ಡಿಸೆಂಬರ್ ಹೊತ್ತಿಗೆ ಕ್ವಿನ್‍ಸಿಟಿಯಲ್ಲಿ 200 ಎಕರೆ ಸೆಮಿಕಂಡಕ್ಟರ್ ಪಾರ್ಕ್ ಆರಂಭ : ಎಂ.ಬಿ.ಪಾಟೀಲ್

ಎಲೆಕ್ಟ್ರಾನಿಕ್ಸ್ ಸಮ್ಮೇಳನಕ್ಕೆ ಚಾಲನೆ

Update: 2026-07-23 18:35 IST

ಬೆಂಗಳೂರು : ಸದ್ಯದಲ್ಲೇ ಜಾರಿಗೆ ಬರಲಿರುವ 2026-2031ರ ನೂತನ ವೈಮಾಂತರಿಕ್ಷ ಮತ್ತು ರಕ್ಷಣಾ ನೀತಿಯಲ್ಲಿ ಆಧುನಿಕ ಎಲೆಕ್ಟ್ರಾನಿಕ್ ಸಮರ ಸಾಧನಗಳು, ಎಂಬೆಡೆಡ್ ತಂತ್ರಾಂಶ, ಇ-ವಿಟಾಲ್ ಸಾಧನಗಳು, ಬಾಹ್ಯಾಕಾಶ ಕ್ಷೇತ್ರದಲ್ಲಿ ಬಳಸಲಾಗುವ ಪೇಲೋಡ್ ಇವುಗಳನ್ನು ಗಮನದಲ್ಲಿ ಇಟ್ಟುಕೊಂಡು ಸಮಗ್ರ ಕ್ಲಸ್ಟರುಗಳನ್ನು ಅಭಿವೃದ್ಧಿಪಡಿಸಲು ಒತ್ತು ನೀಡಲಾಗಿದೆ. ಜತೆಗೆ ಈ ವರ್ಷದ ಡಿಸೆಂಬರ್ ಹೊತ್ತಿಗೆ ಕ್ವಿನ್‍ಸಿಟಿ ಹಂತ-1ರಲ್ಲಿ 200 ಎಕರೆ ವಿಸ್ತಾರದ ಸೆಮಿಕಂಡಕ್ಟರ್ ಪಾರ್ಕ್ ಕಾರ್ಯಾಚರಣೆ ಆರಂಭಿಸಲಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಗುರುವಾರ ಇಲ್ಲಿನ ತುಮಕೂರು ರಸ್ತೆಯಲ್ಲಿನ ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆರಂಭವಾದ 15ನೇ ವರ್ಷದ ವ್ಯೂಹಾತ್ಮಕ ವಿದ್ಯುನ್ಮಾನ ಸಮಾವೇಶ(ಸ್ಟ್ರಾಟೆಜಿಕ್ ಎಲೆಕ್ಟ್ರಾನಿಕ್ಸ್ ಸಮ್ಮಿಟ್-2026)ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯವು ಎರಡು ವರ್ಷಗಳ ಹಿಂದೆಯೇ ಸೆಮಿಕಂಡಕ್ಟರ್ ಮತ್ತು ಆಧುನಿಕ ಇಎಸ್‍ಡಿಎಂ ವಲಯಗಳಲ್ಲಿ 23ಸಾವಿರ ಕೋಟಿ ರೂ.ಹೂಡಿಕೆಗೆ ಅನುಮೋದನೆ ನೀಡಿದೆ ಎಂದರು.

ಇದರಿಂದ ಹೆಚ್ಚಿನ ಕೌಶಲ್ಯ ಬೇಡುವ 3,500ಕ್ಕೂ ಹೆಚ್ಚು ಎಂಜಿನಿಯರಿಂಗ್ ಹುದ್ದೆಗಳು ಸೃಷ್ಟಿಯಾಗಲಿವೆ. ಇಲ್ಲಿ ಅಪ್ಲೈಡ್ ಮೆಟೀರಿಯಲ್ಸ್ ಇಂಡಿಯಾ ಸಂಸ್ಥೆಯು 4,851ಕೋಟಿ ರೂ. ಲ್ಯಾಮ್ ರೀಸರ್ಚ್ ಸಂಸ್ಥೆಯು 15,901ಕೋಟಿ ರೂ. ಮತ್ತು ಭಾರತ್ ಸೆಮಿ ಸಿಸ್ಟಮ್ಸ್ ಕಂಪನಿಯು 2,342ಕೋಟಿ ರೂ. ಬಂಡವಾಳ ಹೂಡುತ್ತಿವೆ. ಇದಕ್ಕೆ ಪೂರಕವಾಗಿ ಕರ್ನಾಟಕದಲ್ಲಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಜಾಗತಿಕ ಪೂರೈಕೆ ಸರಪಳಿಯೊಂದಿಗೆ ಬೆಸೆಯಲಾಗುವುದು ಎಂದರು.

ರಾಜ್ಯದಲ್ಲಿ ಕೇವಲ ತಯಾರಿಕೆ ಆದರೆ ಮಾತ್ರ ಸಾಲದು. ಕಂಪೆನಿಗಳು ಇಲ್ಲೇ ವಿನ್ಯಾಸ, ಅಭಿವೃದ್ಧಿ, ಮೂಲ ಮಾದರಿಗಳು(ಪ್ರೊಟೋಟೈಪ್), ಪರೀಕ್ಷೆ, ರಫ್ತು ವಹಿವಾಟು ಎಲ್ಲವೂ ನಡೆಯುವಂತಾಗಬೇಕು. ರಾಜ್ಯ ಸರಕಾರವು ಈ ವಿಚಾರದಲ್ಲಿ ಉದ್ಯಮಿಗಳ ಜತೆ ಕೈಗೂಡಿಸಲು ಸಿದ್ಧವಿದೆ. ಆದುದರಿಂದ ಸೆಮಿಕಂಡಕ್ಟರ್ ಮಿಷನ್ 2.0 ಅನ್ನು ಕರ್ನಾಟಕದ ಮೂಲಕ ನನಸು ಮಾಡಬೇಕು ಎಂದು ಅವರು ಕರೆ ನೀಡಿದರು.

ರಾಜ್ಯವು ಸಂಶೋಧನೆ, ಡೀಪ್-ಟೆಕ್ ವಿನ್ಯಾಸ ಮತ್ತು ಎಕ್ವಿಪ್ಮೆಂಟ್ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನೊಂದೆಡೆಯಲ್ಲಿ ಜಿಸಿಸಿ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳಲ್ಲೂ ನಾವು ಮುಂಚೂಣಿಯಲ್ಲಿದ್ದೇವೆ. ಇದರಾಚೆಗೆ, ಬೆಂಗಳೂರಿನಲ್ಲಿ 100ಕ್ಕೂ ಹೆಚ್ಚು ಚಿಪ್ ವಿನ್ಯಾಸ ಸಂಸ್ಥೆಗಳು ಮತ್ತು 3 ನ್ಯಾನೋಮೀಟರ್ ವಿನ್ಯಾಸ ಕೇಂದ್ರಗಳು ಸಕ್ರಿಯವಾಗಿವೆ. ಉದ್ಯಮಿಗಳು ಇವೆಲ್ಲವನ್ನೂ ಸಕಾರಾತ್ಮಕವಾಗಿ ಪರಿಗಣಿಸಿ, ಹೂಡಿಕೆಗೆ ಮುಂದಾಗಬೇಕು ಎಂದು ಪಾಟೀಲ ವಿವರಿಸಿದರು.

ಇದೇ ವೇಳೆ ಸಚಿವ ಎಂ.ಬಿ.ಪಾಟೀಲ್‍ಎಲ್ಸೀನಾ ವರದಿ-26 ವರದಿಯನ್ನು ಬಿಡುಗಡೆ ಮಾಡಿದರು. ಕರ್ನಲ್ ಲಾಕ್ಯಾಜೀತ್ ಸಿಂಗ್ ಚವ್ಹಾಣ್ ಅವರು ಭವಿಷ್ಯದ ಡ್ರೋನ್ ಮತ್ತು ತಂತ್ರಜ್ಞಾನ ಕುರಿತು ಬರೆದಿರುವ ‘ವಿಂಗ್ಸ್ ಆಫ್ ಅಸ್ತ್ರ’ ಪುಸ್ತಕವನ್ನೂ ಲೋಕಾರ್ಪಣೆ ಮಾಡಿದರು.

ಟೆಲಿಮ್ಯಾಟಿಕ್ಸ್ ಅಭಿವೃದ್ಧಿ ಕೇಂದ್ರದ (ಸಿ-ಡಾಟ್)ಸಿಇಒ ಡಾ.ರಾಜಕುಮಾರ್ ಉಪಾಧ್ಯಾಯ, ಬಿಇಎಲ್ ಸಿಇಒ ಮನೋಜ್ ಜೈನ್, ಕೇಂದ್ರದ ಜಂಟಿ ಕಾರ್ಯದರ್ಶಿ ಸುಶೀಲ್ ಪಾಲ್, ಡಿಆರ್‍ಡಿಓ ಮಹಾ ನಿರ್ದೇಶಕ ಡಾ.ಬಿ.ಕೆ.ದಾಸ್, ಲೆ.ಜ.ರಾಜೀವ್ ಸಾಹ್ನಿ ಮಾತನಾಡಿದರು. ಎಲ್ಸಿನಾ ಸಂಘಟನೆಯ ಅಧ್ಯಕ್ಷ ಡಾ. ಶಶಿಕುಮಾರ್ ಜೆನ್ದಾಮ್ ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News