಂವಾದ ನಡೆಸಿದರು. ಆಧಾರ್ ಕಾರ್ಡ್ ಸೇರಿದಂತೆ ದಾಖಲೆಗಳನ್ನು ಹೊಂದಿದ್ದರೂ ಜನರನ್ನು ಅನುಮಾನದಿಂದ ನೋಡುವುದು ತಮ್ಮ ಸ್ವಾಭಿಮಾನ ಮತ್ತು ಗೌರವಕ್ಕೆ ಧಕ್ಕೆ ತರುತ್ತಿದೆ ಎಂದರು.
ಭಾರತ ನಮ್ಮ ಮನೆ, ನಾವು ಇಲ್ಲೇ ಹುಟ್ಟಿದವರು. ಆದರೂ ಈಗ ನಾವು ಈ ದೇಶದ ಪ್ರಜೆಗಳು ಎಂದು ಸಾಬೀತುಪಡಿಸಿಕೊಳ್ಳಬೇಕಾಗಿದೆ. ಇಲ್ಲದಿದ್ದರೆ ನಮ್ಮನ್ನು ಎಲ್ಲಿ ಕಳಿಸುತ್ತೀರಿ? ಇದು ದೊಡ್ಡ ಹೋರಾಟವಾಗಿ ರೂಪುಗೊಳ್ಳಲಿದೆ. ರಾಜ್ಯದಲ್ಲಿ ಚುನಾವಣೆಗೆ ಇನ್ನೂ ಎರಡು ವರ್ಷವಿದೆ. ಮುಂಚೆಯೇ ತಪ್ಪು ಮಾಡಿಬಿಟ್ಟಿದ್ದಾರೆ. ಸಂತ್ರಸ್ತರ ಜೊತೆ ನಾವೆಲ್ಲರೂ ಇದ್ದೇವೆ. ಇದು ದೊಡ್ಡ ಹೋರಾಟ ಆಗಿದೆ. ನಾವು ರಾಜಕಾರಣಿಗಳಲ್ಲ, ನಾವೇ ನಮಗಾಗಿ ಹೋರಾಟ ಮಾಡಬೇಕು. ನಮಗೆ ರಾಜಕೀಯ ಪಕ್ಷಗಳು ಇರಬೇಕಾಗಿಲ್ಲ. ನಮ್ಮ ಹಕ್ಕಿಗಾಗಿ ಹೋರಾಡೋಣ. ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಅವರು ಸಂತ್ರಸ್ತರಿಗೆ ಧೈರ್ಯ ತುಂಬಿದರು.
ಅಕ್ರಮವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿಕೊಂಡವರನ್ನು ತೆಗೆದುಹಾಕುವುದಕ್ಕೆ ತಮ್ಮ ವಿರೋಧವಿಲ್ಲ. ಆದರೆ, ಅರ್ಹ ನಾಗರಿಕರು ಮತ್ತು ಮತದಾರರಾದ ನಮ್ಮನ್ನು ಯಾಕೆ ತೆಗೆಯಬೇಕು. ಈಗಾಗಲೇ ಮತದಾರರಾಗಿರುವವರನ್ನೇ ಮತ್ತೆ ಮತದಾರರನ್ನಾಗಿ ಸಾಬೀತುಪಡಿಸುವ ಪರಿಸ್ಥಿತಿ ಏಕೆ ಬಂದಿದೆ. ಎಸ್‍ಐಆರ್ ನಿಂದ ಕರ್ನಾಟಕದಲ್ಲಿ ದೊಡ್ಡ ಸಂಖ್ಯೆಯ ಜನರು ಸಂತ್ರಸ್ತರಾಗಿದ್ದಾರೆ. ಒಂದೂವರೆ ಕೋಟಿ ಕನ್ನಡಿಗರು ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ. ಅವರಲ್ಲಿ ನಾನು ಒಬ್ಬ ಎಂದು ಪ್ರಕಾಶ್‍ರಾಜ್ ತಿಳಿಸಿದರು.