Belagavi | ಮನೆ ರಿಪೇರಿ ವೇಳೆ ದುರಂತ: ಗೋಡೆ ಕುಸಿದು ಇಬ್ಬರು ಕಾರ್ಮಿಕರು ಮೃತ್ಯು
Update: 2026-07-12 19:47 IST
ಬೆಳಗಾವಿ : ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ಮನೆ ರಿಪೇರಿ ಕಾಮಗಾರಿ ವೇಳೆ ಮನೆ ಏಕಾಏಕಿ ಕುಸಿದು ಬಿದ್ದ ಪರಿಣಾಮ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ರವಿವಾರ ನಡೆದಿದೆ.
ಕಳೆದೊಂದು ವಾರದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಲಕ್ಷ್ಮೀಬಾಯಿ ನಂದಗೊಂಡ ಅವರ ಮನೆ ಸೊರುತ್ತಿದ್ದ ಹಿನ್ನೆಲೆಯಲ್ಲಿ ರಿಪೇರಿ ಕಾಮಗಾರಿ ನಡೆಯುತ್ತಿತ್ತು. ಇದೇ ವೇಳೆ ಮನೆ ಏಕಾಏಕಿ ಕುಸಿದು ಬಿದ್ದಿದ್ದು, ಕಾಮಗಾರಿಯಲ್ಲಿ ನಿರತರಾಗಿದ್ದ ಮಾದೇವ್ ಕೃಷ್ಣಪ್ಪ ಬಡಿಗೇರ್ (48) ಹಾಗೂ ಸೈಯದ್ ಕೆಂಪವಾಡಿ (32) ಮಣ್ಣಿನಡಿ ಸಿಲುಕಿಕೊಂಡರು.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಹೊರತೆಗೆದು ಮಹಾರಾಷ್ಟ್ರದ ಜತ್ತ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ.
ಘಟನೆಯ ಸಂಬಂಧ ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.