Bengaluru | ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಡೆಲಿವರಿ ಬಾಯ್ ಬಂಧನ
ಬೆಂಗಳೂರು : ಡೆಲಿವರಿ ಬಾಯ್ ಒಬ್ಬ ವಸ್ತುವನ್ನು ವಿತರಣೆ ಮಾಡುವ ನೆಪದಲ್ಲಿ ಒಂಟಿ ಮಹಿಳೆಯಿದ್ದ ಫ್ಲ್ಯಾಟ್‍ಗೆ ಬಲವಂತವಾಗಿ ನುಗ್ಗಿ ಅಸಭ್ಯವಾಗಿ ವರ್ತಿಸಿರುವ ಘಟನೆ ಮಾರತ್‍ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಮಹಿಳೆಯಿಂದ ದೂರು ಪಡೆದು ಪ್ರಕರಣ ದಾಖಲಿಸಿಕೊಂಡ ಮಾರತ್ ಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವಿಜಯ್ ಮಲ್ಲಿಕಾರ್ಜುನ್ ಕಾಮತ್ (22) ಬಂಧಿತ ಆರೋಪಿ ಎಂದು ತಿಳಿದು ಬಂದಿದೆ.
ಬುಕ್ ಮಾಡಿದ ವಸ್ತವನ್ನು ತಲುಪಿಸಲು ಬಂದ ಡೆಲಿವರಿ ಬಾಯ್, ಶೌಚಾಲಯ ಬಳಸಲು ಅನುಮತಿ ಕೇಳಿದ್ದಾನೆ. ಆದರೆ ಮಹಿಳೆಯು ಅಪರಿಚಿತರನ್ನು ಮನೆಯೊಳಗೆ ಬಿಟ್ಟುಕೊಳ್ಳಲು ನಿರಾಕರಿಸಿದ್ದಾರೆ. ತೀರಾ ತುರ್ತು ಪರಿಸ್ಥಿತಿಯಿದ್ದರೆ ಪಕ್ಕದ ಫ್ಲ್ಯಾಟ್‍ನಲ್ಲಿರುವ ಪುರುಷ ನಿವಾಸಿ ಬಳಿ ಮನವಿ ಮಾಡುವಂತೆ ಸಲಹೆ ನೀಡಿದ್ದಾರೆ. ಆದರೆ ಆತ ಹೊರಗಡೆ ತನ್ನ ಚಪ್ಪಲಿಗಳನ್ನು ಬಿಟ್ಟು, ಬಲವಂತವಾಗಿ ಫ್ಲ್ಯಾಟ್‍ಗೆ ನುಗ್ಗಿದ್ದಾನೆ. ಶೌಚಾಲಯದಿಂದ ಹೊರಬಂದ ತಕ್ಷಣ, ತನ್ನ ಖಾಸಗಿ ಅಂಗ ಪ್ರದರ್ಶಿಸಿ ವಿಕೃತವಾಗಿ ವರ್ತಿಸಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ
ಮಹಿಳೆಯಿಂದ ದೂರು ಪಡೆದು ಪ್ರಕರಣ ದಾಖಲಿಸಿಕೊಂಡ ಮಾರತ್ ಹಳ್ಳಿ ಠಾಣೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಕಲಂ 75, 79, 329 (2)ರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.