ಘನತಾಜ್ಯ ನಿರ್ವಹಣೆ ಟೆಂಡರ್‌ನಲ್ಲಿ ಅಕ್ರಮ ಆರೋಪ: ರಾಜ್ಯಪಾಲರಿಗೆ ದೂರು ಸಲ್ಲಿಸಿದ ಬಿಜೆಪಿ
ಬೆಂಗಳೂರು : ರಾಜ್ಯ ಸರಕಾರ ಜಿಬಿಎ ವ್ಯಾಪ್ತಿಯ ಏಕೀಕೃತ ಘನತಾಜ್ಯ ನಿರ್ವಹಣೆ ಹಾಗೂ ಸಂಸ್ಕರಣೆಗಾಗಿ ಕಪ್ಪು ಪಟ್ಟಿಗೆ ಸೇರಿರುವ ಕಂಪೆನಿಯೊಂದಕ್ಕೆ ಕಾನೂನು ಬಾಹಿರವಾಗಿ ಟೆಂಡರ್ ನೀಡಿ 39 ಸಾವಿರ ರೂಪಾಯಿ ಹಗರಣ ನಡೆಸಿದ್ದು, ಈ ಸಂಬಂಧ ಉನ್ನತ ತನಿಖೆ ನಡೆಸುವಂತೆ ಕೋರಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಲೋಕಾಯುಕ್ತಕ್ಕೆ ಬಿಜೆಪಿ ದೂರು ಸಲ್ಲಿಕೆ ಮಾಡಿದೆ.
ಬುಧವಾರ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಪರಿಷತ್ತಿನ ವಿಪಕ್ಷ ನಾಯಕ ಛಲವಾಧಿ ನಾರಾಯಣಸ್ವಾಮಿ, ಸಂಸದ ಪಿ.ಸಿ.ಮೋಹನ್, ಶಾಸಕರಾದ ರಾಮಮೂರ್ತಿ, ಮುನಿರಾಜು ಸೇರಿದಂತೆ ಬಿಜೆಪಿ ಮುಖಂಡರ ನಿಯೋಗ ಬುಧವಾರ ಇಲ್ಲಿನ ಲೋಕಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ಸಲ್ಲಿಸಿ, ಈ ಸಂಬಂಧ ಸಮಗ್ರ ತನಿಖೆ ನಡೆಸುವಂತೆ ಮನವಿ ಮಾಡಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಪ್ರತಿದಿನ ನಗರದಲ್ಲಿ ಸುಮಾರು 6 ಸಾವಿರ ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಘನತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣೆಗಾಗಿ ಹೊಸ ಪ್ರಸ್ತಾವನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಕಸ ಸಂಸ್ಕರಣೆ ಹಾಗೂ ವಿಲೇವಾರಿಗಾಗಿ ಪ್ರತಿ ಟನ್‍ಗೆ ಪ್ರಸ್ತುತ ದರ 260 ರೂ., ಇದೆ. ಹೊಸ ಪ್ರಸ್ತಾವನೆಯಲ್ಲಿ 2,400 ರೂಪಾಯಿ ವಿಧಿಸುವ ಮೂಲಕ 9 ಪಟ್ಟು ದರ ಹೆಚ್ಚಿಸಲಾಗಿದೆ. ಇದರಂತೆ 30 ವರ್ಷಕ್ಕೆ 39,437 ಕೋಟಿ ರೂ. ಮೊತ್ತ ಶುಲ್ಕ ರೂಪದಲ್ಲಿ ಟೆಂಡರ್ ಪಡೆದ ಕಂಪೆನಿಗೆ ಪಾವತಿಬೇಕಾಗುತ್ತದೆ. ಈಗಿನ ಮೊತ್ತಕ್ಕಿಂತ 33,320 ಕೋಟಿ ರೂ. ಹೆಚ್ಚಾಗಲಿದೆ. ಸಾವಿರಾರು ಕೋಟಿ ಸಾರ್ವಜನಿಕ ತೆರಿಗೆ ಹಣವನ್ನ ಶುಲ್ಕ ನೆಪದಲ್ಲಿ ಪಾವತಿಸಿ ಖಾಸಗಿ ಕಂಪೆನಿಗೆ ಅನುಕೂಲ ಮಾಡಿಕೊಡಲು ಹೊರಟಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಅಧಿಕಾರಕ್ಕೆ ಇಳಿಯುವ ಕೆಲವೇ ದಿನಗಳಲ್ಲಿ ಸಚಿವ ಸಂಪುಟ ಸಭೆಯಲ್ಲಿ ಬೃಹತ್ ಮೊತ್ತದ ಟೆಂಡರ್‍ಗೆ ಅನುಮೋದನೆ ನೀಡಲಾಗಿದ್ದು, ಈ ಪ್ರಕ್ರಿಯೆಯಲ್ಲಿ ಸುಮಾರು 10 ಸಾವಿರ ಕೋಟಿ ಕಿಕ್ ಬ್ಯಾಕ್ ಪಡೆಯಲಾಗಿದೆ. ಈ ಹಣದಲ್ಲಿ ಹಿಂದಿನ ಹಾಗೂ ಈಗಿನ ಮುಖ್ಯಮಂತ್ರಿ ಸೇರಿದಂತೆ ಎಲ್ಲರ ಪಾಲಿದೆ. ಈ ಸರಕಾರ ಇರುವುದೇ ಒಂದು ವರ್ಷ 11 ತಿಂಗಳು. ಆದರೆ 30 ವರ್ಷಕ್ಕೆ ಟೆಂಡರ್ ಹೇಗೆ ಕರೆಯುತ್ತಾರೆ. ಕಿಕ್ ಬ್ಯಾಕ್ ಸಿಗದೆ ಟೆಂಡರ್ ಕೊಡುತ್ತಾರೆಯೇ ಎಂದ ಅವರು, ಟೆಂಡರ್ ಕುರಿತಂತೆ ಹಣಕಾಸು ಇಲಾಖೆ ಆತಂಕ ವ್ಯಕ್ತಪಡಿಸಿದ್ದು, ದುಬಾರಿ ಮೊತ್ತದ ಟೆಂಡರ್ ಅಪಾಯಕಾರಿ ಎಂದು ಎಚ್ಚರಿಕೆ ನೀಡಿದೆ. ಮುಂದೆ ದೊಡ್ಡಮಟ್ಟದ ತೊಂದರೆ ಆಗುತ್ತೆ ಎಂದು ಇಲಾಖೆ ಆತಂಕ ವ್ಯಕ್ತಪಡಿಸಿದೆ ಎಂದು ಆಶೋಕ್ ತಿಳಿಸಿದರು.