ವಿಪಕ್ಷ ನಾಯಕ ಆರ್.ಅಶೋಕ್‍ಗೆ ಬುದ್ದಿ ಭ್ರಮಣೆ ಆದಂತಿದೆ : ಬಿ.ಕೆ.ಹರಿಪ್ರಸಾದ್ ಆಕ್ರೋಶ
"ಶಾಸಕರ ಮೇಲೆ ಮೊಟ್ಟೆ, ಚಪ್ಪಲಿ, ಕಲ್ಲು ಎಸೆಯುವ ಸಂಸ್ಕೃತಿ ಆರಂಭಿಸಿದ್ದೇ ಬಿಜೆಪಿಯವರು"
ಬೆಂಗಳೂರು : ವಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ಕೊತ್ವಾಲ್ ರಾಮಚಂದ್ರ ಅವರ ಶಿಷ್ಯ ಏಡ್ಸ್ ಇಂಜೆಕ್ಷನ್ ತಗುಲಿಸಿದ ಮೇಲೆ ಸ್ವಲ್ಪ ಬುದ್ದಿ ಭ್ರಮಣೆ ಆದಂತೆ ಕಾಣುತ್ತಿದೆ. ಆದುದರಿಂದಲೆ, ಅವರ ಭಾಷೆಯ ಪ್ರಯೋಗ ಹಳಿ ತಪ್ಪಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಕಿಡಿಗಾರಿದರು.
ಗುರುವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಇಂದಿರಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಡಾ.ಮನಮೋಹನ್ ಸಿಂಗ್, ಇಂದಿರಾ ಗಾಂಧಿ ಬಗ್ಗೆ ಬಿಜೆಪಿ ನಾಯಕರು ಮಾತನಾಡಿರುವ ಅಣಿಮುತ್ತು ನೋಡಿದಾಗ ಇವರಿಗೆ ಬುದ್ಧಿಭ್ರಮಣೆಯಾಗಿರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು.
ಜಾಲಹಳ್ಳಿಯ ಎಚ್‍ಎಂಟಿ ಕಾರ್ಖಾನೆ ಬಳಿಯ ಚಿತ್ರ ಮಂದಿರ ಬಳಿ ಬ್ಲಾಕ್ ಟಿಕೆಟ್ ಮಾರುತ್ತಿದ್ದವರು ಈಗ ಬಿಜೆಪಿ ನಾಯಕರಾಗಿದ್ದಾರೆ. ಅಶೋಕ್ ನಮ್ಮನ್ನು ತುಕ್ಡೆ ತುಕ್ಡೆ ಗ್ಯಾಂಗಿನವರು ಎಂದು ಹೇಳುತ್ತಾರೆ. ಹಾಗಾದರೆ, ಗಡಿಪಾರ್ ಅಮಿತ್ ಶಾ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಹೇಳಿದ್ದೇಕೆ? ಜೆ.ಪಿ.ನಡ್ಡಾ ಈ ಗ್ಯಾಂಗಿನವರನ್ನು ಕರೆಸಿ ಮಾತನಾಡಿದ್ದು ಯಾಕೆ? ಎಂದು ಹರಿಪ್ರಸಾದ್ ಪ್ರಶ್ನಿಸಿದರು.
ಪ್ರಧಾನಿ ನಿವಾಸದ ಸುತ್ತಮುತ್ತ ಸೂಕ್ಷ್ಮಪ್ರದೇಶ ಎಂದು ಅಶೋಕ್ ಹೇಳಿದ್ದಾರೆ. ಸಂಜೆ ಮೇಲೆ ಸಿಸಿಟಿವಿ ಬಂದ್ ಮಾಡಿ ಆ ಮನೆಗೆ ಯಾರು ಹೋಗುತ್ತಾರೆ, ಯಾರು ಬರುತ್ತಾರೆ ಎಂದು ನಾನು ಹೇಳಲು ಹೋಗುವುದಿಲ್ಲ. ಅಶೋಕ್ ಮಾತನಾಡುವಾಗ ಕಾಂಗ್ರೆಸ್ ಪಕ್ಷದ ವಿರುದ್ಧ ತಲವಾರ್, ಕತ್ತಿ, ಬಾಂಬು ಎಂದು ಏನೇನೋ ಹೇಳಿದ್ದಾರೆ. ಆರೆಸ್ಸೆಸ್ ಹಾಗೂ ಬಿಜೆಪಿಯವರ ಕಚೇರಿಯಲ್ಲಿ ಏನೇನಿದ್ದವು ಎಂಬುದರ ಬಗ್ಗೆ ಪಟ್ಟಿ ನೀಡುತ್ತೇನೆ ಎಂದು ಅವರು ತಿಳಿಸಿದರು.
ಕಣ್ಣೂರಿನ ಬಿಜೆಪಿ ಕಚೇರಿಯಲ್ಲಿ ಬಾಂಬು, ನೂರಾರು ಮಾರಕಾಸ್ತ್ರಗಳು ಸಿಕ್ಕಿದ್ದವು. 2016ರಲ್ಲಿ ಚಕ್ರಕಲ್, ಕಣ್ಣೂರಿನಲ್ಲಿ ಬಿಜೆಪಿಯವರಿಂದ ನಾಡಬಾಂಬ್, ಕತ್ತಿ ಸೇರಿದಂತೆ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು. ನೆಡುಂಗಾಡಿನ ಆರೆಸ್ಸೆಸ್ ಕಚೇರಿಯಲ್ಲಿ ಬಾಂಬ್ ಕಚ್ಚಾ ವಸ್ತುಗಳು ಸಿಕ್ಕಿದ್ದವು. ಹೀಗೆ ನೂರಾರು ಪ್ರಕರಣಗಳನ್ನು ನೋಡಬಹುದು ಎಂದು ಹರಿಪ್ರಸಾದ್ ಹೇಳಿದರು.
ಕಾಂಗ್ರೆಸ್ ಪಕ್ಷದ ಕಚೇರಿಗೆ ಬಂದರೆ ನಿಮಗೆ ಸಿಗುವುದು ತ್ರಿವರ್ಣ ಧ್ವಜ ಹಾಗೂ ಗಾಂಧಿ ಟೋಪಿ ಮಾತ್ರ. ಲಾಠಿ, ತಲವಾರ್, ಚಾಕುಗಳು ನಮ್ಮ ಕಚೇರಿಯಲ್ಲಿ ಸಿಗುವುದಿಲ್ಲ. ಜನರಿಗೆ ಭಯ ಬೀಳಿಸಲು ದೇಶದಲ್ಲಿ ಲಾಠಿ ತಿರುಗಿಸುವವರು ಯಾರು ಎಂದು ನಾನು ಈಗಾಗಲೆ ಹೇಳಿದ್ದೇನೆ. ಬಿಜೆಪಿಯವರು ತಮ್ಮ ಕಚೇರಿಯಂತೆ ಕಾಂಗ್ರೆಸ್ ಕಚೇರಿಯೂ ಇರುತ್ತದೆ ಎಂಬ ಭ್ರಮೆಯಲ್ಲಿದ್ದಾರೆ ಎಂದು ಹರಿಪ್ರಸಾದ್ ತಿರುಗೇಟು ನೀಡಿದರು.
ಆರೆಸ್ಸೆಸ್ ಪದಾಧಿಕಾರಿ ಯಶ್ವಂತ್ ಶಿಂಧೆ ಎಂಬಾತ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅಫಿಡವಿಟ್ ನಲ್ಲಿ ನಾವು ಬಿಜೆಪಿ ಗೆಲ್ಲಿಸಲು ಬಾಂಬ್ ಸ್ಫೋಟ ಮಾಡಿದ್ದೆವು ಎಂದು ಹೇಳಿದ್ದಾನೆ. ದೇಶ ವಿರೋಧಿ ಚಟುವಟಿಕೆ ನಡೆಸಿ ಚುನಾವಣೆ ಗೆಲ್ಲಲು ಹೋಗಿದ್ದೆವು ಎಂದಿದ್ದಾನೆ. ಇವರಿಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಲು ನೈತಿಕತೆ ಇದೆಯೇ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರ ಮೇಲೆ ಮೊಟ್ಟೆ, ಚಪ್ಪಲಿ, ಕಲ್ಲು ಎಸೆಯುವ ಸಂಸ್ಕೃತಿ ಆರಂಭಿಸಿದ್ದೇ ಬಿಜೆಪಿಯವರು. ಸಿದ್ದರಾಮಯ್ಯ ಮಡಿಕೇರಿಯಲ್ಲಿ ಪ್ರವಾಸ ಮಾಡುವಾಗ ಯಾರು ಮೊಟ್ಟೆ ಎಸೆದಿದ್ದು? ದಾವಣಗೆರೆಯಲ್ಲಿ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆದಿದ್ದು ಯಾರು? ಎಂದು ಹರಿಪ್ರಸಾದ್ ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷ ಏನಾದರೂ ಕೋಳಿ ಫಾರಂ ಆಗಿದೆಯೇ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಪ್ರಶ್ನೆ ಮಾಡಿದ್ದಾರೆ. ವಿದ್ಯಾಸಂಸ್ಥೆ ನಡೆಸುತ್ತೇವೆ ಎಂದು ನಾವು ಧಮ್ ಬಿರಿಯಾನಿ ಅಂಗಡಿ ನಡೆಸುತ್ತಿಲ್ಲ. ಧಮ್ ಬಿರಿಯಾನಿ ನಡೆಸುವವರಿಗೆ ಮೊಟ್ಟೆಯೇ ನೆನಪಾಗುವುದು ಎಂದು ಛಲವಾದಿ ನಾರಾಯಣಸ್ವಾಮಿ ವಿರುದ್ಧ ಅವರು ಕಿಡಿಗಾರಿದರು.
ರಾಹುಲ್ ಗಾಂಧಿ ವಿದೇಶಕ್ಕೆ ಹೋದರೆ ಪ್ರತಿಷ್ಟಿತ ವಿಶ್ವಿದ್ಯಾಲಯದಲ್ಲಿ ಭಾಷಣ ಮಾಡಿ ಬರುತ್ತಾರೆ. ಮೋದಿ ಎಲ್ಲಿ ಹೋಗುತ್ತಾರೆ. ಎಪ್‍ಸ್ಟೀನ್ಸ್ ಫೈಲ್ಸ್ ಅಲ್ಲಿ ಯಾರ ಹೆಸರಿದೆ. ನರೇಂದ್ರ ಮೋದಿಯನ್ನು ಡ್ಯಾನ್ಸ್ ಮಾಡಿಸುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಹೇಳುತ್ತಾನೆ. ಭಾರತಕ್ಕೆ ಅಪಮಾನ ಮಾಡಿದವರು ನಮ್ಮನ್ನು ತುಕ್ಡೆ ಗ್ಯಾಂಗ್ ಎನ್ನುತ್ತಾರೆ ಎಂದು ಹರಿಪ್ರಸಾದ್ ತಿರುಗೇಟು ನೀಡಿದರು.
ದಿಲ್ಲಿಯಲ್ಲಿ ವಿದ್ಯಾರ್ಥಿಗಳಿಗೆ ರಕ್ತ ಬರುವಂತೆ ಹೊಡೆದಿದ್ದಾರೆ, ಹೆಣ್ಣು ಮಕ್ಕಳ ಮೇಲೆ ಕೈ ಮಾಡಿದ್ದಾರೆ ಎಂಬ ಕಾರಣಕ್ಕಾಗಿ ರಾಹುಲ್ ಗಾಂಧಿ, ಪ್ರಧಾನಿ ನಿವಾಸದ ಎದುರು ಪ್ರತಿಭಟನೆ ಮಾಡಿದರು. ಇದಕ್ಕೆಲ್ಲ ಕಾರಣ ನಾಲಾಯಕ್ ನರೇಂದ್ರ ಮೋದಿಯೆ ಹೊರತು, ರಾಹುಲ್ ಗಾಂಧಿ ಅಲ್ಲ ಎಂದು ಅವರು ಹೇಳಿದರು.
ನಾವು ಸಹ ಭಾಷಾ ಪ್ರಯೋಗ ಮಾಡುತ್ತೇವೆ ಎಂಬುದನ್ನು ಅಶೋಕ್, ವಿಜಯೇಂದ್ರ, ನಾರಾಯಣಸ್ವಾಮಿ ಅರ್ಥ ಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದ ಹರಿಪ್ರಸಾದ್, ನಾಲಾಯಕ್ ಸರಕಾರ ಇರೋದಕ್ಕೆ 152 ಸಲ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು. ದೇಶದ ವ್ಯವಸ್ಥೆ ಹಾಳು ಮಾಡಿರುವ ನಾಲಾಯಕ್ ಗಳು ಇವರು ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಸುಧಾಮ್ ದಾಸ್ ಉಪಸ್ಥಿತರಿದ್ದರು.