SIR ಎನ್ನುವುದೇ ಸಂಚು-ಮೋಸ; 1.5 ಕೋಟಿ ಜನರನ್ನು ಕೈಕಟ್ಟಿ ನಿಲ್ಲಿಸುವುದನ್ನು ಕರ್ನಾಟಕ ಒಪ್ಪಲ್ಲ : ನಟ ಪ್ರಕಾಶ್ ರಾಜ್
"ನೀವು ಸ್ಥಳಾಂತರ ಎಂದಿರುವ ಮತದಾರರು ಎಲ್ಲಿದ್ದಾರೆ? ಚಂದ್ರ, ಗುರು, ಮಂಗಳ ಗ್ರಹಕ್ಕೆ ಹೋಗಿದ್ದಾರಾ?"
ಬೆಂಗಳೂರು : ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‍ಐಆರ್) ಅನ್ನುವುದು ಸಂಚು, ಎಸ್‍ಐಆರ್ ಅನ್ನೋದು ಮೋಸ, ಎಸ್‍ಐಆರ್ ಹಿಂದೆ ಇರುವ ಅಜೆಂಡಾ, ದೇಶವನ್ನು ಹಾಳು ಮಾಡೋದೇ ಆಗಿದೆ. ಪ್ರಜ್ಞಾವಂತ ನಾಗರಿಕರೆಲ್ಲರೂ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ.
ಮಂಗಳವಾರ ನಗರದ ಫ್ರೀಡಂಪಾರ್ಕ್‍ನಲ್ಲಿ ‘ಎಸ್‍ಐಆರ್ ವಿರೋಧಿ ಒಕ್ಕೂಟದ’ ವತಿಯಿಂದ ಹಮ್ಮಿಕೊಂಡಿದ್ದ ‘ಚುನಾವಣಾ ಆಯೋಗ ಚಲೋ’ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಸ್‍ಐಆರ್ ಅನ್ನು ರದ್ದುಗೊಳಿಸಿ, ಈ ಹಿಂದಿನ ರೀತಿಯಲ್ಲೇ ಎಲ್ಲರನ್ನೂ ಒಳಗೊಳ್ಳುವ ರೀತಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಬೇಕು. ಎಸ್‍ಐಆರ್ ನ ಸಂಚು, ಮೋಸಗಳ ಹಿಂದಿರುವ ಅಜೆಂಡಾ ದೇಶವನ್ನು ಹಾಳುಮಾಡುವುದೇ ಆಗಿದೆ ಎಂದರು.
1950 ರಲ್ಲಿ ನಡೆದ ಮತದಾರರ ಪರಿಷ್ಕರಣೆಯ ಉದ್ದೇಶ ಎಲ್ಲರನ್ನೂ ಒಳಗೊಳ್ಳುವುದಾಗಿತ್ತು. ಹಿಂದಿನ ಎಲ್ಲ ಪರಿಷ್ಕರಣೆಗಳು ದೇಶದ ಪ್ರಜೆಗಳಿಗೆ ಗೌರವ ನೀಡಿ ನಡೆದಿದ್ದವು. ಆದರೆ, ಈಗ ಅದೇ ಪ್ರಕ್ರಿಯೆ ಏಕೆ ಸಂಚಾಗಿ ಮಾರ್ಪಟ್ಟಿದೆ. ಮುಖ್ಯ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲೇ ದೇಶದ ಪ್ರಜಾಪ್ರಭುತ್ವವನ್ನು ಕೊಲ್ಲುವ ಕೆಲಸ ಆರಂಭವಾಗಿದೆ. ಚುನಾವಣಾ ಆಯುಕ್ತರನ್ನು ಪ್ರಶ್ನಾತೀತರನ್ನಾಗಿ ಮಾಡಲಾಗಿದೆ ಎಂದು ಪ್ರಕಾಶ್ ರಾಜ್ ಟೀಕಿಸಿದರು.
ಆರ್‌ಟಿಐ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿದಾಗ, ಎಸ್‍ಐಆರ್ ಚುನಾವಣಾ ಆಯೋಗದ ನಿರ್ಧಾರವಲ್ಲ ಎಂಬುದು ಗೊತ್ತಾಗಿದೆ. ಹಾಗಾದರೆ ಇದು ಯಾರ ನಿರ್ಧಾರ? ಯಾರ ಸಂಚು? ಎಸ್‍ಐಆರ್ ಮಾಡಲು ಇಷ್ಟು ತರಾತುರಿ ಯಾಕೆ? ದೇಶದ ಪ್ರಜೆಗಳನ್ನು ಪರೀಕ್ಷೆಗೆ ಕೂರಿಸಲು ನೀವು ಯಾರು? ಬೇರೆ ಕೆಲಸಗಳಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಸರಕಾರ, ಎಸ್‍ಐಆರ್ ಕುರಿತು ಜನರಿಗೆ ಸರಿಯಾದ ಮಾಹಿತಿ ನೀಡಲು ಏಕೆ ಕ್ರಮ ಕೈಗೊಂಡಿಲ್ಲ ಎಂದು ಅವರು ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡರು.
ನೀವು ಸ್ಥಳಾಂತರ ಎಂದಿರುವ ಮತದಾರರು ಎಲ್ಲಿದ್ದಾರೆ? ಚಂದ್ರ, ಗುರು, ಮಂಗಳ ಗ್ರಹಕ್ಕೆ ಹೋಗಿದ್ದಾರಾ? ಸ್ಥಳಾಂತರಗೊಳ್ಳುವುದು ಈ ದೇಶದಲ್ಲಿ ಮಹಾಪಾಪವೇ? ಅದಕ್ಕಾಗಿ ಅವರ ಮತದಾನದ ಹಕ್ಕನ್ನೇ ಕಿತ್ತುಕೊಳ್ಳುತ್ತೀರಾ? ಹಕ್ಕುಗಳಿಂದ ಹೊರದಬ್ಬುತ್ತೀರಾ? 16 ಲಕ್ಷ ಜನರು ಮೃತಪಟ್ಟಿದ್ದಾರೆ ಎಂದು ಹೇಳುವುದನ್ನು ಹೇಗೆ ನಂಬಬೇಕು? ಮತದಾರರ ಪಟ್ಟಿಯಲ್ಲಿ ‘ಇತರರು’ ಎಂದರೆ ಯಾರು? ಅವರೇನು ಮನುಷ್ಯರಾ, ಕುರಿಗಳಾ, ಕಲ್ಲುಗಳಾ? ನಿಮ್ಮ ಸಂಚು ನಮಗೆ ಗೊತ್ತಾಗಿದೆ. 1.5 ಕೋಟಿ ಜನರನ್ನು ಕೈಕಟ್ಟಿ ನಿಲ್ಲಿಸುವುದನ್ನು ಕರ್ನಾಟಕ ಒಪ್ಪಲ್ಲ, ಇದನ್ನು ವಿರೋಧಿಸುತ್ತೇವೆ. ಜನರು ನಿಮ್ಮ ಮುಂದೆ ಭಯದಿಂದ ನಿಲ್ಲುವುದನ್ನು ಒಪ್ಪುವುದಿಲ್ಲ. ಎಸ್‍ಐಆರ್ ರದ್ದಾಗಲೇಬೇಕು ಎಂದು ಪ್ರಕಾಶ್‍ರಾಜ್ ಆಗ್ರಹಿಸಿದರು.
ಕರ್ನಾಟಕ ಜನಶಕ್ತಿಯ ರಾಜ್ಯಾಧ್ಯಕ್ಷ ನೂರ್ ಶ್ರೀಧರ್ ಮಾತನಾಡಿ, ಬೇಡಿಕೆಗಳ ಕುರಿತು ಸ್ಪಷ್ಟ ನಿರ್ಧಾರವಾಗುವವರೆಗೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.
ಹೋರಾಟದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಮಹಂತೇಶ್, ಮುಹಮ್ಮದ್ ಯೂಸುಫ್ ಕನ್ನಿ, ಫಾ.ಅರುಣ್ ಲೂಯಿಸ್, ಜೆ.ಎಂ.ವೀರಸಂಗಯ್ಯ, ಸೀತಾರಾಮ ಗುಂಡಪ್ಪ, ತಾಹೇರ್ ಹುಸೇನ್, ಜಿ.ಎನ್.ನಾಗರಾಜ್, ಎನ್.ವೆಂಕಟೇಶ್, ಕೆ.ಎಲ್.ಅಶೋಕ್, ತಾರಾರಾವ್, ಕೆ.ವಿ.ಭಟ್, ವಿಠ್ಠಲ್ ಹೆಗಡೆ, ಸಿ.ಎಸ್.ದ್ವಾರಕನಾಥ್, ಸಾಹಿತಿಗಳಾದ ಡಾ.ವಿಜಯಮ್ಮ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಪ್ರೊ.ಎಲ್.ಎನ್.ಮುಕುಂದರಾಜ್, ಕೆ.ವಿ.ನಾಗರಾಜಮೂರ್ತಿ ಸೇರಿದಂತೆ ಹಲವರು ಭಾಗವಹಿಸಿದ್ದರು.
"ದೇಶದ ಶ್ರೀಮಂತರ ಮತವಾಗಲಿ, ಬಡ ರೈತ-ಕಾರ್ಮಿಕರ ಮತವಾಗಲಿ ಎಲ್ಲವೂ ಒಂದೇ. ಪ್ರತಿಯೊಬ್ಬರ ಮತಕ್ಕೂ ಸಮಾನ ಮೌಲ್ಯವಿರುವ ಪ್ರಜಾಪ್ರಭುತ್ವದ ಈ ಹಕ್ಕನ್ನೇ ಕಿತ್ತುಕೊಳ್ಳುವ ಹುನ್ನಾರ ನಡೆಯುತ್ತಿದೆ. ಆರೆಸ್ಸೆಸ್ ಮತ್ತು ಬಿಜೆಪಿ ದೇಶದ ಸಂವಿಧಾನವನ್ನು ಬದಲಿಸಿ, ಮನುಸ್ಮೃತಿಯನ್ನು ಸಂವಿಧಾನವನ್ನಾಗಿ ಮಾಡುವ ಷಡ್ಯಂತ್ರ ರೂಪಿಸುತ್ತಿವೆ. ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಮೂಲಕ ಅವರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಮತ್ತೊಂದೆಡೆ, ತಮ್ಮ ಮತಬ್ಯಾಂಕ್‍ಗೆ ಸೇರಿದವರ ಮತಗಳನ್ನು ಮಾತ್ರ ಉಳಿಸಿಕೊಂಡು, ಶಾಶ್ವತವಾಗಿ ಅಧಿಕಾರದಲ್ಲಿ ಮುಂದುವರಿಯುವ ಹುನ್ನಾರ ನಡೆಯುತ್ತಿದೆ.
- ಕಿಶೋರ್ ಕುಮಾರ್, ಚಿತ್ರನಟ
ಹೋರಾಟದ ಹಕ್ಕೊತ್ತಾಯಗಳು:
1. ಯಾವುದೇ ಮತದಾರರನ್ನು ಸಮರ್ಪಕ ಕಾರಣವಿಲ್ಲದೆ ಮತದಾರರ ಪಟ್ಟಿಯಿಂದ ಹೊರಗಿಡಬಾರದು. ಈಗಾಗಲೇ ಹೆಸರು ಡಿಲೀಟ್ ಆಗಿರುವ ಮತದಾರರಿಗೆ ಮೇಲ್ಮನವಿ ಸಲ್ಲಿಸಿ, ಮತ್ತೆ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಅವಕಾಶ ವಿಸ್ತರಿಸಬೇಕು. ಅರ್ಹ ಮತದಾರರನ್ನು ಪಟ್ಟಿಗೆ ಸೇರಿಸಲು ಪ್ರತಿ ಬೂತ್‍ನ ಪ್ರತಿ ಮನೆಗೂ ತಲುಪುವ ವಿಶೇಷ ಅಭಿಯಾನ ನಡೆಸಬೇಕು.
2. ಬೇರೆ ಪ್ರದೇಶಗಳಿಂದ ಸ್ಥಳಾಂತರಗೊಂಡು ಪ್ರಸ್ತುತ ಬೇರೆಡೆ ನೆಲೆಸಿರುವ ಮತದಾರರಿಗೆ ನಮೂನೆ-8 ಸಲ್ಲಿಸಿ, ತಾವು ಈಗ ವಾಸಿಸುತ್ತಿರುವ ವಿಳಾಸಕ್ಕೆ ಮತದಾರರ ನೋಂದಣಿಯನ್ನು ವರ್ಗಾಯಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು.
3. 43 ಲಕ್ಷ ಮತದಾರರಿಗೆ ನೀಡಿರುವ ನೋಟಿಸ್‍ಗಳ ವಿವರಗಳನ್ನು ಬಹಿರಂಗಪಡಿಸಬೇಕು.
4. ಗ್ರಾಮ ಮತ್ತು ವಾರ್ಡ್ ಸಭೆಗಳನ್ನು ಪರಿಣಾಮಕಾರಿಯಾಗಿ ನಡೆಸಬೇಕು.
5. ಆಕ್ಷೇಪಣೆ ಮತ್ತು ಮೇಲ್ಮನವಿಗೆ ಆರು ತಿಂಗಳ ಕಾಲಾವಕಾಶ ನೀಡಬೇಕು.
ಹೋರಾಟಗಾರರ ಬಂಧನ:
ಫ್ರೀಡಂಪಾರ್ಕಿನಲ್ಲಿ ನಡೆಯುತ್ತಿದ್ದ ಧರಣಿ ಸ್ಥಳಕ್ಕೆ ಆಗಮಿಸುವಂತೆ ಚುನಾವಣಾ ಆಯೋಗದ ಪ್ರತಿನಿಧಿಗಳಿಗೆ ಎಸ್‍ಐಆರ್ ವಿರೋಧಿ ಒಕ್ಕೂಟದಿಂದ ಆಹ್ವಾನ ನೀಡಲಾಗಿತ್ತು. ಆದರೆ, ಚುನಾವಣಾ ಆಯೋಗದಿಂದ ಸಂಬಂಧಫಟ್ಟವರು ಸ್ಥಳಕ್ಕೆ ಬಾರದ ಕಾರಣ, ಪ್ರಕಾಶ್ ರಾಜ್ ಮತ್ತು ನಾಗರಿಕ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಸಂತ್ರಸ್ತರು ಆಯೋಗಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆಯಲ್ಲಿ ನಟರಾದ ಪ್ರಕಾಶ್‍ರಾಜ್, ಕಿಶೋರ್, ದಸಂಸ ಹಿರಿಯ ನಾಯಕ ಎನ್.ವೆಂಕಟೇಶ್, ಜನಶಕ್ತಿ ರಾಜ್ಯಾಧ್ಯಕ್ಷ್ಯ ನೂರ್ ಶ್ರೀಧರ್ ಸೇರಿದಂತೆ ರಾಜ್ಯದ ದಲಿತ, ರೈತ, ಮಹಿಳಾ ಮತ್ತು ಭಾಷಾ ಚಳವಳಿಯ ಹಲವು ಹೋರಾಟಗಾರರನ್ನು ಪೊಲೀಸರು ಬಂಧಿಸಿದರು.
ರಾಜ್ಯ ಸರಕಾರದ ಪ್ರತಿನಿಧಿಯಾಗಿ ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಎಸ್‍ಐಆರ್ ವಿಚಾರದಲ್ಲಿ ರಾಜ್ಯಸರಕಾರ ಅಸಹಾಯಕ ಆಗಿಲ್ಲ. ಇದರ ಗಂಭೀರತೆ ಎಲ್ಲರಿಗೂ ಗೊತ್ತಿದೆ.ಬಿಜೆಪಿ ಸರಕಾರ ಬಂದ ಮೇಲೆ ಪ್ರಜಾಪ್ರಭುತ್ವ ಎಂಬುದು ನಶಿಸಿ ಹೋಗುತ್ತಿದೆ. ಮೋದಿಯವರು ಒಂದೊಂದಾಗಿ ಚುನಾವಣಾ ಆಯೋಗ, ಈಡಿ, ಸಿಬಿಐ ಸೇರಿದಂತೆ ಪ್ರತಿಯೊಂದನ್ನು ಅವರ ಕಪಿಮುಷ್ಟಿಗೆ ತೆಗೆದುಕೊಂಡು ಹಾಳು ಮಾಡುತ್ತಿದ್ದಾರೆ. 2029ಕ್ಕೆ ಮೋದಿಯೂ ಇರಲ್ಲ, ಅವರ ಪಕ್ಷವೂ ಇರುವುದಿಲ್ಲ. ನಾಗರಿಕ ಸಂಘಟನೆಗಳ ಹಕ್ಕೊತ್ತಾಯಗಳನ್ನು ಮುಖ್ಯಮಂತ್ರಿಗೆ ತಲುಪಿಸುವ ಕೆಲಸ ಮಾಡುತ್ತೇನೆ.
- ರಾಮಲಿಂಗರೆಡ್ಡಿ, ಅರಣ್ಯ ಸಚಿವ.