ಆರ್.ಅಶೋಕ್ ʼಕಸ ಮಾಫಿಯಾʼ ಗ್ಯಾಂಗಿನ ಏಜೆಂಟ್ ಆಗಿ ಮಾತನಾಡುತ್ತಿದ್ದಾರೆ : ಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು
ಹೊಸದಿಲ್ಲಿ: “ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರು ಬೆಂಗಳೂರು ಕಸ ಮಾಫಿಯಾ ಗ್ಯಾಂಗಿನ ಏಜೆಂಟರಾಗಿ ಮಾತನಾಡುತ್ತಿದ್ದಾರೆ. ಈ ಮಾಫಿಯಾ ನಿಯಂತ್ರಿಸಬೇಕು ಎಂದು ನಾನು ಈ ಹಿಂದೆ ಅವರೊಂದಿಗೆ ಚರ್ಚೆ ಮಾಡಿದ್ದೆ. ಈಗ ಅಶೋಕ್ ಅವರು ಮಾಫಿಯಾದ ವಕ್ತಾರರಾಗಿರುವುದು ನನಗೆ ಆಶ್ಚರ್ಯವಾಗಿದೆ” ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದರು.
ದಿಲ್ಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು.
ಕಸದ ಟೆಂಡರ್ ನಲ್ಲಿ 10 ಸಾವಿರ ಕೋಟಿ ಕಿಕ್ ಬ್ಯಾಕ್ ಪಡೆಯಲಾಗಿದೆ ಎಂಬ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರ ಆರೋಪದ ಬಗ್ಗೆ ಕೇಳಿದಾಗ, “ಅವರಿಗೆ ಏನೇನು ಕಸ ಬೇಕೋ ಲಾರಿಯಲ್ಲಿ ತುಂಬಿ ಕಳುಹಿಸಿಕೊಡೋಣ. ಈ ಹಿಂದೆ ಕುಮಾರಸ್ವಾಮಿ ಅವರು ಇದನ್ನೇ ಮಾತನಾಡಿದ್ದರು. ಬೆಂಗಳೂರಿನಲ್ಲಿ ದೊಡ್ಡ ಕಸದ ಲಾಭಿ ಇದೆ. ಅವರ ಕಾಲದಲ್ಲಿ ಯಾಕೆ ಕಸದ ಟೆಂಡರ್ ಮಾಡಲು ಆಗಲಿಲ್ಲ? ಈ ಹಿಂದೆ 14-15 ಜನರಿಗೆ ಕಸದಿಂದ ಇಂಧನ ಉತ್ಪಾದನೆಗೆ ಅವಕಾಶ ನೀಡಿದ್ದೆವು. ಒಬ್ಬರೂ ಯಶಸ್ವಿಯಾಗಿರಲಿಲ್ಲ. ನಾನು ಈ ನಿರ್ಧಾರ ಕೈಗೊಳ್ಳುವ ಮುನ್ನ ದೆಹಲಿ, ಹೈದರಾಬಾದ್, ಚೆನ್ನೈ ಗೆ ಹೋಗಿ ನೋಡಿದ್ದೇನೆ” ಎಂದು ತಿಳಿಸಿದರು.
ಯಾವ ತನಿಖೆ ಬೇಕಾದರೂ ಮಾಡಿಸಲಿ
“ಈಗ ಕಸ ವಿಲೇವಾರಿಗೆ 6 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡುತ್ತಾರೆ. ನಮ್ಮಲ್ಲಿ ಎಲ್ಲೂ ಜಾಗ ಲಭ್ಯವಾಗಲಿಲ್ಲ. ಹೀಗಾಗಿ ದೊಡ್ಡಬಳ್ಳಾಪುರದಲ್ಲಿ ಜಾಗ ಖರೀದಿ ಮಾಡಲು ತೀರ್ಮಾನಿಸಲಾಗಿದೆ. ಇನ್ನು ನೈಸ್ ಬಿಟ್ಟಿರುವ ಜಾಗ ಪಡೆದಿದ್ದೇವೆ. ಬೇರೆ ಕಡೆ ಯಾರಾದರೂ ಜಾಗ ಕೊಡಲು ಸಿದ್ಧರಿದ್ದರೆ ಮುಂದೆ ಬನ್ನಿ ಎಂಬ ಕರೆಯನ್ನು ನೀಡಿದ್ದೇನೆ. ಲಿಂಬಾವಳಿ ಅವರು ಕಸ ಸಾಗಿಸುವುದನ್ನೇ ನಿಲ್ಲಿಸಿದ್ದರು. ನಾವು ಶಾಸಕರ ಒತ್ತಡದ ಮೇರೆಗೆ 800 ಕೋಟಿ ಅನುದಾನ ನೀಡಿದ್ದೇವೆ. ಕಸದಿಂದ ಗ್ಯಾಸ್ ಹಾಗೂ ವಿದ್ಯುತ್ ಉತ್ಪಾದನೆ ಆಗಬೇಕು. ಅವರು ಯಾವ ತನಿಖೆ ಬೇಕಾದರೂ ಮಾಡಲಿ. ಎಲ್ಲಾದರೂ ವರದಿ ನೀಡಲಿ. 36 ಸಾವಿರ ಕೋಟಿ ಅಲ್ಲ, ಕೇವಲ 10 ಕೋಟಿ ಹಣ ದುರ್ಬಳಕೆಯಾದರೂ ತನಿಖೆ ಮಾಡಿಸಲಿ, ಎದುರಿಸಲು ನಾನು ಸಿದ್ಧ” ಎಂದರು.
ನಾನು ಸಿಎಂ ಆಗಿರುವುದನ್ನು ಸಹಿಸಲಾಗದೇ ಅಸೂಯೆ ರಾಜಕೀಯ
ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ ಎಂದು ಕೇಳಿದಾಗ, “ನಾನು ಮುಖ್ಯಮಂತ್ರಿಯಾಗಿರುವುದನ್ನು ಅವರಿಂದ ತಡೆದುಕೊಳ್ಳಲು ಆಗುತ್ತಿಲ್ಲ. ಅವರ ಪಕ್ಷ, ಬೇರೆ ಪಕ್ಷಗಳಲ್ಲಿ ಏನಾಗುತ್ತಿದೆ ಎಂದು ನನಗೆ ಗೊತ್ತಿದೆ. ಅವರಿಗೆ ಏನು ಒತ್ತಡವಿದೆಯೋ ಮಾತನಾಡಿಸುತ್ತಿದ್ದಾರೆ. ಮಾತನಾಡಿಸಲಿ ಯಾವ ತೊಂದರೆಯೂ ಇಲ್ಲ. ಕಳೆದ ಹತ್ತು ಹನ್ನೆರಡು ವರ್ಷಗಳಿಂದ ಕಸದ ಟೆಂಡರ್ ಕರೆಯಲು ಬಿಟ್ಟಿಲ್ಲ ಎಂದು ಅವರ ಶಾಸಕರುಗಳೇ ನಮಗೆ ಹೇಳಿದ್ದಾರೆ. ಪ್ರತಿಯೊಂದಕ್ಕೂ ನ್ಯಾಯಾಲಯದ ಮೆಟ್ಟಿಲೇರಲಾಗುತ್ತಿತ್ತು. ಕೊನೆಗೆ ನ್ಯಾಯಾಲಯ ಸರ್ಕಾರದ ತೀರ್ಮಾನ ಸರಿಯಾಗಿದೆ ಎಂದು ತೀರ್ಮಾನ ಮಾಡಿದೆ. ಈಗ ಕೋರ್ಟ್ ತೀರ್ಮಾನ ಆಗಿದ್ದರೂ ನಾನು ಒಂದು ಸಮಿತಿ ರಚನೆ ಮಾಡಿಸಿ ತನಿಖೆ ಮಾಡಿಸಿದ್ದೆ. ಅವರು ಅಸೂಯೆ ರಾಜಕೀಯ ಮಾಡುತ್ತಿದ್ದಾರೆ. ನಮ್ಮ ಪಾರದರ್ಶಕತೆ, ಕಾರ್ಯವೈಖರಿ ಸಹಿಸಲು ಅವರಿಂದ ಸಾಧ್ಯವಾಗುತ್ತಿಲ್ಲ” ಎಂದು ಹರಿಹಾಯ್ದರು.
ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಭೇಟಿ ಬಗ್ಗೆ ಕೇಳಿದಾಗ, “ನಾಳೆ ನೀತಿ ಆಯೋಗದ ಸಭೆ ಇದೆ. ಎಲ್ಲಾ ರಾಜ್ಯಗಳ ಸಿಎಂ ಕರೆಯಲಾಗಿದ್ದು, ನಾನು ಮೊದಲ ಬಾರಿಗೆ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಬಂದಿರುವೆ. ಇಂದು ನಮ್ಮ ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿ ಮಾಡಿದ್ದೇನೆ. ಅಲ್ಲದೇ ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಹಾಗೂ ಎನ್ಎಸ್ ಯುಐ ಕಚೇರಿಗೆ ಭೇಟಿ ನೀಡಿದ್ದೆ. ಅವರೆಲ್ಲ ನಮ್ಮ ಪಕ್ಷದ ಆಧಾರಸ್ತಂಭಗಳು. ನಾನು ರಾಜಕೀಯವಾಗಿ ಬೆಳೆದಿದ್ದು ಎನ್ಎಸ್ ಯುಐ ಹಾಗೂ ಯುವ ಕಾಂಗ್ರೆಸ್ ಮೂಲಕ” ಎಂದು ತಿಳಿಸಿದರು.
ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಭೇಟಿ ವೇಳೆ ಮಾಡಲಾದ ಚರ್ಚೆ ಬಗ್ಗೆ ಕೇಳಿದಾಗ, “ನಾನು ಎಲ್ಲವನ್ನು ಹೇಳಲು ಆಗುವುದಿಲ್ಲ. ನಾನೊಬ್ಬ ಕಾಂಗ್ರೆಸ್ ಕಾರ್ಯಕರ್ತ, ರಾಜ್ಯದ ಮುಖ್ಯಮಂತ್ರಿ. ನಾನು ಏನು ಮಾತನಾಡಬೇಕೋ ಮಾತನಾಡಿದ್ದೇನೆ. ಅದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ” ಎಂದು ಹೇಳಿದರು.
ನಮ್ಮ ಗ್ಯಾರಂಟಿ ಯೋಜನೆಗಳು ರಾಜ್ಯದ ಮತದಾರರಿಗೆ, ಅರ್ಹ ಫಲಾನುಭವಿಗಳಿಗೆ :
ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ ಬಗ್ಗೆ ಕೇಳಿದಾಗ, “ಮೃತಪಟ್ಟಿರುವ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಹೆಸರಿನಲ್ಲಿ ಬೇರೆಯವರು ಹಣ ಪಡೆಯುತ್ತಿದ್ದಾರೆ. ಬೇರೆಯವರ ದೂರವಾಣಿ ಸಂಖ್ಯೆ ನೀಡಿದ್ದಾರೆ. ಹೀಗಾಗಿ ನಾವು ಪರಿಶೀಲನೆ ಮಾಡುತ್ತಿದ್ದೇವೆ. ಯೋಜನೆ ಫಲಾನುಭವಿಗಳನ್ನು ಕಡಿತಗೊಳಿಸುವ ಯಾವ ಉದ್ದೇಶವೂ ಇಲ್ಲ. ಅರ್ಹರಿಗೆ ಯೋಜನೆ ತಲುಪಬೇಕು ಎಂಬುದು ನಮ್ಮ ಉದ್ದೇಶ” ಎಂದು ತಿಳಿಸಿದರು.
“ಕೆಲವರು ಗೃಹಲಕ್ಷ್ಮಿ ಯೋಜನೆಯಲ್ಲಿ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ಪಡೆಯುತ್ತಿದ್ದು, ಅಂಗಡಿಗೆ ಬಳಸುತ್ತಿದ್ದಾರೆ. ಒಬ್ಬರ ಹೆಸರಿನಲ್ಲಿ ಆರು ಮೀಟರ್ ಗಳಿವೆ. ವಾಸದ ಮನೆಗಳಿಗೆ ಈ ಯೋಜನೆ ಪಡೆದರೆ ಅಭ್ಯಂತರವಿಲ್ಲ. ಬಾಡಿಗೆ ಮನೆಯಲ್ಲಿ ಇರುವವರು ಒಂದು ಅಫಿಡವಿಟ್ ಸಲ್ಲಿಸಲಿ. ನಾವು ಈ ಯೋಜನೆ ಜಾರಿಗೆ ತಂದಿರುವುದು ಕರ್ನಾಟಕ ರಾಜ್ಯದ ಮತದಾರರಿಗೆ” ಎಂದು ಸ್ಪಷ್ಟಪಡಿಸಿದರು.